ಬೈಟುಕಾಫಿ

ಪ್ರಜ್ಞಾಪೂರ್ವಕ ಕೋಪವಿರಲಿ

Published On :

ಹಿಂದೆಯೂ ಇಲ್ಲ, ಮುಂದೆಯೂ ಇಲ್ಲ. ಅದೊಂದೇ ಕ್ಷಣ. ಸಿಟ್ಟು ಅದೆಲ್ಲಿಂದ ಬರುತ್ತದೆಯೋ. ಭರ್ತಿಯಾದ ಜಲಾಶಯದಿಂದ ನೀರು ಬಿಟ್ಟಾಗ ಯಾವ ಪರಿಯ ರಭಸವೋ ಅಂತಹುದೇ ಅಬ್ಬರದೊಂದಿಗೆ ಬಂದುಬಿಡುತ್ತದೆ ಮತ್ತು ಆ ಕ್ಷಣ ನಾವು ನಾವಾಗಿರುವುದೇ ಇಲ್ಲ. ಕೋಪದ ಭರದಲ್ಲಿ ಏನು ಮಾತನಾಡುತ್ತಿದ್ದೇವೆ ಎಂಬ ಪರಿವೆಯೂ ಇರದೇ ಮಾತನಾಡಿಬಿಡುತ್ತೇವೆ. ಅದು ಮನೆಯಲ್ಲಿ ಹೆಂಡತಿಯೇ ಇರಬಹುದು, ಕಚೇರಿಯಲ್ಲಿ ಸಹೋದ್ಯೋಗಿ ಅಥವಾ ಬಾಸ್ ಆಗಿರಬಹುದು, ಸ್ನೇಹಿತರಾಗಿರಬಹುದು. ಯಾರೊಂದಿಗೆ ಮಾತನಾಡುತ್ತಿದ್ದೇವೆ ಎಂಬ ಪ್ರಜ್ಞೆಯನ್ನೂ ಕಳೆದುಕೊಂಡಿರುತ್ತೇವೆ. ವರ್ಷಗಳಿಂದ ಬೆಳೆಸಿಕೊಂಡು ಬಂದಿದ್ದ ಬಾಂಧವ್ಯವನ್ನು ಅರೆನಿಮಿಷದಲ್ಲಿ ಹಾಳು ಮಾಡಿಕೊಂಡುಬಿಡುತ್ತೇವೆ. ಮನಸ್ಸು ಶಾಂತವಾದಾಗ ಆಗಿ ಹೋಗಿದ್ದರ ಬಗ್ಗೆ ಚಿಂತಿಸಿ ಮರುಗುತ್ತೇವೆ. ಮತ್ತೊಮ್ಮೆ ಅವರೊಂದಿಗೆ ಮುಖಾಮುಖಿಯಾಗುವ ಸಂದರ್ಭ ಎದುರಾದಾಗ ನಾಚಿಕೆಯಿಂದ ತಲೆ ತಗ್ಗಿಸುತ್ತೇವೆ. ಕ್ಷಣ ಚಿತ್ಥಂ, ಕ್ಷಣ ಪಿತ್ಥಂ ಅನ್ನುವುದು ಅದಕ್ಕೇ. ತಾಳ್ಮೆಯಿಂದ ವಿಚಾರ ಮಾಡಿ. ಒಂದೆರಡು ಸೆಕೆಂಡ್ ಕಾಲ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದರೆ ಅನಾಹುತ ತಡೆಗಟ್ಟಲು ಸಾಧ್ಯವಿತ್ತು. ವಿನಾಕಾರಣ ಮನಸ್ತಾಪ ಮಾಡಿಕೊಳ್ಳುವುದನ್ನು ತಪ್ಪಿಸಬಹುದಿತ್ತು. ಎದುರುಗಿದ್ದವರು ತೀರಾ ನಿಮ್ಮನ್ನು ಕೆರಳಿಸುವಂತೆ ವರ್ತಿಸಿದ್ದರೂ ಮೌನವಾಗಿದ್ದುಬಿಟ್ಟರೆ ಸಾಕಿತ್ತು. ಆದರೆ ಬಹುತೇಕ ಸಂದರ್ಭದಲ್ಲಿ ಮೌನ ಕಳೆದು ಹೋಗಿಬಿಡುತ್ತದೆ. ಅಂಥ ಸನ್ನಿವೇಶದಲ್ಲಿ ನಮ್ಮ ಅಂಗಾಂಗಗಳೆಲ್ಲವೂ ಮಾತನಾಡತೊಡಗುತ್ತವೆ. ಹಾಗೆಂದು ಜೀವನದಲ್ಲಿ ಕೋಪವನ್ನೇ ಮಾಡಬಾರದು ಎಂದೇನಲ್ಲ. ಎಷ್ಟೋ ಸಂದರ್ಭದಲ್ಲಿ ಕೋಪ ಬರದಿದ್ದರೂ ಅದನ್ನು ತರಿಸಿಕೊಳ್ಳಬೇಕಾಗುತ್ತದೆ. ಆದರೆ ಅದು ಪ್ರಜ್ಞಾಪೂರ್ವಕ ಕೋಪ. ಒಂದು ರೀತಿಯಲ್ಲಿ ಕೋಪ ಬಂದಂತೆ ನಟಿಸುವುದು ಎನ್ನೋಣ. ಅಂಥ ಪ್ರಜ್ಞಾಪೂರ್ವಕ ಕೋಪದ ಉದ್ದೇಶ ಒಳ್ಳೆಯದಿರುತ್ತದೆ. ಮಕ್ಕಳನ್ನು ಗದರಿಸುತ್ತೇವೆ. ಅವು ಮಾತು ಕೇಳುವುದಿಲ್ಲ. ಅಂಥ ಸಂದರ್ಭದಲ್ಲಿ ಇನ್ನಷ್ಟು ಕೋಪ ಬಂದಂತೆ ವರ್ತಿಸಿ ಅವರನ್ನು ತಿದ್ದುತ್ತೇವೆ. ಹಾಗೆ, ನಮ್ಮ ನಿಯಂತ್ರಣದಲ್ಲಿ ಕೋಪ ಇರುವವರೆಗೂ ಅದು ನಿರುಪದ್ರವಿ. ಆದರೆ, ನಮಗೇ ಗೊತ್ತಿಲ್ಲದಂತೆ ನಮ್ಮನ್ನು ಆಳುವ ಕೋಪ ಇದೆಯಲ್ಲಾ, ಅದು ಅಪಾಯಕಾರಿ.

- ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.