ಬೈಟುಕಾಫಿ

ಕಾಡೇ ಗೂಡೇ

ಸಕಲೇಶಪುರದಿಂದ ಸುಮಾರು 27 ಕಿ.ಮೀ. ದೂರದ ಕಾಡಿನಲ್ಲಿದೆ ಕಾಡುಮನೆ ಟೀ ಎಸ್ಟೇಟ್.

ಕಾಡೇ ಗೂಡೇ
Published On :

ಸಕಲೇಶಪುರ ಪಟ್ಟಣದಿಂದ ಸುಮಾರು 27 ಕಿ.ಮೀ. ದೂರದ ಕಾಡಿನಲ್ಲಿದೆ ಕಾಡುಮನೆ ಟೀ ಎಸ್ಟೇಟ್. ಸುತ್ತಮುತ್ತ ಎತ್ತ ನೋಡಿದರೂ ಹಸಿರುಹಾಸು ಹೊದ್ದ ಬೆಟ್ಟಗುಡ್ಡಗಳು, ಆಕಾಶದೆತ್ತರಕ್ಕೆ ಚಾಚಿ ನಿಂತಿರುವ ಮೂರು ಕಣ್ಣು ಗುಡ್ಡ, ಅರಮನೆ ಗುಡ್ಡ, ಇಟ್ಟಿಗೆಗೂಡು ಮುಂತಾದ ಗಿರಿಧಾಮಗಳು, ಇವೆಲ್ಲದರ ಮಧ್ಯೆ ಟೀ ಗಿಡ ಗುತ್ತಿಗಳ ಸಾಲುಸಾಲು, ಮಧ್ಯೆ ಸದಾ ಕಾರ್ಯಾಚರಿಸುವ ಕಾಡುಮನೆ ಟೀ ಫ್ಯಾಕ್ಟರಿ.

ಹೆಲಿಕಾಪ್ಟರ್ ಸಮೀಕ್ಷೆಯಂತೆ ಸುಮಾರು 2500- 3000 ಎಕರೆ ವ್ಯಾಪ್ತಿಯ ತೋಟವಿದು. 800ರಿಂದ 1000 ಕೆಲಸಗಾರರು ಇಲ್ಲಿರಬಹುದು. ಶತಮಾನದ ಹಿಂದೆ, ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ ಇಲ್ಲಿಗೆ ಬಂದ ಆಂಗ್ಲ ದೊರೆಗಳು ಇಲ್ಲಿ ಟೀ ಎಸ್ಟೇಟ್ ಹಚ್ಚಿದವರು. 1923ರಲ್ಲಿ ಕಟ್ಟಿಸಿದ ಚರ್ಚ್ ಅವರ ನೆನಪಿನ ಕುರುಹು. ಬ್ರಿಟಿಷರು ತಾಯ್ನಾಡಿಗೆ ಮರಳಿದ ನಂತರ ತಮಿಳು ಮೂಲದ ಮುರುಗಪ್ಪನ್ ಗ್ರೂಪ್ ಯಜಮಾನಿಕೆ ವಹಿಸಿಕೊಂಡಿತು. ಅವರ ನಿಧನದ ನಂತರ ಅವರ ಮಕ್ಕಳ ಒಡಂಬಡಿಕೆಯಲ್ಲಿ ಎಸ್ಟೇಟ್ ವ್ಯವಹಾರ ನಡೆಯುತ್ತಿದೆ. ಕಾಡುಮನೆಯಲ್ಲಿ ತಯಾರಾಗುವ ಟೀ ಪುಡಿಗೆ ದೇಶವಿದೇಶಗಳಲ್ಲಿ ಭಾರಿ ಬೇಡಿಕೆ ಇದೆ.
ತಮಿಳರು, ಕನ್ನಡಿಗರು ಹಾಗೂ ಅಸ್ಸಾಮಿಗಳು ಇಲ್ಲಿ ಕಾಯಂ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಂಪನಿಯೇ ಕೆಲಸಗಾರರಿಗೆ ಮನೆ ನಿರ್ಮಿಸಿಕೊಟ್ಟಿದೆ. ಇದಕ್ಕೆ ಬಾಡಿಗೆ ಇಲ್ಲ. ತಮಿಳರಿಗೆ ಹೈಸ್ಕೂಲ್, ಕನ್ನಡಿಗರಿಗೆ ಕಿರಿಯ ಪ್ರಾಥಮಿಕ ಶಾಲೆ ಇವೆ. ಕನ್ನಡ ಶಾಲೆ ರಾಜ್ಯ ಸರ್ಕಾರದ್ದು. ವಿದ್ಯಾರ್ಥಿಗಳ ಸಂಖ್ಯೆ 94ಕ್ಕೂ ಅಧಿಕ. ಶಾಲೆಯಲ್ಲಿ ಮಧ್ಯಾಹ್ನ ಊಟವಿದೆ. ಇದರ ಖರ್ಚನ್ನು ಕಂಪನಿಯೇ ಭರಿಸುತ್ತದೆ. ಮಕ್ಕಳಿಗೆ ಉಚಿತ ಪುಸ್ತಕ, ಸಮವಸ್ತ್ರ ನೀಡಲಾಗುತ್ತದೆ. ವರ್ಷದಲ್ಲಿ ಮೂರ್ನಾಲ್ಕು ಬಾರಿ ಉಚಿತ ಆರೋಗ್ಯ ತಪಾಸಣೆ.
ಸಕಲೇಶಪುರ ತಾಲ್ಲೂಕು ಪಂಚಾಯತಿಯ 26 ಗ್ರಾಮ ಪಂಚಾಯಿತಿಗಳಲ್ಲಿ ಹೆಗ್ಗದ್ದೆ ದೊಡ್ಡ ಪಂಚಾಯತಿ. ಇದರ ವ್ಯಾಪ್ತಿಗೆ ಬರುವ ಕಾಡುಮನೆ ಟೀ ಎಸ್ಟೇಟ್‌ನವರು, ಗ್ರಾಮದ ಕುಡಿಯುವ ನೀರು, ವಿದ್ಯುತ್, ರಸ್ತೆ ಮುಂತಾದ ಉಪಯುಕ್ತ ಜವಾಬ್ದಾರಿಯನ್ನು ತಾವೇ ನಿರ್ವಹಿಸುತ್ತಾರೆ. ಪಂಚಾಯಿತಿಗೆ ಕಾಡುಮನೆಯ ಇಬ್ಬರು ಸದಸ್ಯರಿರುತ್ತಾರೆ. ಸೂರಿಲ್ಲದವರಿಗೆ ಸೂರು, ಮಾಸಾಶನ, ವಿಧವಾ ವೇತನ, ಸಂಧ್ಯಾಸುರಕ್ಷಾ ಯೋಜನೆ, ಆಶ್ರಯ ಯೋಜನೆ, ಅಂಬೇಡ್ಕರ್, ಇಂದಿರಾ ಆವಾಜ್‌ನಂತಹ ಸರ್ಕಾರಿ ಸವಲತ್ತುಗಳನ್ನು ಪಡೆಯುವಲ್ಲಿ ಕಾಡುಮನೆಯ ಜನತೆ ಜಾಣರು. ಕಾಡುಮನೆಗೆ ದಿನಂಪ್ರತಿ ನಾಲ್ಕು ಬಸ್ಸು ಸಂಚರಿಸುತ್ತವೆ. ಕಡಿದಾದ ಕಣಿವೆ ಮಾರ್ಗದ ಹಾದಿಯಲ್ಲಿ ಸಂಚಾರ ಸುಲಭವೇನಲ್ಲ.
ಇಲ್ಲಿ ಮೇ ತಿಂಗಳಲ್ಲಿ ಮಳೆಗಾಲ ಪ್ರಾರಂಭಗೊಂಡರೆ ಆಗಸ್ಟ್ ಅಂತ್ಯದವರೆಗೂ ಬೀಳುತ್ತದೆ. ಮಳೆಯ ಪ್ರಮಾಣ ಸರಾಸರಿ 250ರಿಂದ 400 ಇಂಚು. ಇಲ್ಲಿ ಕೊಡೆ ಹಿಡಿದು ತಿರುಗುವುದು ಅಸಾಧ್ಯ. ಕಂಬಳಿ ಕೊಪ್ಪೆ, ರೈನ್‌ಕೋಟ್ ಬಳಸುತ್ತಾರೆ. ಜಿಗಣೆಗಳು ರಸ್ತೆಯಲ್ಲೇ ಇರುತ್ತದೆ. ಮಳೆಗಾಲದಲ್ಲಿ ಕಂಪನಿಯು ಕೆಲಸಗಾರರಿಗೆ ಸಂಬಳ ನೀಡುತ್ತದೆ. ಸಕಲೇಶಪುರದಿಂದ ಪ್ರತಿ ದಿನ ಬೆಳಗ್ಗಿನ ಬಸ್ಸಿನಲ್ಲಿ ಟಪಾಲು, ಸುದ್ದಿಪತ್ರಿಕೆ ತಲುಪುತ್ತದೆ. ನಿಗದಿತ ವೇಳೆಯಲ್ಲಿ ತರಕಾರಿ, ಗ್ಯಾಸ್ ಸಿಲಿಂಡರ್, ಮೀನು, ಮೊಟ್ಟೆ, ಆಹಾರ ಪದಾರ್ಥಗಳನ್ನು ಗುತ್ತಿಗೆದಾರರಿಂದ ತಲುಪಿಸಲಾಗುತ್ತದೆ. ನ್ಯಾಯಬೆಲೆ ಅಂಗಡಿಯಿದೆ. ಆಯುಧಪೂಜೆ ಸಮಯದಲ್ಲಿ ಪ್ರಾಣಿಬಲಿ ನೀಡಲಾಗುತ್ತಿತ್ತು. ಆದರೆ ಇತ್ತೀಚೆಗಿನ ದಿನಗಳಲ್ಲಿ ಅದನ್ನು ನಿಲ್ಲಿಸಲಾಗಿದೆ.

ಕಾಡುಮನೆಯಿಂದ ಸುಮಾರು 7 ಕಿ.ಮೀ. ದೂರ ಇಟ್ಟಿಗೆಗೂಡು ಬಳಿ 'ಮಣಿಮುತ್ತು' ದೇವತೆಯ ಪುರಾತನ ದೇವಾಲಯವಿದೆ. ಪ್ರತಿವರ್ಷ ಮಾರ್ಚಿ ತಿಂಗಳಲ್ಲಿ ಅಲ್ಲಿ ವಿಶೇಷ ಪೂಜೆ ಆಚರಿಸಲಾಗುತ್ತದೆ. ಅಲ್ಲಿಗೆ ನೂರಾರು ಮಂದಿ ಕಾಲ್ನಡಿಗೆಯಲ್ಲೇ ದವಸಧಾನ್ಯ, ಪಾತ್ರೆಪರಿಕರ ಹೊತ್ತು ಸಾಗಿ ಸಿಹಿ ಅಡುಗೆಯೊಂದಿಗೆ ಹಬ್ಬ ಉತ್ಸವ ಮಾಡುತ್ತಾರೆ. ಜಾತಿ ಮತ ಭೇದವಿಲ್ಲದೆ ಎಲ್ಲರೂ ಕ್ರಿಸ್‌ಮಸ್, ಮುಸ್ಲಿಂ ಹಬ್ಬಗಳು, ಹಿಂದೂ ಹಬ್ಬಗಳನ್ನು ಆಚರಿಸುವುದು ವಿಶೇಷ.

ಹೋಗುವ ಬಗೆ
ರಾ.ಹೆ. 48ರಲ್ಲಿರುವ ಮಾರನಹಳ್ಳಿಯಲ್ಲಿ ಬಲಕ್ಕೆ ತಿರುಗಿದರೆ ಸುಮಾರು 13 ಕಿ.ಮೀ. ದೂರದ ಕಾಡುಮನೆಗೆ ರಸ್ತೆ ಸಂಪರ್ಕವಿದೆ. ಇತ್ತೀಚೆಗಿನ ದಿನಗಳಲ್ಲಿ ಆನೆಮಹಲ್- ಮೂಡಿಗೆರೆ ರಸ್ತೆಯ ಬೆಳ್ಳೆಕೆರೆ ಬಳಿಯಿಂದ ಎಡಕ್ಕೆ ಚಿಮ್ಮಿಕೋಲ್ ರಸ್ತೆಯಿಂದ ನಿರ್ಮಿಸಿರುವ ಕಾಂಕ್ರಿಟ್ ರಸ್ತೆ ಹತ್ತಿರದ ದಾರಿ ಹಾಗೂ ಸಂಚಾರಕ್ಕೆ ಯೋಗ್ಯವಾಗಿದೆ. 10 ಕಿ.ಮೀ. ರಸ್ತೆಯುದ್ದಕ್ಕೂ ನಯನ ಮನೋಹರವಾಗಿದೆ. ತೋಟಕ್ಕೆ ಪ್ರವಾಸಿಗರನ್ನು ಒಳಬಿಡುವುದಿಲ್ಲ. ಆದರೆ ಪ್ರತಿ ಭಾನುವಾರ ಬೆಳಿಗ್ಗೆ 8ರಿಂದ ಸಂಜೆ 5ರ ತನಕ ಟೀ ಪುಡಿ ತಯಾರಾಗುವ ಫ್ಯಾಕ್ಟರಿ ನೋಡಲು ಬಿಡುತ್ತಾರೆ.

- ಸಕಲೇಶಪುರ ಚಂದ್ರಶೇಖರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.