ನಮ್ಮ ಎಲ್ಲ ಕೆಲಸ ಕಾರ್ಯಗಳು ಯಶಸ್ಸನ್ನು ಪಡೆಯಬೇಕಾದರೆ ನಾವು ಪರಿಶುದ್ಧರಾಗಿರಬೇಕು. ನಮ್ಮ ಮನಸ್ಸು, ಬುದ್ಧಿ, ಹೃದಯ ಪರಿಶುದ್ಧವಾದಷ್ಟೂ ನಮ್ಮ ಜೀವನ ದೇವನ ಆವಾಸಸ್ಥಾನವಾಗುತ್ತದೆ. ಅಂಥವರನ್ನು ನಾವು ದೇವಮಾನವರೆನ್ನುವುದು. ಶುಭ್ರತೆ ಸರ್ವಜನ ಸ್ವೀಕೃತಿಯಾದ ಗುಣವಾದಂತೆ ಪರಿಶುದ್ಧತೆ ಸರ್ವ ಯಶಸ್ಸಿನ ಮೂಲ.
'ಜೀವನವು ಶುಭ್ರವೂ, ಸ್ವಚ್ಛವೂ ಆಗಿದ್ದರೆ ಜಗತ್ತು ಕೂಡ ಶುಭ್ರವಾಗುತ್ತದೆ. ಆದ್ದರಿಂದ ನಮ್ಮನ್ನು ಪರಿಶುದ್ಧರನ್ನಾಗಿ ಮಾಡಿಕೊಳ್ಳೋಣ. ಮಹಾಕಾರ್ಯಗಳನ್ನು ಮಾಡುವುದಕ್ಕೆ ದೇವರು ನಮ್ಮನ್ನು ಆರಿಸಿರುವನು. ನಾವು ಅದನ್ನು ಸಾಧಿಸಿಯೇ ಸಾಧಿಸುವೆವು. ಅಂತರಂಗ ಶುದ್ಧವಾಗಿರಲಿ, ಪ್ರೀತಿಗೋಸ್ಕರ ಪ್ರೀತಿಸಿ. ದೀನರನ್ನು ದುಃಖಿಗಳನ್ನು ಪ್ರೀತಿಸಿ'.
'ಖಿನ್ನನಾಗಬೇಡ, ಎಂದಿಗೂ ಗುರುವಿನಲ್ಲಿಟ್ಟ ಭಕ್ತಿ ಕುಗ್ಗದಿರಲಿ. ದೇವರಲ್ಲಿಟ್ಟ ನಂಬಿಕೆ ಜಾರದಿರಲಿ. ಎಲ್ಲಿಯವರೆಗೂ ಈ ಮೂರು ಗುಣಗಳು ನಿನ್ನಲ್ಲಿರುತ್ತವೆಯೋ ಅಲ್ಲಿಯವರೆಗೆ ಯಾವುದೂ ನಿನಗೆ ತೊಂದರೆ ಮಾಡಲಾರದು. ನಾನೊಂದು ಒಳ್ಳೆಯ ಕೆಲಸ ಮಾಡುತ್ತಿದ್ದೇನೆ ಎಂದು ಭಾವಿಸಿದರೂ ಸಾಕು, ಅದರಿಂದ ಎಷ್ಟೋ ಸತ್ಪರಿಣಾಮವುಂಟಾಗುತ್ತದೆ.'
'ನೀನು ಒಳ್ಳೆಯವನಾಗಿದ್ದರೆ ಇಡೀ ಜಗತ್ತೇ ನಿನಗೆ ಒಳ್ಳೆಯದಾಗಿ ಕಾಣಿಸುತ್ತದೆ. ಇತರರ ಬಗ್ಗೆ ನಮಗಿರುವ ಅಭಿಪ್ರಾಯವೇ ಅವರೊಂದಿಗಿನ ನಮ್ಮ ವರ್ತನೆಯಲ್ಲಿ ಕಂಡುಬರುವುದು. ನಾವದನ್ನು ಬಾಯಿಬಿಟ್ಟು ಹೇಳದಿದ್ದರೂ ಇತರರು ಅದನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸುತ್ತಾರೆ. ಆದ್ದರಿಂದ ಇತರರಲ್ಲಿ ತಪ್ಪು ಕಂಡುಹಿಡಿಯುವ ಅಭ್ಯಾಸವನ್ನು ಈಗಿನಿಂದಲೇ ಬಿಟ್ಟುಬಿಡಿ.' <
- ಆನಂದ ಎಸ್.ಎನ್.