ಬೈಟುಕಾಫಿ

ನಾಗತನು

ಕರಾವಳಿಗೂ ನಾಗನಿಗೂ ಅವಿನಾಭಾವ ಸಂಬಂಧವಿದೆ. ನಾಗಾರಾಧನೆಯ ವಿಶಾಲ ಸಂಪ್ರದಾಯಗಳಾದ ನಾಗದರ್ಶನ,...

ನಾಗತನು
Published On :

ಬೆಳ್ತಂಗಡಿಯಲ್ಲಿ ಇತ್ತೀಚೆಗೆ ನಾಗತನು ಎಂಬ ವಿಶಿಷ್ಟ ಆರಾಧನೆಗೆ ಸಾವಿರಾರು ಮಂದಿ ಸಾಕ್ಷಿಯಾದರು.

ಕರಾವಳಿಗೂ ನಾಗನಿಗೂ ಅವಿನಾಭಾವ ಸಂಬಂಧವಿದೆ. ನಾಗಾರಾಧನೆಯ ವಿಶಾಲ ಸಂಪ್ರದಾಯಗಳಾದ ನಾಗದರ್ಶನ, ನಾಗಮಂಡಲ ಮುಂತಾದ ವಿಧಿಗಳು ಉಡುಪಿ ಮತ್ತು ಮಂಗಳೂರು ಪರಿಸರಕ್ಕೆ ಸೀಮಿತವಾಗಿವೆ. ಇವುಗಳಲ್ಲಿ ನಾಗತನು ಎಂಬ ವಿಶಿಷ್ಟ ಆರಾಧನೆಯೂ ಒಂದು.
ನಾಗತನುವಿಗಾಗಿ ಬಣ್ಣದ ಹುಡಿಗಳಿಂದ ಹತ್ತಾರು ಅಡಿ ವಿಸ್ತಾರದ ಕಲಾತ್ಮಕವಾದ ಆಶ್ಲೇಷಾ ಬಲಿಯ ಮಂಡಲ ರಚಿಸಲಾಗುತ್ತದೆ. ಮಂಡಲದ ಸುತ್ತ ನೇರಳೆಮರದ ಎಲೆಗಳೇ ಮುಂತಾಗಿ ಬಲಿಯ ಎಲೆಗಳನ್ನು ಹರಡಿ ಅದರ ಮೇಲಿನಿಂದ ಕೆಂಪು ಮತ್ತು ಹಳದಿ ವರ್ಣದ ಮಲ್ಲಿಗೆ ಮತ್ತು ಗೊಂಡೆ ಹೂಗಳ ಮಾಲೆಗಳಿಂದ ಸಿಂಗರಿಸುತ್ತಾರೆ. ಶಿರೋಭಾಗದಲ್ಲಿ ಮಲ್ಲಿಗೆಯ ದಂಡೆಗಳಿಂದ ಅಲಂಕಾರ.
ರಾತ್ರೆ ಆವರಿಸುತ್ತಿದ್ದಂತೆ ನಾಗತನುವಿನ ವಿಧಿಗಳು ಆರಂಭವಾಗುತ್ತವೆ. ಆಶ್ಲೇಷಾ ಬಲಿಯ ಮಂಡಲದಲ್ಲಿ ಸಮಸ್ತ ದೇವತೆಗಳನ್ನು ಆಹ್ವಾನಿಸಿ ಅರ್ಘ್ಯ ಪಾದ್ಯವೇ ಮೊದಲಾದ ಷೋಡಶೋಪಚಾರಗಳಿಂದ ಮಂತ್ರವಿಧಿಗಳಿಂದ ಆರಾಧಿಸಿ ಪ್ರಸನ್ನಗೊಳಿಸುತ್ತಾರೆ. ಬಳಿಕ ಅರಶಿಣ ಹುಡಿ ಬೆರೆತ ಅನ್ನದಿಂದ ಗೋಪುರಾಕೃತಿಯ ಮುದ್ದೆಗಳನ್ನು ಮಾಡಿ ಅದರ ನಡುವೆ ತುಪ್ಪದಲ್ಲಿ ಕರಿದ ಅಪ್ಪವನ್ನಿಡುತ್ತಾರೆ. ಒಟ್ಟು ಎಂಬತ್ತೆರಡು ಮುದ್ದೆಗಳ ನಡುವೆ ಒಂದೊಂದು ಕೋಲುಬತ್ತಿ ಉರಿಸಿಟ್ಟು ತಕ್ಷಕ ಕಾರ್ಕೋಟಕ ಮುಂತಾದ ನಾಗಕುಲದ ಮುಖ್ಯರನ್ನು ಒಬ್ಬೊಬ್ಬರನ್ನಾಗಿ ಆಮಂತ್ರಿಸಿ ಇದನ್ನು ಬಲಿಯಾಗಿ ಅರ್ಪಿಸಲಾಗುತ್ತದೆ. ಮಂಡಲದ ಸುತ್ತಲೂ ತೆಂಗಿನ ಎಳೆಯ ಗರಿಗಳಿಂದ ತಯಾರಿಸಿದ ಒಂಬತ್ತು ಬಲಿ ಮಂಟಪಗಳಲ್ಲಿ ಬಲಿ ಸಾಮಗ್ರಿಗಳನ್ನು ತುಂಬಿಸಿ ಕುಂಬಳಕಾಯಿಗಳ ಮೇಲೆ ಹಣತೆ ಉರಿಸಿಡುತ್ತಾರೆ. ಮಂಡಲದ ಸುತ್ತಲೂ ಸಹಸ್ರಾರು ಹಣತೆಗಳು ಬೆಳಗಿ ವಾತಾವರಣದಲ್ಲಿ ಭಯಭಕ್ತಿ ತುಂಬುತ್ತವೆ.
ಗ್ರಾಮದ ಜನರೆಲ್ಲ ಒಂದಾಗುವ ಈ ವಿಶೇಷ ಆರಾಧನೆಗಾಗಿ ಪ್ರತಿಯೊಂದು ಮನೆಯಿಂದಲೂ ತಂದು ಹೊಯ್ಯುವ ತಂಬಾಲಿನಿಂದ ಹಂಡೆಗಳು ಭರ್ತಿಯಾಗುತ್ತವೆ. ತಂತ್ರಿಗಳು ನಾಗರನ್ನು ಆವಾಹಿಸಿ ಆರಾಧಿಸಿದ ಬಳಿಕ ಈ ಹಾಲನ್ನು ಕೊಂಬುಗಿಂಡಿಯಿಂದ ಮಂಡಲದ ಸುತ್ತಲೂ ಹೊಯ್ಯಲಾರಂಭಿಸುತ್ತಾರೆ. ಕ್ಷಣಕ್ಷಣಕ್ಕೂ ತಂತ್ರಿಗಳ ನಡೆ ವೇಗಗೊಳ್ಳುತ್ತದೆ. ಹಾಲನ್ನು ಹೊಯ್ಯುವ ವೇಗವೂ ತ್ವರಿತೊಳ್ಳುತ್ತದೆ. ಅವರ ಮೈಗೆ ನಾಗದೇವತೆ ಆವೇಶಗೊಳ್ಳುತ್ತಿದ್ದಂತೆ ಮೈಮರೆಯುತ್ತಾರೆ. ಅದೇ ವೇಗದಲ್ಲಿ ಮೂಟೆಗಟ್ಟಲೆ ಅರಳನ್ನೂ ಸಮರ್ಪಿಸಿ ನಾಗದೇವತೆಯನ್ನು ಸಂಪ್ರೀತಗೊಳಿಸುತ್ತಾರೆ. ಉತ್ತರಾರ್ಧದಲ್ಲಿ ಹಾಲಿನೊಂದಿಗೆ ಜೇನು ಸಕ್ಕರೆ ತುಪ್ಪ ಮೊಸರು ಎಳನೀರು ಅರಶಿಣದ ಹುಡಿ ಬೆರೆಸಿದ ಮಧುರಾಮೃತವನ್ನು ನಾಗನಿಂದ ಆವೇಶಿತರಾದ ತಂತ್ರಿಗಳು ಜೋಡಿಸಿದ ಅಡಕೆಮರದ ಸಿಂಗಾರದ ಸೂಡಿಯಿಂದ ಮೊಗೆಮೊಗೆದು ತರ್ಪಣವಾಗಿ ನೀಡುತ್ತಾರೆ. ಆಗ ಕೈಯಲ್ಲಿ ಉರಿಯುವ ಎರಡು ದೊಂದಿಗಳಿರುತ್ತವೆ. ಮಂಡಲದ ಮೇಲೆ ನೂರಾರು ಲೀಟರು ಹಾಲು ಹೊಳೆಯಾಗಿ ಹರಿಯುತ್ತದೆ. ಹಿಮ್ಮೇಳದಲ್ಲಿ ಮೊಳಗುವ ಚೆಂಡೆ, ಬೇರೆ ಬೇರೆ ವಾದ್ಯಗಳ ನಿನಾದ ಸೇರಿದವರನ್ನು ಭಕ್ತಿಯ ಪರಾಕಾಷ್ಠೆಗೆ ಒಯ್ಯುತ್ತದೆ.
ಇಂಥದೊಂದು ಅಪರೂಪದ ಆರಾಧನೆ ಇತ್ತೀಚೆಗೆ ಬೆಳ್ತಂಗಡಿಗೆ ಸಮೀಪದ ಮೇಲಂತಬೆಟ್ಟಿನ ಬದಿನಡೆಯ ನಾಗಬ್ರಹ್ಮ ಆಲಯದಲ್ಲಿ ನಡೆಯಿತು. ಇದನ್ನು ನಡೆಸೆಕೊಟ್ಟವರು ಮಡಂತ್ಯಾರಿನ ಮುಂಡೂರು ಗೋಪಾಲಕೃಷ್ಣ ತಂತ್ರಿಗಳು. ಮಂಡಲ ರಚಿಸಿದವರು ಪುತ್ತೂರಿನ ಯೋಗೀಶ ಕಲ್ಲೂರಾಯ. ಸಹಸ್ರಾರು ಭಕ್ತರು ಸೇರಿ ಆರಾಧನೆಯ ರೋಮಾಂಚಕ ಅನುಭವ ಪಡೆದರು.

-ಪ.ರಾಮಕೃಷ್ಣ ಶಾಸ್ತ್ರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.