

ಬೆಂಗಳೂರಿನ ಬೆನ್ನಿಗೆ ಬಹಳಷ್ಟು ಬಿರುದುಗಳುಂಟು. ಉದ್ಯಾನನಗರಿ, ಸಿಲಿಕಾನ್ ಸಿಟಿ, ಐಟಿಸಿಟಿ, ನಿವೃತ್ತರ ಸ್ವರ್ಗ. ಆದರೆ, ಈ ವರ್ಷ ಇನ್ನೊಂದು ಬಿರುದು ನಮ್ಮ ಬೆಂಗಳೂರಿಗೆ ಬಂದಿದೆ.
ಹ್ಞಾಂ, ಬೆಂಗಳೂರು ಮೂರ್ಖರ ನಗರವಂತೆ!
ಹಾಗಂತ ವಿದೇಶದ ಯಾವುದೋ ಪತ್ರಿಕೆ ಕರೆದಿದ್ದಲ್ಲ. ಇನ್ನಾವುದೋ ಸರ್ವೇಯಿಂದ ಸಾಬೀತಾದದ್ದೂ ಅಲ್ಲ. ಬೆಂಗಳೂರಿನ ಟ್ರಾಫಿಕ್ ಪೊಲೀಸರೇ ಈ ಟೈಟಲ್ ಅನ್ನು ಪರೋಕ್ಷವಾಗಿ ಕೊಟ್ಟಿದ್ದಾರೆ.
ಹೌದು. ಎಂಟೂವರೆ ಕೋಟಿ ಜನಸಂಖ್ಯೆಯ ಬೆಂಗಳೂರು ದೇಶದ ಬ್ಯುಸಿ ಟ್ರಾಫಿಕ್ ನಗರಿಗಳಲ್ಲೊಂದು. ಇಲ್ಲಿನ ಲಕ್ಷಾಂತರ ವಾಹನಗಳನ್ನು ಕಂಟ್ರೋಲ್ ಮಾಡಲು ಕಡಿಮೆಯೆಂದರೂ 6 ಸಾವಿರ ಟ್ರಾಫಿಕ್ ಪೊಲೀಸರು ಬೇಕು. ಆದರೆ, ನಮ್ಮಲ್ಲಿರೋ ಮಂದಿ ಕೇವಲ 3 ಸಾವಿರ! ಟ್ರಾಫಿಕ್ ನಿಮಯ ಉಲ್ಲಂಘನೆ ಕೇಸ್ಗಳೇ ಇಲ್ಲಿ ನಿತ್ಯ ನೂರಾರು. ಏನಿಲ್ಲ ಅಂದ್ರೂ ನಿತ್ಯ ಹತ್ತರಿಂದ ಇಪ್ಪತ್ತು ಅಪಘಾತ ತಪ್ಪಿದ್ದಲ್ಲ. ಈ ಕಾರಣದಿಂದ 'ನಿವೃತ್ತರ ಸ್ವರ್ಗ'ದಲ್ಲೇ 5-8 ಜೀವಗಳು ಹಾರಿಹೋಗುತ್ತವೆ. ಏಕೆಂದರೆ, ಆ್ಯಂಬ್ಯುಲೆನ್ಸ್ಗಳನ್ನೂ ಮುಂದೆಹೋಗಲು ಬಿಡದ ಕಾರಣದಿಂದ!
ಇಷ್ಟೆಲ್ಲ ಬಿಕ್ಕಟ್ಟುಗಳಿಗೆ ಟಾಂಟ್ ಕೊಡಲು ಪೊಲೀಸರು ಈಗ ಕಂಡುಕೊಂಡಿದ್ದು, 'ಕಾರ್ಡ್ಬೋರ್ಡ್ ತಂತ್ರ'ವನ್ನು. ಕಾರ್ಡ್ಬೋರ್ಡ್ನಲ್ಲಿ ಟ್ರಾಫಿಕ್ ಪೊಲೀಸರ ಕಟೌಟ್ ಮಾಡಿ ರಸ್ತೆ ಬದಿ ನಿಲ್ಲಿಸಿದರೆ, ಜನರು ಸಂಚಾರಿ ನಿಯಮ ಉಲ್ಲಂಘಿಸೋದಿಲ್ಲ ಅನ್ನೋದು ಆರಕ್ಷಕರ ಐಡಿಯಾ. ಹೀಗೆ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಇಂಥ ಕಾರ್ಡ್ಬೋರ್ಡ್ ಪೊಲೀಸರನ್ನು ನಿಲ್ಲಿಸಲಾಗಿದೆ.
ಇದರ ಅರ್ಥ ಅಷ್ಟೇ, ಪೊಲೀಸರು ಬುದ್ಧಿವಂತರು. ಬೆಂಗಳೂರಿನ ಜನತೆ ಮೂರ್ಖರು!
ಹ್ಞಾಂ, ಲೇಟೆಸ್ಟ್ ನ್ಯೂಸೊಂದು ಬಂದಿದೆ. ಮೊನ್ನೆ ಬೆಂಗಳೂರಿನ ಇಂಡಿಯನ್ ಎಕ್ಸ್ಪ್ರೆಸ್ ವೃತ್ತದಲ್ಲಿ ಕಾಗೆ ಒಬ್ಬ ಟ್ರಾಫಿಕ್ ಪೊಲೀಸರ ಮೇಲೆ 'ಪಿಚಿಕೆ' ಹಾಕಿದೆ. ಪಾಪ, ಕಾಗೆ ಹಾಗೆ ಮಾಡಲೂ ಕಾರಣ ಉಂಟು. ಆತ ಜೀವಂತ ಟ್ರಾಫಿಕ್ಮ್ಯಾನ್ ಅಲ್ಲ, ಕಾರ್ಡ್ಬೋರ್ಡ್ ಟ್ರಾಫಿಕ್ಮ್ಯಾನೇ ಇರಬೇಕೆಂದು ಕಾಗೆ ಕನ್ಫ್ಯೂಸ್ ಮಾಡಿಕೊಂಡಿತಂತೆ!