ಕ್ಷಮೆ ಕೇಳಲು ಅಹಂ ಬೇಡ
ಅದ್ಯಾವುದೋ ಘಳಿಗೆಯಲ್ಲಿ ಅಂತಹದ್ದೊಂದು ಮಾತು ಬಾಯಿ ತಪ್ಪಿ ಬಂದಿರುತ್ತದೆ. ಎಂಥ ಮನುಷ್ಯನಾದರೂ ತೀವ್ರ ಒತ್ತಡಕ್ಕೆ ಒಳಗಾದಾಗ, ತಡೆಯಲಾರದ ನೋವನ್ನು ಅನುಭವಿಸುತ್ತಿರುವಾಗ ತನ್ನ ತಾಳ್ಮೆಯ ಮಿತಿಯನ್ನು ಕಳೆದುಕೊಂಡು ಬಿಡುತ್ತಾನೆ. ಅದು ಉದ್ದೇಶಪೂರ್ವಕವೇ ಆಗಿರುವುದಿಲ್ಲ. ಯಾವತ್ತಿಗೂ ನಮ್ಮ ಯೋಚನೆಯ ರೀತಿ ಯಾವುದೋ ಒಂದು ದಿಕ್ಕಿನಲ್ಲಿ ಹರಿಯುತ್ತಿರುತ್ತದೆ. ಅದರಿಂದ ಹೊರತಾದ ಸಂಗತಿಗಳು ನಮ್ಮ ಗಮನಕ್ಕೆ ಆ ಕ್ಷಣದಲ್ಲಿ ಬರುವುದೇ ಇಲ್ಲ. ನಾವು ಗ್ರಹಿಸಿದ ಸಂಗತಿಗಳಿಗೆ, ವಿಷಯಕ್ಕೆ ಇನ್ನೊಂದು ದೃಷ್ಟಿಕೋನವೂ ಇದ್ದಿರಬಹುದು ಎಂಬುದು ಅರಿವಿಗೆ ಬರುವುದಿಲ್ಲ. ಇಂಥ ಸನ್ನಿವೇಶದಲ್ಲಿ ನಾವು ಗ್ರಹಿಸಿದ್ದೇ ಸರಿ ಎಂಬ ನಿಲುವು ನಮ್ಮದಾಗಿರುತ್ತದೆ. ಅದರ ಹಿನ್ನೆಲೆಯಲ್ಲೇ ನಾವು ಯೋಚಿಸುವುದು ಮನುಷ್ಯನ ಸಹಜ ಗುಣ. ವಾದ ಮಾಡುವ ಭರದಲ್ಲಿ ತೀರ ಖಾಸಗಿ ವಿಚಾರಕ್ಕೆ ತಲೆಹಾಕುವ ಜಾಯಮಾನದವರು ನಾವಲ್ಲವಾದರೂ ಯಾವುದೋ ಮೈಮರೆವಿನಿಂದ ಆ ಮಾತನ್ನು ಆಡಿಬಿಡುತ್ತೇವೆ. ಅದರ ಪರಿಣಾಮದ ಬಗ್ಗೆ ಆ ಕ್ಷಣ ಯೋಚಿಸುವುದೇ ಇಲ್ಲ.
'ಸುಮ್ಮನಿರಿ. ನಿಮ್ಮ ಬಗ್ಗೆ ಎಲ್ಲಾ ಗೊತ್ತು' ಎಂಬ ಆ ಮಾತು ಉಂಟುಮಾಡುವ ಪರಿಣಾಮ ಅಷ್ಟಿಷ್ಟಲ್ಲ. ಇನ್ಯಾವತ್ತೂ ಅವರು ನಮ್ಮನ್ನು ಕ್ಷಮಿಸುವುದಿಲ್ಲ. ಆರೋಗ್ಯಕರವಾಗಿದ್ದ ಸಂಬಂಧ ಅದೊಂದೇ ಮಾತಿನಿಂದ ಹದಗೆಟ್ಟುಹೋಗಿರುತ್ತದೆ. ನಮ್ಮೊಂದಿಗೆ ವಾದಕ್ಕಿಳಿಯುವುದು ಕೊಚ್ಚೆ ಮೇಲೆ ಕಲ್ಲು ಹಾಕಿದಂತೆ ಎಂದು ಅವರು ನಿರ್ಧಾರ ಮಾಡಿಬಿಡುತ್ತಾರೆ. ಆನಂತರ ನಮ್ಮ ತಪ್ಪಿನ ಅರಿವು ನಮಗಾಗಿರಬಹುದು. ಪಶ್ಚಾತ್ತಾಪ ಪಟ್ಟಿರಲೂಬಹುದು. ಆದರೆ, ಕ್ಷಮಾಪಣೆ ಕೇಳಲು ಅಹಂ ಅಡ್ಡಬರುತ್ತದೆ. ಸಾರಿ ಕೇಳಿದರೆ ಚಿಕ್ಕವರಾಗಿಬಿಡುತ್ತೇವೆ ಎಂಬ ಭಯ ನಮ್ಮಲ್ಲಿರುತ್ತದೆ. ಅದೊಂದು ಸಂಬಂಧ ಹಗುರಾದರೆ ಏನೀಗ ಎಂಬ ಅಸಡ್ಡೆಯೂ ಮೂಡಬಹುದು. ಆದರೆ, ಒಂದು ಬಾರಿ ಯೋಚಿಸಿ. ಅವರು ನಿಮ್ಮ ಎಷ್ಟೆಲ್ಲ ಕಷ್ಟಕಾಲದಲ್ಲಿ ಜತೆಯಾಗಿದ್ದಾರೆ. ಎಲ್ಲ ಸಮಯದಲ್ಲೂ ಅವರು ಹಣಕಾಸು ಸಹಾಯ ನೀಡದೇ ಇರಬಹುದು. ಆದರೆ, ಮಾನಸಿಕವಾಗಿ ನಿಮ್ಮನ್ನು ಯಾವಾಗಲೂ ಒಂಟಿಯನ್ನಾಗಿ ಮಾಡಿಲ್ಲ. ಅಲ್ಲದೇ ಸಾರಿ ಕೇಳಿದರೆ ಚಿಕ್ಕವರಾಗಿಬಿಡುತ್ತೇವೆ ಎನ್ನುವುದೇ ದೊಡ್ಡ ಸುಳ್ಳು. ನಿಜವೆಂದರೆ, ಅದರಿಂದ ಇನ್ನಷ್ಟು ದೊಡ್ಡವರಾಗುತ್ತೇವೆ. ಅವರೂ ಖಂಡಿತ ನಮ್ಮನ್ನು ಕ್ಷಮಿಸುತ್ತಾರೆ. ಹಾಗೆ ಸ್ನೇಹ ಉಳಿಸಿಕೊಳ್ಳುವ ದೊಡ್ಡತನವನ್ನೂ ನಾವು ತೋರಬೇಕು. ಹೀಗಾಗಿ, ಒಮ್ಮೆ ಸಾರಿ ಕೇಳಿನೋಡಿ.
- ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

