ಆಹಾರವೂ ತಂದೀತು ತಲೆನೋವು!
ನಿಮಗೆ ಆಗಾಗ ತಲೆನೋವು ಕಾಡುತ್ತಿದೆಯೆ? ಮೈಮೇಲೆ ದದ್ದು ಕಾಣಿಸಿಕೊಂಡು ಕಿರಿಕಿರಿ ಉಂಟುಮಾಡುತ್ತಿದೆಯೆ? ಅಸ್ತಮಾ ಸಮಸ್ಯೆ ಇದೆಯೆ? ಕರುಳಿಗೆ ಸಂಬಂಧಿಸಿದಂತೆ ಏನಾದರೂ ತೊಂದರೆ ಪದೇಪದೆ ಉಂಟಾಗುತ್ತಿದೆಯೆ? ಅಲ್ಸರ್ ಬಾಧೆಯಿಂದ ನರಳುತ್ತಿದ್ದೀರಾ? ಸಂಧಿವಾತದ ತೊಂದರೆಯೆ? ಆಗಾಗ ಆಯಾಸವಾಗುತ್ತಿದೆಯೆ? ನಿಮ್ಮ ಮೂಡ್ ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದು, ಆಗಾಗ ಖಿನ್ನತೆಗೂ ತುತ್ತಾಗುತ್ತಿದ್ದೀರಾ? ನೀವಷ್ಟೇ ಅಲ್ಲ, ನಿಮ್ಮ ಮಗು ಕೂಡ ಇಂಥ ಆರೋಗ್ಯ ಸಮಸ್ಯೆಗಳ ಜತೆಗೆ ಉದರಶೂಲೆ, ಅತಿಸಾರ, ಉಸಿರಾಟದ ತೊಂದರೆ, ಕಿವಿ ಸೋಂಕು, ಮೈಗ್ರೇನ್, ಅಪಸ್ಮಾರ ಮತ್ತಿತರ ತೊಂದರೆಗಳಿಂದ ಬಳಲುತ್ತಿದೆಯೆ?
ಅಚ್ಚರಿ ಪಡಬೇಡಿ. ಇವುಗಳಲ್ಲಿ ಯಾವುದಾದರೂ ತೊಂದರೆಯಿಂದ ನೀವು ಬಳಲುತ್ತಿದ್ದೀರಿ ಎಂದಾದರೆ ಅದಕ್ಕೆ ಫುಡ್ ಅಲರ್ಜಿಯೂ ಕಾರಣ ಆಗಿರಬಹುದು. ನಮ್ಮ ದೇಹಪ್ರಕೃತಿಗೆ ಒಗ್ಗಿಕೊಳ್ಳದ ಕೆಲವು ಆಹಾರಗಳು ಇಂಥ ಸಮಸ್ಯೆಗಳನ್ನು ತಂದೊಡ್ಡಬಲ್ಲವು ಅಥವಾ ಬೇರೆಬೇರೆ ಕಾರಣಗಳಿಂದ ಇಂಥ ತೊಂದರೆಗಳಿಂದ ಬಳಲುತ್ತಿದ್ದರೆ ಆ ಬಾಧೆಯನ್ನು ಮತ್ತಷ್ಟು ತೀವ್ರಗೊಳಿಸಬಲ್ಲವು ಎನ್ನುವುದು ಇತ್ತೀಚಿನ ಸಂಶೋಧನೆಗಳಿಂದ ದೃಢಪಟ್ಟಿದೆ. ಇವು ಸಾಧಾರಣ ಸಮಸ್ಯೆಗಳಲ್ಲ. ಈಗಾಗಲೇ ಹೇಳಿರುವಂತೆ ವ್ಯಕ್ತಿಯಿಂದ ವ್ಯಕ್ತಿಗೆ ಇವುಗಳ ಸ್ವರೂಪ ಭಿನ್ನ. ಆಹಾರದಿಂದ ಅದು ಹೇಗೆ ಸಮಸ್ಯೆ ಹುಟ್ಟಿಕೊಳ್ಳುತ್ತದೆ ಎನ್ನುವುದು ಇದುವರೆಗೂ ನಿಗೂಢವಾಗಿಯೇ ಉಳಿದರೂ, ಆಹಾರದಿಂದ ಸಮಸ್ಯೆ ಉಂಟಾಗುತ್ತಿರುವುದಂತೂ ನಿಜ ಮತ್ತು ಯಾವ ತೆರನಾದ ಆಹಾರ ಕಿರಿಕಿರಿ ಉಂಟುಮಾಡುತ್ತಿದೆ ಎನ್ನುವುದನ್ನು ಪತ್ತೆ ಮಾಡಿದರೆ ಆ ವ್ಯಕ್ತಿಯ ಕೆಲವು ಆರೋಗ್ಯ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎನ್ನುವುದು ಅಷ್ಟೇ ಸತ್ಯ.
ಆಹಾರದ ರಿಯಾಕ್ಷನ್ ಅಥವಾ ಫುಡ್ ಅಲರ್ಜಿಯನ್ನು ತಜ್ಞರು ಹಲವು ರೀತಿಯಲ್ಲಿ ಕರೆದಿದ್ದಾರೆ. 'ಆಹಾರ ಕಿರಿಕಿರಿ' (ಫುಡ್ ಇನ್ಟಾಲರೆನ್ಸ್), 'ಆಹಾರ ಸೂಕ್ಷ್ಮತೆ' (ಫುಡ್ ಸೆನ್ಸೆಟಿವಿಟಿ), 'ಚಯಾಪಯಯ ಪ್ರತಿಕ್ರಿಯೆ' (ಮೆಟಾಬಾಲಿಕ್ ರಿಯಾಕ್ಷನ್), 'ವ್ಯತಿರಿಕ್ತ ಪ್ರತಿಕ್ರಿಯೆ' (ಅಡ್ವರ್ಸ್ ರಿಯಾಕ್ಷನ್) ಇತ್ಯಾದಿ ಹೆಸರುಗಳಿಂದ ಇದನ್ನು ಗುರುತಿಸಲಾಗುತ್ತಿದೆ. ನಮ್ಮ ಅರಿವಿಗೇ ಬಾರದ ಫುಡ್ ಅಲರ್ಜಿ ಅನೇಕ ಆರೋಗ್ಯ ಸಮಸ್ಯೆಗಳ ಮೂಲ ಎನ್ನುವುದನ್ನು ಈಗೀಗ ತಜ್ಞರು ಮತ್ತು ಸಂಶೋಧಕರು ಒತ್ತಿಒತ್ತಿ ಹೇಳುತ್ತಿದ್ದಾರೆ. ಇನ್ನೂ ಒಂದು ಸೋಜಿಗವಿದೆ. ಫುಡ್ ಅಲರ್ಜಿಗೆ ಕಾರಣ ಪತ್ತೆ ಹೇಗೆ ಸಾಧ್ಯವಾಗಿಲ್ಲವೊ ಅದೇ ರೀತಿ ಫುಡ್ ಅಲರ್ಜಿಗೆ ನಿರ್ದಿಷ್ಟವಾದ ವ್ಯಾಖ್ಯಾನವೂ ಇಲ್ಲ.
ಹಿಂದಿನ ಕಾಲದ ವೈದ್ಯರು ಕೆಲವು ಬಗೆಯ ಆಹಾರಗಳು ಕೆಲವರಲ್ಲಿ ಅಲರ್ಜಿ ಉಂಟುಮಾಡುತ್ತವೆ ಎನ್ನುವುದನ್ನು ತಮ್ಮ ಅನುಭವದಿಂದಲೇ ಕಂಡುಕೊಂಡಿದ್ದರು. ಈಗಿನವರಿಗೆ ಆಧುನಿಕ ಸಂಶೋಧನೆಗಳು ಫುಡ್ ಅಲರ್ಜಿ ಬಗ್ಗೆ ಹೊಸ ದೃಷ್ಟಿಕೋನ ಒದಗಿಸುತ್ತಿವೆ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

