ಬೈಟುಕಾಫಿ

ನಿರಾಕಾರದಿಂದ ಸಾಕಾರದ ಕಡೆಗೆ

Published On :

ನರೇಂದ್ರನ ಜೀವನದಲ್ಲಿ ಇದೊಂದು ಅದ್ಭುತ ಪರಿವರ್ತನೆ; ಅವನ ಆಧ್ಯಾತ್ಮಿಕ ಸಾಧನೆಯ ಮಾರ್ಗದಲ್ಲಿ ದೊಡ್ಡ ಹೆಜ್ಜೆ; ಶಿಷ್ಯವೃತ್ತಿಯಲ್ಲಿ ಮಹತ್ವದ ಘಟ್ಟ. ಮೂರ್ತಿಪೂಜೆ ಮೌಢ್ಯವೆಂದು ಹೀಯಾಳಿಸುತ್ತಿದ್ದವನು ಇಂದು ಜಗನ್ಮಾತೆಯ ಮುಂದೆ ಉದ್ದಂಡ ಪ್ರಣಾಮ ಮಾಡುತ್ತಾ ಪ್ರಾರ್ಥಿಸಿಕೊಳ್ಳುತ್ತಿದ್ದಾನೆ! ಈ ಪರಿವರ್ತನೆಯೂ ರಾಮಕೃಷ್ಣರ ಒಂದು ಪಾಠದಿಂದಲೇ!
ರಾಮಕೃಷ್ಣರ ಮಾತಿಗೆ ಒಪ್ಪಿ ಸನ್ಯಾಸಿಯಾಗುವುದನ್ನು ಕೈಬಿಟ್ಟ ನಂತರವೂ ನರೇಂದ್ರನ ಕುಟುಂಬದ ಪರಿಸ್ಥಿತಿ ಉತ್ತಮವಾಗಲಿಲ್ಲ. ವಿದ್ಯೆ, ಬುದ್ಧಿ, ತೇಜಸ್ಸುಗಳಿಂದ ತುಂಬಿದ್ದ ನರೇಂದ್ರನಂತಹ ಅಸಾಧಾರಣ ತರುಣನಿಗೆ ಒಂದು ಸರಿಯಾದ ಕೆಲಸ ಸಿಗದಿದ್ದುದು ಸೋಜಿಗವೇ ಸರಿ. ಹೀಗಿರುವಾಗ ನರೇಂದ್ರನಿಗೆ ಒಂದು ಆಲೋಚನೆ ಹೊಳೆಯಿತು, ಹೇಗಿದ್ದರೂ ಭಗವಂತ ರಾಮಕೃಷ್ಣರ ಪ್ರಾರ್ಥನೆಯನ್ನು ಕೇಳುತ್ತಾನಲ್ಲ, ತಾನೇಕೆ ಅವರನ್ನೇ ಕೇಳಿಕೊಳ್ಳಬಾರದು? ತಡಮಾಡದೆ ರಾಮಕೃಷ್ಣರಲ್ಲಿ ತನ್ನ ಯೋಚನೆಯನ್ನು ತಿಳಿಸಿದ. ಅದಕ್ಕವರು 'ನೀನೇ ಜಗನ್ಮಾತೆಯ ಬಳಿ ಕೇಳಿಕೊಳ್ಳಬಹುದಲ್ಲ?' ಎಂದರು.
ಸರಿ, ನರೇಂದ್ರ ರಾತ್ರಿ ಕಾಳಿ ದೇವಾಲಯವನ್ನು ಪ್ರವೇಶಿಸಿ ನೋಡುತ್ತಾನೆ, ಗರ್ಭಗುಡಿಯಲ್ಲಿ ಭವತಾರಣಿ ಸಾಕ್ಷಾತ್ ಚಿನ್ಮಯಿಯಾಗಿ ನಿಂತಿದ್ದಾಳೆ! ಮಾತೃವಾತ್ಸಲ್ಯವನ್ನು ಹರಿಸುತ್ತಿದ್ದ ಜಗನ್ಮಾತೆಯನ್ನು ಕಂಡು ನರೇಂದ್ರ ಭಾವಾವೇಶಭರಿತನಾಗಿ, ದೀರ್ಘದಂಡ ಪ್ರಣಾಮ ಮಾಡಿ, 'ಅಮ್ಮಾ ಜಗನ್ಮಾತೆ; ವಿವೇಕ, ವೈರಾಗ್ಯ, ಜ್ಞಾನ, ಭಕ್ತಿ ಕೊಡು! ನಿರಂತರವೂ ನಿನ್ನ ದರ್ಶನವಾಗುವಂತೆ ಅನುಗ್ರಹಿಸು' ಎಂದು ಪ್ರಾರ್ಥಿಸಿದ. ತನ್ನ ಕುಟುಂಬದ ಕಷ್ಟವನ್ನು ಕೇಳಲು ಮರೆತೇಬಿಟ್ಟ. ಕೊನೆಗೆ ರಾಮಕೃಷ್ಣರ ದಯದಿಂದ ನರೇಂದ್ರನ ಕುಟುಂಬ ಅನ್ನ, ಬಟ್ಟೆಗೆ ಪರದಾಡುವುದು ತಪ್ಪಿತು.
-ಆನಂದ ಎಸ್.ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.