ತಪ್ಪೊಪ್ಪಿಕೊಂಡು ಹಗುರಾಗಿ
ಅದು ಮತ್ತಷ್ಟು ಗೋಜಲಾಗುವುದು ನಿಮ್ಮಿಂದಲೇ. ಹಂತಹಂತಕ್ಕೂ ನೀವು ಅವಮಾನಿತರಾಗುತ್ತಲೇ ಹೋಗುತ್ತೀರಿ. ವಿವಾದ ಬೆಳೆಯುತ್ತಲೇ ಹೋಗುತ್ತದೆ. ನೀವು ಅದರಿಂದ ಹೊರಬರಬೇಕೆಂದುಕೊಂಡಷ್ಟೂ ಅದರೊಳಕ್ಕೆ ಬಲವಾಗಿ ಸಿಲುಕಿಕೊಳ್ಳುತ್ತಾ ಹೋಗುತ್ತೀರಿ. ನಿಮ್ಮ ಸಂಕುಚಿತ ಮನೋಭಾವ, ನೀವು ಯೋಚಿಸುವ ಧಾಟಿ ನಿಮ್ಮನ್ನು ಇನ್ನಷ್ಟು ಮುಜುಗರಕ್ಕೆ ಒಳಗಾಗಿಸುತ್ತಲೇ ಹೋಗುತ್ತದೆ. ಹೌದು, ನೀವು ತಪ್ಪು ಮಾಡಿದ್ದಾಗ ಅದನ್ನು ಮೊದಲನೆ ಹಂತದಲ್ಲೇ ಒಪ್ಪಿಕೊಂಡು ಬಿಡಿ. ಎಲ್ಲ ಸಂದರ್ಭದಲ್ಲೂ ಅರಿವಿಗೆ ಬಂದೇ ತಪ್ಪು ಮಾಡಿರುವುದಿಲ್ಲ. ಇನ್ನು ಕೆಲವೊಮ್ಮೆ ಅರಿವಿದ್ದೂ ಬೇರೆಯವರಿಗೆ ಗೊತ್ತಾಗಲಿಕ್ಕಿಲ್ಲ ಬಿಡು ಎಂಬ ಉಡಾಫೆಯಿಂದಲೇ ತಪ್ಪುಗಳನ್ನು ಮಾಡಿಬಿಟ್ಟಿರುತ್ತೇವೆ. ಅಂಥ ತಪ್ಪನ್ನು ಬೇರಯವರು ಎತ್ತಿ ತೋರಿಸಿದಾಗ ಸಹಜವಾಗಿಯೇ ಅವಮಾನಕ್ಕೆ ಒಳಗಾಗುತ್ತೇವೆ. ಇದಕ್ಕೆ ಯಾರೊಬ್ಬರೂ ಹೊರತಲ್ಲ. ಆದರೆ, 'ಹೌದು, ಅಂಥ ತಪ್ಪು ನನ್ನಿಂದಾಗಿದೆ' ಎಂದು ಒಪ್ಪಿಕೊಳ್ಳುವ ಔದಾರ್ಯವನ್ನು, ಪ್ರಾಮಾಣಿಕತೆಯನ್ನು ಬಹುತೇಕರು ತೋರುವುದಿಲ್ಲ. ಹಾಗೆ ಒಪ್ಪಿಕೊಳ್ಳುವುದು ಅವಮಾನ ಎಂಬುದು ಭ್ರಮೆ. ಅಂಥ ಭ್ರಮೆಗೆ ಕಟ್ಟುಬಿದ್ದು ಒಂದೋ ತಾವು ಆ ತಪ್ಪನ್ನು ಮಾಡಿಯೇ ಇಲ್ಲವೆಂದು ವಾದಿಸಲು ಮುಂದಾಗುತ್ತೇವೆ. ಇಲ್ಲವೇ ಅದನ್ನು ಹೇಗಾದರೂ ಮಾಡಿ ಸಮರ್ಥಿಸಿಕೊಳ್ಳಲು ಹವಣಿಸುತ್ತೇವೆ. ಎಡವುವುದು ಇಲ್ಲಿಯೇ. ಸಮರ್ಥಿಸಿಕೊಂಡಾಕ್ಷಣ ಮಾಡಿದ ತಪ್ಪು ಎಂದಿಗೂ ಸರಿ ಎಂದಾಗುವುದಿಲ್ಲ. ಅಥವಾ ನಾವು ಮಾಡಿಯೇ ಇಲ್ಲವೆಂದಾಕ್ಷಣ ಅದರಿಂದ ಮುಕ್ತವಾಗಲೂ ಸಾಧ್ಯವಿಲ್ಲ. ಅಂಥ ಅಳುಕು ನಮ್ಮೊಳಗೆ ಮೊದಲೇ ಇರುವುದರಿಂದ ಅವೆರಡೂ ಪ್ರಕ್ರಿಯೆಯಲ್ಲಿ ನಾವು ವಿಫಲರಾಗುತ್ತೇವೆ. ಇದರಿಂದ ಮತ್ತಷ್ಟು ಅವಮಾನದ ಜತೆಗೆ ಮೊದಲಿನ ತಪ್ಪಿಗೆ ಪ್ರತಿಯಾಗಿ ಇನ್ನಷ್ಟು ತಪ್ಪುಗಳು ನಮಗೇ ಗೊತ್ತಿಲ್ಲದಂತೆ ಜರುಗಿ ಹೋಗಿರುತ್ತವೆ. ಪ್ರತಿ ಬಾರಿ ಹೀಗೆ ತಪ್ಪೆಸೆಗಿದಾಗೆಲ್ಲ ಸಮರ್ಥನೆಗಿಳಿದು ಮತ್ತೆಮತ್ತೆ ನಮ್ಮ ತಪ್ಪನ್ನು ನಾವೇ ಸಾಬೀತುಪಡಿಸಿಕೊಳ್ಳುತ್ತೇವೆ. ಎಲ್ಲಕ್ಕಿಂತ ಹೆಚ್ಚಾಗಿ ಹೇಗೋ ಎಲ್ಲರೆದುರು ನಾವು ತಪ್ಪಿತಸ್ಥರಲ್ಲ ಎಂಬುದನ್ನು ಸಾಧಿಸುವಲ್ಲಿ ಸಮರ್ಥರಾದೆವು ಎಂತಲೇ ಇಟ್ಟುಕೊಂಡರೂ ಅದು ನಮ್ಮಿಂದಲೇ ಜರುಗಿದ್ದು ಎಂಬ ಸತ್ಯ ನಮ್ಮೊಳಗೆ ಇರಿಯುತ್ತಲೇ ಇರುತ್ತದೆ. ನಮ್ಮನ್ನು ನಾವೇ ಅವಮಾನಿಸಿಕೊಳ್ಳುವುದು ಹೀಗೆ. ನಮ್ಮೊಳಗಿನ ಮನಸ್ಸಿಗೆ ಯಾವುದೇ ಸಮರ್ಥನೆಗಳು ಸಾಧುವೆನಿಸುವುದಿಲ್ಲ. ಹೀಗಾಗಿ ಮಾನಸಿಕವಾಗಿ ಕುಬ್ಜರಾಗುತ್ತಲೇ ಸಾಗಿಬಿಡುತ್ತೇವೆ. ಕೊನೆಗೂ ತಪ್ಪೊಂದನ್ನು ಸಮರ್ಥಿಕೊಂಡು ತಲೆ ಎತ್ತಿ, ಎದೆಯುಬ್ಬಿಸಿ ಎಲ್ಲರಂತೆ ನಡೆಯುವ ಸ್ವಾತಂತ್ರ್ಯವನ್ನೇ ನಾವು ಕಳೆದುಕೊಂಡುಬಿಡುತ್ತೇವೆ. ಸುದೀರ್ಘ ಸಮಯದವರೆಗೆ ನಮ್ಮ ಮನಸ್ಸನ್ನು ಅದೇ ಹುಳುವಾಗಿ ಕೊರೆಯುತ್ತಿರುತ್ತದೆ. ಅದಕ್ಕೆ ಬದಲಾಗಿ ತಪ್ಪು ಎಲ್ಲರೂ ಮಾಡುವ ಸಹಜ ಕ್ರಿಯೆ. ಅದು ಅರಿವಿಗೆ ಬರುತ್ತಿದ್ದಂತೆ ಒಪ್ಪಿಕೊಂಡು, ತಲೆ ಕೊಡವಿ ಹೊರಟುಬಿಡಿ. ಯಾವ ಮುಜು ಗರವೂ ನಿಮ್ಮನ್ನು ಬಾಧಿಸುವುದಿಲ್ಲ. ಹಗುರಾಗಿ ಮುಂದೆ ಸಾಗುತ್ತೀರಿ.
-ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

