ಬೈಟುಕಾಫಿ

ನಿಮ್ಮ ಅರಿತು ಒಪ್ಪಿಕೊಳ್ಳಿ

Published On :

ಜೀವನದ ಅತ್ಯಂತ ಸವಾಲಿನ ಕೆಲಸ ಯಾವುದು ಗೊತ್ತೇ? ಖಂಡಿತಾ ನೀವಂದುಕೊಂಡ ಬೇರೆ ಯಾವುದೂ ಆಗಿರಲಿಕ್ಕೆ ಸಾಧ್ಯವಿಲ್ಲ. ಪ್ರತಿಯೊಬ್ಬರೂ ಜೀವನದಲ್ಲಿ ಎದುರಿಸುವ ಅತ್ಯಂತ ದೊಡ್ಡ ಸವಾಲೆಂದರೆ ಅದು ನಮ್ಮನ್ನು ನಾವು ಅರಿತುಕೊಳ್ಳುವುದು. ಬಹಳಷ್ಟು ಸಂದರ್ಭದಲ್ಲಿ ನಮ್ಮ ಬಗ್ಗೆ ಬೇರೆಯವರು ತಪ್ಪು ಕಲ್ಪನೆ ಮಾಡಿಕೊಳ್ಳುವುದಕ್ಕಿಂತ ನಮ್ಮನ್ನು ನಾವೇ ತಪ್ಪಾಗಿ ಅರ್ಥ ಮಾಡಿಕೊಂಡುಬಿಟ್ಟಿರುತ್ತೇವೆ. ಮನುಷ್ಯ ಸಹಜ ಗುಣ, ಎಲ್ಲ ವ್ಯಕ್ತಿಗಳೂ ತಮ್ಮನ್ನು ತಾವು ಅಗತ್ಯಕ್ಕಿಂತ ಹೆಚ್ಚಾಗಿಯೇ ಒಳ್ಳೆಯ ರೀತಿಯಲ್ಲಿ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಯಾರೊಬ್ಬರೂ ತಮ್ಮ ಬಗ್ಗೆ ತಾವೇ ದೋಷಾರೋಪಣೆ ಮಾಡಿಕೊಳ್ಳಲೂ ಇಷ್ಟಪಡುವುದಿಲ್ಲ. ಹಾಗೆಯೇ ತಮ್ಮ ಇತಿಮಿತಿಗಳ ಬಗ್ಗೆ ಯೋಚಿಸಲೂ ಹೋಗುವುದಿಲ್ಲ. ಪರಿಣಾಮ ನಾವೇನಾಗಿರುತ್ತೇವೋ ಅದನ್ನು ಬಿಟ್ಟು ಬೇರೆಯದ್ದೇ ಆಗಿದ್ದೇವೆಂದು ಭ್ರಮಿಸಿ ಮುಂದಕ್ಕೆ ಹೋಗುತ್ತಿರುತ್ತೇವೆ. ಜೀವನದ ಒಂದು ಹಂತದಲ್ಲೂ ಇದನ್ನು ಗ್ರಹಿಸುವ ಪ್ರಯತ್ನ ಮಾಡುವುದಿಲ್ಲ. ನಿರಾಸೆ, ವೈಫಲ್ಯಗಳು ಕಾಡುವುದೇ ಈ ಹಂತದಲ್ಲಿ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ  ನಮ್ಮ ಕಾಲಿನ ಶಕ್ತಿ ಒಂದೇ ಬಾರಿಗೆ ಹತ್ತು ಕಿ.ಮೀ. ದೂರ ನಡೆಯುವುದಷ್ಟಕ್ಕೇ ಸೀಮಿತವಾಗಿರುತ್ತದೆ. ಆದರೆ ನಾವು ಹದಿನೈದು ಕಿ.ಮೀ. ಸಾಮರ್ಥ್ಯದ ಭ್ರಮೆಯಲ್ಲಿರುತ್ತೇವೆ. ಇದು ನಂಬಿಕೆ, ವಿಶ್ವಾಸವಾಗಿ ಮನದಲ್ಲಿ ಮೊಳೆತಿದ್ದರೆ ಒಪ್ಪಿಕೊಳ್ಳಬಹುದಿತ್ತು. ಏಕೆಂದರೆ ಆತ್ಮವಿಶ್ವಾಸ ಯಾವತ್ತಿಗೂ ಪ್ರಯತ್ನಕ್ಕೆ ಪ್ರೇರಣೆಯಾಗಿರುತ್ತದೆ. ಆದರೆ ಇದು ಭ್ರಮೆಯ ರೂಪದಲ್ಲಿರುವುದರಿಂದ ದಿನದಿಂದ ದಿನಕ್ಕೆ ಹೆಚ್ಚು ನಡೆದು ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಗೋಜಿಗೇ ಹೋಗದೇ ಒಂದೇ ಸಲ ಸ್ಪರ್ಧಾ ಕಣಕ್ಕೆ ಧುಮುಕುತ್ತೇವೆ. ಸೋಲು ಕಾಣುತ್ತೇವೆ. ಕಂಗೆಡುತ್ತೇವೆ. ಆಗ ನಮ್ಮ ಸಾಮರ್ಥ್ಯ ಅರಿವಾಗುವುದು. ಅಂದರೆ ನಮ್ಮನ್ನು ನಾವು ಅರಿಯಲು ನಾವು ಸೋಲಲೇಬೇಕು. ಜೀವನದ ಮತ್ತೂ ದೊಡ್ಡ ಸವಾಲು ನಮ್ಮನ್ನು ನಾವು ಅರಿತ ಮೇಲೆ ಅಂಥ ಸತ್ಯವನ್ನು ಒಪ್ಪಿಕೊಂಡು ಅದರಂತೆ ಮುನ್ನಡೆಯಲು, ಜೀವಿಸಲು ನಿರ್ಧರಿಸುವುದು. ಹತ್ತು ಕಿ.ಮೀ. ನಡೆಯುವ ಸಾಮರ್ಥ್ಯ ಮಾತ್ರವೇ ನಮ್ಮದೆಂದು ಗೊತ್ತಿದ್ದೂ ಮ್ಯಾರಾಥಾನ್ ವಿಜೇತನ ಕನಸನ್ನು ಕಾಣುತ್ತ ಕೂರಬಾರದು. ನಮ್ಮ ಕಾಲಿನ ಸಾಮರ್ಥ್ಯ ಇಷ್ಟೆ ಎಂಬುದನ್ನು ಒಪ್ಪಿಕೊಳ್ಳೋಣ. ಎಲ್ಲರೂ ಎಲ್ಲ ಸಾಧನೆಗಳನ್ನೂ ಮಾಡಲಾಗುವುದಿಲ್ಲ. ನಮ್ಮ ಮಿತಿಯಲ್ಲಿ ನಾವು ಬದುಕಲು ಕಲಿತಾಗ ಮಾತ್ರವೇ ಮನುಷ್ಯ ನೆಮ್ಮದಿಯನ್ನು ಕಾಣಲು ಸಾಧ್ಯ. ಅದಿಲ್ಲದಿದ್ದರೆ ಇಡೀ ಜೀವನ ಅಸಂತೋಷ, ಅಸಹನೆ, ಆಕ್ರೋಶಗಳ ಗೂಡಾಗಿ ಪರಿವರ್ತನೆಯಾಗುತ್ತದೆ. ನಾವೇನಾಗಿದ್ದೇವೋ ಅದು ಮಾತ್ರವೇ ನಾವು ವಿನಾ ಬೇರೆಯವರು ಆಗಿರುವುದೆಲ್ಲ ನಾವಾಗಲು ಸಾಧ್ಯವಿಲ್ಲ ಎಂಬುದು ಜೀವನದ ಅತಿದೊಡ್ಡ ಸತ್ಯ.

-  ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.