ಇತಿ ನಿಮ್ಮ ಸುಧಾ (ನಿಶ್ಯಬ್ದ)

ಕಾದ ಕಬ್ಬಿಣ ಹೇಗೆ ಬಗ್ಗಿಸಬಹುದೋ ಅದೇ ರೀತಿ ಈ ಹದಿಹರೆಯದಲ್ಲಿ ಸರಿದಾರಿಗೂ ತರಬಹುದು, ಹಾದಿ ತಪ್ಪಿಸಲೂಬಹುದು. ಹೀಗೆ ಹಾದಿ...
ಇತಿ ನಿಮ್ಮ  ಸುಧಾ (ನಿಶ್ಯಬ್ದ)
Updated on: 

ಕಾದ ಕಬ್ಬಿಣ ಹೇಗೆ ಬಗ್ಗಿಸಬಹುದೋ ಅದೇ ರೀತಿ ಈ ಹದಿಹರೆಯದಲ್ಲಿ ಸರಿದಾರಿಗೂ ತರಬಹುದು, ಹಾದಿ ತಪ್ಪಿಸಲೂಬಹುದು. ಹೀಗೆ ಹಾದಿ ತಪ್ಪಿದ ಹದಿಹರೆಯದ ಸುಧಾಳ ಬದುಕು ಏನಾಯಿತು? ಓದಿ...
ಟೀನೇಜ್ ಎಂದರೆ ಹದಿಹರೆಯದ, ಅಪ್ರಾಪ್ತ ಎಂಬ ಅರ್ಥವಿದೆ. ಹಾಗಾದರೆ ಏನು ಇದರ ಅರ್ಥ? ಹದಿಹರೆಯದ ಮಕ್ಕಳು ಎಂದರೆ 12 ವರ್ಷದ ನಂತರ ಅಂದರೆ 'ಹದಿ'ಮೂರನೇ ವಯಸ್ಸಿನಿಂದ 'ಹದಿ'ನೆಂಟರ ವಯಸ್ಸಿನ ವರೆಗೆ 'ಹದಿ'ಹರೆಯದ ವಯಸ್ಸು ಎನ್ನಲಾಗಿದೆ. ಅದನ್ನೇ ಆಂಗ್ಲ ಭಾಷೆಯಲ್ಲಿ ಟೀನೇಜ್ ಎಂದರೆ  ಥ'ರ್ಟೀನ್‌'ನಿಂದ ನೈನ್ 'ಟೀನ್‌' ವರೆಗಿನ ವಯಸ್ಸು.
ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ಕಾಲಿಡುವ ಹಂತ ಇದು. ಈ ವೇಳೆ ಪ್ರತಿ ವಿಚಾರದಲ್ಲೂ ಕುತೂಹಲ. ಕೆಲ ದೈಹಿಕ ಬದಲಾವಣೆಗಳು ಮಾನಸಿಕವಾಗಿ ಕಾಡಲಾರಂಭಿಸುತ್ತವೆ. ಅದರಲ್ಲೂ ಲೈಂಗಿಕ ವಿಚಾರಗಳು ತಲೆಯೇರಿ ಕೂರುತ್ತವೆ. ಅಷ್ಟೇ ಅಲ್ಲ, ಮಾನಸಿಕವಾಗಿ ತೀರಾ ಬಲಹೀನರಾಗುವ ವಯಸ್ಸಿದು. ಕಾದ ಕಬ್ಬಿಣ ಹೇಗೆ ಬಗ್ಗಿಸಬಹುದೋ ಅದೇ ರೀತಿ ಈ ಹದಿಹರೆಯದಲ್ಲಿ ಸರಿದಾರಿಗೂ ತರಬಹುದು, ಹಾದಿ ತಪ್ಪಿಸಲೂಬಹುದು. ಹೀಗೆ ಹಾದಿ ತಪ್ಪಿದ ಹದಿಹರೆಯದ ಸುಧಾಳ ಬದುಕು ಏನಾಯಿತು? ಓದಿ...
=
ಅದು ತಿಪಟೂರು ತಾಲೂಕಿನ ಪರ್ವಗೊಂಡನಹಳ್ಳಿ. ಪೊಲೀಸ್ ಕಡತದಲ್ಲಿ ಈ ಗ್ರಾಮ 'ಸಿ' ಕೆಟಗೆರಿ ಸೇರಿದೆ. ಅಂದರೆ ಇಲ್ಲಿ ಯಾವುದೇ ದೊಂಬಿ, ಗಲಾಟೆ, ಕೂನಿಯಂಥ ಕಾನೂನುಬಾಹಿರ ಕೃತ್ಯಗಳು ನಡೆಯದೆ ಶಾಂತಿಯುತ ವಾತಾವರಣವಿರುತ್ತದೆ.
ಆದರೆ, ಇಲ್ಲಿನ ಗಂಗಣ್ಣ ಎಂಬವರು ಗ್ರಾಮಪಂಚಾಯಿತಿ ಸದಸ್ಯರೊಂದಿಗೆ ಬಂದು ತನ್ನ ಮಗಳು ಕಾಣೆಯಾಗಿದ್ದಾಳೆ, ಗಂಡನ ಕಡೆಯವರೇ ಏನೋ ಮಾಡಿರಬಹುದೆಂಬ ಅನುಮಾನವಿದೆ ಎಂದು ದೂರು ನೀಡಿದಾಗ ಇನ್ಸ್‌ಪೆಕ್ಟರ್ ಪಾಲಾಕ್ಷಯ್ಯನವರಿಗೆ ಸ್ವಲ್ಪ ತಲೆಬಿಸಿ ಆಯ್ತು.
ಕಾಣೆಯಾದ ವಿವಾಹಿತೆಯ ವಿವರ ಕೇಳಿದ ಇನ್ಸ್‌ಪೆಕ್ಟರ್‌ಗೆ ಮತ್ತೊಂದು ಆಘಾತಕಾರಿ ಸಂಗತಿ ತಿಳಿಯಿತು. ಅದು ಅವರ ತಲೆ ಬೇನೆಯನ್ನು ಇನ್ನಷ್ಟು ಹೆಚ್ಚಿಸಿತ್ತು. ಕಾರಣ ಕಾಣೆಯಾದ ಗೃಹಿಣಿ ಹದಿಹರೆಯದವಳಾಗಿದ್ದಳು! ಕೇವಲ 16 ವರ್ಷದ ಸುಧಾ ಮದುವೆಯಾಗಿ 7 ವರ್ಷ ಕಳೆದಿದ್ದ ರಮೇಶನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದಳು. ಮದುವೆಯಾಗಿ ಒಂದು ವರ್ಷ ಪೂರ್ತಿಯಾಗುವ ಮೊದಲೇ ನಾಪತ್ತೆ.
=
ಚಿಕ್ಕನಾಯಕನಹಳ್ಳಿಯ ಗಂಗಣ್ಣ, ಮನೆ ಅಳಿಯನಾಗಿ ಪರ್ವಗೊಂಡನಹಳ್ಳಿಗೆ ಬಂದಿದ್ದರು. ಇಬ್ಬರು ಹೆಣ್ಣಮಕ್ಕಳಿದ್ದ ಸಿದ್ದಪ್ಪನ ಹಿರಿಯ ಅಳಿಯನಾಗಿದ್ದ ಗಂಗಣ್ಣ, ಹೆಂಡತಿಯ ಒತ್ತಾಯದಿಂದಾಗಿ ಆಕೆಯ ತಂಗಿ ಮಲ್ಲಮ್ಮರನ್ನೂ ಎರಡನೇ ಮದುವೆಯಾಗಿದ್ದರು. ಇದಕ್ಕೆ ಕಾರಣ ಆಸ್ತಿ ಪೂರ್ತಿ ತನ್ನದಾಗುತ್ತೆ ಎಂಬ ಉದ್ದೇಶ ಒಂದೆಡೆಯಾದರೆ, ಉತ್ತಮ ಗಂಡು ಸಿಗಲಿಲ್ಲ ಎಂಬುದು ಎರಡನೇ ಕಾರಣ. ಈತನ ಮೊದಲ ಹೆಂಡತಿಗೆ ನಾಲ್ವರು ಹೆಣ್ಣುಮಕ್ಕಳಿದ್ದು, ಎರಡನೇ ಹೆಂಡತಿಗೆ ಮಕ್ಕಳಾಗಲಿಲ್ಲ. ಈಗ ಕಾಣೆಯಾದ ಸುಧಾ ಆತನ ಮೊದಲ ಪತ್ನಿಯ ಕೊನೆಯ ಮಗಳು. 10ನೇ ತರಗತಿ ವಿದ್ಯಾರ್ಥಿನಿ.  


ಸುಧಾ ಶಾಲೆಯಲ್ಲಿ ತುಂಬಾ ಚೂಟಿ. ಪ್ರಾಥಮಿಕ ಶಿಕ್ಷಣವನ್ನು ಪರ್ವಗೊಂಡನಹಳ್ಳಿಯಲ್ಲಿ ಮುಗಿಸಿದ ಸುಧಾ ಹೆಚ್ಚಿನ ಶಿಕ್ಷಣಕ್ಕಾಗಿ ತಿಪಟೂರಿಗೆ ಹೋಗುತ್ತಿದ್ದಳು.
ಗಂಗಣ್ಣನ ಹಿರಿಯ ಮಗಳಿಗೆ ಮದುವೆ ನಿಶ್ಚಯವಾಗಿ ಸಮೀಪಿಸಿತ್ತು. ಮದುವೆಗೆ ಬಟ್ಟೆ ತರಲು ತುಮಕೂರಿಗೆ ಗಂಗಣ್ಣನ ಇಡೀ ಕುಟುಂಬ ಹೋಯಿತು. ಬಟ್ಟೆ ಖರೀದಿಸಿ ಮದುವೆಯ ಖುಷಿಯಲ್ಲಿ ಸಂಜೆ ಮನೆಗೆ ಬಂದ ಗಂಗಣ್ಣನ ಕುಟುಂಬಕ್ಕೆ ಮದುವೆ ಸಡಗರ ಉಡುಗಿ ಹೋಗಿತ್ತು. ಕಾರಣ ಕಿರಿಯ ಮಗಳು ಸುಧಾ ನಾಪತ್ತೆ! ಎಲ್ಲಿಗೆ ಹೋದಳು ಎಂಬ ಭೀತಿಯಲ್ಲಿದ್ದ ಗಂಗಣ್ಣನಿಗೆ ಗ್ರಾಮದ ಹಿರಿಯರೊಬ್ಬರು ಸಮಾಧಾನ ಹೇಳಿ, ರಮೇಶ ಎಂಬ ವಿವಾಹಿತನೊಂದಿಗೆ ಆಕೆ ಓಡಿಹೋಗಿದ್ದಾಳೆ ಎಂಬ ವಿಷಯ ತಿಳಿಸಿದರು.
=
ಅದೇ ಗ್ರಾಮದಲ್ಲಿ ಶಿವಪ್ಪ ಎಂಬಾತನಿದ್ದ.  ಸ್ಥಳೀಯ ಮುಖಂಡ ಬೇರೆ. ಆಸ್ತಿ ಅಂತಸ್ತು ಉಳ್ಳವ. ರಾಜಿ, ಪಂಚಾಯಿತಿಗಳನ್ನು ನಡೆಸಿಕೊಡಲು ಈತ ಹೋಗುತ್ತಿದ್ದ.
ಇಂಥ ವ್ಯಕ್ತಿಯ ಮಗನಾದ ವಿವಾಹಿತ ರಮೇಶನೊಂದಿಗೆ ಸುಧಾ ಓಡಿ ಹೋದ ವಿಚಾರ ತಿಳಿದ ಗಂಗಣ್ಣನಿಗೆ ದಿಕ್ಕು ತೋಚದಾಯಿತು. ಕೂಡಲೇ ಪೊಲೀಸರಿಗೆ ದೂರು ನೀಡುವುದಾಗಿ ಕೂಗಾಡಿದ. ಆದರೆ ಹಿರಿಯ ಮಗಳ ಮದುವೆ ಸಮೀಪವಿದ್ದಾಗ ಇಂಥ ವಿಚಾರಗಳಿಂದ ತನ್ನ ಮನೆಯ ಮರ್ಯಾದೆ ಹರಾಜಾಗುತ್ತದೆ ಎಂದು ಗಂಗಣ್ಣ ಹೆದರಿ, ಸುಮ್ಮನಾದ.
ಮನೇಲಿ ಮದುವೆ ಮುಗಿದು ವಾರ ಆಯ್ತು. ಅತ್ತ ಸುಧಾಳಿಂದ ಪತ್ರ ಬಂತು. ತಾನು ಬೆಂಗಳೂರಿನಲ್ಲಿ ಇರುವುದಾಗಿ, ರಮೇಶನೊಂದಿಗೆ ಮದುವೆ ಆಗಿರುವುದಾಗಿ, ತನ್ನ ಬಗ್ಗೆ ಯೋಚನೆ ಬಿಟ್ಟು ನೆಮ್ಮದಿಯಿಂದ ಇರುವಂತೆ ಪತ್ರದಲ್ಲಿ ಬರೆಯಲಾಗಿತ್ತು. ಇದನ್ನು ಕಂಡ ಗಂಗಣ್ಣ ದಂಪತಿ ಕಣ್ಣೀರು ಸುರಿಸುವುದನ್ನು ಬಿಟ್ಟು ಬೇರೇನೂ ಮಾಡಲು ಸಾಧ್ಯವಾಗಲಿಲ್ಲ. ಪತ್ರ ಬಂದು ತಿಂಗಳು ಕಳೆಯುವಷ್ಟರಲ್ಲಿ ಸುಧಾ ಮತ್ತು ರಮೇಶ ಗ್ರಾಮಕ್ಕೆ ಹಿಂದಿರುಗಿದರು.
=
ವಾಪಸ್ಸಾದ ಮಗಳು ಮನೆಗೆ ಬರದೆ ರಮೇಶನ ಮನೆಗೆ ಹೋದಳು. ಓಡಿಹೋದ ಜೋಡಿ ಊರಿಗೆ ಬಂದ ಕೂಡಲೇ ಪಂಚಾಯಿತಿ ನಡೆಸಲಾಯಿತು. ಅಲ್ಲಿ ರಮೇಶನ ತಾಯಿ ಒಂದು ಜೊತೆ ಓಲೆ, ಚಿನ್ನದ ಸರ, 50 ಸಾವಿರ ನಗದು, ವಾಚ್ ವರದಕ್ಷಣೆಯಾಗಿ ನೀಡಿದರೆ ಮಾತ್ರ ಸುಧಾ ತನ್ನ ಮನೆಯ ಸೊಸೆಯಾಗಿರುತ್ತಾಳೆ ಎಂದು ಖಡಾಖಂಡಿತವಾಗಿ ಹೇಳಿದರು. ಇದಕ್ಕೆ ಗಂಗಣ್ಣನ ಕುಟುಂಬದಿಂದ ವಿರೋಧ ವ್ಯಕ್ತವಾಯಿತು. ಎರಡೂ ಕುಟುಂಬಗಳ ನಡುವೆ ಒಮ್ಮತ ಮೂಡದ ಕಾರಣ ಪಂಚಾಯಿತಿ ಬರಖಾಸ್ತಾಯಿತು. ಆದರೆ ಇದರ ಪರಿಣಾಮ ಸುಧಾಳ ಮೇಲೆ ತೀವ್ರವಾಗಿಯೇ ಬೀರಿತು. ಮನೆಯಲ್ಲಿ ಅವಳನ್ನು ಕೆಲಸದವರಿಗಿಂತ ಹೀನಾಯವಾಗಿ ಕಾಣತೊಡಗಿದರು. ಇಡೀ ದಿನ ಮೈಮುರಿಯುವಷ್ಟು ಕೆಲಸ. ತುಸು ಎಚ್ಚರ ತಪ್ಪಿದರೂ ಮೈಮೇಲೆ ಬಾಸುಂಡೆ ಬರುವಂಥ ಹೊಡೆತ. ಇವೆಲ್ಲವೂ ಕಣ್ಣೆದುರಿಗೆ ನಡೆಯುತ್ತಿದ್ದರೂ ಗಂಗಣ್ಣ ಅಸಹಾಯಕನಾಗಿದ್ದ. ಹೀಗಿರುವಾಗಲೇ ಅದೊಂದು ದಿನ ಸುಧಾ ರಮೇಶನ ಮನೆಯಿಂದಳೂ ಕಾಣೆಯಾದಳು. ಆದರೆ ರಮೇಶ ಗ್ರಾಮದಲ್ಲೇ ಇದ್ದ.
ಗಾಬರಿಗೊಂಡ ಗಂಗಣ್ಣ ರಮೇಶನ ಮನೆಗೆ ಹೋಗಿ ವಿಚಾರಿಸಿದರೆ ಉತ್ತರ ಸಿಗಲಿಲ್ಲ. 'ಯಾವನ ಜೊತೆ ಓಡಿ ಹೋದಳೋ? ಹೋಗಿ ಹುಡುಕು' ಎಂಬ ಕೊಂಕು ನುಡಿ ರಮೇಶನ ತಾಯಿಯಿಂದ ಬಂತು. ಇದರಿಂದ ಅವಮಾನ ತಡೆಯಲಾರದ ಗಂಗಣ್ಣ ಠಾಣೆಗೆ ಹೋದ.
=
ಕತೆ ಕೇಳಿದ ಇನ್ಸ್‌ಪೆಕ್ಟರ್‌ಗೆ ಏನು ನಡೆದಿರಬಹುದು ಎಂಬುದು ಸ್ಪಷ್ಟವಾಯಿತು. ಕೂಡಲೇ ಸಿಬ್ಬಂದಿಯೊಂದಿಗೆ ಪರ್ವಗೊಂಡನಹಳ್ಳಿಗೆ ಹೊರಟರು. ರಮೇಶನನ್ನು ಹಿಡಿದು  ವಿಚಾರಣೆ ನಡೆಸಿದರು. ಆರಂಭದಲ್ಲಿ ತನಗೇನೂ ತಿಳಿದಿಲ್ಲವೆಂದು ಹೇಳಿದ ರಮೇಶ ಕೊನೆಗೆ ಪೊಲೀಸರಿಗೆ ನಿಜ ಹೇಳಲೇಬೇಕಾಯಿತು. ಸುಧಾ ಶಾಲೆಗೆ ಹೋಗುವಾಗಲಿಂದ ತಾನು ಅವಳ ಬೆನ್ನು ಬಿದ್ದುದಾಗಿಯೂ ಕೊನೆಗೆ ಅವರ ಮನೆಯವರು ಊರಿನಲ್ಲಿರದ ದಿನ ಅವಳನ್ನು ಕರೆದುಕೊಂಡು ಬೆಂಗಳೂರಿಗೆ ಹೋದುದಾಗಿಯೂ ಹೇಳಿದ. ಅಲ್ಲಿ ಸಂಬಂಧಿಕರ ಮನೆಯಲ್ಲಿದ್ದು, ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಆದರೆ ಇರುವ ಒಬ್ಬನೇ ಮಗ ಹೊಲ ನೋಡಿಕೊಳ್ಳದೆ ಬೆಂಗಳೂರಿನಲ್ಲಿರುವುದನ್ನು ಒಪ್ಪದ ರಮೇಶನ ತಂದೆ ಶಿವಪ್ಪ ಊರಿಗೆ ಬರುವಂತೆ, ಪಂಚಾಯಿತಿ ನಡೆಸಿ ಸರಿಪಡಿಸುವುದಾಗಿ ಹೇಳಿದ ಕಾರಣ ವಾಪಸ್ ಬರಲಾಯಿತು. ಆದರೆ, ಪಂಚಾಯಿತಿಯಲ್ಲಿ ಗಂಗಣ್ಣ ವರದಕ್ಷಿಣೆ ನೀಡಲು ನಿರಾಕರಿಸಿದ ಕಾರಣ ರಮೇಶನ ತಾಯಿ ಸುಧಾಳಿಗೆ ಹಿಂಸೆ ನೀಡತೊಡಗಿದಳು. ಮೊದಲ ಹೆಂಡತಿಯ ಕಾಟವೂ ರಮೇಶನಿಗೆ ಶುರುವಾಗಿತ್ತು.
ಇದರಿಂದ ಬೇಸರಗೊಂಡ ಸುಧಾ ರಮೇಶನನ್ನು ಹಿಯ್ಯಾಳಿಸತೊಡಗಿದ್ದಳು. ಈ ಎಲ್ಲಾ ವಿಚಾರಗಳಿಂದ ಹುಚ್ಚು ಹಿಡಿದಂತಾದ ರಮೇಶ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಕಾಣಿಸಲು ಯೋಜನೆ ರೂಪಿಸಿದ. ಅದೊಂದು ರಾತ್ರಿ ಅವಳ ಕತ್ತು ಹಿಸುಕಿ ಕೊಲೆ ಮಾಡಿದ. ನಂತರ ಭಯ ಶುರುವಾಗಿ ತಂದೆ ತಾಯಿಗೆ ವಿಚಾರ ತಿಳಿಸಿದ. ಮುಂದೆ ಏನು ಮಾಡಬೇಕು ಎಂಬುದು ದಿಕ್ಕು ತೋಚದೆ ಎಲ್ಲರೂ ಗಾಬರಿಯಾಗಿ ತಮ್ಮ ಸಂಬಂಧಿಕರೇ ಆದ ಅದೇ ಗ್ರಾಮದ ನಾಗೇಶ, ಜಗನ್ ಎಂಬ ಇಬ್ಬರನ್ನು ಕರೆ ತಂದು ಸುಧಾಳ ಹೆಣವನ್ನು ಗೋಣಿ ಚೀಲದಲ್ಲಿ ಕಟ್ಟಿ ಅಲ್ಲಿನ ಕೆರೆ ಪಕ್ಕದಲ್ಲಿ ಕೆಸರಿನ ಗುಂಡಿಗೆ ಹಾಕಿ ಮುಚ್ಚಿ, ಮನೆಗೆ ವಾಪಸಾಗಿದ್ದರು. ಈಗಲೂ ಪೊಲೀಸರಿಗೆ ದೂರು ನೀಡುವ ಧೈರ್ಯ ಗಂಗಣ್ಣ ಮಾಡುತ್ತಿರಲಿಲ್ಲ ಸಾರ್. ಪಂಚಾಯಿತಿ ಚುನಾವಣೆಯಲ್ಲಿ ನಾವು ಅವನನ್ನು ಬೆಂಬಲಿಸಲಿಲ್ಲ ಎಂಬ ಕಾರಣಕ್ಕೆ ಪಂಚಾಯಿತಿ ಸದಸ್ಯ ಮಾಡಿದ ಮಸಲತ್ತು ಇದು ಎಂದು ಕೊನೆಯಲ್ಲಿ ಒಂದು ಸಾಲು ಸೇರಿಸಿದ.
=
ಇಷ್ಟೆಲ್ಲ ಕತೆ ಕೇಳಿದ ಇನ್ಸ್‌ಪೆಕ್ಟರ್ ಪಾಲಾಕ್ಷಯ್ಯ, ಸಿಬ್ಬಂದಿಯೊಂದಿಗೆ ರಮೇಶನನ್ನು ಕರೆದುಕೊಂಡು ಗ್ರಾಮಕ್ಕೆ ಹೋದರು. ಅಲ್ಲಿ ಪಂಚನಾಮೆಗಾಗಿ ಗ್ರಾಮದ ನಾಲ್ವರನ್ನು ಕರೆಯಿಸಿ ಅವರ ಸಮ್ಮುಖದಲ್ಲಿ ರಮೇಶ ಹೇಳಿದ ಕೆಸರಿನಲ್ಲಿ ಅಗೆದರು. ಕೊಳೆತ ಸ್ಥಿತಿಯಲ್ಲಿದ್ದ ಸುಧಾಳ ಹೆಣ ಹೊರ ಸಿಕ್ಕಿತು. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಹೆಣವನ್ನು ಗಂಗಣ್ಣನ ಸುಪರ್ದಿಗೆ ನೀಡಿ, ಆರೋಪಿ ರಮೇಶನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ, ನ್ಯಾಯಾಂಗ ಬಂಧನಕ್ಕೆ ಪಡೆಯಲಾಯಿತು.
ಸ್ವಲ್ಪ ದಿನಗಳ ನಂತರ ಕೋರ್ಟ್ ಆರೋಪ ಪಟ್ಟಿಯನ್ನೂ ಸಲ್ಲಿಸಲಾಯಿತು. ಆದರೆ ಕೊಲೆ ಮಾಡಿರುವುದನ್ನು ಕಂಡ ಪ್ರತ್ಯಕ್ಷ ಸಾಕ್ಷ್ಯಗಳಿಲ್ಲದ ಕಾರಣ ಪ್ರಕರಣ ಬಿದ್ದು ಹೋಗುತ್ತದೆ ಎಂದೇ ಎಲ್ಲರೂ ಬಾವಿಸಿದ್ದರು. ಆದರೆ, ವಿಚಾರಣೆ ನಡೆಸಿದ ಕೋರ್ಟ್ ನಾಗೇಶ, ಜಗನ್ ಕೊಲೆಯಲ್ಲಿ ಪಾಲ್ಗೊಂಡಿರುವ ಬಗ್ಗೆ ಯಾವುದೇ ಆಧಾರಗಳಿಲ್ಲವೆಂದು ಅವರನ್ನು ಖುಲಾಸೆಗೊಳಿಸಿತು. ಪ್ರಮುಖ ಆರೋಪಿ ರಮೇಶ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು, ಅಕ್ರಮವಾಗಿ ಅಪ್ರಾಪ್ತಳನ್ನು ಕೂಡಿಹಾಕಿರುವುದು ಮತ್ತು ಸುಧಾ ಸಾಯುವ ಮುನ್ನ ರಮೇಶನ ಮನೆಯಲ್ಲಿದ್ದಳು ಎಂಬುದನ್ನು ಸಾಬೀತು ಪಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಹಾಗಾಗಿ, ರಮೇಶನೇ ಕೊಲೆ ಮಾಡಿರುವುದಾಗಿ ನಂಬಿದ ಕೋರ್ಟ್ ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿ ತೀರ್ಪು ನೀಡಿತು. ತಪ್ಪು ಮಾಡಿದ ಆರೋಪಿಗೆ ಶಿಕ್ಷೆಯಾಯಿತು ನಿಜ. ಆದರೆ ಇದು ತಿಳಿದ ರಮೇಶನ ತಂದೆ ಶಿವಪ್ಪ ಅದೇ ಕೊರಗಿನಲ್ಲಿ ಸಾವನ್ನಪ್ಪಿದರು. ಮಗಳನ್ನು ಕಳೆದುಕೊಂಡ ಗಂಗಣ್ಣ ಕುಟುಂಬದ ದುಃಖಕ್ಕೆ ಎಲ್ಲೆಯಿರಲಿಲ್ಲ. ಹದಿಹರೆಯದ ವಯಸ್ಸಿನಲ್ಲಿ ಸರಿಯಾದ ಮಾರ್ಗದರ್ಶನವಿಲ್ಲದ ಅದೆಷ್ಟೋ ಜನ ಹೆಣ್ಣು ಮಕ್ಕಳ ಸ್ಥಿತಿ ಇದೇ ಆಗಿರಬಹುದು. ಹಾಗಂತ ಪ್ರೀತಿ ಪ್ರೇಮ ತಪ್ಪು ಎಂದು ಅರ್ಥವಲ್ಲ. ಅದಕ್ಕೆ ತಕ್ಕ ವಯಸ್ಸು, ಸಮಯ ಮುಖ್ಯ ಎಂಬುದನ್ನು ಮರೆಯಬಾರದು. ಅಲ್ಲವೇ?


-ಅಶ್ವತ್ಥನಾರಾಯಣ್ ಎಲ್.
sathyajns@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com