ಸಾಠ್ ಕಬರ್
ಬಿಜಾಪುರದ ಅಸಂಖ್ಯ ಸುಂದರ ಸ್ಮಾರಕಗಳಲ್ಲಿ ಇದೊಂದು ಕಪ್ಪು ಸ್ಮಾರಕ. ಮುಟ್ಟಲು ಹೋದರೆ ಹೃದಯ ವಿದ್ರಾವಕ ಕಥೆಯನ್ನು...

ಬಿಜಾಪುರದ ಅಸಂಖ್ಯ ಸುಂದರ ಸ್ಮಾರಕಗಳಲ್ಲಿ ಇದೊಂದು ಕಪ್ಪು ಸ್ಮಾರಕ. ಮುಟ್ಟಲು ಹೋದರೆ ಹೃದಯ ವಿದ್ರಾವಕ ಕರಾಳ ಕಥೆಯನ್ನು ಹೇಳುತ್ತದೆ ಇದು. ಬಿಜಾಪುರದ ಪಾಲಿಗೆ ಅಳಿಸಲಾಗದ ಕರಾಳ ಗುರುತು. ಅದಕ್ಕಾಗಯೇ ಇದನ್ನು ಕಪ್ಪು ಕಲ್ಲುಗಳಿಂದಲೇ ನಿರ್ಮಿಸಲಾಗಿದೆಯೇನೋ! ಈಗವುಗಳನ್ನು ನೋಡಿದರೆ, ಸ್ಮಾರಕದ ಮೇಲೆ ಯಾರೋ ಸುಣ್ಣದ ನೀರು ಚೆಲ್ಲಿದ್ದಾರೇನೋ ಎನಿಸುತ್ತದೆ.
ಇತಿಹಾಸ ಎಂದರೆ ಆಂಗ್ಲ ಭಾಷೆಯಲ್ಲಿ 'ಹಿಸ್ಟರಿ. ಅದು ಅವನ (His) ಕಥೆ. ಅದು ಅವಳ ( She) ಕಥೆ ಅದದ್ದು ಬಹಳ ಕಡಿಮೆ. ವೀರ ವನಿತೆಯರ ಕಥೆಗಳು ಅಲ್ಲಲ್ಲಿ ಸಿಗುತ್ತವಾದರೂ, ಸ್ತ್ರೀ ಶೋಷಣೆಯ ಕಣ್ಣೀರ ಕಥೆಗಳು ವ್ಯಾಪಕವಾಗಿ ದಾಖಲಾದದ್ದು ತೀರಾ ಕಡಿಮೆ. ಅಂಥ ಅಪರೂಪದ ಅನನ್ಯ ಕಥೆಯನ್ನು ಸಾರುವ ಸ್ಮಾರಕ ಸಾಠ್ ಕಬರ್ (ಅರವತ್ತು ಗೋರಿಗಳು).
ಈ ಜಿಲ್ಲೆಯ ನಿರ್ಲಕ್ಷ್ಯಕ್ಕೊಳಗಾದ ಸ್ಮಾರಕಗಳಲ್ಲಿ ಇದೂ ಒಂದು. ಇಲ್ಲಿನ ಭಾರತೀಯ ಪುರಾತತ್ವ ಇಲಾಖೆಯ ಫಲಕದಲ್ಲಿ 'ಸಂರಕ್ಷಿತ ಸ್ಮಾರಕ' ಎಂದು ಅಚ್ಚಾಗಿದೆ. ಆದರೆ, ಸ್ಮಾರಕಗಳನ್ನು ಸಂರಕ್ಷಿಸುವ ಕೆಲಸ ನಡೆದಿಲ್ಲ. ಮಳೆ- ಬಿಸಿಲು- ಗಾಳಿಗೆ ಮೈಯ್ಯೊಡ್ಡಿಕೊಂಡ ಸಮಾಧಿಗಳು ಅಂದಗೆಟ್ಟು 'ನಾವಿನ್ನು ಬಹಳ ವರ್ಷ ಬಾಳುವುದಿಲ್ಲ ಎಂದು ಸಾರಿ ಹೇಳುತ್ತವೆ. ಒಂದು ಸಮಾಧಿಯಂತೂ ಸಮಾಧಿ ರೂಪವನ್ನು ಕಳೆದುಕೊಂಡು ಯಾವುದೋ ಹಳೇ ಕಲ್ಲಿನಂತಾಗಿದೆ. ಐತಿಹಾಸಿಕ ಬಾವಿಯ ಗೋಡೆಗಳು ಕುಸಿದಿವೆ. ಮಣ್ಣು- ಕಲ್ಲುಗಳಿಂದ ತುಂಬಿದ ಬಾವಿಯ ತಳದಲ್ಲಿ ಸಣ್ಣ ಪುಟ್ಟ ಗಿಡಮರಗಳು ಬೆಳೆದು ಪುಟ್ಟ ಕಾಡಾಗಿದೆ.
ಇದನ್ನು ನೋಡಲು ಹೋಗುವುದೂ ಅಷ್ಟು ಸುಲಭವಲ್ಲ. ಇದು ಇಂಥಲ್ಲೇ ಇದೆ ಎಂದು ಸೂಚಿಸುವ ಯಾವ ಮಾರ್ಗಸೂಚಿಗಳೂ ಇಲ್ಲ. ಇನ್ನೂ ವಿಚಿತ್ರವೆಂದರೆ, ಬಿಜಾಪುರದವರಿಗೇ ಈ ಸ್ಮಾರಕದ ಬಗ್ಗೆ ಗೊತ್ತಿಲ್ಲ. ಅಲ್ಲಿಗೆ ಹೋಗಲು ನೇರವಾದ ರಸ್ತೆಯೂ ಇಲ್ಲ. ತೊರವಿ ರಸ್ತೆಯಲ್ಲಿರುವ ಕುಲಕರ್ಣಿ ಲೇಔಟ್ ಮೂಲಕ ಹಾದು, ಕಲ್ಲು- ಮುಳ್ಳುಗಳಿಂದ ಕೂಡಿದ ಕಾಲು ದಾರಿಯಲ್ಲಿ ನಡೆದೇ ಹೋಗಬೇಕು.
ಇಲ್ಲಿನ ವಿಶಾಲವಾದ ಒಂದೇ ಕಟ್ಟೆಯ ಮೇಲೆ ಈ 63 ಗೋರಿಗಳಿವೆ. ಮೊದಲ ನಾಲ್ಕು ಸಾಲುಗಳಲ್ಲಿ ಪ್ರತಿ ಸಾಲಿಗೆ 11ರಂತೆ 44 ಗೋರಿಗಳಿವೆ. 5ನೇ ಸಾಲಿನಲ್ಲಿ ಕೇವಲ 5 ಗೋರಿಗಳಿವೆ. 6- 7ನೇ ಸಾಲಿನಲ್ಲಿ ತಲಾ ಏಳೇಳರಂತೆ 14 ಗೋರಿಗಳಿವೆ. ಇವೆಲ್ಲ ಮಹಿಳೆಯರ ಗೋರಿಗಳೇ! ಇಲ್ಲಿ ಸಮಾಧಿಯಾದ ಎಲ್ಲ ಮಹಿಳೆಯರನ್ನೂ ಒಂದೇ ದಿನ ನೀರಲ್ಲಿ ಮುಳುಗಿಸಿ, ಕೊಂದು ಹುಗಿಯಲಾಗಿದೆ. ಈ ಬಗ್ಗೆ ಇತಿಹಾಸದಲ್ಲಿ ವಿವರಗಳೇನೂ ದೊರೆಯದು.
ಚರಿತೆ ಹೀಗಿದೆ...
ಇದೆಲ್ಲ ನಡೆದದ್ದು 17ನೇ ಶತಮಾನದಲ್ಲಿ. ಆಗ ವಿಜಾಪುರವನ್ನು ಎರಡನೇ ಅಲಿ ಆದಿಲ್ಶಾಹಿ ಆಳುತ್ತಿದ್ದ. ದೆಹಲಿಯ ಔರಂಗಜೇಬ ಹಾಗೂ ಮರಾಠಾ ದೊರೆ ಶಿವಾಜಿಯ ದಾಳಿಗಳಿಂದ ಆದಿಲ್ ಶಾಹಿ ತೀರಾ ಕಿರಿಕಿರಿ ಅನುಭವಿಸುತ್ತಿದ್ದ. ಹೀಗಾಗಿ, ಆತನಿಗೆ ತಕ್ಷಣ ಪರಿಹಾರ ಬೇಕಿತ್ತು. ಆಗ ಆತನ ಸ್ಮರಣೆಗೆ ಬಂದದ್ದು ಅಫ್ಜಲ್ ಖಾನ್. ಸೇನಾಪತಿಯಾಗಿದ್ದ ಅಫ್ಜಲ್ ಖಾನ್, ಆದಿಲ್ಶಾಹಿ ರಾಜಪರಿವಾರದ ಮಹತ್ವದ ವ್ಯಕ್ತಿಯಾಗಿದ್ದ. ಸುಂದರನೂ ಅಜಾನುಭಾಹುವೂ ಆದ ಖಾನ್ ಹತ್ತು ಸಾವಿರ ಸೈನಿಕರ ಪಡೆಗೆ ಮುಖಂಡ. ಇಂಥ ಶೂರ ಅಫ್ಜಲ್ಖಾನ್ಗೆ ಒಂದು ದೌರ್ಬಲ್ಯವಿತ್ತು. ಆತನ ಜೀವನದ ನಡೆಯನ್ನು ಶುಭ- ಅಶುಭ ಶಕುನಗಳು ನಿರ್ಧರಿಸುತ್ತಿದ್ದವು. ಯುದ್ಧಗಳಲ್ಲಿ ಭಾಗವಹಿಸುವ ಮುನ್ನ ಆತ ಭವಿಷ್ಯ ಕೇಳಿಯೇ ಮುಂದುವರಿಯುತ್ತಿದ್ದ.
ಶಿವಾಜಿಯ ದಾಳಿಯನ್ನು ನಿಯಂತ್ರಿಸಲು ಅಫ್ಜಲ್ಖಾನನೇ ಸೂಕ್ತ ವ್ಯಕ್ತಿ ಎಂದು ತೀರ್ಮಾನಿಸಿಬಿಟ್ಟ ಆದಿಲ್ಶಾಹಿ. ಯಥಾಪ್ರಕಾರ ಖಾನ್ ಜ್ಯೋತಿಷಿಗಳ ಮೊರೆ ಹೋದನಂತೆ. 'ಈ ಬಾರಿ ನೀ ಗೆಲ್ಲಲಾರೆ ಹಾಗೂ ಜೀವಂತ ಹಿಂದಿರುಗುವುದೂ ಸಂದೇಹಾಸ್ಪದ' ಎಂಬ ಮಾತನ್ನು ಕೇಳಿ ವಿಚಲಿತನಾಗುತ್ತಾನೆ. ಬೇರೆ ಬೇರೆ ಜ್ಯೋತಿಷಿಗಳಿಂದಲೂ ಇದೇ ಮಾತು ಬರುತ್ತದೆ. ಇದರಿಂದ ಆತ ಯುದ್ಧಕ್ಕೆ ಹೋಗುವುದನ್ನೇ ತಪ್ಪಿಸಿಕೊಳ್ಳಬಹುದಿತ್ತು. ಅದಕ್ಕೆ ಬದಲಾಗಿ ಆತ ಮನೆಯಿಂದಲೇ ಯುದ್ಧವನ್ನು ಆರಂಭಿಸುತ್ತಾನೆ. ತಾನು ಮಡಿದ ನಂತರ ತನ್ನ 64 ಪತ್ನಿಯರು ಬೇರೆಯವರ ಪಾಲಾಗಬಾರದು. ಅದಕ್ಕಾಗಿ ಅವರನ್ನೆಲ್ಲ ಕೊಂದೇ ಯುದ್ಧಕ್ಕೆ ಹೋಗಬೇಕೆಂದು ತೀರ್ಮಾನಿಸುತ್ತಾನೆ.
ಊರಿನಿಂದ ದೂರದಲ್ಲಿರುವ ಬಾವಿಯಲ್ಲಿ ಅವರನ್ನೆಲ್ಲ ಮುಳುಗಿಸಿ ಕೊಲ್ಲುತ್ತಾನೆ. ಅವರಲ್ಲಿ ಇಬ್ಬರು ಪ್ರಾಣಾಪಾಯದಿಂದ ಓಡಿ ಹೋಗುತ್ತಾರೆ. ಬೆನ್ನಟ್ಟಿದ ಖಾನನ ಸೈನಿಕರು ಅವರನ್ನೂ ಕೊಲ್ಲುತ್ತಾರೆ. ಓಡಿಹೋದ ಇಬ್ಬರಲ್ಲಿ ಒಬ್ಬಳು ಬೇಗ ಸಿಕ್ಕಿರಬಹುದು. ಅವಳ ಹೆಣವನ್ನು ತಂದು ಸಾಠ್ ಕಬರ್ನಯೇ ದಫನ್ ಮಾಡಿರಬಹುದು. ಹೀಗಾಗಿ ಅಲ್ಲಿ 63 ಗೋರಿಗಳಿವೆ. ಇನ್ನೊಬ್ಬಳು ಕುದುರೆ ಹತ್ತಿ ಬಹಳ ದೂರ ಹೋದ ಮೇಲೆ ಸಿಕ್ಕಿದ್ದರಿಂದ ಅವಳನ್ನು, ಕೊಂದ ಸ್ಥಳದಲ್ಲಿಯೇ ದಫನ್ ಮಾಡುತ್ತಾರೆ. ಹೀಗೆ ದೂರ ಓಡಿ ಹೋಗಿ ಸತ್ತವಳ ಹೆಸರು ಖತೀಜಾ ಬೀಬಿ. ಅವಳ ಸಮಾಧಿ ಇರುವ ಸ್ಥಳದಲ್ಲಿ ಈಗ ಒಂದು ಊರು ಇದೆ. ಅದನ್ನು ಅವಳ ಹೆಸರಿನಿಂದಲೇ ಕರೆಯುತ್ತಾರೆ. ವಿಜಾಪುರದಿಂದ 7 ಕಿ.ಮೀ. ಅಂತರದಲ್ಲಿರುವ ಆ ಊರೇ ಖತೀಜಾಪುರ.
ಅಫ್ಜಲ್ಖಾನನ 64 ಹೆಂಡತಿಯರಲ್ಲಿ, ಖತಿಜಾ ಬೀಬಿಯ ಹೆಸರು ಮಾತ್ರ ಈಗ ಆ ಊರಿನ ಹೆಸರಿನಲ್ಲಿ ಉಳಿದುಕೊಂಡಿದೆ. ಉಳಿದ 63 ಜನರ ಹೆಸರುಗಳು, ಯಾರಿಗೂ ಕಾಣದಂತೆ ಗೋರಿಯಲ್ಲಿ ಹುಗಿದು ಮಣ್ಣಲ್ಲಿ ಮಣ್ಣಾಗಿ ಹೋಗಿಬಿಟ್ಟಿವೆ.
ಒಂದು ಜ್ಯೋತಿಷ್ಯ ಹೀಗೆಲ್ಲ ಕೆಲಸ ಮಾಡಿತು. ತಾನು ಸಾಯುವುದು ಖಚಿತವೆಂದು ತಿಳಿದೇ ಎಲ್ಲ ಪತ್ನಿಯರನ್ನು ಕೊಂದು ಒಂದೇ ಸ್ಥಳದಲ್ಲಿ ಸಮಾಧಿ ಮಾಡಲು ವ್ಯವಸ್ಥೆ ಮಾಡಿದ್ದನೆಂದರೆ ಅವನೆಂಥ ಭೂಪ ಊಹಿಸಿ! ಅವರ ಪಕ್ಕದಲ್ಲೇ ತಾನೂ ಇರಬೇಕೆಂದು ಯೋಜಿಸಿದ್ದ. ಅದಕ್ಕಾಗಿ ತನಗಾಗಿಯೇ ಒಂದು ಸಮಾಧಿಯನ್ನು ಸಾಠ್ ಕಬರ್ನಲ್ಲಿ ಸಿದ್ಧಪಡಿಸಿದ್ದ. ಭವಿಷ್ಯವಾಣಿಯಂತೆ ಶಿವಾಜಿ ವಿರುದ್ಧದ ಯುದ್ಧದಲ್ಲಿ ಆತ ಸತ್ತ. ಅಫ್ಜಲ್ಖಾನ್ನ ಶವಸಂಸ್ಕಾರವನ್ನು ಪ್ರತಾಪಗಡದಲ್ಲಿ ನೆರವೇರಿಸಲಾಯಿತು! ಅಲ್ಲಿಯೇ ಆತನಿಗಾಗಿ ಒಂದು ಸುಂದರ ಸ್ಮಾರಕ ನಿರ್ಮಿಸಿ, ಮುಸ್ಲಿಂ ವಿಧಿವಿಧಾನಗಳ ಪ್ರಕಾರ ಎಲ್ಲವೂ ನಡೆಯುವಂತೆ ನೋಡಿಕೊಳ್ಳಲಾಯಿತು. ವೈರಿಯ ಸಾವಿನ ಜತೆಗೆ ವೈರತ್ವವೂ ಸಾಯುತ್ತದೆ ಎಂದು ನಂಬಿರುವ ಶಿವಾಜಿಯ ವ್ಯಕ್ತಿತ್ವದ ಹಿರಿಮೆಯನ್ನು ಇಲ್ಲಿ ಕಾಣಬಹುದು.
ಬಿಜಾಪುರದ ಅಫ್ಜಲ್ಖಾನನ ಸಮಾಧಿ ಇನ್ನೂ ಖಾಲಿಯಾಗಿಯೇ ಇದೆಯಂತೆ.
ನಿಧಿಗಳ್ಳರ ಹಾವಳಿ
ಐತಿಹಾಸಿಕ ಸ್ಮಾರಕಗಳ ವಿಚಾರಗಲ್ಲಿ ಸರ್ಕಾರದ್ದು ಎಂಥ ದಿವ್ಯ ನಿರ್ಲಕ್ಷ್ಯ ಎನ್ನುವುದು ಇಲ್ಲೂ ಎದ್ದು ಕಾಣುತ್ತದೆ. ಬಿಜಾಪುರ ನಗರದಿಂದ ತೊರವಿ ರಸ್ತೆಯಲ್ಲಿ ಏಳು ಕಿ.ಮೀ ದೂರದಲ್ಲಿದೆ ಸಾಠ್ ಕಬರ್. ಬರೋಬ್ಬರಿ ಐದು ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಆದರೆ ಪ್ರವಾಸಿಗರ ಇದರ ಬಗ್ಗೆ ಅರಿವು ಕಡಿಮೆ. ಗೋಲ್ಗುಂಬಜ್ ನೋಡಿ ಮರಳುವವರೇ ಹೆಚ್ಚು. ಅದು ಹೋಗಲಿ. ನಿರ್ವಹಣೆ ವಿಚಾರದಲ್ಲೂ ಪ್ರವಾಸೋದ್ಯಮ, ಪ್ರಾಚ್ಯವಸ್ತು ಇಲಾಖೆಗಳೆರಡದ್ದೂ ಮೌನ. ಇದು ಸಾಲದು ಎಂಬಂತೆ ಈ ಐತಿಹಾಸಿಕ ಸ್ಮಾರಕಕ್ಕೆ ನಿಧಿಗಳ್ಳರ ಹಾವಳಿ ಬೇರೆ. ನಿಧಿ ಆಸೆಯಿಂದ ಆಗಾಗ ಇಲ್ಲೆಲ್ಲ ಅಗೆಯುವುದು, ಗೋರಿಗಳಿಗೆ ಹಾನಿ ಮಾಡುವುದು ನಡೆಯುತ್ತಲೇ ಇರುತ್ತದೆ.
- ಸುಭಾಸ ಯಾದವಾಡ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


