ದಾರಿಯ ಮೇಲೆ ಹೋಗುತ್ತಲಿರುತ್ತೇವೆ. ಕಾಲುಗಳು ತಮ್ಮ ಪಾಡಿಗೆ ತಮ್ಮ ಕಾರ್ಯ ನಿರ್ವಹಿಸುತ್ತಿರುತ್ತವೆ. ಕೈಗಳು ಅವಕ್ಕೆ ಪೂರಕವಾಗಿ ಬೀಸನ್ನು ಮುಂದುವರಿಸಿರುತ್ತವೆ. ಕಣ್ಣುಗಳು ರಸ್ತೆಯನ್ನೇ ದಿಟ್ಟಿಸುತ್ತಿರುತ್ತವೆ. ಮನಸ್ಸು ಮಾತ್ರ ಯಾವುದೋ ಯೋಚನೆಯಲ್ಲಿ ತೇಲುತ್ತಿರುತ್ತದೆ. ಅಷ್ಟರಲ್ಲಿ ನೀವು ಯಾವುದೋ ವಸ್ತುವಿನ ಮೇಲೆ ಕಾಲಿಡುತ್ತಿರುವುದು ಗಮನಕ್ಕೆ ಬರುತ್ತದೆ. ಥಟ್ಟನೆ ಅದರಿಂದ ತಪ್ಪಿಸಿಕೊಳ್ಳಬೇಕು ಎಂದುಕೊಂಡರೂ ಆಗದೇ ತುಳಿದೇ ಬಿಟ್ಟಿರುತ್ತೀರಿ. ಮುಖ ಕಿವುಚುತ್ತಾ ಅದನ್ನು ಸ್ವಚ್ಛಗೊಳಿಸಿಕೊಳ್ಳಲು ಮುಂದಾಗುವ ಮೊದಲೇ ಮನಸ್ಸು ಶಪಿಸತೊಡಗುತ್ತದೆ. ಥೂ, ದರಿದ್ರ. ಇಲ್ಲೇ ಇರಬೇಕೇ ಯಾವ ಹೊಲಸೋ ಏನೋ? ಕರ್ಮ ನನಗೇ ಮೆತ್ತಿಕೊಳ್ಳಬೇಕೆ...? ವಾಚಾಮಗೋಚರ ನಿಂದನೆ.
ಒಮ್ಮೆ ಯೋಚಿಸಿ ಇದರಿಂದ ಏನಾದರೂ ಪ್ರಯೋಜನವಿದೆಯೇ? ತುಳಿದ್ದು ತುಳಿದಾಗಿದೆ. ಇನ್ನೇನಿದ್ದರೂ ಅದನ್ನು ಸ್ವಚ್ಛಗೊಳಿಸಿಕೊಳ್ಳುವುದೊಂದೇ ಉಳಿದ ದಾರಿ. ಅಷ್ಟಕ್ಕೂ ಅದರ ಪಾಡಿಗೆ ಅದಿತ್ತು. ತಪ್ಪು ಅದರದ್ದೇನಲ್ಲ. ನಾವು ಎಚ್ಚರ ವಹಿಸಬೇಕಿತ್ತು. ಕಾಲಿಡುವ ಮುನ್ನ ಯೋಚಿಸಬೇಕಿತ್ತು. ಜಾಗೃತೆಯಿಂದ ನಡೆಯಬೇಕಿತ್ತು. ಗಮನ ರಸ್ತೆಯಲ್ಲೇ ಕೇಂದ್ರೀಕೃತವಾಗಿರಬೇಕಿತ್ತು. ಇದಾವುದನ್ನೂ ಮಾಡದೇ ಹೊಲಸನ್ನು ನಿಂದಿಸುವುದರಿಂದ ಏನು ಪ್ರಯೋಜನ. ಅಷ್ಟಕ್ಕೂ ಹೊಸಲಿಗೆ ನಿಮ್ಮ ನಿಂದನೆಯೇನು? ಹೊಗಳಿಕೆಯೇನು? ಎಲ್ಲವೂ ಒಂದೇ.
ಜೀವನದಲ್ಲೂ ಎಷ್ಟೋ ಬಾರಿ ಹೀಗೆಯೇ ಆಗುತ್ತದೆ. ತಪ್ಪು ನಮ್ಮದೇ ಇರುತ್ತದೆ. ಅದನ್ನು ನಾವು ಗ್ರಹಿಸುವುದೇ ಇಲ್ಲ. ಅಂಥ ತಪ್ಪು ನಡೆಯುವ ಮುನ್ನ ಎಚ್ಚರ ವಹಿಸುವುದೂ ಇಲ್ಲ. ಹಾದಿ ಎಂದ ಮೇಲೆ ಅಲ್ಲಿ ಹೊಲಸು ಇದ್ದಿರಬಹುದಾದ ಸಾಧ್ಯತೆ ಇದ್ದೇ ಇದೆ. ಅದನ್ನು ಗ್ರಹಿಸುವುದು ನಮ್ಮ ಕರ್ತವ್ಯ. ಹಾಗೆಯೇ ಜೀವನದ ಹಾದಿಯೂ, ಅಲ್ಲಿ ಎಲ್ಲ ಸಾಧ್ಯತೆಯೂ ಇರುತ್ತದೆ. ಅದು ನಮಗೆ ಗೊತ್ತಿರಬೇಕು. ಅದನ್ನು ಬಿಟ್ಟು ನಮ್ಮ ಬೇಜವಾಬ್ದಾರಿತನಕ್ಕೆ ಯಾರ್ಯಾರನ್ನೋ ನಿಂದಿಸುವುದರಿಂದ ಯಾವುದೇ ಪ್ರಯೋಜನವಿರದು. ಸಮಸ್ಯೆಯ ಮೂಲವನ್ನು ನಮ್ಮೊಳಗೆ ಮೊದಲು ಹುಡುಕಿಕೊಳ್ಳಬೇಕು. ಅಲ್ಲಿ ಶುದ್ಧವಾದ ನಂತರವಷ್ಟೇ ಬೇರೆಯವರ ಬಗ್ಗೆ ಯೋಚಿಸುವುದು ಸ್ವಚ್ಛ ವ್ಯಕ್ತಿತ್ವದ ಪ್ರತೀಕ. ಬಹಳಷ್ಟು ಬಾರಿ ಅಲ್ಲೇ ನಾವು ಎಡವಿ, ಮೆತ್ತಿದ ಹೊಲಸು ಇನ್ನಷ್ಟು ರಾಡಿಯಾಗಲು, ಇನ್ನಷ್ಟು ಪಸರಿಸಲು, ಕೆಲವೊಮ್ಮೆ ಸ್ವಚ್ಛಗೊಳಿಸಲಾಗದಷ್ಟು ಗಾಢವಾಗುವಂತೆ ಮಾಡಿಕೊಂಡು ಬಿಡುತ್ತೇವೆ. ಹೀಗಾಗಿ ಹೊಲಸಿನ ಬಗ್ಗೆ ಎಚ್ಚರ ವಹಿಸಿ. ಒಂದೊಮ್ಮೆ ಆಕಸ್ಮಿಕವಾಗಿ ಅದು ನಿಮಗೆ ಅಂಟಿದೆ ಎಂದುಕೊಂಡರೆ ತಕ್ಷಣ ಅದನ್ನು ಸ್ವಚ್ಛಗೊಳಿಸಿಕೊಳ್ಳುವ ಬಗ್ಗೆ ಯೋಚಿಸಿ.
- ಸಹನೆ