ಖುಷಿಯಿಂದ ಶೇಂಗಾ ತಿನ್ನಿ!
ಮಳೆಗಾಲ ಶುರುವಾಗಿದೆ. ಹೊರಗೆ 'ಧೋ...' ಎಂದು ಮಳೆ ಸುರಿಯುತ್ತಿರುವಾಗ ಮನೆಯಲ್ಲಿ ಕೂತು ಶೇಂಗಾ, ಬಾದಾಮಿ, ಆಕ್ರೂಟ್ ಮತ್ತಿತರ ಬೀಜಗಳನ್ನು ಮೆಲ್ಲುತ್ತಿದ್ದರೆ ಎಂಥ ಸೊಗಸು! ಕೆಲವರಿಗೆ ಮಳೆಗಾಲ ಅಂತಲೇ ಅಲ್ಲ, ಯಾವಾಗಲೂ ಸದಾ ಇಂಥವನ್ನು ತಿನ್ನುತ್ತಿರಬೇಕು. ಅದು ಒಳ್ಳೆಯದು ಕೂಡ. ಇಂಥ ಬೀಜಗಳನ್ನು ತಿನ್ನುತ್ತಿದ್ದರೆ ಹೃದ್ರೋಗಗಳಿಂದ ದೂರವಿರಬಹುದು ಎನ್ನುತ್ತಿದೆ ಒಂದು ಸಂಶೋಧನೆ. ಕ್ಯಾಲಿಫೋರ್ನಿಯಾದ ಪ್ರೊಫೆಸರ್ ಡಾ.ಗ್ಯಾರಿ ಫ್ರೇಸರ್ ಅವರು 31,208 ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಿ ಈ ಸಂಗತಿಯನ್ನು ಪತ್ತೆ ಮಾಡಿದ್ದಾರೆ. ಅವರು ಪರೀಕ್ಷೆಗೆ ಒಳಪಡಿಸಿದವರಲ್ಲಿ ಶೇ 32ರಷ್ಟು ಮಂದಿ ಶೇಂಗಾವನ್ನೂ, ಶೇ 29ರಷ್ಟು ಮಂದಿ ಬಾದಾಮಿಯನ್ನೂ, ಶೇ16ರಷ್ಟು ಮಂದಿ ಆಕ್ರೂಟ್ ಅನ್ನೂ, ಶೇ 16ರಷ್ಟು ಮಂದಿ ಇತರೆ ಬೀಜಗಳನ್ನೂ ನಿಯಮಿತವಾಗಿ ಸೇವಿಸುತ್ತಿದ್ದರು.
ಹೃದಯದ ತೊಂದರೆಗೆ ಒಳಗಾಗದೇ ಇರುವವರು ಇಂಥ ಬೀಜಗಳ ಸೇವನೆ ರೂಢಿಸಿಕೊಳ್ಳುವುದು ಉತ್ತಮ ಎಂದು ಸಲಹೆ ಮಾಡುವ ಅವರು, ತಮ್ಮ ಸಂಶೋಧನೆಯ ಫಲಿತಾಂಶಗಳನ್ನು ಅಂಕಿ-ಅಂಶಗಳೊಂದಿಗೆ ವಿವರಿಸುತ್ತಾರೆ. ವಾರದಲ್ಲಿ ಐದು ದಿನ ಇಂಥ ಬೀಜಗಳನ್ನು ಮೆಲ್ಲುವವರು ಹೃದಯಾಘಾತ ಮತ್ತು ಹೃದಯ ವೈಫಲ್ಯದ ಸಾಧ್ಯತೆಗಳನ್ನು ಶೇ 50ರಷ್ಟು ಕಡಿಮೆ ಮಾಡಿಕೊಳ್ಳಬಹುದು. ಕಡೇಪಕ್ಷ ವಾರಕ್ಕೊಮ್ಮೆ ತಿಂದರೂ ಉತ್ತಮ, ಆಗ ಹೃದ್ರೋಗದ ಸಂಭವನೀಯತೆಯನ್ನು ಶೇ 25ರಷ್ಟು ಕಡಿಮೆ ಮಾಡಿಕೊಳ್ಳಬಹುದು ಎನ್ನುತ್ತಾರೆ ಅವರು.
ಶೇಂಗಾ, ಬಾದಾಮಿ, ಆಕ್ರೂಟ್ಗಳಲ್ಲಿ ಅಂಥದ್ದೇನಿದೆ? ಇವುಗಳಲ್ಲಿ ನಾರು (ಫೈಬರ್) ಹಾಗೂ ಮೊನೊಸ್ಯಾಚುರೇಟೆಡ್ ಆಲಿವ್ ಎಣ್ಣೆ ಥರದ ಕೊಬ್ಬು ಇರುತ್ತವೆ. ಅವು ಹೃದಯಕ್ಕೆ ತೊಂದರೆ ಉಂಟುಮಾಡುವ ಅಂಶಗಳ ಪ್ರತಿರೋಧಕಗಳಾಗಿ ಕಾರ್ಯನಿರ್ವಹಿಸುತ್ತವೆ. ವಿಟಮಿನ್ ಇ ಸಮೃದ್ಧವಾಗಿರುತ್ತದೆ. ಆ್ಯಂಟಿಆಕ್ಸಿಡೆಂಡ್ಗಳೂ ವಿಫುಲವಾಗಿರುತ್ತವೆ. ಸೆಲೆನಿಯಂನಂಥ ಧಾತುಗಳೂ ಇರುತ್ತವೆ. ಇವು ರಕ್ತನಾಳಗಳ ಆರೋಗ್ಯಕ್ಕೆ ಉತ್ತಮ. ವಿಶೇಷತಃ ಕೆಟ್ಟ ಕೊಲೆಸ್ಟರಾಲ್ನಿಂದ ರಕ್ತನಾಳಗಳಿಗೆ ಹಾನಿಯಾಗುವುದನ್ನು, ರಕ್ತ ಸಂಚಾರಕ್ಕೆ ಅಡೆತಡೆ ಎದುರಾಗುವುದನ್ನು ತಪ್ಪಿಸುವ ಗುಣ ಇವುಗಳಲ್ಲಿದೆ. ಇನ್ನೂ ಒಂದು ಸಂಗತಿ ಎಂದರೆ ಇಂಥ ಬೀಜಗಳನ್ನು ನಿಯಮಿತವಾಗಿ ಸೇವಿಸುವ ಅಭ್ಯಾಸ ಉಳ್ಳವರು ಬೊಜ್ಜಿನಿಂದ ದೂರ ಇರಬಹುದು.
ಬೀಜಗಳಿಂದ ಇಷ್ಟೆಲ್ಲ ಅನುಕೂಲವಿದೆ ಅಂತ ನಿತ್ಯವೂ ಅದರಲ್ಲೇ ಹೊಟ್ಟೆ ತುಂಬಿಕೊಳ್ಳುವುದು ಅಥವಾ ಅತಿಯಾಗಿ ಸೇವಿಸುವುದು ಸಲ್ಲದು. ಅತಿಯಾದರೆ ಅಮೃತವೂ ವಿಷವಾದೀತು ಎನ್ನುವುದು ನೆನಪಿನಲ್ಲಿರಲಿ. ಇವುಗಳ ಸೇವನೆ ಆರೋಗ್ಯಕರ ಪ್ರಮಾಣದಲ್ಲಿರಬೇಕು ಮತ್ತು ಆ ಪ್ರಮಾಣವನ್ನು ನಾವೇ ನಿರ್ಧರಿಸಿಕೊಳ್ಳಬೇಕು ಅಷ್ಟೆ.
-ಡಾ. ಪಿ. ಸದಾನಂದ ಮೈಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

