

ವಯಸ್ಸು ಸಾಧನೆಗೆ ಎಂದಾದರೂ ಅಡ್ಡಿಯಾಗಿದ್ದಿದೆಯೇ? ಖಂಡಿತಾ ಇಲ್ಲ ಎನ್ನುತ್ತಾರೆ ಫೌಜಾ ಸಿಂಗ್.
ಆತನಿಗೀಗ ಕೇವಲ 101 ವರ್ಷ. ಪರಿಪೂರ್ಣ ಬದುಕಿನ ಸಂತೃಪ್ತಿ ಈ ಅಜ್ಜನದ್ದು. ಆದರೂ ತೀರದ ಸಾಧನೆಯ ಹಪಾಹಪಿ. ಮನಸಿನ್ನೂ ಹಸಿಹಸಿ ಕನಸುಗಳಲ್ಲಿ ವಿಹರಿಸುತ್ತಿದೆ. ಅದು ಹುಚ್ಚು ಕುದುರೆ. ಅನಂತ ಓಟದ ಹಂಬಲ ಅದಕ್ಕೆ. ಅದನ್ನು ಕಟ್ಟಿ ಹಾಕುವ ಗೋಜಿಗೆ ಹೋಗಲೇ ಇಲ್ಲ ಫೌಜಾ ತಾತ. ಮ್ಯಾರಾಥಾನ್ ಓಟದ ಮನಸ್ಸಿಗೆ ಇನ್ನೆಲ್ಲಿಯ ಕಡಿವಾಣ. ಮನದೊಂದಿಗೆ ಅವರೂ ಓಡುತ್ತಲೇ ಇದ್ದಾರೆ 101ರ ಹರೆಯದಲ್ಲೂ.
ಮನಸ್ಸು ಮಾಡಿದರೆ ಯಾರೂ, ಯಾವ ವಯಸ್ಸಿನಲ್ಲಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ ಮಾದರಿಯಾಗಿ ನಿಲ್ಲುತ್ತಾರೆ. ಅಂಥ ಅಸೀಮ ಇಚ್ಛಾಶಕ್ತಿಯ ಪರಿಣಾಮ ಅವರಿಂದು ಪ್ರಪಂಚದ ಅತ್ಯಂತ ಹಿರಿಯ ಮ್ಯಾರಥಾನ್ ಓಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಫೌಜಾ ಎಂಬ ಈ ಹಣ್ಣು ಹಣ್ಣು ಚಿರ ಯುವಕ ಎಂಟು ಮ್ಯಾರಥಾನ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದಿದ್ದಾರೆ ಎಂದರೆ ನೀವು ನಂಬಲೇಬೇಕು. ಕಳೆದ ವರ್ಷ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ನಡೆದ ಮ್ಯಾರಥಾನ್‌ನಲ್ಲಿ ಐದು ಕಿಲೋಮೀಟರ್ ದೂರವನ್ನು ಆತ ಕೇವಲ 35 ನಿಮಿಷಗಳಲ್ಲಿ ಕ್ರಮಿಸಿದ್ದಾರೆ. ಇದು ವಿಶ್ವದ ಹೊಸ ದಾಖಲೆ. ಹಾಗಿದ್ದರೆ ಇದರ ಹಿಂದಿನ ದಾಖಲೆ ಎಷ್ಟಿತ್ತು ಗೊತ್ತೇ? 8 ಗಂಟೆ 25 ನಿಮಿಷ. ಅಂತರವನ್ನು ನೀವೇ ಲೆಕ್ಕ ಹಾಕಿಕೊಳ್ಳಿ. ಇದಕ್ಕೆ ಲಂಡನ್‌ನ ಸಾವಿರಾರು ಜನ ಸಾಕ್ಷಿಯಾಗಿದ್ದಾರೆ.
ಹೆಮ್ಮೆಯ ವಿಷಯವೆಂದರೆ ಫೌಜಾ ಸಿಂಗ್ ಹುಟ್ಟಿದ್ದು ಭಾರತದಲ್ಲಿ, ಪಂಜಾಬ್‌ನ ಜಲಂಧರ್ ಜಿಲ್ಲೆಯ ಬಿಯಾಸ್‌ಪಿಂಡ್‌ನಲ್ಲಿ. 17 ವರ್ಷಗಳಿಂದ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದಾರೆ.
ಇಂಥ ಸಾಧಕ ಯೌವನದಿಂದಲೂ ಮ್ಯಾರಥಾನ್ ಓಟಗಾರ ಎಂದು ನೀವು ಊಹಿಸಿದರೆ ಅದು ತಪ್ಪು. ಅವರು ತಮ್ಮ ಕ್ರೀಡಾ ಜೀವನ ಪ್ರಾರಂಭಿಸಿದ್ದೇ 80ನೇ ವಯಸ್ಸಿನಲ್ಲಿ. ಪಂಜಾಬ್‌ನಲ್ಲಿ ರೈತನಾಗಿ ಜೀವನ ನಡೆಸುತ್ತಿದ್ದಾಗಲೇ ಫೌಜಾ ಓಟದತ್ತ ಪ್ರೀತಿ ಬೆಳೆಸಿಕೊಂಡಿದ್ದರು. ಅವರು ಪ್ರತಿದಿನ ಹತ್ತು ಮೈಲುಗಳಷ್ಟು ಜಾಗಿಂಗ್ ಮಾಡುತ್ತಿದ್ದರು!
89ರ ಇಳಿ ವಯಸ್ಸಿನಲ್ಲಿ ಫೌಜಾ ಓಡಲು ಪ್ರಾರಂಭಿಸಿರುವುದರ ಹಿಂದೆ ನೋವಿನ ಕಥೆಯಿದೆ. ಕೆಲವು ವರ್ಷಗಳ ಹಿಂದೆ ಅವರ ಹೆಂಡತಿ ಹಾಗೂ ಮಗ ಕುಲ್‌ದೀಪ್ ಮರಣ ಹೊಂದಿದರು. ಅವರ ಸಾವಿನ ನೋವನ್ನು, ಒಂಟಿತನವನ್ನು ಈ ಮ್ಯಾರಥಾನ್ ಮೂಲಕ ಮರೆಯಲು ಪ್ರಯತ್ನಿಸಿದರು. ಆನಂತರವೇ ಸ್ಫೋರ್ಟ್ಸ್‌ನ್ನು ಅವರು ಗಂಭೀರವಾಗಿ ಪರಿಗಣಿಸಿದರು. ತಾವೊಬ್ಬ ವಿಶ್ವ ಚಾಂಪಿಯನ್ ಆಗುವುದಾಗಿ ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಆದರೆ ಮೊದಲ ಮ್ಯಾರಥಾನ್‌ನಲ್ಲೇ ಯಾವುದೇ ಶ್ರಮವಿಲ್ಲದೇ ಚಾಂಪಿಯನ್‌ಶಿಪ್ ಗೆದ್ದುಬಿಟ್ಟರು. ಇದು ಕೂಡ ಅವರು ಮ್ಯಾರಥಾನ್‌ನಲ್ಲಿ ಮುಂದುವರಿಯಲು ಕಾರಣವಾಯಿತು.
200 ಮೀ., 400 ಮೀ., 800 ಮೀ., ಹಾಗೂ 3000 ಮೀ.ಗಳ ವಿಭಾಗದಲ್ಲೂ ಫೌಜಾ ಸಿಂಗ್ ದಾಖಲೆ ನಿರ್ಮಿಸಿದ್ದಾರೆ. ಭಾರತೀಯ ಸಂಜಾತ ಓಟಗಾರನೊಬ್ಬ ವಿದೇಶಿ ನೆಲದಲ್ಲಿ ಇಷ್ಟೊಂದು ದಾಖಲೆ ನಿರ್ಮಿಸುವುದು ಈವರೆಗೆ ಇಲ್ಲ. ಈ ಮೂಲಕ ಹೊಸ ಮೈಲಿಗಲ್ಲನ್ನೇ ಅವರು ಸ್ಥಾಪಿಸಿದ್ದಾರೆ.
ಕಳೆದ ವರ್ಷ ಲಂಡನ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕ್ರೀಡಾ ಜ್ಯೋತಿ ಹಿಡಿದ ಹೆಗ್ಗಳಿಕೆ ಸಿಂಗ್ ಅವರದು. ಮುಂದಿನ (ಫೆಬ್ರವರಿ 2013) ತಿಂಗಳು ನಡೆಯಲಿರುವ ಹಾಂಗ್‌ಕಾಂಗ್ ಮ್ಯಾರಥಾನ್‌ನಲ್ಲಿ ಫೌಜಾ ಸಿಂಗ್ ತಮ್ಮ ಬದುಕಿನ ಕೊನೆಯ ಓಟವನ್ನು ಓಡಲಿದ್ದಾರೆ!
ಆಲ್ ದಿ ಬೆಸ್ಟ್ ಫೌಜಾ ಸಿಂಗ್!
ನನ್ನ ಜೀವಿತದ ಕೊನೆಯವರೆಗೂ ನಾನು ಓಡುತ್ತಲೇ ಇರುವ ಹಾಗೆ ಮಾಡು ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ' ಎನ್ನುತ್ತಾರೆ ವಿಶ್ವದ ಅತ್ಯಂತ ಹಿರಿಯ ಮ್ಯಾರಥಾನ್ ಓಟಗಾರ, ಫೌಜಾ ಸಿಂಗ್. ಇವರು ಹಿರಿಯರಿಗೆ ಮಾತ್ರವಲ್ಲ ಯುವಕರಿಗೂ ಸ್ಫೂರ್ತಿಯಾಗಬಲ್ಲವರು.
ದೀರ್ಘಾಯುಷ್ಯದ ಗುಟ್ಟು
'ನಾವು ತೆಗೆದುಕೊಳ್ಳುವ ಆಹಾರ ನಮ್ಮ ದೇಹ ಹಾಗೂ ಮನಸ್ಸಿನ ಮೇಲೆ ನೇರ ಪರಿಣಾಮವನ್ನುಂಟು ಮಾಡುತ್ತದೆ. ಸಸ್ಯಾಹಾರ ಸೇವನೆ ದೇಹ ಹಾಗೂ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಸರಳ, ಸಾತ್ವಿಕ ಜೀವನ ನನ್ನ ದೀರ್ಘಾಯುಷ್ಯದ ಗುಟ್ಟು. ನಮ್ಮ ದೇಶದಲ್ಲಿ ಆಹಾರವಿಲ್ಲದೆ ಸಾಯುವವರು ಹಾಗೂ ಹೆಚ್ಚು ಆಹಾರ ಸೇವಿಸಿ ಸಾಯುವವರ ಸಂಖ್ಯೆ ಹೆಚ್ಚು. ಆದ್ದರಿಂದ ಹಿತ ಮಿತವಾಗಿ, ಎಷ್ಟು ಬೇಕೋ ಅಷ್ಟನ್ನು ಮಾತ್ರ ಸೇವಿಸಿ' ಎಂದು ನಗುನಗುತ್ತಲೇ ಕಿವಿಮಾತು ಹೇಳುತ್ತಾರೆ ಸಿಂಗ್.
ಆಹಾರ ವಿಧಾನ
= ಫೌಜಾ ಸಿಂಗ್ ಅಪ್ಪಟ ಸಸ್ಯಾಹಾರಿ
= ಊಟಕ್ಕೆ ರೊಟ್ಟಿ ಮತ್ತು ದಾಲ್
ಕ್ರಮಬದ್ಧವಾಗಿ ಆಹಾರ
= ಶುಂಠಿ ಹಾಗೂ ಇತರ ಮಸಾಲೆಗಳನ್ನು ಉಪಯೋಗಿಸಿದ ಸೂಪ್
= ಮಸಾಲೆ ಚಹಾ ಸೇವನೆ
= ಹಿತಮಿತವಾಗಿ, ದೇಹಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಸೇವನೆ
= ಸದಾ ನಗು. ಸಕಾರಾತ್ಮಕ ಯೋಚನೆ
= ದಿನವಿಡೀ ಚಟುವಟಿಕೆಯಿಂದಿರುವುದು.
- ಶಶಿರೇಖಾ ಹೆಗಡೆ