ಸಮಸ್ಯೆಯ ಮೂಲ ಇರುವುದೆಲ್ಲಿ?
ನಮ್ಮ ಆಹಾರ ಪದ್ಧತಿ ಈಗ 'ಕೊಲೆಸ್ಟರಾಲ್ ಕಾನ್ಶಿಯಸ್' ಆಗಿದೆ. ಅನಾರೋಗ್ಯದಿಂದ ದೂರವಿರಲು ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಲು ಒತ್ತು ಕೊಡದೆ ಡಯಟ್ ಬಗ್ಗೆ ಗಮನ ನೀಡುತ್ತಿದ್ದೇವೆ. ಅದನ್ನು ಕೆಲವು ಆಹಾರ ಪದಾರ್ಥಗಳ ಉತ್ಪಾದಕರು, ಹೋಟೆಲ್ಗಳವರು ಚೆನ್ನಾಗಿಯೇ ಬಳಸಿಕೊಳ್ಳುತ್ತಿದ್ದಾರೆ. 'ಕೊಲೆಸ್ಟರಾಲ್ ಫ್ರೀ', 'ಜೀರೋ ಪರ್ಸೆಂಟ್ ಕೊಲೆಸ್ಟರಾಲ್' ಇತ್ಯಾದಿಗಳು ಜಾಹಿರಾತಿನಲ್ಲಿ ವಿಜೃಂಭಿಸುತ್ತಿವೆ. ಇಷ್ಟಕ್ಕೂ ಕೊಲೆಸ್ಟರಾಲ್ ಎಂದರೇನು ಗೊತ್ತಾ?
ಕೊಲೆಸ್ಟರಾಲ್ ಎನ್ನುವುದು ಯಕೃತ್ತಿನಲ್ಲಿ ಉತ್ಪಾದನೆಯಾಗುವ ಹಳದಿ ಬಣ್ಣದ, ಮೇಣದಂಥ ಪದಾರ್ಥ. ಮೇದಸ್ಸು ಎಂದೂ ಹೇಳಬಹುದು. ಇದು ಕೆಲವು ಬಗೆಯ ಆಹಾರ, ತಿನಿಸುಗಳಲ್ಲಿಯೂ ವಿಶೇಷತಃ ಮೊಟ್ಟೆ, ಹಾಲಿನ ಉತ್ಪನ್ನಗಳು, ಪ್ರಾಣಿಜನ್ಯ ಆಹಾರ ಮೊದಲಾದವುಗಳಲ್ಲಿ ಸ್ವಾಭಾವಿಕವಾಗಿಯೇ ಇರುತ್ತದೆ. ಇದರ ಉತ್ಪಾದನೆಗೆ ವಿಟಮಿನ್ ಡಿ ಮತ್ತು ಕೆಲವು ಹಾರ್ಮೋನುಗಳು ಅಗತ್ಯ. ಜೀರ್ಣಕ್ರಿಯೆಯಲ್ಲಿ ಕೊಲೆಸ್ಟರಾಲ್ ಮಹತ್ವದ ಪಾತ್ರ ವಹಿಸುತ್ತದೆ. ಯಕೃತ್ತು ಪ್ರತಿದಿನ 1000 ಮಿಲಿಗ್ರಾಂನಷ್ಟು ಕೊಲೆಸ್ಟರಾಲ್ ಅನ್ನು ಉತ್ಪಾದಿಸುತ್ತದೆ. ಅದು ಧಾರಾಳ. ಆಹಾರದ ಮೂಲಕ ಸರಾಸರಿ 250- 300 ಮಿಲಿಗ್ರಾಂ ಶರೀರವನ್ನು ಸೇರುತ್ತದೆ. ಇದನ್ನು ತಪ್ಪಿಸುವುದು ಬಹಳ ಕಷ್ಟ. ಕೊಲೆಸ್ಟರಾಲ್ ಜಾಸ್ತಿ ಪ್ರಮಾಣದಲ್ಲಿ ಶರೀರ ಸೇರಿದಂತೆಲ್ಲ ಆರೋಗ್ಯದಲ್ಲಿ, ಪ್ರಮುಖವಾಗಿ ಹೃದಯದ ಆರೋಗ್ಯದಲ್ಲಿ ತೊಂದರೆ ಶುರುವಾಗುತ್ತದೆ.
ವಿಚಿತ್ರ ಎಂದರೆ ಕೊಲೆಸ್ಟರಾಲ್ ಎನ್ನುವ ಮೇದಸ್ಸು ಏಕಾಂಗಿಯಾಗಿ ರಕ್ತಪ್ರವಾಹದಲ್ಲಿ ಸೇರಿಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಕೆಲವು ಪ್ರೊಟೀನ್ಗಳ ಅಗತ್ಯವಿದೆ. ಈ ಪ್ರೊಟೀನ್ಗಳನ್ನು ಒಂದು ರೀತಿ ಲಾರಿಗಳಿಗೆ ಹೋಲಿಸಬಹುದು. ಕೊಲೆಸ್ಟರಾಲ್ ಅನ್ನು ಎತ್ತಿಕೊಳ್ಳುತ್ತವೆ ಮತ್ತು ರಕ್ತನಾಳದ ಮೂಲಕ ದೇಹದ ವಿವಿಧ ಭಾಗಗಳಿಗೆ ತಲುಪಿಸುತ್ತವೆ. ಈ ಪ್ರಕ್ರಿಯೆಯಲ್ಲಿ ಕೊಲೆಸ್ಟರಾಲ್ ಮತ್ತು ಪ್ರೊಟೀನ್ಗಳು ಸಂಯುಕ್ತಗೊಂಡು ಲೈಪೊಪ್ರೊಟೀನ್ಗಳಾಗುತ್ತವೆ.
ಕೊಲೆಸ್ಟರಾಲ್ನಲ್ಲಿ ಎರಡು ವಿಧ ಎಂಬುದನ್ನು ಹಿಂದೊಮ್ಮೆ ಪ್ರಸ್ತಾಪಿಸಿದ್ದೆ. ಅವನ್ನು ಎಲ್ಡಿಎಲ್ ಮತ್ತು ಎಚ್ಡಿಎಲ್ ಕೊಲೆಸ್ಟರಾಲ್ ಎನ್ನುತ್ತಾರೆ. ಎಲ್ಡಿಎಲ್ ಅಥವಾ ಲೋ ಡೆನ್ಸಿಟಿ ಲೈಪೊಪ್ರೊಟೀನ್ಸ್ ಎಂದರೆ ಹಾನಿಕರವಾದದ್ದು. ಎಚ್ಡಿಎಲ್ ಅಥವಾ ಹೈ ಡೆನ್ಸಿಟಿ ಲೈಪೊಪ್ರೊಟೀನ್ ಎನ್ನುವುದು ಶರೀರಕ್ಕೆ ಒಳ್ಳೆಯದು. ಅವು ಬೀರುವ ಪರಿಣಾಮಕ್ಕೆ ಅನುಗುಣವಾಗಿ ಈ ರೀತಿ ವರ್ಗೀಕರಿಸಲಾಗಿದೆ. ಎಲ್ಡಿಎಲ್ ಬೀರುವ ದುಷ್ಪರಿಣಾಮಗಳಲ್ಲಿ ಮುಖ್ಯವಾದದ್ದು ಎಂದರೆ ರಕ್ತನಾಳಗಳನ್ನು ಕುಗ್ಗಿಸುವುದು ಮತ್ತು ಅಲ್ಲಿ ರಕ್ತ ಹೆಪ್ಪುಗಟ್ಟುವಂತೆ ಮಾಡುವುದು. ಹೃದ್ರೋಗಗಳ ಮೂಲವೇ ರಕ್ತನಾಳ ಚಿಕ್ಕದಾಗಿ ರಕ್ತದ ಸುಗಮ ಹರಿವಿಗೆ ಅಡ್ಡಿಯಾಗುವುದು ಎನ್ನುವುದಂತೂ ನಮಗೆ ಗೊತ್ತೇ ಇದೆ. ಇದಕ್ಕೆ ವ್ಯತಿರಿಕ್ತವಾಗಿ ಎಚ್ಡಿಎಲ್ ಕೆಟ್ಟ ಕೊಲೆಸ್ಟರಾಲ್ ಅನ್ನು ಪುನಃ ಯಕೃತ್ತಿಗೆ ಸಾಗಿಸಿ ಅಲ್ಲಿ ಇನ್ನೊಮ್ಮೆ ಸಂಸ್ಕರಣೆಗೆ ಒಳಪಡುವಂತೆ ಮಾಡುತ್ತದೆ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

