ಇಂದು ವ್ಯಾಸ ಪೂರ್ಣಿಮೆ
ಸಾಕ್ಷಾತ್ ಶ್ರೀಮನ್ಮಹಾವಿಷ್ಣು ಸ್ವರೂಪರೂ, ಚಿರಂಜೀವಿಗಳೂ, ತಪೋನಿಷ್ಠರೂ, ಸರ್ವಜ್ಞರೂ, ವೇದನಿಧಿಗಳೂ, ಪ್ರಾಚೀನ ಋಷಿಪರಂಪರೆಯಲ್ಲಿ ಮೇರುತುಲ್ಯರೂ ಆದ ಭಗವಾನ್ ವೇದವ್ಯಾಸ ಮಹರ್ಷಿಗಳು ಅವತರಿಸಿದ ಆಷಾಢ ಮಾಸದ ಹುಣ್ಣಿಮೆ ದಿನವನ್ನೇ ನಾವು 'ವ್ಯಾಸ ಪೂರ್ಣಿಮೆ' ಅಥವಾ 'ಗುರು ಪೂರ್ಣಿಮೆ' ಎಂದು ಭಕ್ತಿಪೂರ್ವಕವಾಗಿ ಆಚರಿಸುತ್ತೇವೆ.
ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅಗ್ರಸ್ಥಾನವಿದೆ. ವೇದಾಗಮ, ಪುರಾಣ, ಶಾಸ್ತ್ರಾದಿಗಳೆಲ್ಲವೂ ಶ್ರೀಗುರುವಿನ ಅಪಾರವಾದ ಮಹಿಮೆಯನ್ನು ಕೊಂಡಾಡಿವೆ. ಶ್ರೀಗುರು ಗೀತೆಯಂತೂ 'ನ ಗುರೋರಧಿಕಂ ತತ್ವಂ ನ ಗುರೋರಧಿಕಂ ತಪಃ' ಎಂದು ಘಂಟಾಘೋಷವಾಗಿ ಸಾರಿದೆ. ಗುರುವಿನ ಮಹಿಮೆಯನ್ನು ಕೊಂಡಾಡುವ ಸ್ತೋತ್ರಗಳಂತೂ ಭಾರತೀಯ ವೈದಿಕ ಪರಂಪರೆಯಲ್ಲಿ ಲಕ್ಷೋಪಾದಿಯಲ್ಲಿವೆ. ಹಾಗೆಯೇ ಅಸಂಖ್ಯ ಗುರುಗಳೂ ಅವತರಿಸಿದ್ದಾರೆ. ಆದರೆ ಬೇರಾರಿಗೂ ಇಲ್ಲದ ವಿಶೇಷತೆ ಭಗವಾನ್ ವೇದವ್ಯಾಸರಲ್ಲೇನಿದೆ? ಶ್ರೀವ್ಯಾಸರ ಜನ್ಮದಿನದಂದೇ ಏಕೆ ಎಲ್ಲಾ ಗುರುಗಳನ್ನೂ ಅರ್ಚಿಸುತ್ತಾರೆ? ಏಕೆಂದರೆ ಭಗವಾನ್ ವೇದವ್ಯಾಸರೆಂದರೆ ಸಾಕ್ಷಾತ್ ವಿಷ್ಣುವಿನ ಅವತಾರ, 'ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣವೇ, ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮಃ' ಎಂಬುದೊಂದು ಧ್ಯಾನಶ್ಲೋಕ.
ಭಗವಾನ್ ಶ್ರೀವೇದವ್ಯಾಸರು ಪ್ರಾತಃಸ್ಮರಣೀಯರಾದ ವಸಿಷ್ಠ ಮಹರ್ಷಿಗಳ ವಂಶದಲ್ಲಿ ಜನಿಸಿದವರು. ಇವರ ತಂದೆ, ತಾತ ಮತ್ತು ಮಗ ಎಲ್ಲರೂ ಮಹಾನುಭಾವರೇ, ತಪೋಧನರೇ. ಅಂತಹ ಪವಿತ್ರ ಕುಲದಲ್ಲಿ ಜನಿಸಿ ಭಾರತವರ್ಷವನ್ನೇ ಪುನೀತಗೊಳಿಸಿದ ಮಹನೀಯರು ಇವರು.
ವ್ಯಾಸಂ ವಸಿಷ್ಠನಪ್ತಾರಂ ಶಕ್ತೇಃ ಪೌತ್ರಮಕಲ್ಮಷಮ್ |
ಪರಾಶರಾತ್ಮಜಂ ವಂದೇ ಶುಕತಾತಂ ತಪೋನಿಧಿಮ್ ॥
'ವಸಿಷ್ಠ ಮಹರ್ಷಿಗಳ ಮರಿಮಗನೂ, ಶಕ್ತಿ ಮಹರ್ಷಿಗಳ ಮೊಮ್ಮಗನೂ, ಪರಾಶರ ಮಹರ್ಷಿಗಳ ಮಗನೂ, ಶುಕ ಮಹರ್ಷಿಗಳ ತಂದೆಯೂ, ಆಗಿರುವ ಪಾಪರಹಿತನಾದ, ತಪೋನಿಧಿಯಾದ ವ್ಯಾಸ ಮಹರ್ಷಿಯನ್ನು ನಾನು ವಂದಿಸುತ್ತೇನೆ' ಎಂಬುದು ಮತ್ತೊಂದು ವ್ಯಾಸ ಪ್ರಶಂಸಾ ಶ್ಲೋಕದ ಸಾರ.
- ಹರ್ಷ ಕಣೇಕಲ್, ಬೆಂಗಳೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

