ಇತ್ತೀಚಿನ ದಿನಗಳಲ್ಲಂತೂ ಸೋಪಿನ ಜಾಹೀರಾತುಗಳಲ್ಲಿ 'ಇದರಲ್ಲಿ ಬೇವಿನ ಅಂಶವಿದೆ' ಎನ್ನುವ ಮಾತು ಇದ್ದೇ ಇರುತ್ತದೆ. ಸಾಬೂನುಗಳ ಮಾತು ಬಿಡಿ. ನಮ್ಮ ಅಡುಗೆ ಮನೆಗಳಲ್ಲಿ, ಹೋಟೆಲ್‌ಗಳಲ್ಲಿ ಕರಿಬೇವು ಇಲ್ಲದಿದ್ದರೆ ಹೇಗಿರುತ್ತದೆ? ಅದನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಕರಿಬೇವು ನಮ್ಮ ಆಹಾರ ಪದ್ಧತಿಯಲ್ಲಿ ಬೆರೆತುಬಿಟ್ಟಿದೆ. ಒಗ್ಗರಣೆಗೆ ಬೇವು ಬೇಕು. ಒಗ್ಗರಣೆ ನಂತರವೂ ನಾಲ್ಕಾರು ಬೇವಿನ ಎಲೆ ಉದುರಿಸಿದರೆ ರುಚಿಯೇ ಬೇರೆ. ಕರಿಬೇವಿನ ಸುವಾಸನೆಯೇ ಅಡುಗೆಗೆ ವಿಶಿಷ್ಟ ರುಚಿ ನೀಡುತ್ತದೆ. ಕರ್ರಿ, ಚಟ್ನಿಗಳಿಗೆ ಇಲ್ಲದೇ ಇದ್ದರೆ ಸಾಧ್ಯವೇ ಇಲ್ಲ.
ಕರಿಬೇವಿನ ಗಿಡ, ಮರಗಳನ್ನು ನಾವು ಎಲ್ಲಾ ಕಡೆಗಳಲ್ಲಿಯೂ ನೋಡಬಹುದು. ಕಾಡುಗಳಲ್ಲೂ ಅಷ್ಟೆ, ಎಲ್ಲಾ ಅರಣ್ಯ ಪ್ರದೇಶಗಳಲ್ಲೂ ಕಾಣಸಿಗುವ ಸಸ್ಯವಿದು. ಸಾಮಾನ್ಯವಾಗಿ ಈ ಮರದ ಎತ್ತರ ಒಂದು ಮೀಟರ್ ದಾಟುವುದಿಲ್ಲ. 15ರಿಂದ 40 ಸೆಂ.ಮೀ ದಪ್ಪ ಇರುತ್ತದೆ. ಹಿಮಾಲಯ ಪ್ರದೇಶಗಳಲ್ಲಿ ಇದು 6 ಮೀಟರ್ ಎತ್ತರದವರೆಗೂ ಬೆಳೆಯಬಲ್ಲದು. ಸಮುದ್ರಮಟ್ಟದಿಂದ 1,500 ಅಡಿ ಎತ್ತರದ ಪ್ರದೇಶಗಳಲ್ಲಿಯೂ ಸುಲಭವಾಗಿ ಬೆಳೆಯುತ್ತದೆ. ಹಿಮಾಲಯದ ತಪ್ಪಲಿನಲ್ಲಿ ದೊಡ್ಡಮರಗಳ ಅಡಿ ಕುರುಚಲು ಗಿಡವಾಗಿ ಬೆಳೆದಿರುತ್ತದೆ. ಕೆಲವು ಕಡೆ ಸುವಾಸನೆಯ ಎಲೆಗಳಿಗಾಗಿ, ಅಲಂಕಾರಿಕ ಗಿಡವಾಗಿಯೂ ಬೆಳೆಸುವುದುಂಟು. ಕರಿಬೇವಿನ ಎಲೆಗಳಲ್ಲಿ ವಿಟಮಿನ್ 'ಎ' ಮತ್ತು ಕ್ಯಾಲ್ಷಿಯಂ ಅಧಿಕ ಪ್ರಮಾಣದಲ್ಲಿರುತ್ತವೆ. ಆದರೆ ಆಕ್ಯಾಲಿಕ್ ಆಮ್ಲದ ಆಕ್ಸಲೇಟ್‌ಗಳು ಇರುವುದರಿಂದ ಕ್ಯಾಲ್ಷಿಯಂ ದೇಹದ ಪೋಷಣೆಗೆ ದೊರೆಯುವುದಿಲ್ಲ. ವೈದ್ಯರು ಕ್ಯಾಲ್ಷಿಯಂ ಪದಾರ್ಥಗಳನ್ನು ಶಿಫಾರಸು ಮಾಡುವಾಗ ಕರಿಬೇವನ್ನು ಹೆಸರಿಸದೇ ಇರುವುದು ಇದೇ ಕಾರಣಕ್ಕೆ.
ಇತ್ತೀಚಿಗೆ ಮೈಸೂರಿನ ಸಿಎಫ್‌ಟಿಆರ್‌ಐ ಪ್ರಯೋಗಾಲಯದಲ್ಲಿ ನಡೆಸಿದ ಸಂಶೋಧನೆಯ ವರದಿ ಓದಿ ಕುತೂಹಲವಾಯಿತು. ತೇವರಹಿತ ಅಂದರೆ ಒಣಗಿದ ಎಲೆಯನ್ನು ಎಳೆಯ, ಮಧ್ಯಮ, ಬಲಿತ ಹೀಗೆ ಮೂರು ಹಂತಗಳಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಯಿತು. ಅವುಗಳ ಶೇಕಡಾವಾರು ಸಂಯೋಜನೆ ಹೀಗಿತ್ತು: ಸಸಾರಜನಕ- 5.44, 6.44, 7.19. ಜಿಡ್ಡು- 3.3, 4.7, 6.15. ಶರ್ಕರಗಳು- 14.9, 17.9, 18.9. ಪಿಷ್ಟ- 11.4, 14.2, 14.6. ನಾರು- 5.8, 6.2, 6.2. ಚಂಚಲತೈಲ- 9.82, 0.55, 0.48. ಅಸೆಟೋನ್ ಸಾರ- 1.6, 1.4, 1.3. ಬೂದಿ (ಖನಿಜಾಂಶ)- 12.54, 12.7, 13.1. ಆಮ್ಲದಲ್ಲಿ ಕರಗದ ಬೂದಿ- 1.2, 1.3, 1.35.
ಇದರಿಂದ ಏನು ಗೊತ್ತಾಗುತ್ತದೆ ಹೇಳಿ. ಎಲೆಗಳು ಬಲಿತಂತೆ ನಿಧಾನವಾಗಿ ತೈಲ ಮತ್ತು ತೈಲರಾಳ (ಅಸೆಟೋನ್ ಸಾರ) ಕಡಿಮೆಯಾಗುತ್ತದೆ. ಇತರ ಅಂಶಗಳೆಲ್ಲ ಹೆಚ್ಚಾಗುತ್ತವೆ. ಬೇವಿನ ಎಲೆಗಳನ್ನು ನಿರ್ವಾತದಲ್ಲಿ ಒಣಗಿಸುವುದು ಮಾಮೂಲು. ಹೀಗಾಗಿಯೇ ಒಣಗಿಸುವ ಇತರ ವಿಧಾನಗಳಿಗೆ ಹೋಲಿಸಿದರೆ ಉತ್ತಮ ಹಸಿರು ಪದಾರ್ಥ ಕರಿಬೇವಿನಲ್ಲಿ ಸಿಗುತ್ತದೆ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)