ಬೈಟುಕಾಫಿ

ಸಿಸಿಬಿ SPECIAL

ಅವರು ದಕ್ಷ ಅಧಿಕಾರಿ. ಪಾತಕಿಗಳ ಪಾಲಿಗೆ ಸಿಂಹಸ್ವಪ್ನ. ಇದು ಸೂಪರ್ ಕಾಪ್‌ನ...

ಸಿಸಿಬಿ SPECIAL
Published On :

ತುಳುನಾಡಿನಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್ ಡಾ.ಎಚ್.ಎಂ. ವೆಂಕಟೇಶ್ ಪ್ರಸನ್ನ ಅಂದ್ರೆ ಯಾರಾದರೂ ಹೇಳಿಬಿಡುತ್ತಾರೆ... ಅವರು ದಕ್ಷ ಅಧಿಕಾರಿ. ಪಾತಕಿಗಳ ಪಾಲಿಗೆ ಸಿಂಹಸ್ವಪ್ನ. ಇದು ಸೂಪರ್ ಕಾಪ್‌ನ ಒಂದು ಮುಖವಷ್ಟೇ. ಇವರೊಳಗೆ ಇನ್ನೂ ಹತ್ತು ಹಲವು ಮುಖಗಳಿವೆ.
ವೆಂಕಟೇಶ್ ಅದ್ಭುತ ಮೇಷ್ಟ್ರು. ಯಕ್ಷಗಾನ ಅರ್ಥದಾರಿಗಳು. ಪ್ರವಚನಕಾರ. ಕಲಾವಿದ. ವಾಗ್ಮಿ. ವೇದಾಂತಿ. ರೋಗಮುಕ್ತ ಸಮಾಜ ನಿರ್ಮಾಣ ಮಾಡುವ ಈ ಪೊಲೀಸ್, ಡಾಕ್ಟರ್ ಕೂಡಾ ಹೌದು! ಇವರು ರಚಿಸಿದ 'ಸ್ವಾತಂತ್ರ್ಯಪೂರ್ವ ಕರ್ನಾಟಕದಲ್ಲಿ ಪೊಲೀಸ್ ವ್ಯವಸ್ಥೆ' ಸಂಶೋಧನೆ ಪ್ರಬಂಧಕ್ಕೆ ಹಂಪಿ ವಿವಿ ಡಾಕ್ಟರೇಟ್ ನೀಡಿ ಪುರಸ್ಕರಿಸಿದೆ.

ಗುರುಕುಲ ವಿದ್ಯಾರ್ಥಿ
ವೆಂಕಟೇಶ್ ಪ್ರಸನ್ನ ಅವರ ಹುಟ್ಟೂರು ಶೃಂಗೇರಿ. ಗುರುಕುಲದ ವಿದ್ಯಾರ್ಥಿ. ಸಾಮಾನ್ಯವಾಗಿ ಇಲ್ಲಿ ಓದಿದವರು ಯಾವುದೋ ಅಧ್ಯಾಪನ, ಪಂಡಿತರ ಹುದ್ದೆಗಳನ್ನು ಅಲಂಕರಿಸುತ್ತಾರೆ. ಆದರೆ, ಪ್ರಸನ್ನ ತುಳಿದ ಹಾದಿಯೇ ವಿಭಿನ್ನ. ಟಿಸಿಎಚ್ ಪದವಿ ಪಡೆದು, ಕೆಲಕಾಲ ಶಿಕ್ಷಕರೂ ಆಗಿದ್ದರು. ಬಳಿಕ ಕನ್ನಡ ಸಾಹಿತ್ಯದಲ್ಲಿ ಎಂಎ, ಕುವೆಂಪು ವಿವಿಯಲ್ಲಿ ಬಿ.ಇಡಿಯಲ್ಲಿ 10ನೇ ರ್ಯಾಂಕ್. ಕನ್ನಡ ಸಾಹಿತ್ಯ ಇವರ ನಾಲಗೆಯ ತುದಿಮೇಲುಂಟು. ರಂಗ ಕಲಾವಿದರೂ ಹೌದು. ಗನ್ ಮತ್ತು ಪೆನ್ ಎರಡನ್ನೂ ಸಮರ್ಪಕವಾಗಿ ಬಳಸಿಕೊಂಡವರು ಪ್ರಸನ್ನ. 1994ರಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿ ಮೊದಲಿಗೆ ಕೆಲಸ ಮಾಡಿದ್ದು ಆನೇಕಲ್‌ನಲ್ಲಿ. 2002ರಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಹುದ್ದೆಗೆ ಬಡ್ತಿ. ಮಂಗಳೂರಲ್ಲಿ ಕೋಮುಗಲಭೆ 2006-07ರಲ್ಲಿ ಇಬ್ಬರು ಪಾತಕಿಗಳನ್ನು ಎನ್‌ಕೌಂಟರ್‌ನಲ್ಲೂ ಮಟ್ಟ ಹಾಕಿದರು.
ಇಲಾಖೆ ಇವರ ಕೊರಳಿಗೆ ಎರಡು ಬಾರಿ ಚಿನ್ನದ ಪದಕ ಹಾಕಿದೆ. ಬಹುಮಾನಗಳ ಲೆಕ್ಕವಂತೂ ಸಾಧ್ಯವೇ ಇಲ್ಲ ಬಿಡಿ. ಕೊಲೆ ಪ್ರಕರಣ ಭೇದಿಸುವಲ್ಲಿ ಪ್ರಸನ್ನರ ಕಾರ್ಯವೈಖರಿಯನ್ನು ಎಂಥವರೂ ಮೆಚ್ಚುತ್ತಾರೆ. 2008ರಲ್ಲಿ ಆಪರೇಶನ್ ಟೆರರ್ ಕಾರ್ಯಾಚರಣೆಯಲ್ಲಿ ಮುಂಬೈ ಪೊಲೀಸರ ಜತೆ ಸೇರಿ ಇಂಡಿಯನ್ ಮುಜಾಹಿದ್ದೀನ್ ಉಗ್ರರನ್ನು ಮೊದಲ ಬಾರಿಗೆ ಬಂಧಿಸಿದ ಕೀರ್ತಿಯೂ ಇವರ ತಂಡಕ್ಕೆ ಸಲ್ಲುತ್ತದೆ. ವರುಣ್ ಗಾಂಧಿ ಹತ್ಯೆಗೆ ಸ್ಕೆಚ್ ಹಾಕಿದ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಭಂಟ ರಶೀದ್ ಮಲಬಾರಿಯನ್ನು ಬಂಧಿಸಿದ್ದು ಹೆಗ್ಗಳಿಕೆ.

ಮನೆಯೇ ಗ್ರಂಥಾಲಯ
ಇವರ ಮನೆಯಲ್ಲಿ 2,000ಕ್ಕೂ ಹೆಚ್ಚು ಪುಸ್ತಕಗಳ ರಾಶಿ ಇದೆ. ದುಡಿದ ಹೆಚ್ಚಿನ ಭಾಗ ಪುಸ್ತಕಕ್ಕೇ ಮೀಸಲು. ಕಾಲೇಜು ದಿನಗಳಲ್ಲಿ ಯಕ್ಷಗಾನ, ನಾಟಕದಲ್ಲಿ ಮಿಂಚಿಂಗೋ ಮಿಂಚಿಂಗು. ತಾಳಮದ್ದಲೆಯಲ್ಲಿ ಪ್ರಸನ್ನರ ಅರ್ಥಗಾರಿಕೆಗೆ ವಿಶೇಷ ಅರ್ಥ ಇರುತ್ತಿತ್ತು. ಭದ್ರಾವತಿ ಆಕಾಶವಾಣಿಯಲ್ಲಿ ನಾಟಕ ಕಲಾವಿದರಾಗಿ ಮಾನ್ಯತೆ ಪಡೆದವರು. ಯಕ್ಷರಂಗದ ಮೇರು ಕಲಾವಿದರಾದ ದಿ. ಕಾಳಿಂಗ ನಾವಡ, ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಜತೆ ಯಕ್ಷಗಾನ ಧ್ವನಿಸುರುಳಿ ಬಂದಿರುವುದು ಹೆಗ್ಗಳಿಕೆಗೆ ಸಾಕ್ಷಿಯಾಗಿದೆ.

ಹಿಮಾಲಯ ಏರಿದವರು!
ಎನ್‌ಸಿಸಿ ಕ್ಯಾಂಪ್ ವೇಳೆ ಹಿಮಾಲಯ ಪರ್ವತವನ್ನು 3 ಸಾವಿರ ಅಡಿ ಎತ್ತರ ಏರಿದ ಸಾಧಕರೂ ಹೌದು. ನಟ ಅರವಿಂದ್, ವೈಶಾಲಿ ಕಾಸರವಳ್ಳಿ ಜತೆ ಅಭಿನಯಿಸಿದ ಖ್ಯಾತಿಯೂ ಇವರದ್ದು. ಒಟ್ಟಿನಲ್ಲಿ ಇಂಥ ಬಹುಮುಖ ವ್ಯಕ್ತಿತ್ವದ ಅಧಿಕಾರಿಗಳು ಪೊಲೀಸ್ ಇಲಾಖೆಯಲ್ಲಿ ಅಪರೂಪ. ಪ್ರಸನ್ನ ಅವರಿಗೆ ನೀವೂ ಶುಭಾಶಯ ಕೋರಿ, ಮೊ. 94489 53755.

- ಜಿತೇಂದ್ರ ಕುಂದೇಶ್ವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.