ಚಟಪಡಿಕೆ

ಬಸವಳಿಸಿಬಿಟ್ಟ ಫೋರ್ಟ್ವಿನ್!
ಕಳೆದ ಸೋಮವಾರ ಅನಾಮಿಕ ನಂಬರ್ನಿಂದ ಒಂದು ಕರೆ ಬಂತು. ಕರೆ ಸ್ವೀಕರಿಸಿದರೆ ನಾನು 'ಯಲಹಂಕದ ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದೀನಿ. ದಯವಿಟ್ಟು ಬಾ' ಎಂದು ವಿನಂತಿಸಿತು ಆ ಕಡೆಯ ದನಿ. ಪಾಪ ಕಷ್ಟದಲ್ಲಿದ್ದಾನೆ ಎಂದೇ ಮಂಗಳವಾರ ಆಸ್ಪತ್ರೆಗೆ ಹೋದೆ. ಬೆಡ್ ಮೇಲೆ ಮೂಳೆಗಳ ಮೇಲೆ ಅಂಟಿಕೊಂಡಿರುವ ಚರ್ಮ ಮಾತ್ರ ಉಳಿದಿರುವ ದೇಹವೊಂದು ಮಲಗಿತ್ತು. ಮುಖದ ತುಂಬಾ ವಿಚಿತ್ರವಾಗಿ ಬೆಳೆದ ಗಡ್ಡ, ಕೆದರಿದ ಕೂದಲು, ಒಳಗೆ ಎಲ್ಲೋ ಗುಣಿಯಲ್ಲಿರುವ ಕಣ್ಣುಗಳು. 35 ವರ್ಷದ ಬಸವರಾಜ್ 90 ವರ್ಷದ ಮುದುಕನಂತೆ ಕಾಣುತ್ತಿದ್ದ.
ಮೈಮೇಲೆ ಹೊದ್ದುಕೊಂಡಿದ್ದ ಬೆಡ್ಶೀಟನ್ನು ನನ್ನನ್ನು ಕಂಡ ಕೂಡಲೇ ಭದ್ರವಾಗಿ ಮುಚ್ಚಿಕೊಳ್ಳುತ್ತಿದ್ದ. ನನಗೆ ಅನುಮಾನ ಬಂದು ಬೆಡ್ಶೀಟ್ ತೆಗೆದು ನೋಡಿದೆ, ಅಲ್ಲಿ ಒಂದು ಕಾಲು ಮಾತ್ರ ಇತ್ತು! ಮತ್ತೊಂದು ಕಾಲಿನ ಮೊಣಕಾಲಿಗೆ ಬ್ಯಾಂಡೇಜ್ ಸುತ್ತಲಾಗಿತ್ತು. ನಿನ್ನೆ ತಾನೆ ಒಂದು ಕಾಲು ತೆಗೆದಿದ್ದಾರೆ, ಮತ್ತೊಂದು ಕಾಲು ಅನುಮಾನ. ಎರಡು ದಿನಗಳಲ್ಲಿ ಅದನ್ನು ತೆಗೆಯುವುದೋ ಉಳಿಸುವುದೋ ತಿಳಿಸುತ್ತಾರೆ ಎಂದು ಕಣ್ಣಲ್ಲಿ ನೀರು ತುಂಬಿಕೊಂಡೇ ಹೇಳಿದ. ಅವನು ಕಾಣಿಸಿದಾಗಲೆಲ್ಲಾ ಬಾಯಿಗೆ ಬಂದಂತೆ ಬೈಯುತ್ತಿದ್ದ ನಾನು ಅಂದು ಏನು ಹೇಳಬೇಕೋ ತಿಳಿಯಲಿಲ್ಲ. ಜೇಬಿನಲ್ಲಿದ್ದ ಪುಡಿಗಾಸು ಅವನ ಕೈಯಲ್ಲಿಟ್ಟು, ತೆಗೆದುಕೊಂಡು ಹೋಗಿದ್ದ ಹಣ್ಣು ಬೆಡ್ ಮೇಲಿಟ್ಟು ಒಂದು ಮಾತೂ ಆಡದೆ ಎದ್ದು ಬಂದೆ.
----
ಈ ಬಸವರಾಜ್ ಕನಕಪುರ ತಾಲೂಕಿನವನು. ಅದ್ಯಾಕೆ ಅವನು ಆಂಧ್ರದ ಗಡಿಯಲ್ಲಿರುವ ನಮ್ಮ ಊರಿಗೆ ಬಂದ ಎಂಬುದು ಇಂದಿಗೂ ನಿಗೂಢ. ಆದರೆ ಬಂದವನು ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನೀಷಿಯನ್ ಆಗಿ ಕೆಲಸ ಮಾಡಿಕೊಂಡು ಉತ್ತಮ ವ್ಯಕ್ತಿಯಾಗಿದ್ದ. ಅದೇ ಕಾರಣಕ್ಕೆ ಎಸ್ಬಿಎಂ ಬ್ಯಾಂಕಿನ ಕ್ಯಾಷಿಯರ್ ಆಗಿದ್ದ ಬಾಬುರೆಡ್ಡಿ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದ್ದ. ಅಲ್ಲಿಯ ವರೆಗೆ ಎಲ್ಲವೂ ಸರಿಯಿತ್ತು. ಆದರೆ ಅದೊಂದು ದಿನ ಬಾಬುರೆಡ್ಡಿ ಕೆಲಸಕ್ಕೆ ಬರುತ್ತಿರುವಾಗ ಅಪಘಾತವಾಯಿತು. ಅಪಘಾತದಲ್ಲಿ ಎರಡೂ ಕಾಲಿಗೆ ಪೆಟ್ಟು ಬಿದ್ದು ಬೆಂಗಳೂರಿನ ಆಸ್ಪತ್ರೆಗೆ ಸೇರಿಸಲಾಯಿತು.
ಎರಡೂ ಕಾಲು ಮುರಿದಿದ್ದ ಕಾರಣ ವೈದ್ಯರು ಆಪರೇಷನ್ ಮಾಡಿ ಕಾಲುಗಳಿಗೆ ರಾಡ್ ಹಾಕಿದರು. ಅದರ ನೋವು ತಡೆಯಕ್ಕಾಗದೆ ಒದ್ದಾಡುತ್ತಿರುವುದನ್ನು ಕಂಡ ವೈದ್ಯರು ಅರಿವಳಿಕೆ ಮದ್ದು ನೀಡುತ್ತಿದ್ದರು. ಹಾಗೆ ವಿಪರೀತವಾದ ನೋವು ಕಾಣಿಸಿಕೊಂಡಾಗ ವೈದ್ಯರ ಸಲಹೆ ಮೇರೆಗೆ ರೋಗಿಗೆ ಅರಿವಳಿಕೆ ಬರುವ 'ಫೋರ್ಟ್ವಿನ್' ಎಂಬ ಇಂಜೆಕ್ಷನ್ ನೀಡಬಹುದಾಗಿದೆ. ಅದೂ ತೀವ್ರ ಪೆಟ್ಟುಬಿದ್ದು ರಕ್ತಸ್ರಾವವಾಗಿ ರೋಗಿ ನರಳುತ್ತಿರುವಾಗ, ಹೊಟ್ಟೆ ನೋವು ಮುಂತಾದ ನಿಯಂತ್ರಣಕ್ಕೆ ಬಾರದ ನೋವುಗಳಿಂದ ರೋಗಿ ಪರದಾಡುತ್ತಿರುವಾಗ ಈ ಅರಿವಳಿಕೆ ಬರುವ 'ಫೋರ್ಟ್ವಿನ್' ತೀವ್ರ ನಿದ್ದೆ ತರಿಸುವ 'ಕಾಂಪೋಸ್' ಎಂಬ ಇಂಜೆಕ್ಷನ್ಗಳನ್ನು ಪರಿಣತ ವೈದ್ಯರು ಮಾತ್ರ ನೀಡುವ ಅವಕಾಶವನ್ನು ವೈದ್ಯಶಾಸ್ತ್ರದ ಕಾನೂನಿನಡಿಯಲ್ಲಿ ನೀಡಲಾಗಿದೆ. ಅಂದು ಬಾಬುರೆಡ್ಡಿಗೆ ವೈದ್ಯರು ನೀಡಿದ್ದೂ ಅದೇ ಇಂಜೆಕ್ಷನ್ನನ್ನು. ಅವರಿಗೆ 'ಡಯಾಬಿಟಿಕ್' ಇದ್ದ ಕಾರಣ ಕಾಲುಗಳ ಗಾಯ ಬೇಗ ವಾಸಿಯಾಗಲಿಲ್ಲ. ಗಾಯ ವಾಸಿಯಾಗುವವರೆಗೆ 'ಫೋರ್ಟ್ವಿನ್' ಬಳಸುವಂತೆ ವೈದ್ಯರು ಸೂಚಿಸಿದ್ದರಾ ಅಥವಾ ನೋವು ತಡೆಯಲಾರದೆ ಅವರೇ ಅದನ್ನು ಬಲವಂತವಾಗಿ ಪಡೆಯುತ್ತಿದ್ದರಾ ಗೊತ್ತಿಲ್ಲ. ಅಂತೂ 'ಫೋರ್ಟ್ವಿನ್' ಎಂಬ ಇಂಜೆಕ್ಷನ್ ಸ್ವಲ್ಪ ಹೆಚ್ಚಿಗೆ ಎಂಬಷ್ಟು ಬಾಬುರೆಡ್ಡಿ ಪಡೆದಿದ್ದಂತೂ ನಿಜ.
ಗಾಯ ವಾಸಿಯಾಗುವ ವೇಳೆಗೆ ಆತ 'ಫೋರ್ಟ್ವಿನ್'ಗೆ ದಾಸನಾಗಿದ್ದ. ಅದಿಲ್ಲದೆ ಆತ ಏನೂ ಕೆಲಸ ಮಾಡುತ್ತಿರಲಿಲ್ಲ. ಊಟ, ತಿಂಡಿ ಎಲ್ಲವೂ ಬಿಟ್ಟಿರಲು ಸಿದ್ಧ ಆದರೆ 'ಫೋರ್ಟ್ವಿನ್' ಮಾತ್ರ ಬೇಕೇಬೇಕು ಎಂಬ ಮಟ್ಟಕ್ಕೆ ತಲುಪಿದ್ದ. ಬೆಳಗ್ಗೆ ನಿದ್ದೆಯಿಂದ ಎದ್ದಾಗಿನಿಂದ ಸಂಜೆ ಹಾಸಿಗೆ ಮೇಲೆ ಮಲಗುವ ವರೆಗೆ ಕನಿಷ್ಠ 10 'ಫೋರ್ಟ್ವಿನ್' ಇಂಜೆಕ್ಷನ್ ಆತ ಪಡೆಯುತ್ತಿದ್ದ!
ಈತನ ಸ್ಥಿತಿ ಕಂಡ ವೈದ್ಯರು ಅಪಾಯದ ಮಟ್ಟ ಮುಟ್ಟಿದ್ದಾನೆ ಎಂಬುದು ಅರಿವಾಗುತ್ತಲೇ ಯಾರೂ ಆತನಿಗೆ 'ಫೋರ್ಟ್ವಿನ್' ಇಂಜೆಕ್ಟ್ ಮಾಡಲು ನಿರಾಕರಿಸಿದರು. ಮತ್ತು ಅದನ್ನು ಬಳಸದಂತೆ ಎಚ್ಚರಿಕೆ ನೀಡಿದರು. ಆದರೆ ಅಡಿಕ್ಷನ್ ಎಂಬ ಮಹಾಮಾರಿಗೆ ತುತ್ತಾಗಿದ್ದ ಬಾಬುರೆಡ್ಡಿ ವೈದ್ಯರ ಸಲಹೆ ಪಾಲಿಸುವ ಬದಲು ತನ್ನ ಅಳಿಯ, ಲ್ಯಾಬ್ಟೆಕ್ನೀಷಿಯನ್ ಆಗಿದ್ದ ಬಸವರಾಜ್ನಿಂದ ಇಂಜೆಕ್ಷನ್ ಪಡೆಯುವ ಸಾಹಸಕ್ಕೆ ಮುಂದಾದರು.
ಕೇವಲ ಎಂಟು ರುಪಾಯಿ ಬೆಲೆಯ 'ಫೋರ್ಟ್ವಿನ್' ಇಂಜೆಕ್ಷನ್ ಒಂದು ಶೆಡ್ಯೂಲ್ಡ್ 'ಎಚ್' ಡ್ರಗ್. ಅದನ್ನು ವೈದ್ಯರ ಸಲಹೆ ಇಲ್ಲದೆ ಪಡೆಯುವಂತಿಲ್ಲ. ಜೊತೆಗೆ ಔಷಧಿ ಅಂಗಡಿಯವರೂ ವೈದ್ಯರ ಚೀಟಿ ಇಲ್ಲದೆ ಮಾರುವಂತಿಲ್ಲ. ಆದರೆ ಕಾನೂನು ಕೇವಲ ಕಾಗದಕ್ಕೆ ಮಾತ್ರ ಸೀಮಿತ ಎಂಬುದಕ್ಕೆ ಇದೂ ಒಂದು ಉದಾಹರಣೆ. ಎಲ್ಲ ಔಷಧಿ ಅಂಗಡಿಗಳಲ್ಲೂ ಇಂದು ವೈದ್ಯರ ಚೀಟಿ ಇಲ್ಲದೆ 'ಫೋರ್ಟ್ವಿನ್' ಯಥೇಚ್ಚವಾಗಿ ಮಾರಾಟವಾಗುತ್ತಿದೆ. ಹಾಗಾಗಿಯೇ ಬಾಬುರೆಡ್ಡಿಗೆ 'ಫೋರ್ಟ್ವಿನ್' ಕೊರತೆ ಕಾಣದೆ ಸಿಗುತ್ತಿತ್ತು.
ಕೊನೆಕೊನೆಗೆ ಆತ ಔಷಧಿ ಅಂಗಡಿಗೆ ಹೋಗಿ 'ಫೋರ್ಟ್ವಿನ್' ಇಂಜೆಕ್ಷನ್ ತರುವ ಶಕ್ತಿಯನ್ನೂ ಕಳೆದುಕೊಂಡರು. ಆಗಲಾದರು ಮನೆಯವರು ಎಚ್ಚರಿಕೆ ವಹಿಸಿದ್ದರೆ ಈ ಅನಾಹುತ ತಪ್ಪುತ್ತಿತ್ತಾ ಗೊತ್ತಿಲ್ಲ. ಆದರೆ ಇದು ಮತ್ತೊಂದು ತಿರುವು ಪಡೆದಿದ್ದಂತೂ ಸತ್ಯ. ಅಂಗಡಿಗೆ ಹೋಗಿ ಬರಲು ಅಸಹಾಯಕನಾದ ಬಾಬುರೆಡ್ಡಿ ತನ್ನ ಅಳಿಯನನ್ನೇ 'ಫೋರ್ಟ್ವಿನ್' ಅಂಗಡಿಯಿಂದ ತರುವಂತೆ ಸೂಚಿಸಿದರು.
ಹೀಗೆ ಬಸವರಾಜ್ ಔಷಧಿ ಅಂಗಡಿಯಿಂದ 'ಫೋರ್ಟ್ವಿನ್' ತಂದು ಮಾವನಿಗೆ ಹಾಕುತ್ತಿರುವಾಗ ಇದರ ಅನುಭವ ಹೇಗಿರುತ್ತದೆ ಎಂಬ ಕುತೂಹಲ ಒಂದು ದಿನ ಆತನಿಗೂ ಮೂಡಿತು. ಹಾಗೆ ಅನ್ನಿಸಿದ್ದೇ ಒಂದು ದಿನ ಒಂದು 'ಫೋರ್ಟ್ವಿನ್' ಇಂಜೆಕ್ಷನ್ ತೆಗೆದುಕೊಂಡ. ಅಷ್ಟೇ ಅದರ ನಂತರ ಆತ ಹಿಂದಿರುಗಿ ನೋಡಿಲ್ಲ, ತನ್ನ ಮಾವನನ್ನೂ ಮೀರಿ ಆತ ಬೆಳೆದು ಬಿಟ್ಟ.
ದಿನಕ್ಕೆ 10 'ಫೋರ್ಟ್ವಿನ್' ಇಂಜೆಕ್ಷನ್ ಪಡೆಯುತ್ತಿದ್ದ ಎಂದರೆ ಯಾವ ಮಟ್ಟದಲ್ಲಿ ಆತ ಅದಕ್ಕೆ ದಾಸನಾಗಿದ್ದ ಎಂಬುದನ್ನು ಊಹಿಸಿ. ಅಂಗಡಿಗಳಲ್ಲಿ ದೊರೆಯುತ್ತಿದ್ದರೆ ಆತ ಇನ್ನೆಷ್ಟು ಇಂಜೆಕ್ಷನ್ ಪಡೆಯುತ್ತಿದ್ದನೋ... ಆದರೆ ದಿನಕ್ಕೆ ಇಂತಿಷ್ಟು ಮಾತ್ರ ಎಂದು ಔಷಧಿ ಅಂಗಡಿಯವರು ನೀಡುತ್ತಿದ್ದ ಕಾರಣ ಆತ 10ರಿಂದ 12 ಇಂಜೆಕ್ಷನ್ ಮಾತ್ರ ಪಡೆಯುತ್ತಿದ್ದ.
ಇದು ಹೀಗಿರುವಾಗಲೇ ಆತನಿಗೆ ಒಬ್ಬ ಮಗ ಹುಟ್ಟಿದ. ಅತಿಯಾದ 'ಫೋರ್ಟ್ವಿನ್' ಸೇವನೆಯಿಂದ ಸಂಸಾರದಲ್ಲಿ ಬಿರುಕು ಕಾಣಿಸತೊಡಗಿತು. ಬುದ್ಧಿ ಹೇಳಲು ಮಾವನಿಗೆ ಮುಖ ಇರಲಿಲ್ಲ. ಕಾರಣ ಆತನಿಂದಲೇ ಅಳಿಯ ಆ ಸ್ಥಿತಿ ತಲುಪಿದ ಎಂಬ ಪಾಪಪ್ರಜ್ಞೆ ಆತನನ್ನು ಕಾಡುತ್ತಿತ್ತು. ಅದೊಂದು ದಿನ ಬಾಬುರೆಡ್ಡಿ ತೀರಿಕೊಂಡ. ಆತ ಕೆಲಸದಲ್ಲಿರುವಾಗಲೇ ಮೃತಪಟ್ಟ ಕಾರಣ ಬರಬೇಕಾದ ಹಣ ಹೇರಳವಾಗಿ ಬಂತು. ಗಂಡು ಮಕ್ಕಳಿಲ್ಲದ ಕಾರಣ ಅಷ್ಟೂ ಹಣ ಬಸವರಾಜ್ನ ಹೆಂಡತಿಯ ಕೈಗೆ ಬಂತು.
ಹಣ ಬಂದ ಕೂಡಲೇ ಹೆಂಡತಿ ಬಸವರಾಜ್ಗೆ ವಿಚ್ಛೇದನ ಕೊಟ್ಟಳು. ಏಕಾಂಗಿಯಾದ ಬಸವರಾಜ್ ತನ್ನ ಚಟವನ್ನು ಮತ್ತಷ್ಟು ಹೆಚ್ಚಿಸಿದ ಪರಿಣಾಮ ಈತ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಿಂದ ವೈದ್ಯರು ಆತನನ್ನು ಹೊರ ಹಾಕಿದರು. ಕೆಲಸವೂ ಇಲ್ಲದೆ ಸಂಸಾರವೂ ಇಲ್ಲದೆ ಕೇವಲ 'ಫೋರ್ಟ್ವಿನ್' ಒಂದೇ ಜೀವನದಲ್ಲಿ ಉಳಿದಿದೆ ಎಂಬ ಮಟ್ಟದಲ್ಲಿ ಆತ ಮುಂದುವರಿದ.
ಈ 'ಫೋರ್ಟ್ವಿನ್' ಇಂಜೆಕ್ಷನ್ ಐವಿ. ಅಂದರೆ ಇಂಜೆಕ್ಷನ್ಗಳಲ್ಲಿ ಐಎಂ ಮತ್ತು ಐವಿ ಎಂಬ ಎರಡು ರೀತಿ ಇರುತ್ತದೆ. ಐಎಂ ಎಂದರೆ ಮಾಂಸಕ್ಕೆ ನೀಡುವ ಮದ್ದು. ಐವಿ ಎಂದರೆ ನರಕ್ಕೆ ನೀಡುವ ಮದ್ದು. ಈ 'ಫೋರ್ಟ್ವಿನ್' ಐವಿ ಆದ ಕಾರಣ ನರಕ್ಕೆ ತೆಗೆದುಕೊಳ್ಳಬೇಕು. ಹಾಗೆ ದಿನಕ್ಕೆ ಹತ್ತು ಹದಿನೈದು ಬಾರಿ ನರಕ್ಕೆ ಇಂಜೆಕ್ಷನ್ ಚುಚ್ಚಿದ ಪರಿಣಾಮ ಬಸವರಾಜ್ ಶರೀರದಲ್ಲಿ ನರಗಳೇ ಮಾಯವಾದವು. ಚುಚ್ಚಿದ ಕಡೆಯೇ ಪದೇ ಪದೇ ಚುಚ್ಚಿದ ಪರಿಣಾಮ ಗಾಯಗಳಾಯಿತು.
ಗಾಯಗಳು ವಾಸಿಯಾಗದೆ ಉಲ್ಬಣಗೊಳ್ಳತೊಡಗಿತು. ಅಪಾಯ ಕೈ ಮೀರುತ್ತಿದೆ ಎಂಬುದು ಆತನಿಗೂ ತಿಳಿದಿತ್ತು. ಆದರೆ ಆರೋಗ್ಯಕ್ಕಿಂತ ಆತನಿಗೆ 'ಫೋರ್ಟ್ವಿನ್' ಅಮಲೇ ಮುಖ್ಯವಾಗಿತ್ತು. ಹಾಗಾಗಿ ಎರಡೂ ಕೈ ಮತ್ತು ಎರಡೂ ಕಾಲುಗಳು ಗಾಯಗಳಾಗಿ ಕೊಳೆಯತೊಡಗಿದವು. ಆರಂಭದಲ್ಲೇ ಸೂಕ್ತ ಚಿಕಿತ್ಸೆ ದೊರೆತಿದ್ದರೆ ಗುಣವಾಗುತ್ತಿತ್ತೇನೋ, ಆದರೆ ಸಮಯ ಮೀರಿದ ಕಾರಣ ಆತನ ಒಂದು ಕಾಲು ತೆಗೆದು ಮತ್ತೊಂದು ಕಾಲು ತೆಗೆಯಬೇಕೆಂಬ ಸತ್ಯದ ಜೊತೆಗೆ ವಾಸಿಯಾಗದಿದ್ದರೆ ಕೈಗಳಿಗೂ ಇದೇ ಪರಿಸ್ಥಿತಿ ಬರುವ ಸೂಚನೆಗಳಿದೆ ಎಂದು ವೈದ್ಯರು ಹೇಳಿದ್ದಾರೆ. ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಬಸವರಾಜ್ ಈಗಲೂ 'ಫೋರ್ಟ್ವಿನ್'ಗಾಗಿ ಹಂಬಲಿಸುತ್ತಿದ್ದಾನೆ. ಆದರೆ ವೈದ್ಯರು ಅದಕ್ಕೆ ಅವಕಾಶ ನೀಡುತ್ತಾರಾ ಗೊತ್ತಿಲ್ಲ.
ಇಷ್ಟೆಲ್ಲ ಹೇಳಲು ಕಾರಣ ಉದ್ಯಾನ ನಗರಿ ಬೆಂಗಳೂರಿನಲ್ಲಿ ಇತ್ತೀಚೆಗೆ ಅಪಾರ ಪ್ರಮಾಣದ ಮಾದಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ನಗರದ ಬಹುತೇಕ ಪ್ರತಿಷ್ಠಿತ ಶಾಲಾ ಕಾಲೇಜುಗಳ ಆವರಣಗಳಲ್ಲಿ ಮಾದಕವಸ್ತುಗಳ ಮಾರಾಟ ಮತ್ತು ಬಳಕೆ ಆಗುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಇದೆ ಎಂಬ ಅಂಶ ತಿಳಿದುಬಂದಿದೆ. ನೂರು ವರ್ಷದ ಕನಸು ಹೊತ್ತು ಪೋಷಕರು ಮಕ್ಕಳನ್ನು ಶಾಲಾಕಾಲೇಜುಗಳಿಗೆ ಸೇರಿಸುವ ಸಮಯವಿದು.
ಕೇವಲ ಮಕ್ಕಳನ್ನು ಪ್ರತಿಷ್ಠಿತ ಕಾಲೇಜಿನಲ್ಲಿ ಓದಿಸುತ್ತಿದ್ದೇವೆ ಎಂಬ ಹುಂಬುತನ ಬಿಟ್ಟು ಮಕ್ಕಳ ಚಲನವಲನಗಳ ಮೇಲೂ ಒಂದು ಕಣ್ಣಿಡಿ ಅವರನ್ನು ಮಾದಕ ವಸ್ತುಗಳ ಚಟದಿಂದ ದೂರ ಇರುವಂತೆ ಎಚ್ಚರವಹಿಸಿ ಎಂಬುದೇ ಇದಕ್ಕೆ ಕಾರಣ. ಇಲ್ಲವಾದರೆ ಪರಿಸ್ಥಿತಿ ಕೈಮೀರಿದರೆ ಬಸವರಾಜ್ಗೆ ಬಂದ ಸ್ಥಿತಿ ಬೇರೊಬ್ಬರಿಗೆ ಬಾರದಿರಲಿ ಎಂಬುದೇ ನಮ್ಮ ಆಶಯ.
- ಅಶ್ವತ್ಥನಾರಾಯಣ್ ಎಲ್.
sathyajns@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


