ಲೌಕಿಕ ಜೀವನದಲ್ಲಿ ಮುಳುಗಿದಾಗ ಆಧ್ಯಾತ್ಮಿಕ ಪ್ರಪಂಚ ಅಗೋಚರವಾಗುತ್ತದೆ. ಪ್ರಾಪಂಚಿಕ ಆಸೆಗಳಿಗೆ ಒಳಗಾಗಿ ಗಳಿಸುವ ಭರದಲ್ಲಿ ತನ್ನ ಯೌವ್ವನ, ಶಕ್ತಿಗಳನ್ನು ಕಳೆದುಕೊಂಡು ಕೊನೆಗಾಲದಲ್ಲಿ ಸಾರ್ಥಕ ಬದುಕಿಗೆ ಹಂಬಲಿಸುವುದು, ಮನಃಶಾಂತಿಗಾಗಿ ಎಲ್ಲೆಲ್ಲೋ ಹುಡುಕಾಡುವುದು ಸಾಮಾನ್ಯ ಸಂಗತಿಯಾಗಿದೆ. ಅದರ ಬದಲು ಬದುಕನ್ನು ಸ್ವಾರ್ಥಮುಕ್ತಗೊಳಿಸಿ, ತ್ಯಾಗ ಮತ್ತು ಸೇವೆಗಳೊಂದಿಗೆ ಮುನ್ನಡೆಸಿ.
'ಸತ್ಯವು ತನ್ನ ಆಧಾರದ ಮೇಲೆ ತಾನು ನಿಲ್ಲುತ್ತದೆ ಮತ್ತು ಎಂಥ ಅಗ್ನಿಪರೀಕ್ಷೆಯನ್ನೂ ಎದುರಿಸಬಲ್ಲದು. ನನ್ನ ಗಮನವೆಲ್ಲ ಮಾನವರ ಕಡೆಗೆ; ವ್ಯಕ್ತಿಯನ್ನು ಶಕ್ತಿವಂತನನ್ನಾಗಿ ಮಾಡುವುದರ ಕಡೆಗೆ. ಪ್ರತಿಯೊಬ್ಬನೂ ತನ್ನನ್ನು ತಾನು ಆತ್ಮ ಎಂದು ಅರಿತುಕೊಳ್ಳುವಂತೆ ಮಾಡುವುದರ ಕಡೆಗೆ.'
'ಆತ್ಮವಂಚನೆ ಮಾಡಿಕೊಳ್ಳಬೇಡಿ. ಸತ್ಯವನ್ನು ಆ ಮತದಲ್ಲೋ ಈ ಮತದಲ್ಲೋ ಪಡೆದುಕೊಳ್ಳುತ್ತೀರೆಂದು ನಿರೀಕ್ಷಿಸಬೇಡಿ. ಅದು ನಿಮ್ಮೊಳಗೇ ಇದೆ. ನಿಮ್ಮ ಮತ ಅದನ್ನು ನಿಮಗೆ ಕೊಡುವುದಿಲ್ಲ. ನೀವು ಅದನ್ನು ನಿಮ್ಮ ಮತಕ್ಕೆ ಕೊಡಬೇಕು. ಇರುವುದೆಲ್ಲ ಒಂದೇ, ತತ್ತ್ವಮಸಿ! ನೀನು ಅದೇ ಆಗಿದ್ದೀಯೆ!'
'ಗಾಳಿ ಮೇಲೇರಿದಾಗ ಅಲ್ಲಿ ಉಂಟಾದ ನಿರ್ವಾತವನ್ನು ತುಂಬಲು ಸುತ್ತಲಿನ ಗಾಳಿ ಅಲ್ಲಿಗೆ ನುಗ್ಗುತ್ತದೆ. ಹೀಗೆ ಇಡೀ ವಾತಾವರಣದಲ್ಲೆಲ್ಲ ಚಲನೆಯುಂಟಾಗುತ್ತದೆ.'
'ಯಾವನು ತನ್ನ ಅಹಮಿಕೆಯನ್ನು ಕರಗಿಸಿಕೊಳ್ಳುವುದರ ಮೂಲಕ ತನ್ನ ವೈಯಕ್ತಿಕತೆಯನ್ನೇ ಹೋಗಲಾಡಿಸಿಕೊಂಡು ಸರ್ವರ ಆತ್ಮವಾಗಿ ಬದುಕುತ್ತಾನೆಯೋ ಅವನೇ ಆದರ್ಶ ಮಹಾತ್ಮ.'
-ಆನಂದ ಎಸ್.ಎನ್.