ಬೈಟುಕಾಫಿ

ನೀವು ಶುದ್ಧವಾಗಿದೀರಾ?

Published On :

ಒಮ್ಮೆಲೆ ಕಸಿವಿಸಿಯಾಗುವಂಥ ಪ್ರಶ್ನೆ. ನಿಮಗೆ ಏಕಾಏಕಿ ಈ ಪ್ರಶ್ನೆ ಎದುರಾಯಿತು ಎಂದಿಟ್ಟುಕೊಳ್ಳಿ. ತಕ್ಷಣಕ್ಕೆ ನಿಮ್ಮ ತಲೆಯಲ್ಲಿ ಏನೇನೋ ಗೊಂದಲಗಳು, ಯೋಚನಾ ಸರಣಿ. ಯಾಕೆ ಹೀಗೆ ಕೇಳುತ್ತಿರಬಹುದು? ನನ್ನ ಮೈಯಿಂದ ಬೆವರಿನ ವಾಸನೆ ಹೊಮ್ಮುತ್ತಿರಬಹುದೇ ಎಂಬ ಅನುಮಾನ ಕಾಡಿ, ಪ್ರಶ್ನೆ ಕೇಳಿದವರಿಗೆ ಗೊತ್ತಾಗದಂತೆ ಆಘ್ರಾಣೇಂದ್ರಿಯವನ್ನು ಜಾಗೃತಗೊಳಿಸಿಕೊಳ್ಳುತ್ತೀರಿ. ಬೆಳಿಗ್ಗೆ ಮೈಗೆ ಸೋಪು ಹಚ್ಚಿ ಸರಿಯಾಗಿ ತಿಕ್ಕಿ ಸ್ನಾನ ಮಾಡಿದ್ದೆನಲ್ಲಾ, ಮತ್ತೇಕೆ ಈ ಪ್ರಶ್ನೆ? ತೊಟ್ಟ ಬಟ್ಟೆ ಸರಿಯಾಗಿ ಒಣಗದೇ ಮುಗ್ಗುಲು ಬಡಿಯುತ್ತಿರಬಹುದೇ? ಅಥವಾ ನಡೆಯುವ ಗಡಿಬಿಡಿಯಲ್ಲಿ ಏನನ್ನಾದರೂ ತುಳಿದು... ಹೀಗೆ ತಲೆಯಿಂದ ಕಾಲಿನವರೆಗೆ, ದಿನದ ಆರಂಭದಿಂದ ಈವರೆಗಿನ ಎಲ್ಲ ಸಂಗತಿಯನ್ನೂ ಸಿಂಹಾವಲೋಕನಕ್ಕೆ ಒಳಪಡಿಸುತ್ತೀರಿ. ಇದ್ಯಾವುದರಲ್ಲೂ ಲೋಪ ಇಲ್ಲ ಎಂದಾಕ್ಷಣ ಧೈರ್ಯ ತಂದುಕೊಂಡು ಪ್ರಶ್ನಿಸಿದವರನ್ನೇ ಅಂಥ ಅನುಮಾನ ಬಂದದ್ದೇಕೆಂದು ಮರು ಪ್ರಶ್ನಿಸುತ್ತೀರಿ. ಸರಿ, ಮತ್ತೆ ಅವರು ಹಾಗೆಯೇ ಪ್ರಶ್ನಿಸಿದರೆ ತುಸು ಒಳಹೊಕ್ಕು ನಿಮ್ಮ ಯಾವುದೋ ಲೋಪದ ಬಗ್ಗೆ ಪರಿಶೀಲನೆ ಆರಂಭವಾಗುತ್ತದೆ. ನೀವು ನೌಕರರೋ, ಉದ್ಯಮಿಯೋ ಆಗಿದ್ದರೆ ನಿಮ್ಮ ವ್ಯವಹಾರದ ಶುದ್ಧತೆಯ ಬಗ್ಗೆ ಯೋಚಿಸಲಾರಂಭಿಸುತ್ತೀರಿ. ಆಗ ಕೊಂಚ  ಅಧೈರ್ಯ ಕಾಡಲಾರಂಭಿಸುತ್ತದೆ. ಎಲ್ಲೋ, ಯಾವುದೋ ಸಂದರ್ಭದಲ್ಲೋ ಒಂಚೂರು ಕೃಷ್ಣನ ಲೆಕ್ಕ, ರಾಮನ ಲೆಕ್ಕ ಮಾಡಿದ್ದನ್ನೋ, ಲಂಚ, ಕಾಣಿಕೆ, ಉಡುಗೊರೆ ಪಡೆದದ್ದನ್ನೋ, ಯಾರನ್ನೋ ಯಾಮಾರಿಸಿ ಲಾಭ ಮಾಡಿಕೊಂಡದ್ದನ್ನೋ ನೆನಪಿಸಿಕೊಂಡು ಕಸಿವಿಸಿಗೊಳಗಾಗುತ್ತೀರಿ.ಇತ್ತೀಚೆಗೆ 'ಕೈ ಶುದ್ಧಿ' ತಪ್ಪಿದ್ದನ್ನು ನೆನಪಿಸಿಕೊಂಡು ಅದು ಹೇಗೆ ಗೊತ್ತಾಗಿ ಹೋಗಿರಬಹುದು ಎಂದುಕೊಂಡು ಅಚ್ಚರಿಗೆ ಬೀಳುತ್ತೀರಿ. ಆದರೂ ಅದನ್ನು ತೋರಗೊಡದೇ ಮತ್ತೆ 'ನನ್ನ ವ್ಯವಹಾರ ಶುದ್ಧವಾಗಿದೆ' ಎಂಬುದನ್ನು ಪ್ರತಿಪಾದಿಸಲು ಪ್ರಯತ್ನಿಸುತ್ತೀರಿ. ಮೇಲಿಂದ ಮೇಲೆ ಈ ಪ್ರಶ್ನೆಯೇ ಬರಲಾರಂಭಿಸಿದರೆ, ನಿಮ್ಮ ನೈತಿಕತೆ, ಚಾರಿತ್ರ್ಯ, ಉದ್ಯೋಗ, ವ್ಯವಹಾರ, ದಿನನಿತ್ಯದ ಚಟುವಟಿಕೆ, ಸಂಬಂಧ, ಸ್ನೇಹ, ಕುಟುಂಬ ಇತ್ಯಾದಿ ಇತ್ಯಾದಿಗಳ ಬಗ್ಗೆಯೆಲ್ಲಾ ಪರಿಶೀಲನೆಗೆ ತೊಡಗುತ್ತೀರಿ. ಒಂದು ಹಂತದಲ್ಲಿ ಕೋಪವೂ ಬರಬಹುದು. ಇಷ್ಟಾದರೂ ನಿಜವಾದ ಶುದ್ಧತೆ ಬಗ್ಗೆ ಯೋಚಿಸುವುದೇ ಇಲ್ಲ. ಹಾಗಿದ್ದರೆ ನಿಜವಾದ ಶುದ್ಧತೆ ಯಾವುದು? ಅದು ದೇಹಕ್ಕೆ, ಭೌತಿಕ ಯಾವುದೇ ವ್ಯವಹಾರಕ್ಕೆ ಸಂಬಂಧಸಿದ್ದಲ್ಲ. ಶುದ್ಧತೆ ಎಂಬ ಪದ ಅನ್ವಯವಾಗುವಂತಿದ್ದರೆ ಅದು ಮನಸ್ಸಿಗೆ ಮಾತ್ರ. ಮನಸ್ಸು ಶುದ್ಧವಾಗಿರುವ ವ್ಯಕ್ತಿ ಮಾತ್ರ ಬೇರೆಲ್ಲ ರೀತಿಯಿಂದಲೂ ಶುದ್ಧನಾಗಿರಲು  ಸಾಧ್ಯ. ಕಪಟ, ಕುತಂತ್ರಗಳಿಲ್ಲದ ಮನಸ್ಸು ಮಾತ್ರ ನಿರ್ಮಲವಾಗಿರಲು ಸಾಧ್ಯ. ತಂತ್ರಗಾರಿಕೆ, ಡಿಪ್ಲೊಮಸಿ, ವ್ಯವಹಾರ ಚಾತುರ್ಯ ಇವ್ಯಾವುದೂ ಆ ಶುದ್ಧ ಮನಸ್ಸಿಗೆ ಗೊತ್ತಿರುವುದೇ ಇಲ್ಲ. ಅದರದ್ದೇನಿದ್ದರೂ ನೇರಾನೇರ. ಅಪ್ಪಿ ತಪ್ಪಿಯೂ ಅದು ಬೇರೊಬ್ಬರಿಗೆ, ಕೊನೆಗೆ ಸ್ವಂತ ಶತ್ರುಗಳಿಗೂ ಎರಡು ಬಗೆಯದು. ಸುಖದ ಪರಾಕಾಷ್ಠೆಯಲ್ಲಿರಲು ಇಂಥ ಮನಸ್ಸಿನ ವ್ಯಕ್ತಿಗಳಿಂದ ಮಾತ್ರ ಸಾಧ್ಯ. ಯಶಸ್ಸು ಗಳಿಕೆಯ ಹಾದಿಯಲ್ಲಿ ಚಿತ್ತಶುದ್ಧ ಕಳಕೊಳ್ಳುವುದು ಸಾರ್ಥಕ ಎನಿಸುವುದಿಲ್ಲ. ಯಶಸ್ಸಿನ ಹಾದಿಗೆ ತಂತ್ರಗಳು ಬೇಕು ನಿಜ. ಆದರೆ ಚಿತ್ತ ಶುದ್ಧಿಯಿಲ್ಲದ ಯಶಸ್ಸಿಗೆ ಯಾವುದೇ ಮೌಲ್ಯವಿಲ್ಲ. ಶುದ್ಧ ಮನಸ್ಸು ಮಾತ್ರ ವಿಪತ್ತನ್ನು ಹತ್ತಿರ ಬರಗೊಡದೇ ಯಶಸ್ಸನ್ನು ಗಳಿಸಿಕೊಡಬಲ್ಲುದು. ಇದನ್ನೆ ಮಗುವಿನ ಮನಸ್ಸು ಎನ್ನುವುದು. ಅಂಥ ಮನಸ್ಸಿಗೆ ದುಃಖವೇ ಇಲ್ಲ. ಇದ್ದರೂ ಅದು ಕ್ಷಣಿಕ.

-  ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.