ನಿರಂತವಾಗಲಿ ಪ್ರಯತ್ನ
ನದಿಯೊಂದರ ಪಾತ್ರಕ್ಕೆ ಹೋಗಿ ನಿಂತು ನೋಡಿ. ಅಲ್ಲಿನ ಕಲ್ಲುಗಳು, ಹೆಬ್ಬಂಡೆ ಎಲ್ಲವೂ ನುಣುಪು ನುಣುಪು. ಕೈಯಿಟ್ಟರೆ ಹಿತವಾಗುವಷ್ಟು, ಕಾಲಿಟ್ಟರೆ ಜಾರಿ ಹೋಗುವಷ್ಟು ಅವನ್ನು ನುಣುಪುಗೊಳಿಸಿದವರಾದರೂ ಯಾರು? ಅದ್ಯಾವ ಶಿಲ್ಪಿ ಅವಕ್ಕೆ ಚಿತ್ರ ವಿಚಿತ್ರ ಆಕಾರ ಕೊಟ್ಟಿರುತ್ತಾನೆ ಅಥವಾ ನಿಸರ್ಗದ ಸೌಂದರ್ಯಕ್ಕೆ ಪೂರಕವಾಗಿ ಅವೇ ಹಾಗೆ ಅಣಿಗೊಂಡಿರಬಹುದೇ? ಅಥವಾ ಮೊದಲೇ ಅವನ್ನು ಹಾಗೆ ಸೃಷ್ಟಿಸಿ ಅಲ್ಲಿ ತಂದು ಇಟ್ಟಿರಬಹುದೇ?
ಇಂಥ ಪ್ರಶ್ನೆಗಳು ಕವಿಭಾವದ ಕಲ್ಪನೆಗೆ ಹೊಂದಿಕೆಯಾಗಬಹುದು. ಹಾಗೂ ವಾಸ್ತವದಲ್ಲಿ ಹೀಗೆ ಕೇಳಿದರೆ ಮೂರ್ಖತನವೆಂದು ಚಿಕ್ಕ ಮಕ್ಕಳೂ ನಗುತ್ತಾರೆ. ಏಕೆಂದರೆ ಎಲ್ಲರಿಗೂ ಗೊತ್ತು, ಬಂಡೆಗಳಿಗೆ ಅಂಥ ನುಣುಪನ್ನು ತಂದುಕೊಟ್ಟದ್ದು ನೀರಿನ ಹರಿವು ಎಂದು. ಬಹುಶಃ ಮೂಲ ಸ್ವರೂಪದಲ್ಲಿ ಆ ಬಂಡೆಗಳು ಗಾತ್ರ ಆಕಾರದಲ್ಲಿ ಇನ್ನೆಷ್ಟು ದೊಡ್ಡವಿದ್ದವೋ? ಸತತವಾಗಿ ನೀರಿನ ಬಲ, ಒತ್ತಡಕ್ಕೆ ಅವು ಕರಗಿರುತ್ತವೆ. ಬಂಡೆಗಳ ಒರಟುತನವನ್ನು ನೀರು ಮರೆಯಾಗಿಸಿ ಅದಕ್ಕೊಂದು ನಯವಾದ ಸ್ಪರ್ಷ, ನೋಟವನ್ನು ತಂದುಕೊಟ್ಟಿದೆ. ನೀರಿನಲ್ಲಿ ಅಂಥ ಶಕ್ತಿಯಿದೆಯೇ ಎಂದರೆ ಹೌದು ಎನ್ನಲೇಬೇಕು. ಅದಕ್ಕಿಂಥ ಹೆಚ್ಚಾಗಿ ನೀರಿನ ಸತತ ಹರಿವು ಅಂಥ ಶಕ್ತಿಯನ್ನು ತಂದುಕೊಟ್ಟಿದೆ.
ಹೌದು, ಸತತ ಪ್ರಯತ್ನ ಎಂಬುದು ಎಂಥ ಕಾಠಿಣ್ಯವನ್ನೂ ಕರಗಿಸಬಲ್ಲುದು. ಅಂಥ ಪರಿಶ್ರಮದ ಇಚ್ಛಾಶಕ್ತಿ ದೃಢತೆ ನಮ್ಮಲ್ಲಿ ಇರುವುದೇ ಇಲ್ಲ. ಹೀಗಾಗಿ ವೃಥಾ ನಾವು ಸೋಲಿನ ಬೇಸರವನ್ನು ಅನುಭವಿಸುತ್ತಾ ಇರುತ್ತೇವೆ. ಬಹಳಷ್ಟು ಸಂದರ್ಭದಲ್ಲಿ 'ಅವನನ್ನು ಬದಲಿಸಲು ಸಾಧ್ಯವೇ ಇಲ್ಲ. ಶುದ್ಧಾತಿ ಶುದ್ಧ ಒರಟ, ಹುಟ್ಟ ಗುಣ ಸುಟ್ಟರೂ ಬಿಡುವುದಿಲ್ಲ. ಅವನದ್ದು ರಾಕ್ಷಸ ಹೃದಯ...' ಎಂಬಿತ್ಯಾದಿ ಮಾತುಗಳನ್ನು, ಗೊಣಗಾಟವನ್ನು ಕೇಳುತ್ತಿರುತ್ತೇವೆ. ಹೆಬ್ಬಂಡೆಯನ್ನೇ ಸತತ ಪ್ರಯತ್ನದಿಂದ ನುಣುಪಾಗಿಸಲು ಸಾಧ್ಯವಾಗುವುದಾದರೆ, ಮನುಷ್ಯನ ಸ್ವಭಾವ ಬದಲಿಸಲು ಸಾಧ್ಯವಿಲ್ಲವೇ? ಇದರರ್ಥ ಸೂಕ್ತ ದಿಸೆಯಲ್ಲಿ ನಮ್ಮ ಪ್ರಯತ್ನಗಳು ಸಾಗಿಲ್ಲ. ಯಾವುದೇ ಪ್ರಯತ್ನಗಳಿರಬಹುದು ಅದನ್ನು ಎಲ್ಲಿ ಮಾಡುತ್ತಿದ್ದೇವೆ, ಯಾಕಾಗಿ ಮಾಡುತ್ತಿದ್ದೇವೆ, ಅದಕ್ಕೆ ನಾವೆಷ್ಟು ಬದ್ಧತೆ ತೋರುತ್ತಿದ್ದೇವೆ ಎಂಬುದು ಮುಖ್ಯ. ಎಲ್ಲಕ್ಕಿಂತ ಹೆಚ್ಚಾಗಿ ಕಾಯುವ ತಾಳ್ಮೆ ನಮ್ಮಲ್ಲಿರಬೇಕು. ಹೀಗಿದ್ದಾಗ ಯಾವುದೇ ಪ್ರಯತ್ನಗಳೂ ವ್ಯರ್ಥವಾಗಲು ಸಾಧ್ಯವೇ ಇಲ್ಲ. ಎಂಥ ಕೆಟ್ಟ ವ್ಯಕ್ತಿಯನ್ನೂ ಪ್ರೀತಿಯಿಂದ ಸರಿದಾರಿಗೆ ತರಲು ಸಾಧ್ಯ. ರಕ್ಕಸರೂ ಮನುಷ್ಯರಾದ ಎಷ್ಟೋ ಉದಾಹರಣೆಗಳು ನಮ್ಮ ಇತಿಹಾಸದಲ್ಲಿದೆ. ಸೋ, ಪ್ರಯತ್ನ ನಿಲ್ಲಿಸಬೇಡಿ.
-ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

