ಇಂದು ಸಮಾಜ ತೋರಿಕೆಯ ಧರ್ಮಾಚಾರಗಳಿಂದ ತುಂಬಿದೆ. ಜನರು ಕಾನೂನಿಗೆ ವಿಧೇಯರಾಗಿದ್ದಾರೆಯೇ ಹೊರತು ಅಂತಃಕರಣದ ಆತ್ಮಸಾಕ್ಷಿಗೆ ನಿಷ್ಠರಾಗಿಲ್ಲ. ಇದು ಸಮಾಜದ ನೈತಿಕ ಮೌಲ್ಯಗಳು ಇಳಿಮುಖವಾಗಲು ಕಾರಣವಾಗಿದೆ. ನಾಗರಿಕ ಸಮಾಜ ಆಧ್ಯಾತ್ಮಿಕ ಸಮಾಜದ ಮೇಲೆ ಸವಾರಿ ನಡೆಸುತ್ತಿರುವ ಪರಿಣಾಮವಿದು. ಇದು ಮನುಷ್ಯರಲ್ಲಿ ಆಷಾಢಭೂತಿತನ, ತೋರಿಕೆಯ ಸುಖ, ಸೋಗಲಾಡಿತನ, ಭೋಗವಿಲಾಸ, ಪ್ರತಿಷ್ಠೆಯ ಪ್ರದರ್ಶನಗಳಿಗೆ ಆಶ್ರಯ ನೀಡಿದೆ.
'ನಾನೆಂದಿಗೂ ಸುಳ್ಳಿನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾರೆ; ಸುಳ್ಳಿನೊಂದಿಗೆ ಸಾಮರಸ್ಯದಿಂದಿರಲಾರೆ. ಅದು ನನಗೆ ಸಾಧ್ಯವೇ ಇಲ್ಲ. ಅಂಜಿಕೆಯಿಲ್ಲದೆ, ಲೆಕ್ಕಾಚಾರದ ಬುದ್ಧಿಯಿಲ್ಲದೆ, ಶತ್ರುಗಳನ್ನಾಗಲಿ, ಮಿತ್ರರನ್ನಾಗಲಿ ಲೆಕ್ಕಿಸದೆ ಸತ್ಯವನ್ನು ಹಿಡಿದುಕೊಳ್ಳಿ. ಈ ಕ್ಷಣದಿಂದಲೇ ಭೋಗವನ್ನು, ಪೊಳ್ಳುತನವನ್ನು ತ್ಯಜಿಸಿಬಿಡಿ. ಸತ್ಯ ಮಾತ್ರವೇ ನಿಮಗೆ ದಾರಿ ತೋರಲಿ. ಜಗತ್ತು ಎಂದು ಕರೆಯುವ ಈ ಮೂರ್ಖತನದ ಬಲೆಯಿಂದ ನಿಮಗೆ ಸಾಧ್ಯವಿದ್ದರೆ ಹೊರಗೆ ಬನ್ನಿ. ಆಗ ನಾನು ನಿಮ್ಮನ್ನು ನಿಜಕ್ಕೂ ಧೀರರು ಮತ್ತು ಮುಕ್ತರು ಎಂದು ಕರೆಯುತ್ತೇನೆ. ನಿಮಗದು ಸಾಧ್ಯವಾಗದಿದ್ದರೆ, ಈ ಸಮಾಜವೆಂಬ ಸುಳ್ಳು ದೇವರನ್ನು ನೆಲಕ್ಕೆ ಅಪ್ಪಳಿಸಿ ಅದರ ಕೊನೆಯಿಲ್ಲದ ಮಿಥ್ಯಾಚಾರವನ್ನು ಕಾಲಿನಡಿ ಹೊಸಕಿಹಾಕಿದವರಿಗೆ ಜಯಘೋಷ ಮಾಡಿ. ಸಾಧ್ಯವಾಗದಿದ್ದರೆ ಬಾಯಿಮುಚ್ಚಿಕೊಂಡಿರಿ.'
'ಈ ಮತಪಂಥಗಳಿಂದ, ಧರ್ಮಗಳಿಂದ, ಧರ್ಮಗುರುಗಳಿಂದ, ಮುಕ್ತರಾಗಿ'.
-ಆನಂದ ಎಸ್.ಎನ್.