ಬದುಕಿನ ಪರಮೋನ್ನತ ಸತ್ಯವೊಂದು ನಿಮಗೆ ಗೊತ್ತೇ? ಈ ಜಗತ್ತಿನಲ್ಲಿ ಯಾವೂ ಸರ್ವಶ್ರೇಷ್ಠ ಎಂಬುದೂ ಇಲ್ಲ. ಯಾವುದೂ ಅತಿ ಕನಿಷ್ಠ ಎಂಬುದೂ ಇರಲಿಕ್ಕೆ ಸಾಧ್ಯವೇ ಇಲ್ಲ. ಯಾವುದೂ ಒಳ್ಳೆದಿಲ್ಲ. ಯಾವುದೂ ಕೆಟ್ಟದದ್ದೆಂಬುದೂ ಇಲ್ಲ. ಆಯಾ ಕಾಲಕ್ಕೆ, ಆಯಾ ವ್ಯಕ್ತಿಗೆ, ಸನ್ನಿವೇಶಕ್ಕೆ ತಕ್ಕಂತೆ ಶ್ರೇಷ್ಠ- ಕನಿಷ್ಠ ಎಂಬುದು ನಿರ್ಧಾರವಾಗುತ್ತದೆ.
ಕೆಲವೊಂದು ಸಂದರ್ಭದಲ್ಲಿ ಎಲ್ಲಕ್ಕಿಂತ ನಾವೇ ಅತ್ಯುತ್ತಮ ಎಂಬ ಭಾವನೆ ಕಾಣಿಸಿಕೊಳ್ಳಬಹುದು. ಅದು ಕೇವಲ ಭ್ರಮೆಯಾಗಿರುತ್ತದೆ. ಅದೇ ಭ್ರಮೆಯಲ್ಲಿ ತೇಲುತ್ತಾ ನಮಗಿಂತ ಕೆಳಗಿನವರೆದುರು ಅದನ್ನು ಪ್ರದರ್ಶಿಸಲು ಹೊರಟರೆ ಖಂಡಿತಾ ನಾವು ಮೂರ್ಖರಾಗಿರುತ್ತೇವೆ. ಏಕೆಂದರೆ, ನಾವು ಒಂದು ವಿಚಾರದಲ್ಲಿ ಉತ್ತಮ ಎಂದುಕೊಂಡರೆ ಮತ್ತೊಂದರಲ್ಲಿ ನಾವು ಅತ್ಯಂತ ಕೆಳಗೇ ಇರುತ್ತೇವೆ.
ಶ್ರೇಷ್ಠತೆ ಎನ್ನುವುದು ಒಂದು ರೀತಿಯಲ್ಲಿ ಕನಸಿನ ಗಂಟು. ಅದು ಇದೆ ಎಂದುಕೊಂಡು ಅನುಭವಿಸುತ್ತಾ ಹೋಗುತ್ತಿದ್ದಾಗಲೇ ಅದರ ಪೊರೆ ಕಳಚಿ ವಾಸ್ತವದ ಬಯಲಲ್ಲಿ ಬೆತ್ತಲಾಗಿಬಿಟ್ಟಿರುತ್ತೇವೆ. ಬಾಲ ಮಿಡಿತಕ್ಕೆ ಅನುಗುಣವಾಗಿ ಶ್ರೇಷ್ಠ- ಕನಿಷ್ಠ ಭಾವಗಳ ಏರಿಳಿತಗಳು ಬಂದು ಹೋಗುತ್ತಲೇ ಇರುತ್ತದೆ. ಯಶಸ್ಸಿನ ಮಾರ್ಗದಲ್ಲಿ ನಡೆಯುತ್ತಿರುವ ವ್ಯಕ್ತಿ ಎಂದಿಗೂ ಇಂಥ ಏರಿಳಿತಗಳ ಅನುಭವದಲ್ಲಿ ತಾನೂ ಒಂದಾಗಿ ವರ್ತಿಸುವುದಿಲ್ಲ. ಅದರ ಜತೆಜತೆಗೇ ಸುಮ್ಮನೇ ನಡೆದು ಹೋಗುತ್ತಿದ್ದಾಗ ಮಾತ್ರ ನಮ್ಮ ಗುರಿಯ ಪಯಣದಲ್ಲಿ ಆಯಾಸ ಆಗದೇ ಇರಲು ಸಾಧ್ಯ. ಅನುಭವ ಮತ್ತು ಆನಂದಗಳು ಒಟ್ಟೊಟ್ಟಿಗೇ ಸಾಗುವಂಥದ್ದು. ಮೌನವಾಗಿ ಇವನ್ನು ಗ್ರಹಿಸುತ್ತ ಸಾಗಬೇಕು. ಮನದ ಪ್ರಸನ್ನತೆಯನ್ನು, ಅದರ ಸಮತೋಲನವನ್ನು ಕಾಯ್ದುಕೊಳ್ಳುವುದೇ ಜೀವನದ ಯಶಸ್ಸಿನ ಗುಟ್ಟು. ಹಾಗೆಂದು ಭಾವನೆಗಳನ್ನು ಹಂಚಿಕೊಳ್ಳಲೇಬಾರದೆಂದಲ್ಲ. ಆದರೆ ಅದರೊಟ್ಟಿಗಿನ ತೀವ್ರತೆಯನ್ನು ನಿಯಂತ್ರಿಸಿಕೊಳ್ಳುವ ಮಾರ್ಗ ನಮಗೆ ಗೊತ್ತಿರಬೇಕು. ಸನ್ನಿವೇಶದ ವಿವೇಚನೆಯನ್ನು ಅರಿತು ನಮ್ಮ ಭಾವನೆಗಳು ವ್ಯಕ್ತವಾಗಬೇಕೇ ವಿನಾ ಜೀವನದಲ್ಲಿ ಸೋತು ನಿಂತವರೆದುರು ನಮ್ಮ ಹೆಗ್ಗಳಿಕೆ ಮೆರೆಯವುದು ದಾರ್ಷ್ಟ್ಯ ಎನಿಸಿಕೊಳ್ಳುತ್ತದೆ. ಕಳಕೊಂಡವರ ಎದುರು ನಮ್ಮ ಗಳಿಕೆಯ ತುತ್ತೂರಿ ಊದುವುದು ಅಹಂಕಾರವೆನಿಸುತ್ತದೆ. ಸಮಾನ ಮನಸ್ಸಿನ ಎದುರು ಮಾತ್ರವೇ ನಮ್ಮ ಯಶಸ್ಸು ಮೌಲ್ಯ ಪಡಕೊಳ್ಳುತ್ತದೆ ಎಂಬುದನ್ನು ಮರೆಯಬಾರದು. ಸ್ವಾರ್ಥದಲ್ಲೊಂದೇ ಮುಳುಗಿರುವ ವ್ಯಕ್ತಿ ಮಾತ್ರ ತನ್ನ ಶ್ರೇಷ್ಠತೆಯ ಗುಂಗಿನಲ್ಲೇ ತೇಲುತ್ತಿರುತ್ತಾನೆ. ಅದಿಲ್ಲದವ ಶ್ರೇಷ್ಠತೆಯನ್ನು ಸದಾ ಬೇರೆಯವರಲ್ಲಿ ಹುಡುಕುತ್ತಿರುತ್ತಾನೆ. ಹಾಗೆಂದು ಅದು ಕೀಳರಿಮೆಯಲ್ಲ ಎಂಬುದನ್ನು ನೆನಪಿನಲ್ಲಿಡಿ. <
- ಸಹನೆ