ಕೊಲೆಸ್ಟರಾಲ್ಗಿಂತ ಅಪಾಯಕಾರಿಯಾ?
ವೈದ್ಯಕೀಯ ಲೋಕದಲ್ಲಿ ಹೀಗೊಂದು ಜಿಜ್ಞಾಸೆ ಶುರುವಾಗಿದೆ. ಕೊಲೆಸ್ಟರಾಲ್ ಅಪಾಯಕಾರಿಯೊ ಅಥವಾ ರಕ್ತ ಹೆಪ್ಪುಗಟ್ಟುವುದು ಅಪಾಯಕಾರಿಯೊ? ಒಮ್ಮತ ಇರುವುದು ರಕ್ತ ಹೆಪ್ಪುಗಟ್ಟುವುದೇ ಹೆಚ್ಚು ಅಪಾಯಕಾರಿ ಎನ್ನುವುದರ ಬಗ್ಗೆ. ಕೊಲೆಸ್ಟರಾಲ್ನಿಂದ ಪ್ರಮುಖವಾಗಿ ಹೃದಯಕ್ಕೆ ಸಂಬಂಧಿಸಿದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಕೊಲೆಸ್ಟರಾಲ್ ತಟ್ಟೆ ಮೇಲೆಯೂ ರಕ್ತ ಹೆಪ್ಪುಗಟ್ಟುತ್ತದೆ ಖರೆ. ಆದರೆ ರಕ್ತ ಹೆಪ್ಪುಗಟ್ಟುವುದು ಹೃದಯಾಘಾತ, ಪಾರ್ಶ್ವವಾಯುವಿಗೂ ಕಾರಣವಾಗಬಲ್ಲದು, ರಕ್ತನಾಳಗಳಿಗೂ ಭಾರಿ ಹಾನಿ ಉಂಟುಮಾಡಬಲ್ಲದು. ತಜ್ಞರು ಪ್ರಕಾರ ರಕ್ತ ಸಂಚಾರ, ಅದರ ಜಿಡ್ಡುಗಟ್ಟುವ ಗುಣ, ಅಂಟಿಕೊಳ್ಳುವಿಕೆ, ಹೆಪ್ಪುಗಟ್ಟುವ ಮುನ್ಸೂಚನೆ- ಇವುಗಳ ಕುರಿತು ಫ್ಯಾಮಿಲಿ ವೈದ್ಯರಿಗೆ ಸ್ವಲ್ಪ ಅನುಮಾನ ಬಂದರೂ ತಕ್ಷಣ ವಿವರವಾದ ರಕ್ತಪರೀಕ್ಷೆ ಮಾಡಿಸಬೇಕು. ಇದು ಮಹಾವಿಪತ್ತೊಂದನ್ನು ತಡೆಯಬಲ್ಲದು. ಫ್ರೆಂಚ್ ವೈದ್ಯ ಡಾ.ಸೆರ್ಜ್ ಸಿ.ರಿನೌಡ್ ಹೇಳುವಂತೆ, 'ರಕ್ತ ಹೆಪ್ಪುಗಟ್ಟುವುದನ್ನು ತಡೆದರೆ ಹೃದಯಾಘಾತದ ಸಂಭವನೀಯತೆಯನ್ನು ಶೇ 50ರಷ್ಟು ತಡೆದಂತೆ. ಏಕೆಂದರೆ ಎಲ್ಡಿಎಲ್ ಕೊಲೆಸ್ಟರಲಾಲ್ ಮಟ್ಟ ಕಡಿಮೆ ಮಾಡಲು ಸುದೀರ್ಘ ಸಮಯ ಬೇಕು, ರಕ್ತ ಸಂಚಾರ ಸುಗಮಗೊಳಿಸಲು ದೀರ್ಘಾವಧಿ ಬೇಡ. ಹೀಗಾಗಿ ತಕ್ಷಣದ ಪರಿಣಾಮ ಸಾಧ್ಯ'
ಪ್ರತಿಯೊಬ್ಬರೂ ತಿಳಿದಿರುವುದು ಕೊಲೆಸ್ಟರಾಲ್ ತಮ್ಮನ್ನು ಕೊಲ್ಲುತ್ತದೆ ಎಂದೇ. ವಾಸ್ತವ ಎಂದರೆ ರಕ್ತ ಹೆಪ್ಪುಗಟ್ಟುವಿಕೆ ಮಾರಣಾಂತಿಕವಾದದ್ದು. ವಿಪರೀತ ರಕ್ತಸ್ರಾವವಾಗುತ್ತಿದ್ದ ಸಮಯದಲ್ಲಿ ರಕ್ತ ಹೆಪ್ಪುಗಟ್ಟಿದರೆ ಅನುಕೂಲ. ಅದು ರಕ್ತಸ್ರಾವವನ್ನು ತಡೆಯುತ್ತದೆ. ಆದರೆ ಉಳಿದ ಸಮಯದಲ್ಲಿ ಅದು ಅನಾಹುತಕಾರಿ. ಸಣ್ಣದೊಂದು ಕಲ್ಪನೆ ಮಾಡಿಕೊಳ್ಳಿ. ರಕ್ತ ನಾಳಗಳು ನಮ್ಮ ದೇಹದಲ್ಲಿನ ನದಿಗಳಿದ್ದಂತೆ. ರಕ್ತ ಅದರಲ್ಲಿ ಹರಿಯುವ ದ್ರವ. ಸದಾ ಚಲಿಸುತ್ತಿರುವುದೇ ಅದರ ಗುಣ. ನಮ್ಮ ಶರೀರದುದ್ದಕ್ಕೂ ಅದು ನಿರಂತರವಾಗಿ ಮತ್ತು ಸುಗಮವಾಗಿ ಹರಿಯುತ್ತಲೇ ಇರಬೇಕು. ಅದಕ್ಕೆ ಸಣ್ಣದೊಂದು ತಡೆ ಎದುರಾದರೂ ಆಪತ್ತು ಕಟ್ಟಿಟ್ಟ ಬುತ್ತಿ. ನದಿಯ ಸಹಜ ಹರಿವಿಗೆ ಅಡೆತಡೆಗಳು ಎದುರಾದರೆ ತೊಂದರೆ ಉಂಟಾಗುವುದಿಲ್ಲವೆ, ಹಾಗೆ!
ಒಂದು ಕಾಲವಿತ್ತು. ಕೊಲೆಸ್ಟರಾಲ್ ಮಾತ್ರವೇ ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ. ಅದರಿಂದ ಹೃದಯ ಬಡಿತದಲ್ಲಿ ಏರಿಳಿತ ಉಂಟಾಗಿ ಹೃದಯಾಘಾತ, ಹೃದಯ ಸ್ತಂಭನಗಳು ಸಂಭವಿಸುತ್ತವೆ ಎಂದು ಹೃದ್ರೋಗ ತಜ್ಞರು ಭಾವಿಸಿಕೊಂಡಿದ್ದರು. ಆದರೆ ಕೊಲೆಸ್ಟರಾಲ್ ಸಹಾಯವಿಲ್ಲದೆ ರಕ್ತ ತಾನಾಗಿಯೇ ಹೆಪ್ಪುಗಟ್ಟಬಲ್ಲದು ಎನ್ನುವುದು ಬೆಳಕಿಗೆ ಬಂದಾಗ ಎಲ್ಲರ ಗಮನ ಇತ್ತ ಹರಿಯಿತು. ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಹೇಗೆ ಸಾಧ್ಯ ಎನ್ನುವ ಕುರಿತಾಗಿ ಚಿಂತನೆಗಳು ಶುರುವಾದವು.
ರಕ್ತ ಹೆಪ್ಪುಗಟ್ಟುವುದರ ಕುರಿತು 'ಬೆಳ್ಳಿತಟ್ಟೆ'ಯಲ್ಲಿ ಏಕೆ ಇಷ್ಟೆಲ್ಲ ವಿವರಣೆ ಎಂದು ನೀವು ಕೇಳಬಹುದು. ಕೆಲವು ಆಹಾರಗಳಿಂದ ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಸಾಧ್ಯವಿದೆ. ಆ ಕುರಿತು ವಿವರವಾಗಿ ಚರ್ಚೆ ಮಾಡುವುದು ಇದ್ದೇ ಇದೆ ಅಲ್ಲವೆ?
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

