ಕಟ್ಟಿಮನೆ

ಹೊಸ ಮನೆ ಕಟ್ಟುವವರಿಗೆ ಮಾದರಿಯಾಗಿರುವ ಈ ಮನೆಯಲ್ಲಿ ಭಿನ್ನತೆಯೊಂದಿಗೆ ನಶಿಸುತ್ತಿರುವ ಸಾಂಪ್ರದಾಯಿಕ ವಾಸ್ತು ಶೈಲಿಯ ಶ್ರೀಮಂತಿಕೆ ಇದೆ.
ಕಟ್ಟಿಮನೆ
Updated on: 

ಹೊಸ ಮನೆ ಕಟ್ಟುವವರಿಗೆ ಮಾದರಿಯಾಗಿರುವ ಈ ಮನೆಯಲ್ಲಿ ಭಿನ್ನತೆಯೊಂದಿಗೆ ನಶಿಸುತ್ತಿರುವ ಸಾಂಪ್ರದಾಯಿಕ ವಾಸ್ತು ಶೈಲಿಯ ಶ್ರೀಮಂತಿಕೆ ಇದೆ. ಮನೆಯ ಎಲ್ಲಾ ಮನಕ್ಕೂ ಒಂದಷ್ಟು ಜಾಗ ಇರುವಂತೆ ನೋಡಿಕೊಳ್ಳಲಾಗಿದೆ.

ಆ ಮನೆಯ ನೆನಹುಗಳು ಜೀವನದಲ್ಲಿ ಮಾಸಲೇ ಇಲ್ಲ. ಅವರು ಅಭಿನಯಿಸುವ ನಾಟಕಗಳಲ್ಲೂ ಅದರದ್ದೇ ಪ್ರತಿಬಿಂಬ. ಅಪ್ಪ ಕಟ್ಟಿದ ಹುಲುಗಜ್ಜನ ಮನೆಯ ಮಾದರಿ ಜೀವದಲ್ಲಿ ಬೇರೂರಿ ಹೊಗಿತ್ತು. ಹದಿನಾರಂಕಣದ ಆ ಮನೆ ಅವರ ಪಾಲಿಗೆ ಕೇವಲ ಮನೆಯಾಗಿರಲಿಲ್ಲ. ಅದು ಬದುಕಿನ ಜೀವಾಳ. ಸಂಸ್ಕೃತಿಯ ಸಂಕೇತ. ಸ್ವಂತ ಮನೆಯ ಕನಸಿಗೂ ಅದೇ ಪ್ರೇರಣೆಯಾಗಬಾರದೇಕೆ? ಆ ದಂಪತಿ ಯೋಚಿಸಿದರು, ಯೋಜಿಸಿದರು, ಕಟ್ಟಿನಿಲ್ಲಿಸಿಯೇಬಿಟ್ಟರು; ಮೈಸೂರಿನಲ್ಲೊಂದು ಮಲ್ನಾಡ್ ಹಳ್ಳಿ ಮನೆಯೋಂದನ್ನು! ಇವತ್ತಿಗದು ಸುತ್ತೆಲ್ಲದವರ ಗಮನ ಸೆಳೆಯುತ್ತಿದೆ.
  ಅವರು ಮೈಸೂರಿನ ರಂಗಾಯಣ ಕಲಾವಿದರಾದ ಹುಲುಗಪ್ಪ ಕಟ್ಟಿಮನಿ ಹಾಗೂ ಪ್ರಮೀಳಾ ಬೆಂಗ್ರೆ ದಂಪತಿ. ಎಲ್ಲ ದಂಪತಿಗಳಂತೆ ಮನೆ ಕಟ್ಟಿ ನೋಡುವ ಉತ್ಸಾಹಕ್ಕೆ ಧುಮುಕಿದವರು. ಎಲ್ಲರಿಗಿಂಥ ಭಿನ್ನವಾಗಿ ಗುರಿಮುಟ್ಟಿದವರು.
ಅಪ್ಪ ಕಟ್ಟಿದ ಮನೆಯ ಗುಂಗಿನಲ್ಲೇ ಇದ್ದ ಕಟ್ಟಿಮನೆಯವರನ್ನು, ರಂಗಕರ್ಮಿ ಎ.ಜಿ. ಚಿದಂಬರ ರಾವ್ ಅವರು ವಾಸ್ತವ ಶೈಲಿಯ ನಾಟಕಕ್ಕೆ ಹಾಕಿಸುತ್ತಿದ್ದ ಚಿರೀ ಬಂದಿವಾಡೆ ಶೈಲಿಯ ರಂಗಸಜ್ಜಿಕೆ ಆಕರ್ಶಿಸತೊಡಗಿತ್ತು. ರಂಗಾಯಣದ ಕೆಲಸದ ನಿಮಿತ್ತ ಕಟ್ಟಿಮನಿ ಧಾರವಾಡಕ್ಕೆ ಹೋದಾಗೆಲ್ಲ ನರೇಂದ್ರ ಎಂಬ ಹಳ್ಳಿಯಲ್ಲಿದ್ದ ದ್ಯಾಮಣ್ಣ ಬಡಗಿಯ ಕಲಾತ್ಮಕತೆಗೆ ಮಾರು ಹೋಗುತ್ತಿದ್ದರು. ಮರ- ಮುಟ್ಟುಗಳ ಹೆಬ್ಬಾಗಿಲು, ಹಿತ್ತಲಬಾಗಿಲು ಒಂದೇ ನೇರದಲ್ಲಿ. ನಡುಮನೆಯಲ್ಲಿ ತಂಪಾದ ಗಾಳಿ ಕಂಡಾಗ ಅಂಥದ್ದೇ ಮನೆ ಕಟ್ಟುವ ಹಂಬಲ. ಮತ್ತೆ ಮಂಗಳೂರಿಗೆ ಹೋದರೆ ಅಲ್ಲೂ ಮನ ಸೆಳೆವ ಮನೆಯ ದರ್ಶನ. ಗೆಳೆಯ ಪ್ರಶಾಂತ ಹಿರೇಮಠ ಕಟ್ಟಿದ್ದ ಕಂಬಗಳ ಮನೆ ಅದಾಗಿತ್ತು.
ಕಂಬದ ಕೈಚಳಕ
ಅಷ್ಟರಲ್ಲಿ ಯೋಗರಾಜ ಭಟ್ಟರ 'ಪರಮಾತ್ಮ' ಸಿನೇಮಾದ ಪುರಾತನ ಕಂಬಗಳನ್ನು ಕಂಡು ಹೀಗೂ ಉಂಟೆ ಎಂದುಕೊಂಡರು. ಹಾಗೊಮ್ಮೆ ಷಡ್ಡಕ ಮಂಗಳೂರಿನ ಮಂಗಳದಾಸ ಗುಪ್ತ ಅವರ ಮನೆಗೆ ಹೋಗಿದ್ದಾಗ ಹಳೆಯ ಕಂಬಗಳನ್ನು ಮಾರುವ ಕೈಕಂಬಕ್ಕೆ ಹೋಗಿಯೇಬಿಟ್ಟರು. ಉಸ್ಮಾನ್ ಎಂಬವರು ಅಲ್ಲಿ ರೈನ್‌ಬೋ ಆಂಟಿಕ್ ಶಾಪ್ ನಡೆಸುತ್ತಾರೆ. ಅಲ್ಲಿ ಕಟ್ಟಿಮನಿಯವರಿಗೆ ತಮ್ಮ ಮನೆಯ ವಿನ್ಯಾಸ ಕಾಣಿಸಿತು. ಅಲ್ಲಿಯೇ ಚೌಕಾಶಿಗಿಳಿದರು. ಕಂಬ, ಕಿಟಕಿ, ಬಾಗಿಲು, ಬೋದಿಗೆಗಳ ಖರೀದಿ ಆಯಿತು.

ಸವಿನೆನಪುಗಳ ಸಾಲೇ...
ಕಟ್ಟಿಮನಿ ಮೂಲತಃ ನಾರಾಯಣದೇವರ ಕೆರೆಯವರು. ತುಂಗಭದ್ರಾ ನದಿಗೆ ಅಣೆಕಟ್ಟೆ ನಿರ್ಮಿಸಿದಾಗ ಅವರ ಊರು ಮುಳುಗಡೆಯಾಯಿತು. ಇದು 63 ವರ್ಷಗಳ ಹಿಂದಿನ ಕಥೆ. ಅಣೆಕಟ್ಟೆಯಿಂದ ಸಂತ್ರಸ್ತರಾದವರನ್ನು ಸ್ಥಳಾಂತರಿಸಲಾಯಿತು. ಆಗ ಕಟ್ಟಿಮನಿಯವರ ತಂದೆ- ತಾಯಿ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಗೆ ಬಂದು ನೆಲೆನಿಂತರು. ತಂದೆ ಪಕ್ಕೀರಪ್ಪ, ತಾಯಿ ಬರಮವ್ವರಿಗೆ ಹೊಸ ಜಾಗದಲ್ಲಿ ಹೊಸ ಮನೆಗೆ ಮಾದರಿಯಾದದ್ದೂ ಹುಲುಗಜ್ಜನ (ತಾಯಿಯ ತಂದೆ) ಮನೆಯೇ. ಅದೇ ವಿನ್ಯಾಸದಂತೆ ಅಲ್ಲಿ ಹೊಸ ಮನೆ ತಲೆ ಎತ್ತಿತ್ತು.
 ಅದಾದರೂ ಎಂಥ ಮನೆ? ಹದಿನಾರು ಕಂಬಗಳ ಪಡಸಾಲೆಯ ಮನೆ. ನಾಗೊಂದಿಗೆಗಳು, ಅಡಕಲು ಗಡಿಕೆಗಳು, 20-30 ದನಗಳನ್ನು ಕಟ್ಟುವ ಕೊಟ್ಟಿಗೆ, ಮೇವು ಕತ್ತರಿಸುವ ಜಾಗ ಮತ್ತು ಮೇವಿನ ಅಟ್ಟ, ಸಂಜೆ ಕಿಟಕಿ ಹತ್ತಿ ಕಡ್ಲೆ ಬೆಲ್ಲ ತಿನ್ನುತ್ತಿದ್ದ ಜಾಗ, ಹಾಲು- ಮೊಸರು ಇಡಲು ಕಟ್ಟಿದ್ದ ನಲುವು, ನಾಗರಪಂಚಮಿಗೆ ಪಡಸಾಲೆಯಲ್ಲಿ ಕಟ್ಟುತ್ತಿದ್ದ ಜೋಕಾಲಿ, ಪಡಸಾಲೆಯ ಉದ್ದಕ್ಕೂ ಕಟ್ಟಾಗಿಸಿದ್ದ ದೇವರಪಟಗಳು, ಹೊರಗೆ ದೊಡ್ಡ ಅಂಗಳ... ಆ ಮನೆಯ ವೈಭವಕ್ಕೆ ಅದೇ ಸಾಟಿ!
ಮನೆಯ ಮುಂದಿನ ಅಂಗಳದಲ್ಲಿ ಹಗಲಿನಲ್ಲಿ ಗೋಲಿ, ಬುಗುರಿ ಆಟ, ಕೊಯ್ಲಾದ ಕಾಳು-ಕಡಿ ಒಣಗಿಸಿರುತ್ತಿದ್ದ ಸೊಗಸು, ರಾತ್ರಿ ಪಡಸಾಲೆಯಲ್ಲಿ ಕಂದೀಲು, ಅಡುಗೆ ಮನೆಯಲ್ಲಿ ಎಣ್ಣೆ ದೀಪ, ಮನೆ ಮುಂದಿನ ಬೇವಿನ ಮರ, ಆಟದ ಮದ್ದಳೆ ಇಡುವ ನಾಗೊಂದಿಗೆ, ಕಾಲುಪೆಟ್ಟಿಗೆ ಇಡುವ ಮೂಲೆ, ಮಜ್ಜಿಗೆ ಕಡೆಯುವ ಕಂಬ, ಯಾವುದೇ ಪತ್ರ, ರಶೀದಿ ಬಂದರೂ ತಂತಿಯಿಂದ ಚುಚ್ಚಿಸಿಕೊಂಡು ನೇತಾಡುವ ಕಾಗದಗಳ ಗುಚ್ಚ, ಸ್ನಾನದ ದೊಡ್ಡ ಬಚ್ಚಲು, ಗೂಟದಲ್ಲಿ ನೇತಾಕಿದ ನೀರು ಸೇದುವ ಹಗ್ಗ, ಕೊಟ್ಟಿಗೆಯಲ್ಲಿ ಕಂಟಿ, ರಂಟಿ, ಮೇಣಿ, ಬಿತ್ತುವ ಕೂರಿಗಿ, ನೊಗವಿಡುವ ಜಾಗ, ಮಿಣಿ, ಬಾರುಕೋಲು, ಎತ್ತಿನ ಬಾಯಿಗೆ ಕಟ್ಟುವ ಚಿಕ್ಕಗಳನ್ನು ನೇತಾಕಿಕೊಂಡ ಮರದ ಕೊಕ್ಕೆ, ಹರಿತವಾದ ಕುರ್ಚಿ, ಕುಡುಗೋಲುಗಳೊಂದಿಗೆ ಮಕ್ಕಳಿಗೆ ಸಿಗದಂತೆ ನೇತಾಕಿದ ನೆಸಗಣಿ... ಜೊತೆಗೆ ಮರದ ದೊಡ್ಡ ಪೆಟ್ಟಿಗೆ... ಎಲ್ಲವೂ ಸವಿನೆನಪುಗಳ ಸಾಲೇ. ಇವು ಕಟ್ಟಿಮನಿ ಅವರ ನೆನಪಿನಂಗಳದಿಂದ ಮಾಸುವ ಪ್ರಶ್ನೆಯೇ ಇರಲಿಲ್ಲ. ಹೀಗಾಗಿ ಅವರು ಅಭಿನಯಿಸುವ ನಾಟಕಗಳಲ್ಲೂ ಇವುಗಳದ್ದೇ ಘಮಲು. <

ಕೈಕಂಬ ಸೇರುತ್ತಿರುವ ಮಲೆನಾಡು
ಮಲೆನಾಡಿನ ಬಹುತೇಕ ಮಂದಿ ಕಲಿತು ಬೆಂಗಳೂರು, ಅಮೆರಿಕ ಎಂದು ದೇಶ- ವಿದೇಶಗಳಲ್ಲಿ ನೆಲೆ ನಿಂತಿದ್ದಾರೆ. ಪರಿಣಾಮ ಎಲ್ಲ ಹಳ್ಳಿಗಳಂತೆ ಮಲೆನಾಡ ಹಳ್ಳಿಗಳು ವೃದ್ಧಾಶ್ರಮಗಳಾಗಿವೆ. ಇಲ್ಲವೇ ಹಳೆಯ ಮಲೆನಾಡ ಶೈಲಿಯ ಮನೆಗಳು ಹೋಗಿ ಹೊಸ ಶೈಲಿಯ ಮನೆಗಳು ಬಂದು, ಕಾಂಕ್ರಿಟ್ ಕಾಡಾಗುತ್ತಿವೆ. ಹಳೆಯ ಮನೆಗಳ ಕಿಟಕಿ, ಬಾಗಿಲುಗಳು, ಕಂಬಗಳು ಮಂಗಳೂರಿನ ಕೈಕಂಬದ ಉಸ್ಮಾನ್ ಅವರಂಥವರ ಅಂಗಡಿಗಳನ್ನು ಸೇರುತ್ತಿವೆ.
 ಉಸ್ಮಾನ್ ಅಂಗಡಿಯಲ್ಲಿ ಎನಿಲ್ಲ ಎಂದು ನೀವು ಕೇಳಬೇಕು. ಕೆತ್ತನೆಯ ಕಂಬಗಳು, ಬಾಗಿಲುಗಳು, ಕಂಬದ ಬೋದಿಗೆಗಳು, ಮಂಚ. ಅಕ್ಕಿ ತುಂಬುವ ಬಳ್ಳ, ಮರದ ದೊಡ್ಡ ಪೆಟ್ಟಿಗೆಗಳು, ಕುರ್ಚಿಗಳು, ಮೈಸೂರು ಮಹಾರಾಜರ ಬಳಿಯೂ ಇದ್ದಿರಲಾರದ ಕೆತ್ತನೆಯ ಕುಸುರಿಯ ಮರದ ಎತ್ತಿನಗಾಡಿ, ಒಗ್ಗರಣೆ ಸಾಮಗ್ರಿ ಇಡುತ್ತಿದ್ದ ಮರದ ಮರಿಗೆ... ಹೀಗೆ ಗತಿಸಿದ ಮಲೆನಾಡಿನ ಬದುಕೇ ಆತನ ಅಂಗಡಿಯಲ್ಲಿವೆ ಎನ್ನುತ್ತಾರೆ ಕಟ್ಟಿಮನಿ.

ಆತ ಅವುಗಳೊಂದಿಗೆ ಪ್ರೀತಿಯಿಂದ ಕೊಟ್ಟ ಎರಡು ಕಂಬಗಳನ್ನೂ ಮೈಸುರಿಗೆ ಹೊತ್ತು ತಂದರು. ಕೆಲವನ್ನು ದಾಂಡೇಲಿಯಿಂದಲೂ ತರಿಸಲಾಯಿತು.
1998ರಲ್ಲಿ ಗೆಳೆಯ ಯೋಗೇಶ್ ಬಲವಂತ ಮಾಡಿ ಕೊಡಿಸಿದ್ದ ನಿವೇಶನಕ್ಕೆ ಈಗ ಅರ್ಥಬರಲಾರಂಭಿಸಿತ್ತು.  ಮೈಸೂರಿನ ರೂಪಾನಗರದ ರೂವಾರಿ ಸುವರ್ಣ ಅವರಿಂದ ಖರೀದಿಸಿದ್ದ 60 ್ಢ 40 ನಿವೇಶನ ಮಾತಾಡತೊಡಗಿತ್ತು. ವಿನ್ಯಾಸಕಿ ಮರೀನಾ ಪ್ರಸಾದ್, ಎಂಜಿನಿಯರ್ ರಮೇಶ್, ತೇಜಸ್ವಿ, ಮನು ಮತ್ತು ತಂಡ ಆಗಾಗ ಆ ನಿವೇಶನದತ್ತ ಬಂದುಹೋಗತೊಡಗಿದರು. ಮೆಲುದನಿಯ ಕೆಂಚ ಮೇಸ್ತ್ರಿಯ ಉಸ್ತುವಾರಿಯಲ್ಲಿ ಮನೆ ಆರಂಭವಾಗಿಯೇ ಬಿಟ್ಟಿತು.    ಧಾರವಾಡದ ಕೇಶವ ಬಡಿಗೇರ ಅವರು ದ್ಯಾಮಣ್ಣ ಅವರ ಕೈಕಂಬದಲ್ಲಿ ಮಾದರಿಯಲ್ಲೇ ಮನೆಯ ಹೆಬ್ಬಾಗಿಲನ್ನು ಕೆತ್ತಿ ನಿಲ್ಲಿಸಿದರು. ಮೋಹನ್, ಪ್ರಭು, ಸುಂದರ್, ಜಾನ್, ಭಾಗ್ಯಮ್ಮ, ಕುಮಾರ ಇವರ ಕೈಚಳಕವೂ ಇದರಲ್ಲಿ ಒಗ್ಗೂಡಿತು.
ಮರೀನಾ ಪ್ರಸಾದ್‌ರದ್ದು ಪರಿಸರ ಸ್ನೇಹಿ ಮನೆಗಳ ವಿನ್ಯಾಸದಲ್ಲಿ ಎತ್ತಿದ ಕೈ. ಪಾರಂಪರಿಕ, ಸಾಂಪ್ರದಾಯಿಕ ವಾಸ್ತುಶಿಲ್ಪ ಹಾಗೂ ಆಧುನಿಕ ವಾಸ್ತುಶಿಲ್ಪವನ್ನು ಹದವಾಗಿ ಬೆರೆಸಿ, ಭಿನ್ನ ಪರಿಸರ ಸ್ನೇಹಿ, ಜೀವನಶೈಲಿಗೆ ಜೀವ ತುಂಬುವ ಮನೆಗಳ ವಿನ್ಯಾಸದ ಹೆಗ್ಗಳಿಕೆ ಅವರದ್ದು. ಕಟ್ಟಿಮನಿ ಮನೆ ಕೂಡ ಅದೇ ರೀತಿ ಇದೆ. ಎಂಜಿನಿಯರ್ ರಮೇಶ್ ಮತ್ತು ತಂಡ ಪರ್ಯಾಯ ವಸ್ತುಗಳನ್ನು ಬಳಸಿ, ಕಡಿಮೆ ವೆಚ್ಚದಲ್ಲಿ ಅಂದರೆ ಅನಗತ್ಯ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ, ಸರಳ, ಸುಂದರವಾಗಿ ಯೋಜಿಸಿದ್ದಾರೆ. ಕೊನೆಗೂ ಕಂಬದ ಮನೆ ಕಟ್ಟಿ ಮುಗಿದು ಇತ್ತೀಚೆಗಷ್ಟೇ ಗೃಹಪ್ರವೇಶ ಮಾಡಿದ್ದಾರೆ ಕಟ್ಟಿಮನಿ.

ಹೇಗಿದೆ ನಮ್ಮನೆ?
ಇವತ್ತು ನೀವು ಮನೆಯ ಎದುರು ನಿಲ್ಲುತ್ತಿದ್ದಂತೆಯೇ ಮಲೆನಾಡು ನೆನಪಿಗೆ ಬರುತ್ತದೆ. ಪಕ್ಕಾ ಅದೇ ಶೈಲಿಯ ಹೆಬ್ಬಲಸಿನ ಕಂಬಗಳು, ಕಿಟಕಿಗಳು ಆಕರ್ಷಿಸುತ್ತವೆ. ಸಣ್ಣ, ಸಣ್ಣ ಗಾಲಿಗಳಿಂದ ಕೂಡಿದ ಕಿಟಕಿಗಳು ವಾಯುಮಾಲಿನ್ಯವನ್ನು ತಪ್ಪಿಸುತ್ತವೆ. ಶಬ್ದ ಮಾಲಿನ್ಯವನ್ನು ತಡೆಯುತ್ತವೆ. ಮನೆಯ ಒಳಕ್ಕೆ ತಂಪಾದ ಗಾಳಿ ಪ್ರವೇಶಿಸುವಂತೆ ನೋಡಿಕೊಳ್ಳುತ್ತವೆ. ದಿಡ್ಡಿಬಾಗಿಲಿನಲ್ಲಿ ಎರಡೂ ಕಡೆಯೂ ಸಿಂಹಗಳನ್ನು ಕೆತ್ತನೆ ಮಾಡಲಾಗಿದೆ. ಉತ್ತರ ಕರ್ನಾಟಕದ ಗಂದೊಟ್ಟಿಗೆ ಶೈಲಿಯ ಈ ಬಾಗಿಲುಗಳು ಗಮನ ಸೆಳೆಯುತ್ತವೆ. ಹಾಲ್‌ನಲ್ಲಿರುವ ದೇವರ ಮನೆಯೂ ವಿಶಿಷ್ಟ. ಇದಕ್ಕೆ ಸುಮಾರು 200 ವರ್ಷಗಳಷ್ಟು ಹಳೆಯದಾದ ಬಾಗಿಲು ಬಳಸಲಾಗಿದೆ. ಓಪನ್ ಕಿಚನ್, ಒಂದು ಕೊಠಡಿ ಇದೆ. ನೆಲಕ್ಕೆ ಬೇತಂ ಚರ್ಲ ಕಲ್ಲುಗಳನ್ನು ಬಳಸಲಾಗಿದೆ.
ಇನ್ನು ಮೊದಲ ಮಹಡಿಯಲ್ಲಿ ಎರಡು ಕೊಠಡಿಗಳು, ಒಂದು ಅಧ್ಯಯನ ಕೊಠಡಿ. ಗ್ರಂಥಾಲಯ. ಅಲ್ಲಿ ಹಾಕಲಾಗಿರುವ ಮೇಜು, ಆಲ್ಮೇರಾ ಹಾಗೂ ಕಪಾಟುಗಳುಳ್ಳ ಮಂಚ ಕೂಡ ಹಳೆಯ ಕಾಲದ್ದೇ.
ಮನೆಯ ಹೊರಗೆ ಹಳ್ಳಿಗಳಲ್ಲಿ ಇರುವಂತೆಯೇ ವಿಶಾಲ ಜಗುಲಿ. ಸಂಜೆ ವೇಳೆ ಅಲ್ಲಿ ಮನೆಯ ಮಹಿಳೆಯರು- ಮಕ್ಕಳು, ಬಂಧುಗಳು ಕೂಡಿ ಹರಟಬಹುದು. ಪೂರ್ವಾಭಿಮುಖ ದ್ವಾರದ ಜಾಗವನ್ನು ಕೋರ್ಟ್ ಯಾರ್ಡ್ ಅಂದರೆ ತಮ್ಮ ನಾಟಕಗಳ ಮುಕ್ತ ರಿಹರ್ಸಲ್ ಜಾಗವಾಗಿ ಮಾಡಿಕೊಂಡಿದ್ದಾರೆ. ಮಳೆ ಕೊಯ್ಲು ಪದ್ದತಿ ಅಳವಡಿಸಿಕೊಂಡಿದ್ದಾರೆ. ಹೊಂಗೆ, ಬೇವಿನ ಮರಗಳಿಂದ ಕೂಡಿದ ಪುಟ್ಟ ಉದ್ಯಾನ ಕೂಡ ಸಿದ್ಧವಾಗುತ್ತಿದೆ.
  ಕಟ್ಟಿಮನಿ- ಪ್ರಮೀಳಾ ಕಲಾವಿದರಾಗಿ ಮೈಸೂರಿಗೆ ಬಂದು 25 ವರ್ಷಗಳಾಗಿವೆ. ಮಗಳು ಕುಂತಿ ಬಿ.ಆರ್ಕ್ ಓದುತ್ತಿದ್ದಾರೆ. ಮಗ ಕಣ್ವ 4ನೇ ತರಗತಿ. 'ಮಗನಿಗೆ 'ಮುತ್ತುಗ' ಎಂಬ ಹೆಸರಿಡಬೇಕು ಎಂದುಕೊಂಡಿದ್ದೆವು. ಆಗಿರಲಿಲ್ಲ. ಈಗ ಮನೆಗೆಆದೇ ಹೆಸರಿಟ್ಟಿದ್ದೇವೆ' ಎಂದು ಸಂಭ್ರಮಿಸಿದರು ಕಟ್ಟಿಮನಿ. ಇನ್ನೂ ಕುತೂಹಲಕಾರಿ ಸಂಗತಿ ಎಂದರೆ ಮುತ್ತುಗದ ಪ್ರವೇಶಾಹ್ವಾನ ಪತ್ರಿಕೆಯಲ್ಲಿ ಈ ಎಲ್ಲ ವಿವರಗಳೊಂದಿಗೆ ತಾವು ಹುಟ್ಟಿ ಬೆಳೆದ ಹಳ್ಳಿಯ ನೆನಪನ್ನೂ ದಾಖಲಿಸಿ ಭಿನ್ನತೆ ಮೆರೆದಿದ್ದಾರೆ. ಅವರನ್ನು ಅಭಿನಂದಿಸುವ ಇಚ್ಛೆ ಇದ್ದರೆ ಸಂಪರ್ಕ: 97439 12770
ಅಂಶಿ ಪ್ರಸನ್ನಕುಮಾರ್
ಚಿತ್ರ: ಎಸ್. ಮಂಜುನಾಥ್, ಕಟ್ಟಿಮನಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com