

ಸೀಮಂತ ಎಂದರೆ ಮನೆಯ ಹೆಣ್ಣುಮಗಳಿಗೆ ಮಾಡುವ ಕಾರ್ಯ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಆದರೆ, ಗದಗ ಜಿಲ್ಲೆಯ ರೋಣ ತಾಲೂಕಿನ ಮಾಡಲಗೇರಿ ಎನ್ನುವ ಪುಟ್ಟ ಗ್ರಾಮದಲ್ಲಿ ಆಕಳಿಗೆ ಸೀಮಂತ ಮಾಡಲಾಗುತ್ತದೆ. ವಿಶೇಷ ಪ್ರತಿಭೆ ಹೊಂದಿರುವ ಹೋರಿಗೆ, ದೇವರಿಗೆ ನೀಡುವಂತೆ ತುಲಾಭಾರ ನೀಡುತ್ತಾರೆ.
ಆಕಳಿಗೆ ಸೀಮಂತ
ಈ ಗ್ರಾಮದಲ್ಲಿ, ಮನೆಯಲ್ಲಿ ಜನಿಸಿದ ಆಕಳು ಮೊದಲ ಬಾರಿ ಗರ್ಭ ಧರಿಸಿದಾಗ ಅದನ್ನು ಮನೆಮಗಳೆಂದು ಭಾವಿಸಿ, ದೂರ ದೂರದಲ್ಲಿರುವ ಎಲ್ಲ ಸಂಬಂಧಿಗಳನ್ನು ಕರೆಸಿ, ಓಣಿಯ ಎಲ್ಲ ಜನರೊಂದಿಗೆ ಅಕ್ಕರೆಯಿಂದ ಸೀಮಂತ ಕಾರ್ಯ ಮಾಡುತ್ತಾರೆ. ಈ ಸೀಮಂತದಲ್ಲಿ ಚಾಚೂ ತಪ್ಪದೆ ಎಲ್ಲ ನಿಯಮ ಪಾಲಿಸುತ್ತಾರೆ. ಕಳೆದ 4-5 ವರ್ಷಗಳಲ್ಲಿ ಗ್ರಾಮದಲ್ಲಿ 5ಕ್ಕೂ ಹೆಚ್ಚು ಆಕಳಿಗೆ ಸೀಮಂತ ಕಾರ್ಯ ನಡೆದಿದೆ.
ಹೋರಿಗೆ ತುಲಾಭಾರ
ಸಾಮಾನ್ಯವಾಗಿ ದೇವರಿಗೆ ತುಲಾಭಾರ ಮಾಡುವುದು ವಾಡಿಕೆ. ಆದರೆ, ಮಾಡಲಗೇರಿ ಗ್ರಾಮದಲ್ಲಿ ಬಸವ ಎನ್ನುವ ಹೋರಿಗೆ ಗ್ರಾಮಸ್ಥರು ಅದ್ಧೂರಿಯಾಗಿ ತುಲಾಭಾರ ಮಾಡಿದ್ದು ವಿಶೇಷ. ಇದು ಸಾಮಾನ್ಯ ಹೋರಿಯಲ್ಲ, ಹಲವಾರು ವಿಶೇಷತೆ ಹೊಂದಿದೆ ಅಂತ ಗ್ರಾಮಸ್ಥರ ನಂಬಿಕೆ.
ಬಸವನ ಚತುರತೆ
ಈ ಹೋರಿ ಯುವಕರು ನಡೆಸುವ ಭಜನಾ ಕಾರ್ಯಕ್ರಮದಲ್ಲಿ ತಪ್ಪದೇ ಪಾಲ್ಗೊಳ್ಳುತ್ತದಂತೆ. ಭಜನೆಯ ವೇಳೆ ಯುವಕರ ಹಾಡಿಗೆ ಅವರೊಂದಿಗೆ ಹೆಜ್ಜೆ ಹಾಕುತ್ತದೆ. ವಚನ ಸಾಹಿತ್ಯ ಹೋರಿಗೆ ಬಹಳ ಇಷ್ಟವಂತೆ! ಇದರೊಟ್ಟಿಗೆ ಸಾಹಸ ಕ್ರೀಡೆಗೂ ಸೈ ಎನ್ನುವ ಹೋರಿ ತಾನಾಗಿಯೇ ಟ್ರಾಕ್ಟರ್ ಟ್ರೈಲರ್ ಜಿಗಿದು ಹತ್ತುವುದು ಮತ್ತು ಇಳಿಯುವುದನ್ನು ಸಲೀಸಾಗಿ ಮಾಡುತ್ತದೆ. ಮುಖ್ಯವಾಗಿ ತಿರುಗುವ ಅಟ್ಟವನ್ನು ಜಿಗಿದು ಹತ್ತುವುದು. ದೇವರಿಗೆ ದೀಡ ನಮಸ್ಕಾರ ಹಾಕುತ್ತಾ ಎಲ್ಲರನ್ನೂ ಬೆರಗುಗೊಳಿಸುತ್ತದೆ. ಮಾಡಲಗೇರಿ ಮಾತ್ರವಲ್ಲ ತಾಲೂಕಿನಾದ್ಯಂತ ಪ್ರಸಿದ್ಧಿ ಪಡೆದಿರುವ ಈ ಹೋರಿ ಹುಟ್ಟಿದ್ದು ಗ್ರಾಮದ ತಿಪ್ಪನಗೌಡ್ರ ಎನ್ನುವವರ ಮನೆಯಲ್ಲಿ. ಪ್ರಾಯ 1 ವರ್ಷ 11 ತಿಂಗಳು.
ಗ್ರಾಮಸ್ಥರು ಮೊದಲು 265 ಕೆಜಿ ವಿಭೂತಿಯಿಂದ, ನಂತರ 265 ಕೆಜಿ ಬಾಳೆ ಹಣ್ಣಿನಿಂದ ಹೋರಿಗೆ ತುಲಾಭಾರ ಮಾಡಿದ್ದಾರೆ. ಪ್ರಾಣಿಗಳು ದೇವರ ಸಮಾನ, ಅವುಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎನ್ನುವುದನ್ನು ತಮ್ಮ ಭಕ್ತಿಯ ಮೂಲಕ ತೋರ್ಪಡಿಸಿದ್ದಾರೆ. <
ನಮ್ಮ ಗ್ರಾಮ ಕೃಷಿ ಪ್ರಧಾನ. ಇಲ್ಲಿ ಆಕಳು, ಎತ್ತುಗಳು ಹಾಗೂ ಹೋರಿಗಳಿಗೆ ಮನುಷ್ಯರಿಗಿಂತ ಹೆಚ್ಚಿನ ಪ್ರಾಧಾನ್ಯತೆ. ಆಕಳಿಗೆ ಸೀಮಂತ ಮಾಡುವುದು ನಮ್ಮ ಗ್ರಾಮಕ್ಕೆ ಹಳೆ ವಿಷಯವೇ. ಇನ್ನು ಹೋರಿ ಬಸವ, ಸಾಕ್ಷಾತ್ ದೇವರ ಸ್ವರೂಪಿಯಂತೆ ವರ್ತಿಸುತ್ತಿರುವುದರಿಂದ ಅದಕ್ಕೆ ತುಲಾಭಾರ ಮಾಡಲಾಗಿದೆ.
- ದೇಸಾಯಿಗೌಡ ಹಿರೇಸಕ್ಕರಗೌಡ್ರ
ಶಿವಕುಮಾರ ಕುಷ್ಟಗಿ