

ಯುಗಾದಿಗಿಂತ ಕೆಲವೇ ದಿನ ಮೊದಲು ಏಪ್ರಿಲ್ 1 ಬರುತ್ತೆ ಯಾಕೆ? ಹಳೆಯ ವರ್ಷದ ನಮ್ಮ ಮೂರ್ಖತನಗಳನ್ನೆಲ್ಲ ನೆನೆದು ಮನಸಾರೆ ನಕ್ಕು ಮುಂದಿನ ವರ್ಷಕ್ಕೆ ಸಜ್ಜಾಗೋದಕ್ಕೆ. ಈ ಹಿನ್ನೆಲೆಯಲ್ಲಿ, ಕಳೆದ ವರ್ಷ ನಮ್ಮ ಗಮನ ಸೆಳೆದ ಕೆಲವರಿಗೆ ನಮ್ಮ ವರ್ಷದ ಅತ್ಯುತ್ತಮ ಪ್ರಶಸ್ತಿಗಳನ್ನು ಘೋಷಿಸುತ್ತಿದ್ದೇವೆ. ಈ ಪ್ರಶಸ್ತಿಯು ಮಕ್ಮಲ್ ಟೋಪಿ ಹಾಗೂ ಫಲಕಗಳನ್ನು ಒಳಗೊಂಡಿದ್ದು, ಏಪ್ರಿಲ್ 31ರಂದು ವಿಧಾನಸೌಧದ ಮುಂದುಗಡೆ ಪ್ರದಾನ ಮಾಡಲಾಗುವುದು.
ಅತ್ಯುಚ್ಛ ಪುರಸ್ಕಾರವಾದ ಮೂಕರತ್ನ ಪ್ರಶಸ್ತಿಯನ್ನು ತಮ್ಮ ಮೌನದಿಂದಲೇ ಪ್ರಸಿದ್ಧಿ ಗಳಿಸಿರುವ ಡಾ.ಮೌನಮೋಹನ ಸಿಂಗರಿಗೆ ನೀಡಲಾಗಿದೆ.
ಮೂರು ಮುಖ್ಯ ಪ್ರಶಸ್ತಿಗಳು
ಮೂರ್ಖಭೂಷಣ: ಕೆ.ಎಸ್.ಈಶ್ವರಪ್ಪ
ಮೂರ್ಖವಿಭೂಷಣ: ಬಿ.ಎಸ್.ಯಡಿಯೂರಪ್ಪ
ಮೂರ್ಖಶ್ರೀ: ನಿತ್ಯಾನಂದ ಸ್ವಾಮಿ
ವರ್ಷದ ಶ್ರೇಷ್ಠ ರಾಜಕೀಯ ನಟ
ಸಿ.ಪಿ.ಯೋಗೇಶ್ವರ್ ('ಕಮಲ' ಹಿಡಿದಾಗ ಅದಕ್ಕೆ ತಕ್ಕಂತೆ, 'ಕೈ' ಹಿಡಿದಾಗ ಅದಕ್ಕೆ ತಕ್ಕಂತೆ ಮಾತನಾಡುವ ಚತುರತೆ)
ವರ್ಷದ ಶ್ರೇಷ್ಠ ರಾಜಕೀಯ ಅಭಿನೇತ್ರಿ
ಪೂಜಾ ಗಾಂಧಿ (ಸಿನಿಮಾದಲ್ಲಿ ಪಾತ್ರ ಬದಲಾಯಿಸಿದಷ್ಟೇ ಸ್ಪೀಡಾಗಿ ಪಕ್ಷಗಳನ್ನು ಬದಲಾಯಿಸಬಲ್ಲ ಚಾಕಚಕ್ಯತೆ)
ಶ್ರೇಷ್ಠ ಸಂಭಾಷಣೆಗಾರ
ಜನಾರ್ದನ ಪೂಜಾರಿ (ಶುದ್ಧ ಮಂಗಳೂರು ಕನ್ನಡದಲ್ಲಿ ಇಡೀ ವರ್ಷ ಗಂಟಲು ಹರಿದುಕೊಂಡರು)
ಶ್ರೇಷ್ಠ ನೃತ್ಯಪಟು
ರೇಣುಕಾಚಾರ್ಯ ('ಒಳಗೆ ಸೇರಿದರೆ ಗುಂಡು' ಹಾಡಿನ ನೃತ್ಯಕ್ಕಾಗಿ)
ಡೈಲಾಗ್ ಕಿಂಗ್
ಅಕ್ಬರುದ್ದೀನ್ ಒವೈಸಿ (ಬಾಯಿಗೆ ಬಂದಂತೆ ಕಿರುಚಾಡಿದ್ದಕ್ಕೆ)
ಚಾಣಕ್ಯ ಪ್ರಶಸ್ತಿ
ಅನಂತಕುಮಾರ್ (ಯಾಕೆಂದು ನಮೂದಿಸಲಾಗಿಲ್ಲ)
ಅಮ್ಮ ಪ್ರಶಸ್ತಿ
ಜಯಲಲಿತಾ (ಕುಮಾರಿಯಾಗಿದ್ದರೂ, ಆಕೆಯ ಅಮ್ಮನಂಥ ವ್ಯಕ್ತಿತ್ವವನ್ನು ಗುರುತಿಸಿ)
ಬೊಗಳುಭಟ ಪ್ರಶಸ್ತಿ
ದಿಗ್ವಿಜಯ್ ಸಿಂಗ್ (ಈ ಪ್ರಶಸ್ತಿಗೆ ಅನೇಕರು ಸ್ಪರ್ಧಿಸಿದ್ದರೂ ಬಹುಮತದಿಂದ ಆಯ್ಕೆಯಾದರು)
ಧೀರೋದಾತ್ತ ನಾಯಕ
ಪ್ರಣಬ್ ಮುಖರ್ಜಿ (ಪಾಪಿಗಳ ಕ್ಷಮಾದಾನವನ್ನು ತಿರಸ್ಕರಿಸುವ ಧೈರ್ಯ ತೋರಿದ್ದಕ್ಕೆ)
ಧೀರ ಉದ್ಧಟ
ಸುಶೀಲ್‌ಕುಮಾರ್ ಶಿಂಧೆ (ಯಾರನ್ನೂ ಬಿಡುವುದಿಲ್ಲ ಎಂದು ಬಾಗಿಲು ಹಾಕಿಕೊಂಡು ಕೂಗುವ ಮತ್ತು ರಾಷ್ಟ್ರಭಕ್ತರನ್ನು ಭಯೋತ್ಪಾದಕರು ಎನ್ನುವುದಕ್ಕೆ)
ಧೀರ ಪ್ರಶಾಂತ
ಜಗದೀಶ ಶೆಟ್ಟರ್ (ಶಾಂತವಾಗಿದ್ದುಕೊಂಡೇ ಎಲ್ಲ ಫೈಲುಗಳನ್ನೂ ಭರದಿಂದ ಸಹಿ ಹಾಕಿ ಕಳಿಸಿದ ಧೈರ್ಯಕ್ಕೆ)
ವಾತ್ಸಾಯನ ಕಾಮಸೂತ್ರ ಪ್ರಶಸ್ತಿ
ಕರ್ನಾಟದ ನಾಲ್ವರು ಶಾಸಕರಿಗೆ ಹಂಚಲಾಗಿದೆ.
ಕಾವೇರಮ್ಮ ಪ್ರಶಸ್ತಿ
ಎಚ್.ಡಿ.ದೇವೇಗೌಡ (ಸಂಸತ್‌ನಲ್ಲಿ ಕಾವೇರಿಗಾಗಿ ಗಳಗಳನೇ ಅತ್ತಿದ್ದಕ್ಕಾಗಿ)
ಚಾರ್ಲಿ ಚಾಪ್ಲಿನ್ ಪ್ರಶಸ್ತಿ
ಡಿ.ವಿ.ಸದಾನಂದ ಗೌಡ
ಶಕುನಿ ಪ್ರಶಸ್ತಿ: ಕರುಣಾನಿಧಿ (ರಾಜಕೀಯ ತಂತ್ರಕ್ಕಾಗಿ)
ಉತ್ತರಕುಮಾರ ಪ್ರಶಸ್ತಿ: ಧನಂಜಯ ಕುಮಾರ್ (ಪ್ರಶ್ನೆ ಕೇಳದಿದ್ದರೂ ಉತ್ತರ ಕೊಡುವ ವಿಶೇಷ ಪ್ರತಿಭೆ)
ಪರದೇಶಿ ಪ್ರಶಸ್ತಿ: ಸೋನಿಯಾ ಗಾಂಧಿ (ಪರದೇಶದಿಂದ ಬಂದೂ ಇಲ್ಲಿ ಸಾಧನೆ ಮಾಡಿದವರಿಗೆ ಕೊಡುವಂಥದು)
-ವಿಶ್ವನಾಥ ಸುಂಕಸಾಳ