ಬೈಟುಕಾಫಿ

ಕಳೆದದ್ದು ನಮ್ಮದಲ್ಲ

ಕಳೆದದ್ದು ನಮ್ಮದಲ್ಲ
Published On :

ಯಾವುದು ಇರುತ್ತದೋ ಅದು ಇದ್ದಾಗ ನಮಗೆ ಬೇಡವಾಗಿರುತ್ತದೆ. ನಮ್ಮಲ್ಲಿ ಇಲ್ಲದುದರ ಬಗೆಗೇ ಮನಸ್ಸು ತುಡಿಯುತ್ತಿರುತ್ತದೆ. ಇದ್ದದ್ದನ್ನು ಕಳೆದುಕೊಂಡಾಗ ಅದರ ಮೌಲ್ಯ ನಮಗೆ ಅರ್ಥವಾಗುತ್ತದೆ. ಆದರೆ ಅಷ್ಟರಲ್ಲಾಗಲೇ ಅದು ನಮ್ಮಿಂದ ಬಹುದೂರ ಹೋಗಿ ಬಿಟ್ಟಿರುತ್ತದೆ. ಆಗಲೇ...ಅಯ್ಯೋ ಅದನ್ನು ಕಳೆದುಕೊಂಡು ಬಿಟ್ಟೆವಲ್ಲಾ ಅಂತ ಮರುಗಲಾರಂಭಿಸುತ್ತೇವೆ. ಇದೇ ಅಲ್ಲವೇ ಜೀವನ! ಹೌದು. ಬದುಕೆಂದರೆ ಹಾಗೆಯೇ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ ಎಂದು ಕವಿ ಅಡಿಗರು ಯಾವತ್ತೋ ಹೇಳಿ ಹೋಗಿದ್ದಾರೆ. ದುರಂತವೆಂದರೆ ಕೊನೇ ಪಕ್ಷ ಕಳೆದುಕೊಂಡ ಮೇಲಾದರೂ ನಾವು ಬುದ್ಧಿ ಕಲಿಯುವುದಿಲ್ಲ. ಕಳೆದು ಹೋಗುತ್ತಿದೆ ಎಂಬುದು ಅರಿವಾಗುತ್ತಿರುವಾಗಲೂ ಎಚ್ಚೆತ್ತುಕೊಳ್ಳುವುದಿಲ್ಲ. ಅಂಥ ಸಂದರ್ಭದಲ್ಲೇ ನಮ್ಮ ವಿವೇಚನೆ ಕೈ ಕೊಟ್ಟಿರುತ್ತದೆ. ಯೋಚನೆಗಳು ಪೆಕರಪೆಕರನಂತೆ ವರ್ತಿಸಲಾರಂಭಿಸುತ್ತದೆ. ಯಾವ ಸಂಯಮ, ತಾಳ್ಮೆಗಳು ನಿಜವಾಗಿ ಅಗತ್ಯವಿರುತ್ತದೋ ಅದನ್ನೇ ಕಳೆದುಕೊಂಡು ಹುಚ್ಚಿಗೆ ಬಿದ್ದವರಂತೆ ಆಡುತ್ತಿರುತ್ತೇವೆ. ಕಳೆದುಕೊಂಡಾಗ ಅದು ಕಳೆದು ಹೋಯಿತು ಎಂದು ಹಲುಬುತ್ತ, ಎಲ್ಲವೂ ಮುಗಿದು ಹೋಯಿತು ಎಂದುಕೊಂಡು ದಿಕ್ಕಾಪಾಲಾಗುವ ಬದಲು ಕೊನೇಪಕ್ಷ ಅಳಿದುಳಿದ ಬದುಕನ್ನಾದರೂ ಒಟ್ಟುಗೂಡಿಸಿಕೊಂಡು ಮತ್ತೆ ಅದನ್ನು ಕಟ್ಟಿಕೊಳ್ಳುವುದು ಬುದ್ಧಿವಂತಿಕೆ. ಒಂದಂತೂ ಸತ್ಯ, ನಾವು ಕಳೆದುಕೊಂಡದ್ದನ್ನು ಏನು ಮಾಡಿದರೂ ಮತ್ತೆ ಪಡೆಯಲು ಸಾಧ್ಯವೇ ಇಲ್ಲ. ಆದರೆ ಒಂದಷ್ಟು ಪ್ರಯತ್ನಪಟ್ಟರೆ, ಹಠಕ್ಕೆ ಬಿದ್ದು ಸಾಧಿಸಿದರೆ ಜೀವನದಲ್ಲಿ ಹೊಸತನ್ನು ಗಳಿಸಿಕೊಳ್ಳಲು ಖಂಡಿತಾ ಸಾಧ್ಯವಿದೆ. ಯಾರಿಗೆ ಗೊತ್ತು, ಒಂದಷ್ಟು ಶಾಂತವಾಗಿ ಯೋಚಿಸಿ ಮುನ್ನಡಿ ಇಟ್ಟರೆ, ಸೂಕ್ತ ಯೋಜನೆಯೊಂದಿಗೆ ತಾಳ್ಮೆಯಿಂದ ಸಾಗಿದರೆ ಕಳೆದುಕೊಂಡದ್ದಕ್ಕಿಂತ ಹೆಚ್ಚಿನದು, ಅದಕ್ಕಿಂತ ಉತ್ತಮವಾದುದೇ ನಮ್ಮ ಪಾಲಿಗೆ ದಕ್ಕಿಬಿಡಬಹುದೇನೋ! ಅಸಾಧ್ಯವೆಂಬುದು ಈ ಜಗತ್ತಿನಲ್ಲಿ ಯಾವುದೂ ಇಲ್ಲ. ಹಾಗೆಯೇ ಇಲ್ಲಿ ಏನು ಬೇಕಾದರೂ ಆಗಬಹುದು ಎಂಬುದನ್ನು ನೆನಪಿಡಿ. ನೋವು ಮರೆತು ನಡೆಯಿರಿ.

- ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.