ಕೊಳೆ ಬೆಳೆ
ಸರ್ಕಾರಿ ಕೆಲಸ ಎಂದರೆ ದೇವರ ಕೆಲಸ! ವಿಧಾನಸೌಧದ ಹೆಬ್ಬಾಗಿಲಿನಲ್ಲಿ ಇಂಥ ಘೋಷ ವಾಕ್ಯ ಕಲ್ಲಿನ ಕೆತ್ತನೆಯ ಮೇಲೆ ನಳನಳಿಸುತ್ತಿದೆ....

ಸರ್ಕಾರಿ ಕೆಲಸ ಎಂದರೆ ದೇವರ ಕೆಲಸ!
ವಿಧಾನಸೌಧದ ಹೆಬ್ಬಾಗಿಲಿನಲ್ಲಿ ಇಂಥ ಘೋಷ ವಾಕ್ಯ ಕಲ್ಲಿನ ಕೆತ್ತನೆಯ ಮೇಲೆ ನಳನಳಿಸುತ್ತಿದೆ. ಜತೆಗೆ ನಮ್ಮ ಘನ ಸರ್ಕಾರದ ಪ್ರತಿ ಹಂತದಲ್ಲೂ ಎದ್ದು ಕಾಣುತ್ತದೆ. ವಾಸ್ತವದಲ್ಲಿ ಅದರ ಅರ್ಥ'ಹೀನ'ವಾಗಿರುತ್ತದೆ ಎಂಬುದು ಬೇರೆ ವಿಷಯ. ಆದರೆ, ಇದನ್ನು ಅಕ್ಷರಶಃ ಜಾರಿಗೆ ತಂದ ಕೀರ್ತಿ ಮಾತ್ರ ಬೆಳಗಾವಿ ಜಿಲ್ಲೆ ಹುಕ್ಕೇರಿ ಕೃಷಿ ಅಧಿಕಾರಿಗಳಿಗೆ ಸಲ್ಲುತ್ತದೆ!
ಹೌದು. ಎಲ್ಲೆಡೆ ಈಗ ನೀರಿಗಾಗಿ ಹಾಹಾಕಾರ ಭುಗಿಲೆದ್ದಿದೆ. ಹನಿ ನೀರಿಗೂ ತತ್ವಾರ ಎದುರಾಗಿದೆ. ಮೊಗೆದಷ್ಟು ದೊರೆಯುತ್ತಿದ್ದ ಅಂತರ್ಜಲ ಕೂಡ ಬತ್ತಿ ಹೋಗಿದೆ. ಕೃಷಿ ಜಮೀನಿಗೆ ನೀರುಣಿಸಲು ರೈತರು ಪರದಾಡುತ್ತಿದ್ದಾರೆ. ಇಂಥ 'ಬರ'ದ ಛಾಯೆಯ ನಡುವೆಯೇ ಧಾರವಾಡ ಕೃಷಿ ವಿವಿ ಘಟಕದ ಹುಕ್ಕೇರಿ ವಿಭಾಗದ ಅಧಿಕಾರಿಗಳು ಹುಕ್ಕೇರಿ ನಗರದಲ್ಲಿ ಬಳಸಿ ಕೊಳಚೆ ಪ್ರದೇಶ ಸೇರುತ್ತಿದ್ದ ನೀರಿನಿಂದಲೇ ಸುಮಾರು 45 ಎಕರೆ ಪ್ರದೇಶದಲ್ಲಿ ನೀರಾವರಿ ಕೃಷಿ ಮಾಡಿದ್ದಾರೆ!
ಬೆಳಗಾವಿ ಜಿಲ್ಲೆಯ ಹುಕ್ಕೇರಿ ನಗರ ಹಾಲಿ ಕೃಷಿ ಸಚಿವ ಉಮೇಶ ಕತ್ತಿ ಅವರು ಪ್ರತಿನಿಧಿಸುವ ಕ್ಷೇತ್ರ. ಕೃಷಿ ಸಂಬಂಧಿತ ಅಧ್ಯಯನಕ್ಕೆ ಹುಕ್ಕೇರಿ ನಗರ ಹಾಗೂ ಸುತ್ತಮುತ್ತಲಿನ ಜನತೆಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಕತ್ತಿ ಅವರೇ ಕಾಳಜಿ ವಹಿಸಿ 2011ರಲ್ಲಿ ಧಾರವಾಡ ಕೃಷಿ ವಿವಿ ಅಧೀನದಲ್ಲೇ ಬರುವಂತೆ ಹುಕ್ಕೇರಿಯಲ್ಲಿ ಕೃಷಿ ಅಧ್ಯಯನ ಕೇಂದ್ರ ಆರಂಭಿಸಿದರು. ಡಿಪ್ಲೊಮಾ ಪದವಿಯಲ್ಲಿ ಅಧ್ಯಯನ ಮಾಡುತ್ತಿರುವ ಸುಮಾರು 50 ವಿದ್ಯಾರ್ಥಿಗಳಿದ್ದಾರೆ ಪ್ರಾಯೋಗಿಕ ಅಧ್ಯಯನಕ್ಕೆ 45 ಎಕರೆ ಜಮೀನನ್ನು ಒದಗಿಸಿದರು.
ನೀರಿಲ್ಲದೆ ಕೆಲಸ ಸಾಧ್ಯವಿಲ್ಲ
ಪ್ರಾಯೋಗಿಕ ಅಧ್ಯಯನಕ್ಕೆ ಜಮೀನು ಒದಗಿಸಿದ ಬಳಿಕ ಕೃಷಿ ವಿವಿ ಅಧಿಕಾರಿಗಳು ಹಾಗೂ ಪ್ರಾಧ್ಯಾಪಕರು ಒಂದೆರಡು ಬೋರವೆಲ್ ಕೊರೆಸಿ ಕೊಡುವಂತೆ ಮನವಿ ಮಾಡಿದರು. ಇಂದು, ನಾಳೆ ಎಂದು ಕಾಲ ತಳ್ಳಿದ್ದೇ ಬಂತು. ಬೋರವೆಲ್ ಮಾತ್ರ ಕೊರೆಯಲಿಲ್ಲ. ಇದರಿಂದ ಬೇಸತ್ತ ಅಧಿಕಾರಿಗಳು ಹುಕ್ಕೇರಿ ನಗರದಲ್ಲಿ ಬಳಕೆಯಾಗಿ ಕೊಳಚೆ ಸೇರುವ ನೀರನ್ನೇ ಬಳಸಿ ನೀರಾವರಿ ಮಾಡಲು ಮುಂದಾದರು!
ಹುಕ್ಕೇರಿ ನಗರಕ್ಕೆ ಹೊಂದಿಕೊಂಡಂತೆ ಕೃಷಿ ವಿವಿ ಜಮೀನಿದೆ. ಅದರ ಪಕ್ಕದಲ್ಲೇ ಹಳ್ಳ ಮಾದರಿಯಲ್ಲಿ ನಗರದ ಜನತೆ ಬಳಕೆ ಮಾಡಿದ ನೀರು ಹರಿದು ಹೋಗಿ ಕೊಳಚೆ ಸೇರುತ್ತದೆ. ಈ ರೀತಿ ಹರಿದು ಹೋಗುವ ನೀರಿಗೆ ಜಮೀನಿನ ಬದಿಯಲ್ಲಿ ಅಡ್ಡಲಾಗಿ ಪುಟ್ಟದಾದ ಬಾಂದಾರು ನಿರ್ಮಾಣ ಮಾಡಲಾಗಿದೆ. ಅಲ್ಲಿ ಸಂಗ್ರಹವಾಗುವ ನೀರನ್ನು ಬಾವಿ ರೀತಿ ತೋಡಿರುವ ಗುಂಡಿಯೊಳಗೆ ಸಂಗ್ರಹಿಸಿ ಯಂತ್ರದ ಮೂಲಕ ಜಮೀನಿಗೆ ಹರಿಸಲಾಗುತ್ತದೆ.
45 ಎಕರೆ ನೀರಾವರಿ!
ನಿಮಗೆ ಆಶ್ಚರ್ಯವಾಗಬಹುದು. ಈ ಕೊಳಚೆ ನೀರಿನಿಂದಲೇ ಸುಮಾರು 40 ಎಕರೆ ಪ್ರದೇಶದಲ್ಲಿ ನೀರಾವರಿ ಕೃಷಿ ಕೈಗೊಳ್ಳಲಾಗಿದೆ. ಸದ್ಯ 12 ಎಕರೆ ಗೋಧಿ, 11 ಎಕರೆ ಕಡಲೆ, 5 ಎಕರೆ ಜೋಳ ಹಾಗೂ ಒಂದು ಎಕರೆ ಕಬ್ಬು ಬೆಳೆಯಲಾಗಿದೆ. ಇದರ ಪಕ್ಕದಲ್ಲೇ ಇರುವ ರೈತರ ಭೂಮಿಯಲ್ಲಿ 'ಬರ' ಕಾಣಿಸುತ್ತದೆ. ಇದಕ್ಕೇನು ಕೋಟ್ಯಂತರ ರುಪಾಯಿ ಖರ್ಚು ಮಾಡಿಲ್ಲ. ಪುಟ್ಟದಾದ ಬಾಂದಾರು, ಸಣ್ಣದೊಂದು ಬಾವಿ ಹಾಗೂ ನೀರೆತ್ತಲು ಯಂತ್ರ ಮಾತ್ರ ಖರೀದಿಸಲಾಗಿದೆ. ಹೀಗೆ 40 ಎಕರೆ ಕೃಷಿ ಮಾಡಿದ್ದು ಸಣ್ಣ ಮಾತೇನಲ್ಲ.
ಗೊಬ್ಬರವೇ ಬೇಕಿಲ್ಸ
ಕೊಳಚೆ ನೀರನ್ನು ಹಾಯಿಸುವುದರಿಂದ ಇನ್ನೊಂದ ಲಾಭವೆಂದರೆ ಬೆಳೆಗಳಿಗೆ ಗೊಬ್ಬರವೇ ಬೇಕಿಲ್ಲ. ಜನರು ಬಳಕೆ ಮಾಡುವ ನೀರು ಹರಿದು ಬರುವಾಗ ಅದರಲ್ಲಿ ಬೆಳೆಗಳಿಗೆ ಅಗತ್ಯವಾದ ಪೌಷ್ಟಿಕ ಅಂಶಗಳು ಸೇರ್ಪಡೆಯಾಗಿರುತ್ತವೆ. ಇದು ಬೆಳೆಗಳಿಗೆ ಸಹಾಯಕವಾಗುತ್ತದೆ ಎನ್ನುತ್ತಾರೆ ಕ್ಷೇತ್ರ ಅಧ್ಯಯನ ಅಧಿಕಾರಿ ನಾಗೇಶ ಬಾಗೇವಾಡಿ. ಹುಕ್ಕೇರಿ ಕೃಷಿ ಅಧ್ಯಯನ ಕೇಂದ್ರದ ಡಿಪ್ಲೊಮಾ ವಿದ್ಯಾರ್ಥಿಗಳಾದ ಸಂಜು, ಹಾಲಪ್ಪ, ರಾಯನಗೌಡ, ವಿಜಯ್, ಹನುಮಂತ ಇಲ್ಲಿ ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ. ಪ್ರತಿದಿನ ಇಲ್ಲಿಗೆ ಬಂದು ಬೆಳೆಗಳ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಇವರಿಗೆ ಅಧ್ಯಯನ ಕೇಂದ್ರದ ನಿರ್ದೇಶಕ ಎಸ್.ಜಿ. ಎಳಮಲಿ ಸೇರಿದಂತೆ ಇತರೆ ಕಾರ್ಮಿಕರು ಸಹಾಯ ಮಾಡುತ್ತಾರೆ. ಅಂತರ್ಜಲ ಕೊರತೆ ಅರಿತಿರುವ ಇಲ್ಲಿನ ಅಧಿಕಾರಿಗಳು ಹೊಲದಲ್ಲಿನ ಬದುವುಗಳಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಿದ್ದಾರೆ. ಇದರಿಂದ ಅಂತರ್ಜಲ ವೃದ್ಧಿಗೂ ಕ್ರಮ ಕೈಗೊಂಡಿದ್ದಾರೆ.
ರೈತರಿಗೆ ಬೀಜ ಸರಬರಾಜು
ಧಾರವಾಡ ಕೃಷಿ ವಿವಿ ರೈತರಿಗೆ ಸಬ್ಸಿಡಿ ದರದಲ್ಲಿ ಬೀಜ ಸರಬರಾಜು ಮಾಡುವುದು ಇಲ್ಲಿ ಬೆಳೆದ ಬೆಳೆಯಿಂದಲೇ! ಮೇಲಧಿಕಾರಿಗಳ ಆದೇಶದಂತೆ ಬೆಳೆದ ಬೆಳೆಯ ಫಸಲನ್ನು ಧಾರವಾಡ ಕೃಷಿ ವಿವಿಗೆ ಕಳುಹಿಸಿ ಕೊಡಲಾಗುತ್ತದೆ. ಬಳಿಕ ಸಬ್ಸಿಡಿ ದರದಲ್ಲಿ ಇದೇ ಬೀಜವನ್ನು ರೈತರಿಗೆ ಸರಬರಾಜು ಮಾಡಲಾಗುತ್ತದೆ.
- ಚನ್ನು ಮೂಲಿಮನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


