

'ನಿಮ್ಮ ಮಗ ನಮ್ಮ ವಶದಲ್ಲಿದ್ದಾನೆ. ನೀವು ಒಂದು ಮಾತು ಹೇಳಿದರೆ ಈಗಲೇ ಬಿಟ್ಟು ಕಳಿಸುತ್ತೇವೆ'.
ದೂರವಾಣಿ ಕರೆ ಬಂದದ್ದು ಶತ್ರು ರಾಷ್ಟ್ರ ಪಾಕಿಸ್ತಾನದ ಸೇನಾಧಿಕಾರಿಯಿಂದ. ಕರೆ ಸ್ವೀಕರಿಸಿದವರು ಏನು ಹೇಳಬೇಕು? ಈ ಕಡೆಯಿಂದ ಬಂದ ಉತ್ತರ ಕೇಳಿ ಅತ್ತ ಇದ್ದವರು ದಂಗಾಗಿ ಹೋದರು. 'ನನ್ನ ನೂರಾರು ಮಕ್ಕಳು ನಿಮ್ಮ ಬಳಿ ಇದ್ದಾರೆ. ಎಲ್ಲರನ್ನೂ ಚೆನ್ನಾಗಿ ನೋಡಿಕೊಂಡು ಸುರಕ್ಷಿತವಾಗಿ ಕಳುಹಿಸಿಕೊಡಿ. ಆಗಲೇ ಆತನನ್ನು ಕಳಿಸಿ' ಎಂದು ನಿರ್ಭಾವುಕರಾಗಿ ನುಡಿದಿದ್ದರು ಇವರು.
ಹೆತ್ತ ಮಗ ಎನ್ನುವ ವ್ಯಾಮೋಹವನ್ನೂ ಮೀರಿ ಅಂತಹ ದಿಟ್ಟ ಉತ್ತರ ಕೊಟ್ಟವರು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ.
ಭಾರತದಲ್ಲಿ ಹಲವು ವರ್ಷ ಸೇನಾಧಿಕಾರಿಯಾಗಿದ್ದ ಮಹಾನ್ ವ್ಯಕ್ತಿ. ನಿಸ್ವಾರ್ಥ ಸೇವೆ, ಜ್ಯಾತ್ಯಾತೀಯ ಮನೋಭಾವ ಅವರದ್ದು. 'ಎಲ್ಲರೂ ನನ್ನ ಮಕ್ಕಳೇ' ಎಂದು ಭಾವಿಸಿ, ಸೈನ್ಯವನ್ನು ಒಗ್ಗೂಡಿಸಿ ಕೆಲಸ ಮಾಡಿದ ಮಹಾನ್ ಚೇತನ. ಕಾರ್ಯಪ್ಪಜ್ಜನ ಬದಲು ಬೇರಾರೇ ಅವರ ಸ್ಥಾನದಲ್ಲಿದ್ದಿದ್ದರೆ ಭಾರತೀಯ ಸೈನ್ಯದ ರೂಪವೇ ಬದಲಾಗುತ್ತಿತ್ತು. ನಮ್ಮ ಶತ್ರು ದೇಶಗಳ ಸೇನಾಧಿಕಾರಿಗಳೂ ಸಹ ಕಾರ್ಯಪ್ಪಜ್ಜನಿಗೆ ಗೌರವ ಕೊಡುತ್ತಿದ್ದರು ಎನ್ನುವುದಕ್ಕೆ ಪಾಕ್ ಸೇನಾಧಿಕಾರಿ ವರ್ತನೆಯೇ ಸಾಕ್ಷಿ.
ದಶಕಗಳ ಕಾಲ ಸೇನಾಧಿಕಾರಿಯಾಗಿದ್ದ ಕಾರ್ಯಪ್ಪನವರು ನಿವೃತ್ತಿ ನಂತರವೂ ಅದೇ ರೀತಿ ಬದುಕಿದರು ಎನ್ನುತ್ತಾರೆ ಮೇಜರ್ ಬಿದ್ದಂಡ ನಂದ ನಂಜಪ್ಪ. 'ನಾವು ಹತ್ತಿರದಿಂದ ಕಂಡ ಅಜ್ಜ. ಸೈನಿಕರನ್ನು ತಮ್ಮ ಮಕ್ಕಳಂತೆ ಕಾಣುತ್ತಿದ್ದ ಅವರು ನಿವೃತ್ತಿ ನಂತರ ತವರಿಗೆ ಬಂದು ಎಲ್ಲರೊಂದಿಗೆ ಬೆರೆತರು. ಭಾರತದ ಯುವಕರಿಗಾಗಿ ಹಲವು ಪುಸ್ತಕಗಳನ್ನು ಬರೆದರು' ಎನ್ನುತ್ತಾರೆ. ಈಗ ಅವರ ಕುಟುಂಬ ಸದಸ್ಯರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.
ಹತ್ತು ಸಾವಿರ ಪರಿಹಾರ ಕೊಟ್ಟರು
ಒಮ್ಮೆ ಎಫ್.ಎಂ.ಸಿ ಕೊದಂಡೇರ ಕಾರ್ಯಪ್ಪನವರು ಬೆಂಗಳೂರಿನಿಂದ ಮಡಿಕೇರಿಗೆ ತೆರಳುತ್ತಿದ್ದರು. ಮೈಸೂರು ದಾಟಿ ಕಾರು ಕೊಂಚ ಮುಂದೆ ಸಾಗಿತ್ತು. ಚಾಲಕ ಧಡಕ್ಕನೆ ಯಾವುದಕ್ಕೋ ಗುದ್ದಿದ್ದ. ಕಾರಿಗಡ್ಡವಾಗಿ ಬಂದಿದ್ದ ಗಬ್ಬದ ಹಸುವೊಂದು ವಿಲವಿಲ ಒದ್ದಾಡುತ್ತಿತ್ತು. ಊರಿನವರು ಸೇರಿದ್ದರು. ಕಾರಿಗೆ ಮುತ್ತಿಗೆ ಹಾಕಿದ್ದರು. ಕಾರ್ಯಪ್ಪನವರು ಇಳಿದವರೇ ಪಿಸ್ತೂಲಿನಿಂದ ಎರಡು ಗುಂಡು ಸಿಡಿಸಿ ಯಾತನೆ ಅನುಭವಿಸುತ್ತಿದ್ದ ಹಸುವಿಗೆ ಮಕ್ತಿ ಕೊಟ್ಟರು. ಚಾಲಕನಿಗೆ ಎಲ್ಲರೆದುರೇ ಝಾಡಿಸಿದರು. ನನ್ನಿಂದ ಒಂದು ಪ್ರಾಣ ವಿನಾಕಾರಣ ಹೋಯಿತು ಎಂದು ಮರುಗಿದರು. ಹಸುವಿನ ಒಡೆಯನಿಗೆ ಆಗಿನ ಕಾಲಕ್ಕೇ ಹತ್ತು ಸಾವಿರ ರುಪಾಯಿಗಳನ್ನು ಕೊಟ್ಟಿದ್ದರು.
ನಿವೃತ್ತಿ ಬಳಿಕ ಮಡಿಕೇರಿಯ ತಮ್ಮ ನಿವಾಸ 'ರೋಷನಾರಾ'ದಲ್ಲಿದ್ದರು. ದಿನಾ ಸಂಜೆ ಕಾರಿನಲ್ಲೊಂದು ಸುತ್ತು ಹೋಗುವುದು ಅವರ ಅಭ್ಯಾಸ. ಮರಳಿ ಬರುವಾಗ ಕಾರಿಗೆ ಪೆಟ್ರೋಲ್ ತುಂಬಿಸುತ್ತಿದ್ದರು. ಪೆಟ್ರೋಲ್ ತುಂಬಿಸುವಾಗ 'ಎಷ್ಟು ಕುಡಿತಾಳೋ ನನ್ ಹೆಂಡ್ತಿ' ಎಂದು ಬಂಕ್ನ ಹುಡುಗರನ್ನು ನಗಿಸುತ್ತಿದ್ದರು. ಹುಡುಗರೂ ಸಹ 'ಅಜ್ಜಾ ನಿಮ್ ಹೆಂಡತಿಗೆ ಇವತ್ತೆಷ್ಟು ಕುಡಿಸಲಿ' ಎನ್ನುತ್ತಿದ್ದರು.
ಕಾರ್ಯಪ್ಪಜ್ಜ ಆಮಂತ್ರಣವಿದ್ದ ಯಾವ ಕಾರ್ಯವನ್ನೂ ತಪ್ಪಿಸುತ್ತಿರಲಿಲ್ಲವಂತೆ. ಅದೂ ಕೊಡವರ ಕುಪ್ಪಸ, ದಟ್ಟಿ, ಕೆಂಪು ಪೇಟ (ಸಾಧಾರಣವಾಗಿ ಬಿಳಿ ಪೇಟ. ಅಜ್ಜನವರು ಮಾತ್ರ ಕೆಂಪು ಪೇಟ) ಧರಿಸಿ ವಾಲಗಕ್ಕೆ ಹೆಜ್ಜೆ ಹಾಕುತ್ತಿದ್ದರಂತೆ.
ಮದುವೆ ಮನೆಯಲ್ಲಿ ಕೊಡವರು ಕಾರ್ಯಪ್ಪಜ್ಜನ ಕುಣಿತಕ್ಕೆ ಕಾಯುತ್ತಿದ್ದರಂತೆ. ಕೊಡಗಿನಲ್ಲಿ ಯೋಧರ ಸಂಖ್ಯೆ ಅಷ್ಟೊಂದಿದ್ದರೂ ಅಜ್ಜನೆಂಬ ಪಟ್ಟ ಕಾರ್ಯಪ್ಪಜ್ಜನಿಗೆ ಮಾತ್ರ. ಅಜಾನುಬಾಹು, ಚುರುಕು ಕಣ್ಣುಗಳು, ಆತ್ಮೀಯತೆಯ ಮುಖಭಾವ. ಸ್ವತಂತ್ರ್ಯ ಭಾರತದ ಮೊಟ್ಟಮೊದಲ ಕಮಾಂಡರ್ ಇನ್ ಚೀಫ್ ಆದರೂ ನಿವೃತ್ತಿ ನಂತರ ಜನರ ನಡುವೆ ಬದುಕಿದರು.
ಚಿಮ್ಮು ಮತ್ತು ಡುಬ್ಬು
ಬ್ರಿಟಿಷರ ಪಾಲಿನ tiny modal state ಕೊಡಗಿನ ಹೆಸರಿನೊಟ್ಟಿಗೆ ಕೇಳಿಬರವ ಎರಡು ಹೆಸರುಗಳು ಜನರಲ್ ಕೆ.ಎಸ್.ತಿಮ್ಮಯ್ಯ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪನವರು. ಭಾರತೀಯ ಸೇನೆಯಲ್ಲಿ ಇವರಿಬ್ಬರ ಹೆಸರು ಅಜರಾಮರ.
ತಿಮ್ಮಯ್ಯನವರು ನಿವೃತ್ತಿ ನಂತರ ದೇಶವಿದೇಶಗಳಲ್ಲಿ ರಾಯಭಾರಿಗಳಾಗಿಯೂ, ಸೇವಾಕಾರ್ಯಗಳಲ್ಲೂ, ಅಂತರಾಷ್ಟ್ರೀಯ ಬಿಕ್ಕಟ್ಟುಗಳನ್ನು ಬಗೆಹರಿಸುವ ಸಂಧಾನಕಾರರಾಗಿಯೂ ತೊಡಗಿಸಿಕೊಂಡರೆ, ಕಾರ್ಯಪ್ಪನವರು ನಿವೃತ್ತಿಯ ಅನಂತರ ಮಡಿಕೇರಿಗೆ ಮರಳಿ ಕೊನೆಯವರೆಗೂ ಅಲ್ಲಿಯೇ ನೆಲೆಸಿದ್ದರು.
ವಿಶೇಷವೆಂದರೆ ಇವರಿಬ್ಬರೂ ಕೊಡಗಿನ ಆಗರ್ಭ ಶ್ರೀಮಂತ ಮನೆತನ ಕೊಡಂದೇರ ಕುಟುಂಬದಲ್ಲಿ ಜನಿಸಿದವರು. ಬಾಲ್ಯದಲ್ಲಿ ಊರು ಮತ್ತು ನೆಂಟರ ಬಳಗಕ್ಕೆಲ್ಲಾ ಕಾರ್ಯಪ್ಪನವರು ಪ್ರೀತಿಯ 'ಚಿಮ್ಮು' ಆದರೆ ಸೈನ್ಯ ಪೀತಿಯಿಂದ ಅವರನ್ನು 'ಕಿಪ್ಪರ್' ಎಂದು ಕರೆಯಿತು.
ತಿಮ್ಮಯ್ಯನವರು ಊರಲ್ಲೂ, ಸೈನ್ಯದಲ್ಲೂ 'ಡುಬ್ಬು' ಎಂದೇ ಪರಿಚಿತರಾದರು. ಇಬ್ಬರೂ ಬಾಲ್ಯದಲ್ಲಿ ಉತ್ತಮ ಹಾಕಿ ಮತ್ತು ಟೆನ್ನಿಸ್ ಆಟಗಾರರು. ಇಬ್ಬರೂ ಸೈನ್ಯವೇ ಜೀವನ ಎಂದು ಬದುಕಿದವರು.
ತಿಮ್ಮಯ್ಯನವರು ಕುಮಾವೂನ್ ರೆಜಿಮೆಂಟ್ ಅನ್ನು ಪ್ರೀತಿಸುತ್ತಿದ್ದಂತೆ ಕಾರ್ಯಪ್ಪನವರು ರಜಪೂತ್ ಲೈಟ್ ಇನ್ಫೆಂಟ್ರಿಯನ್ನು ಮಗುವಿನಂತೆ ಪ್ರೀತಿಸುತ್ತಿದ್ದರು.
- ಶಾಂತಾ ತಮ್ಮಯ್ಯ