ಬೈಟುಕಾಫಿ

ಒಮೇಗಾ- 6 ಕೂಡ ನಮಗೆ ಬೇಕು!

Published On :

ನಮ್ಮ ಶರೀರಕ್ಕಿಂತ ಅದ್ಭುತ ಸಂಗತಿ ಪ್ರಪಂಚದಲ್ಲಿ ಬೇರೆ ಸಿಗಲಾರದು ಎಂದು ಆಗಾಗ ಅಂದುಕೊಳ್ಳುತ್ತೇನೆ. ಆಹಾರ ವ್ಯವಸ್ಥೆ ಇದ್ದಿರಬಹುದು, ರೋಗ ನಿರೋಧಕ ವ್ಯವಸ್ಥೆ ಇದ್ದಿರಬಹುದು, ಒಟ್ಟಾರೆಯಾಗಿ ಇಡೀ ಶರೀರದ ಕಾರ್ಯನಿರ್ವಹಣೆ ಶೈಲಿಯೇ ಬೆರಗು ಮೂಡಿಸುವಂಥದ್ದು. ದೇಹವೆಂಬ ಯಂತ್ರಕ್ಕೆ ಒಳ್ಳೆಯದೂ ಬೇಕು, ಕೆಟ್ಟದ್ದೂ ಬೇಕು. ಯಾವ ಸಂದರ್ಭದಲ್ಲಿ ಯಾವುದು ಯಾವ ಪ್ರಮಾಣದಲ್ಲಿರಬೇಕು ಎನ್ನುವುದನ್ನು ನಿರ್ಧರಿಸುವುದು ಸ್ವಯಂ ನಮ್ಮ ಶರೀರವೇ. ಪ್ರಸಂಗ ಬಂದಾಗ ಕೆಟ್ಟದ್ದನ್ನೂ ತನಗೆ ಪೂರಕವಾಗಿ ಪರಿವರ್ತಿಸಿಕೊಳ್ಳುವ ಸಾಮರ್ಥ್ಯ ಕೂಡ ಶರೀರಕ್ಕೇ ಇದೆ. ಕೊಬ್ಬಿನ ವಿಚಾರದಲ್ಲಿಯೂ ಹಾಗೆಯೇ. ಒಮೇಗಾ-3 ಕೂಡ ಬೇಕು, ಒಮೇಗಾ-6 ಕೂಡ ಬೇಕು. ಹೀಗಾಗಿಯೇ ಇವೆರಡನ್ನೂ 'ಅಗತ್ಯ ಕೊಬ್ಬಿನಾಂಶ' ಅಂತ ಪರಿಗಣಿಸಲಾಗುತ್ತದೆ. ಆದರೆ ಇವೆರಡೂ ಸಮತೋಲಿತ ಪ್ರಮಾಣದಲ್ಲಿರಬೇಕು ಅಷ್ಟೆ. ಯಾವುದಾದರೂ ಅಷ್ಟೇ ಅಲ್ಲವೆ? ಒಂದು ಪ್ರಮಾಣ ಅಂತಿರುತ್ತದೆ. ಅದು ಹೆಚ್ಚೂಕಡಿಮೆ ಆದಾಗ ವ್ಯವಸ್ಥೆ ಹದಗೆಡುತ್ತದೆ. ಶರೀರದಲ್ಲಿಯೂ ಅಷ್ಟೆ.
ಒಮೇಗಾ-3 ಮತ್ತು ಒಮೇಗಾ-6 ಎರಡೂ ದೇಹಕ್ಕೆ ಅಗತ್ಯವಾಗಿ ಬೇಕು ಖರೆ. ಇವನ್ನು 'ಪಾಲಿಅನ್‌ಸ್ಯಾಚುರೇಟೆಡ್ ಫ್ಯಾಟಿ ಆ್ಯಸಿಡ್ಸ್‌' ಎಂದೂ ಹೇಳುವುದುಂಟು. ಸೋಜಿಗ ಎಂದರೆ ಇವನ್ನು ನಮ್ಮ ಶರೀರ ತಾನಾಗಿಯೇ ಉತ್ಪಾದಿಸಿಕೊಳ್ಳುವುದಿಲ್ಲ. ಅಂದರೆ ಶರೀರದಲ್ಲಿ ಇವು ಉತ್ಪತ್ತಿಯಾಗುವುದಿಲ್ಲ. ಇವು ಹೊರಗಿನಿಂದಲೇ ಅಂದರೆ ಆಹಾರದ ರೂಪದಲ್ಲಿ ಶರೀರವನ್ನು ಪ್ರವೇಶಿಸಬೇಕು. ವ್ಯಕ್ತಿಯ ಆರೋಗ್ಯಕರ ಬೆಳವಣಿಗೆಗೆ ಇವೆರಡೂ ಬೇಕು. ವಿಶೇಷವಾಗಿ ಮೆದುಳು, ಚರ್ಮ, ಮೂಳೆಗಳ ಆರೋಗ್ಯಕರ ಬೆಳವಣಿಗೆಗೆ ಇವು ಅತ್ಯಗತ್ಯ. ಮತ್ತೆಮತ್ತೆ ಹೇಳಬೇಕಾದದ್ದು ಎಂದರೆ ಒಮೇಗಾ-3ಕ್ಕಿಂತ ಒಮೇಗಾ-6 ಅಧಿಕವಾದರೆ ಅನಾರೋಗ್ಯಕ್ಕೆ ದಾರಿಯಾಗುತ್ತದೆ. ಅದನ್ನು ನಾವು ಮರೆಯಬಾರದು.
ಒಮೇಗಾ-6 ಪ್ರಮುಖವಾಗಿ ಹಾನಿ ಮಾಡುವುದು ರಕ್ತನಾಳ ಮತ್ತು ರಕ್ತ ಸಂಚಾರದ ವಿಚಾರದಲ್ಲಿ ಎಂದು ಅರಿತಿದ್ದೇವೆ. ಆದರೆ ಕೆಲವೊಮ್ಮೆ ಇದೇ ಕೊಬ್ಬು ಆರೋಗ್ಯದಾಯಕವಾಗಿ ಕೆಲಸ ಮಾಡುವುದೂ ಉಂಟು. ಮಧುಮೇಹಿಗಳಲ್ಲಿ ಒಮ್ಮೊಮ್ಮೆ ನರಸಂಬಧಿ ಸಮಸ್ಯೆಗಳು, ನರಗಳಲ್ಲಿ ನೋವು ಕಾಣಿಸಿಕೊಳ್ಳುವುದುಂಟು. ಆಗ ಒಮೇಗಾ-6 ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ. ಕೆಲವು ಬಗೆಯ ಸಂಧುವಾತಗಳಿಗೆ ಒಮೇಗಾ-6 ಇರುವ ಪದಾರ್ಥಗಳನ್ನು ಸಂಜೆ ಹೊತ್ತಿನಲ್ಲಿ ಸೇವಿಸಿದರೆ ಒಳ್ಳೆಯದು ಎನ್ನುವುದು ಸಂಶೋಧನೆಗಳಿಂದ ದೃಢಪಟ್ಟಿದೆ. ಕೆಲವು ಅಲರ್ಜಿಗಳಿಗೂ ಇದು ಮದ್ದು ಎನ್ನುತ್ತವೆ ಸಂಶೋಧನೆಗಳು. ಹಾಗಂತ ನಾವು ಬೇಕಾಬಿಟ್ಟಿಯಾಗಿ ಒಮೇಗಾ-6 ಇರುವ ಪದಾರ್ಥಗಳನ್ನು ಸೇವಿಸುವುದು ಸರಿಯಲ್ಲ. ಯಾವ ಪ್ರಮಾಣದಲ್ಲಿ ಮತ್ತು ಯಾವ ರೂಪದಲ್ಲಿ ಸೇವಿಸಬೇಕು ಎನ್ನುವುದನ್ನು ವೈದ್ಯರು ಶಿಫಾರಸ್ಸು ಮಾಡುತ್ತಾರೆ. ಅದನ್ನು ಪಾಲಿಸಬೇಕು.  

-ಡಾ. ಪಿ. ಸದಾನಂದ ಮೈಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.