ತೆರೆದ ಹೃದಯ

ದೇಹಕ್ಕೆ ಸಣ್ಣದೊಂದು ಕಾಯಿಲೆ ಕಾಡಿದರೆ ಸಾಕು, ನಾವು ಶ್ರಮದ ಕೆಲಸಗಳನ್ನೆಲ್ಲ ದೂರವಿಟ್ಟುಬಿಡುತ್ತೇವೆ. ಇನ್ನು ಶಸ್ತ್ರಚಿಕಿತ್ಸೆ ಆದರೆ ಕೇಳುವಂತೆಯೇ ಇಲ್ಲ. ಆದರೆ, 35ರ ಹರೆಯದ ಫಾದರ್ ಬೋಲ್ಮಾಕ್ಸ್ ಇದಕ್ಕೆ ಹೊರತಾಗಿದ್ದಾರೆ. ಅನಾರೋಗ್ಯ ಪೀಡಿತರಿಗೆ, ಶಸ್ತ್ರಚಿಕಿತ್ಸೆಗೊಳಗಾದವರಿಗೆ ಇವರೊಂದು ಬಗೆಯ ಸ್ಫೂರ್ತಿ.
ಗೋವಾದಲ್ಲಿ ಚರ್ಚ್ನ ಫಾದರ್ ಆಗಿರುವ ಇವರು ಸಣ್ಣ ವಯಸ್ಸಿನಲ್ಲೇ ಹೃದಯ ಶಸ್ತ್ರಚಿಕಿತ್ಸೆಗೊಳಗಾದರು. ಚೇತರಿಸಿಕೊಂಡ ನಂತರ, ಸುಮ್ಮನೆ ಕೂರಲಿಲ್ಲ. ಈಗ ದೇಶದ ಯಾವುದೇ ಮೂಲೆಯಲ್ಲಿ ಕ್ರೀಡಾ ಸ್ಪರ್ಧೆ ನಡೆದರೆ ಅಲ್ಲಿ ಬೋಲ್ಮಾಕ್ಸ್ ಹಾಜರು. ಪ್ರಶಸ್ತಿ ಗಳಿಸುವುದು ಅವರ ಉದ್ದೇಶವಲ್ಲ. ರೋಗಿಗಳಿಗೆ ಸ್ಫೂರ್ತಿ ನೀಡುವುದು ಹಾಗೂ ಯಾವುದಕ್ಕೂ ಹಿಂಜರಿಯಬೇಡಿ ಎಂದು ಸಾರುವುದು ಅವರ ಉದ್ದೇಶ. ಇವರ ಈ ಹುಮ್ಮಸ್ಸಿಗೆ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆ ವೈದ್ಯರೂ ಕಾರಣ ಎನ್ನುತ್ತಾರೆ ಬೋಲ್ಮಾಕ್ಸ್. ಈ ಬಗ್ಗೆ ಫಾದರ್ ಅವರ ಬಾಯಿಂದಲೇ ಕೇಳಿ.
ಹಿಂದೆ ನಾನು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತಿದ್ದೆ. ನಂತರ ಓದಿನತ್ತ ಹೆಚ್ಚಿನ ಗಮನ ನೀಡಿದೆ. ಶಿಕ್ಷಣದ ಬಳಿಕ ಗೋವಾದಲ್ಲಿನ ಲೂಟಿಲಮ್ ಚರ್ಚ್ನಲ್ಲಿ ಪಾದ್ರಿಯಾದೆ. ಅದಾದ ಕೆಲ ದಿನಗಳಲ್ಲಿ ಅಂದರೆ, 2010ರಲ್ಲಿ ಹೃದಯ ಸಂಬಂಧ ಕಾಯಿಲೆ ಕಾಣಿಸಿಕೊಂಡಿತು. ಅದಕ್ಕೆ 'ಅವೇಕ್ ಹಾರ್ಟ್ ಸರ್ಜರಿ' ಆಗಬೇಕಿತ್ತು. ಬೆಂಗಳೂರಿಗೆ ಬಂದು ಫೋರ್ಟಿಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ.
ಗೋವಾಗೆ ಹಿಂತಿರುಗಿ ವೈದ್ಯರು ಸೂಚಿಸಿದಂತೆ ಎಷ್ಟು ದಿನ ಬೇಕೋ ಅಷ್ಟು ವಿಶ್ರಾಂತಿ ಪಡೆದೆ. ನಂತರ ಅಲ್ಲಿನ ಕೆಲವು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. ಪ್ರಶಸ್ತಿ ಗಳಿಸಬೇಕೆಂಬ ಉದ್ದೇಶದಿಂದಲ್ಲ, ನನ್ನ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಲು. ಬೆಂಗಳೂರಿನಲ್ಲಿ 'ಟಿಸಿಎಸ್ ವರ್ಲ್ಡ್ 10 ಕೆ ಬೆಂಗಳೂರು 2013' ಕಾರ್ಯಕ್ರಮ ನಡೆಯುವ ಬಗ್ಗೆ ಶಸ್ತ್ರಚಿಕಿತ್ಸೆ ವೈದ್ಯ ವಿವೇಕ್ ಜವಳಿ ತಿಳಿಸಿದರು. ಈ ಓಟದಲ್ಲಿ ಪಾಲ್ಗೊಳ್ಳಲು ಬಂದೆ.
ಖುಷಿ ತಂದಿದೆ
ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಲು ನಮ್ಮ ಮನೆಯಲ್ಲಿ ಸಂಪೂರ್ಣ ಸಹಕಾರ ಇದೆ. ಆದರೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಎಚ್ಚರಿಸುತ್ತಾರೆ. ಈ ಸ್ಪರ್ಧೆಯಲ್ಲಿ 5 ಕಿ.ಮೀ. ಓಟದಲ್ಲಿ ಭಾಗವಹಿಸಿದ್ದೆ. ಪ್ರಶಸ್ತಿ ಸಿಗಲಿಲ್ಲ. ಆದರೆ, ಸ್ಪರ್ಧೆಯಲ್ಲಿ ಭಾಗವಹಿಸಿದ ಅನುಭವ ಸಂತಸ ತಂದಿದೆ.
ಏನಿದು ಅವೇಕ್ ಸರ್ಜರಿ?
ಅವೇಕ್ ಹೃದಯ ಸರ್ಜರಿ, ಹೆಸರೇ ಸೂಚಿಸುವಂತೆ, ರೋಗಿ ಎಚ್ಚರವಿದ್ದಾಗಲೇ ನಡೆಸುವ ಹೃದಯದ ಶಸ್ತ್ರಚಿಕಿತ್ಸೆ. ಮೊದಲು ಹೃದಯದ ಸರ್ಜರಿ ನಡೆದಾಗ, ಇಡೀ ದೇಹಕ್ಕೆ ಪ್ರಜ್ಞೆ ತಪ್ಪಿಸಲಾಗುತ್ತಿತ್ತು. ಈಗ ಹೃದಯದ ಭಾಗಕ್ಕಷ್ಟೇ ಸಂವೇದನೆ ತಪ್ಪಿಸಲಾಗುತ್ತದೆ. ರೋಗಿ ತನ್ನ ಹೃದಯದ ಚಿಕಿತ್ಸೆಗೆ ತಾನೇ ಸಾಕ್ಷಿಯಾಗಬಲ್ಲ. ಇದೇ ಅವೇಕ್ ಹಾರ್ಟ್ ಸರ್ಜರಿ. ಬೋಲ್ಮಾಕ್ಸ್ಗೆ ಇದ್ದ ಕಾಯಿಲೆಯಲ್ಲಿ, ಹೃದಯದ ರಕ್ತನಾಳದಲ್ಲಿ ರಕ್ತ ಸೋರಿಕೆ ಆಗುತ್ತಿತ್ತು. ಇದರಿಂದ ದೇಹದ ವಿವಿಧ ಭಾಗಗಳಿಗೆ ರಕ್ತ ಸಂಚರಿಸುತ್ತಿರಲಿಲ್ಲ. ಅನಿಮಿಯಾ ಕಾಯಿಲೆ ಕಾಣಿಸಿಕೊಳ್ಳುತ್ತಿತ್ತು. ಮೊದಲು ಈ ಕಾಯಿಲೆ ಕಾಣಿಸಿಕೊಂಡರೆ ಸುಮಾರು 6-8 ಇಂಚು ರಕ್ತನಾಳ ಕತ್ತರಿಸಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿತ್ತು. ಹೊಸ ವಿಧಾನದಲ್ಲಿ 3-4 ಇಂಚು ಕತ್ತರಿಸಿ ಸರ್ಜರಿ ಮಾಡಲಾಗುತ್ತದೆ. ರಕ್ತ ಹೆಚ್ಚು ಸೋರುವುದಿಲ್ಲ. ಕಡಿಮೆ ಅವಧಿಯಲ್ಲಿ ಗುಣಮುಖರಾಗಬಹುದು.
-ಶಾಂತ ತಮ್ಮಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


