ಗೊತ್ತಾ ನಿಮಗೆ ಆನಿಯನ್ ಥೆರಪಿ?
ಹೃದಯ ತೊಂದರೆಯಿಂದ ಬಳಲುತ್ತಿದ್ದ ಗೆಳೆಯರೊಬ್ಬರು ಕೇಳಿದರು, 'ಆನಿಯನ್ ಥೆರಪಿ ಗೊತ್ತೇನಪ್ಪ ನಿನಗೆ?'. 'ಇಲ್ಲ' ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡೆ. ಈರುಳ್ಳಿಯಲ್ಲಿನ ಔಷಧೀಯ ಗುಣಗಳ ಬಗ್ಗೆ ಗೊತ್ತಿಲ್ಲ ಎಂದಲ್ಲ. ಅವುಗಳನ್ನು ಈ ಹೀಂದೆ ನಿಮ್ಮೊಂದಿಗೆ ಹಂಚಿಕೊಂಡಿದ್ದೆ ಕೂಡ. ಗೆಳೆಯರು ಹೇಳಿದ 'ಥೆರಪಿ' ನನಗೆ ಹೊಸತಾಗಿತ್ತು. ಕೇಳಿದೆ, 'ಈ ಥೆರಪಿಯಲ್ಲಿ ಏನು ಮಾಡ್ತಾರೆ?' 'ಎಂಥದೂ ಇಲ್ಲ ಮಾರಾಯಾ. ದಿನಕ್ಕೊಂದು ಈರುಳ್ಳಿಯನ್ನು ತಪ್ಪದೇ ತಿನ್ನಬೇಕು. ಕಡೇಪಕ್ಷ ಅರ್ಧ ಈರುಳ್ಳಿಯಾದರೂ ತಿನ್ನಲೇಬೇಕು. ತಪ್ಪಿಸುವಂತಿಲ್ಲ. ನಿತ್ಯವೂ ಇದು ಕಡ್ಡಾಯ' 'ಹೇಗಾದರೂ ತಿನ್ನಬಹುದಾ? ಹಸಿಯಾಗಿಯೇ ತಿನ್ನಬೇಕಾ' 'ಹಸಿ ಈರುಳ್ಳಿಯನ್ನೇ ತಿನ್ನಬೇಕು'
ಈರುಳ್ಳಿ ಅಥವಾ ಬೆಳ್ಳುಳ್ಳಿ ಹಸಿಯಾಗಿದ್ದಾಗ ವಾಸನೆ. ಆದರೆ ಅಡುಗೆಯಲ್ಲಿ ಬಳಸಿದಾಗ ವಿಶಿಷ್ಟ ರುಚಿ ಕೊಡುತ್ತವೆ. ಸಾಮಾನ್ಯವಾಗಿ ಎಲ್ಲ ಅಡುಗೆಗಳಲ್ಲೂ ಇವನ್ನು ಬಳಸಿಯೇ ಬಳಸುತ್ತಾರೆ. ಇವೆರಡರಲ್ಲೂ ಇರುವ ರಾಸಾಯನಿಕಗಳು ಬಹುತೇಕ ಒಂದೇ ಬಗೆಯವು. ಬೆಳ್ಳುಳ್ಳಿಯನ್ನು ಹಸಿಯಾಗಿ ತಿನ್ನಲು ಸ್ವಲ್ಪ ಕಷ್ಟ ಆಗಬಹುದು, ಆದರೆ ಈರುಳ್ಳಿ ಹಾಗಲ್ಲ. ಅದನ್ನು ಹಸಿಯಾಗಿಯೇ ತಿನ್ನಬಹುದು. ವೈದ್ಯಕೀಯ ವಿಜ್ಞಾನದ ಪ್ರಕಾರ ಈರುಳ್ಳಿಯಲ್ಲಿ ನೂರಕ್ಕೂ ಅಧಿಕ ರಾಸಾಯನಿಕಗಳಿವೆ. ಎಚ್ಡಿಎಲ್ ಕೊಲೆಸ್ಟರಾಲ್ ಹೆಚ್ಚಿಸಲು ಈರುಳ್ಳಿ ತುಂಬ ಸಹಕಾರಿ. ಅದರಲ್ಲಿರುವ ಯಾವ ಗುಣ ಒಳ್ಳೆಯ ಕೊಲೆಸ್ಟರಾಲ್ ಹೆಚ್ಚಿಸುತ್ತದೆ ಎನ್ನುವುದು ಪತ್ತೆಯಾಗಿಲ್ಲ.
ಆದರೆ, ಈರುಳ್ಳಿ ಸೇವನೆ ಎಚ್ಡಿಎಲ್ ಮಟ್ಟವನ್ನು ಶೇ 30ರವರೆಗೂ ಹೆಚ್ಚಿಸುತ್ತದೆ ಎಂಬ ಸಂಗತಿ ದೃಢಪಟ್ಟಿದೆ. ಭಾರತದಲ್ಲಿ ರಾಷ್ಟ್ರೀಯ ಈರುಳ್ಳಿ ಬೆಳೆಗಾರರ ಒಕ್ಕೂಟದಿಂದ ನಡೆಸಲಾದ ಸಂಶೋಧನೆಯಲ್ಲಿ ಕಂಡುಬಂದ ಇನ್ನೂ ಒಂದು ಸಂಗತಿ ಎಂದರೆ ಮೂಲಧಾತುಗಳಿಲ್ಲದ ಆಮ್ಲಜನಕವನನ್ನು ಇವು ಹೋಗಲಾಡಿಸುತ್ತವೆ. ಕೋಶಗಳಿಗೆ ಏನೇ ಘಾಸಿಯಾದರೂ ಸರಿಪಡಿಸುವ ಸಾಮರ್ಥ್ಯ ಈರುಳ್ಳಿಗೆ ಇದೆ. ರಕ್ತ ಹೆಪ್ಪುಗಟ್ಟುವುದನ್ನು ತಡೆದು, ರಕ್ತ ಪರಿಚಲನೆಯನ್ನು ಸರಾಗಗೊಳಿಸುತ್ತದೆ. ಜತೆಗೆ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
ವೈದ್ಯರು ಹೇಳುವುದು ಹಸಿ ಈರುಳ್ಳಿಯನ್ನೇ ತಿನ್ನಬೇಕು ಮತ್ತು ನಿತ್ಯ ಮಧ್ಯಮ ಗಾತ್ರದ ಅರ್ಧ ಈರುಳ್ಳಿಯನ್ನಾದರೂ ತಿನ್ನಲೇಬೇಕು ಎಂದು. ಅಷ್ಟಾಗದಿದ್ದರೆ ಎಷ್ಟಾಗುತ್ತದೋ ಅಷ್ಟು ತಿನ್ನುವುದು ಉತ್ತಮ. ಸಣ್ಣ ಚೂರು ಕೂಡ ಪ್ರಭಾವ ಬೀರುತ್ತದೆ. ಹಸಿ ಈರುಳ್ಳಿಯೇ ಏಕೆ ಎಂದರೆ ಈರುಳ್ಳಿಯಲ್ಲಿರುವ ಎಲ್ಲಾ ರಾಸಾಯನಿಕಗಳೂ ನೇರವಾಗಿ ದೇಹವನ್ನು ಸೇರುತ್ತವೆ. ರಸದ ರೂಪದಲ್ಲಿಯೂ ಸೇವಿಸಬಹುದು. ಅದು ಎಚ್ಡಿಎಲ್ ಕೊಲೆಸ್ಟರಾಲ್ ಹೆಚ್ಚಿಸಲು ಸಹಕಾರಿ. ಬೇಯಿಸಿದಾಗ ಕೆಲವು ರಾಸಾಯನಿಕಗಳು ನಾಶವಾಗುತ್ತವೆ. ಹಾಗಂತ ಬೇಯಿಸಿದ ಈರುಳ್ಳಿ ಆರೋಗ್ಯದ ಮೇಲೆ ಏನೂ ಪರಿಣಾಮ ಬೀರುವುದೇ ಇಲ್ಲ ಎಂದಲ್ಲ, ಹೃದ್ರೋಗದ ವಿರುದ್ಧ ಅವು ತಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡುತ್ತಿರುತ್ತವೆ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
ಮೊ.9900113699 (ಎಸ್ಎಂಎಸ್ಗೆ ಮಾತ್ರ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

