ಆಕಾಶಕ್ಕೆ ಹಾಸಿದ ಪಲ್ಲಂಗ!

ನಾವು ಕೇಪ್‌ಟೌನ್‌ಗೆ ಹೋದ ಮರುದಿನವೇ ಟೇಬಲ್ ಮೌಂಟನ್‌ಗೆ ಹೋಗಬೇಕಿತ್ತು...
ಆಕಾಶಕ್ಕೆ ಹಾಸಿದ ಪಲ್ಲಂಗ!
Updated on: 

ನಾವು ಕೇಪ್‌ಟೌನ್‌ಗೆ ಹೋದ ಮರುದಿನವೇ ಟೇಬಲ್ ಮೌಂಟನ್‌ಗೆ ಹೋಗಬೇಕಿತ್ತು. ಆದರೆ, ಟೇಬಲ್ ಕ್ಲಾತ್ ಹಾಸಿದಂತೆ ಮೋಡಗಳು ಬಂದು ಕುಳಿತಿದ್ದವು. ಮೂರ್ನಾಲ್ಕು ತಾಸುಗಳ ಬಳಿಕ ಮೋಹಿನಿಯ ಬಿಳಿ ಸೀರೆಯಂತಾಗಿ ಮಧ್ಯಾಹ್ನವಾಗುವ ಹೊತ್ತಿಗೆ ಮೆಲ್ಲಗೆ ಕರಗಿ ಹೋಗುತ್ತಿತ್ತು. ಮರುದಿನವೂ ಹಾಗೇ ಆಯಿತು. ನಾನು ಉಳಿದ ಹೋಟೆಲ್ ರೂಮಿನಿಂದ ಬೆಳಗ್ಗೆ ಬೆಳಗ್ಗೆ ಎದ್ದು ಹೊರಗೆ ಇಣುಕಿದರೆ ಪುನಃ ಮೋಡದ ಚಾದರವೇ ಟೇಬಲ್ ಕ್ಲಾತ್. ಮೂರನೆಯ ದಿನವೂ ಇದೇ ಕಾರಣಕ್ಕೆ ಟೇಬಲ್ ಮೌಂಟನ್ ಕಣ್ಣಾಮುಚ್ಚಾಲೆ ಆಟವಾಡಿತು. ನನಗ್ಯಾಕೋ ಸಣ್ಣ ದುಗುಡ ಹುಟ್ಟಿಕೊಂಡಿತು. ಕೇಪ್‌ಟೌನ್‌ಗೆ ಹೋಗಿ ಟೇಬಲ್ ಮೌಂಟನ್ ನೋಡದೇ ಹೋಗೋದುಂಟಾ? ಶ್ರವಣಬೆಳಗೊಳಕ್ಕೆ ಹೋಗಿ ಗೊಮ್ಮಟೇಶ್ವರನನ್ನು ನೋಡದೇ ಹೋದರೆ ಏನಾಗಬಹುದು? ಜನ ಕೇಪ್‌ಟೌನ್‌ಗೆ ಹೋಗೋದೇ ಟೇಬಲ್ ಮೌಂಟನ್ ನೋಡಲು. ಅದನ್ನೇ ನೋಡದೆ ಬರಿಗೈಲಿ ಹೋದರೆ ದಕ್ಷಿಣ ಆಫ್ರಿಕಾ ಪ್ರವಾಸವೇ ವ್ಯರ್ಥ.
ಡೋಂಟ್ ವರಿ, ನಾಳೆಯ ಹವಾಮಾನ ವರದಿ ಪ್ರಕಾರ ಮೋಡಗಳಿರೊಲ್ಲ. ಶುಭ್ರ ಆಕಾಶವಿರುತ್ತದೆ. ಟೇಬಲ್ ಮೌಂಟನ್‌ಗೆ ಬೆಳಗ್ಗೆ ಬೇಗನೆ ಹೋಗೋಣ, ರೆಡಿಯಾಗಿರಿ ಎಂದ ಗೈಡ್ ಅಬ್ದುಲ್. ನೋಡಲು ತವಕಿಸುತ್ತಿರುವ, ಹಪಹಪಿಸುತ್ತಿರುವ ವಸ್ತುವನ್ನು ಮೂರು ದಿನ ನಮ್ಮ ಮುಂದೆಯೇ ಮುಸುಕು ಹಾಕಿ ಈಗ ತೋರಿಸುವೆ, ಆಗ ತೋರಿಸುವೆ, ನಾಳೆ ತೋರಿಸುವೆ ಅಂತ ತಾಳ್ಮೆ ಪರೀಕ್ಷೆ ಮಾಡಿದರೆ ಹೇಗಾಗಬಹುದೋ ಹಾಗಾಗಿತ್ತು ನಮ್ಮ ಪರಿಸ್ಥಿತಿ!
ಅಂದು ಬೆಳಗ್ಗೆ ಎಂಟು ಗಂಟೆಯ ವೇಳೆಗೆ ಸೂರ್ಯನ ಕಿರಣ ಟೇಬಲ್ ಮೇಲೆ ಬಿದ್ದು ಸುತ್ತಲೂ ಚಾಚಿಕೊಂಡಿರುವ ಕೇಪ್‌ಟೌನ್ ನಗರದ ಮೇಲೆ ಪುಟಿದಿತ್ತು. ಇಡೀ ನಗರದಲ್ಲಿ ಎಲ್ಲಿಯೇ ನಿಂತರೂ ಕಾಣುವ ಈ ಗುಡ್ಡ ಅಂದ್ರೆ ಗುಡ್ಡವಲ್ಲದ, ಪರ್ವತ ಅಂದ್ರೆ ಪರ್ವತವೂ ಅಲ್ಲದ, ಶಿಖರವಿಲ್ಲದಿದ್ದರೂ ಇಡೀ ಕೇಪ್‌ಟೌನ್‌ಗೆ ಮಾತ್ರವಲ್ಲ ದಕ್ಷಿಣ ಆಫ್ರಿಕಾಕ್ಕೆ ಶಿಖರಪ್ರಾಯವಾಗಿರುವ ಈ ಟೇಬಲ್ ಮೌಂಟನ್ ಆಫ್ರಿಕಾ ಖಂಡದ ಪ್ರೇಕ್ಷಣೀಯ ತಾಣಗಳಲ್ಲೊಂದು.
ಅಷ್ಟೇ ಏಕೆ, ಜಗತ್ತಿನ ಏಳು ನೈಸರ್ಗಿಕ ಅದ್ಭುತವೆನ್ನಿ, ಅಚ್ಚರಿಯನ್ನಿ, ವಿಸ್ಮಯವೆನ್ನಿ ಆ ಪೈಕಿ ಟೇಬಲ್ ಮೌಂಟನ್ ಸಹ ಒಂದು. ದೂರದಿಂದ ಬೃಹತ್ ಗಾತ್ರದ ಟೇಬಲನ್ನು ಇಟ್ಟರೆ ಹೇಗೆ ಕಾಣುವುದೋ ಅದೇ ರೀತಿ ಕಾಣುವ ಈ ಟೇಬಲ್ ಮೌಂಟನ್, ಪ್ರತಿದಿನ ಕನಿಷ್ಠ ಹತ್ತು ಸಾವಿರ ಜನರನ್ನು ತನ್ನ ತಲೆಮೇಲೆ ಕೂರಿಸಿಕೊಳ್ಳುತ್ತದೆ. ಸಮುದ್ರಮಟ್ಟದಿಂದ ಹನ್ನೊಂದು ನೂರು ಮೀಟರ್ ಎತ್ತರದ ಈ ಮೌಂಟನ್ ತುದಿ ಹೆಸರಿಗೆ ಅನ್ವರ್ಥ್ಥವಾಗುವಂತೆ ಸಪಾಟ.
ಕೇಪ್‌ಟೌನ್ ನಗರವನ್ನು ಅಲ್ಲಿಂದ ನೋಡುವ ಆನಂದವೇ ಆನಂದ. ಈ ನಗರದ ಸೌಂದರ್ಯವನ್ನು ನಿಜವಾಗಿಯೂ ಅನಾವರಣ ಮಾಡಿದ್ದು ಟೇಬಲ್ ಮೌಂಟನ್. ಇಲ್ಲದಿದ್ದರೆ ಅದು ಎಲ್ಲ ನಗರಗಳಂತೆ ಮಾಮೂಲಿ ಎಂದು ಅನಿಸುತ್ತಿತ್ತೇನೋ. ಅಲ್ಲಿಗೆ ಹೋಗಲು ಪರ್ವತಾರೋಹಿಗಳಿಗೆ, ಚಾರಣಪ್ರಿಯರಿಗೆ, ಸೈಕಲ್‌ಸವಾರರಿಗೆ, ಸಾಹಸಿ ಪ್ರವಾಸಿಗರಿಗೆ ಬೇರೆಯದೇ ದಾರಿಯಿದೆ. ಆದರೆ, ಸಾಮಾನ್ಯ ಪ್ರವಾಸಿಗರಿಗೆ ಕೇಬಲ್‌ಕಾರ್ ಹೇಳಿ ಮಾಡಿಸಿದಂತಿದೆ. ಒಳಗಿಂದಲೇ ಗಿರಕಿ ಹೊಡೆಯುವ ಕೇಬಲ್‌ಕಾರಿನಲ್ಲಿ ಕುಳಿತರೆ ಕೆಳಗಿಂದ ಟೇಬಲ್ ಮೌಂಟನ್ ತಲುಪುವ ಹೊತ್ತಿಗೆ ಮುನ್ನೂರ ಅರವತ್ತು ಡಿಗ್ರಿ ತಿರುಗಿಸಿ, ಆ ಅದ್ಭುತ, ಆಕರ್ಷಕ ದೃಶ್ಯಗಳನ್ನು ನಿಮಗೊಪ್ಪಿಸುತ್ತದೆ. ಸುಮಾರು ಮುನ್ನೂರು ಮೀಟರ್ ಏರುವ ಕೇಬಲ್‌ಕಾರ್ ಅನುಭವ ಸಿಂಪ್ಲಿ ಗ್ರೇಟ್!
ಸಂಪೂರ್ಣ ಸ್ಯಾಂಡ್ ಸ್ಟೋನ್‌ನಿಂದ ಮೂಡಿರುವ ಈ ಟೇಬಲ್ ಮೌಂಟನ್ ಆಕಾಶಕ್ಕೆ ಹಾಸಿದ ಪಲ್ಲಂಗದಂತೆ ಗೋಚರಿಸುತ್ತದೆ. 1926ರಲ್ಲಿಯೇ ಇಲ್ಲಿಗೆ ಹೋಗಲು ಕೇಬಲ್‌ಕಾರ್ ಅಳವಡಿಸುವ ಕೆಲಸ ಆರಂಭವಾಗಿ, ಮೂರು ವರ್ಷಗಳ ನಂತರ ಮುಗಿಯಿತು. ಹೋಗಲು- ಬರಲು ಎರಡೇ ಕಾರುಗಳಿದ್ದರೂ, ಒಂದೊಂದರಲ್ಲಿ 65 ಜನ ಹೋಗುವಷ್ಟು ದೊಡ್ಡದಿದೆ.
ಟೇಬಲ್ ಮೌಂಟನ್ ಎಂಥ ಮನಮೋಹಕ ಜಾಗದಲ್ಲಿದೆ ಅಂದ್ರೆ ಅದರ ಎಡಕ್ಕೆ ಸಮುದ್ರ ಕಿನಾರೆಗೆ ತಾಕಿಕೊಂಡು ಸಿಂಹದ ಮೂತಿಯ ಪರ್ವತ (ಲಯನ್ ಹೆಡ್ ಮೌಂಟನ್) ಹಾಗೂ ಬಲಕ್ಕೆ ಡೆವಿಲ್ಸ್ ಪೀಕ್ ಎಂಬ ಎರಡು ಪರ್ವತಗಳಿವೆ. ಇವೆರಡೂ ಟೇಬಲ್ ಮೌಂಟನ್‌ಗಿಂತ ಚಿಕ್ಕವು. ಲಯನ್‌ಹೆಡ್ 670 ಮೀಟರ್ ಎತ್ತರವಿದ್ದರೆ, ಡೆವಿಲ್ಸ್ ಪೀಕ್ ಸಾವಿರ ಮೀಟರ್ ಎತ್ತರವಿದೆ. ಈ ಎರಡೂ ಪರ್ವತಗಳ ಮಧ್ಯದಿಂದ ಕೇಪ್‌ಟೌನ್ ಕಾಫಿ ಬಟ್ಟಲಿನಂತೆ ಕಾಣುತ್ತದೆ.
ಈ ಎಲ್ಲ ಮೂಲ ಮಾಹಿತಿ ಹೇಳಿ ಮುಗಿಸಿದ ಬಳಿಕವೇ ಹೇಳೋಣ ಅಂದುಕೊಂಡಿದ್ದೇನೆಂದರೆ, ಟೇಬಲ್ ಮೌಂಟನ್‌ನಿಂದ ಕೇಪ್‌ಟೌನ್ ನಗರವನ್ನು ಚುಂಬಿಸುತ್ತಿರುವ ಅಟ್ಲಾಂಟಿಕ್ ಮಹಾಸಾಗರವೆಂಬ ಜಲಚಾಪೆಯ ವೈಭವದ ಸೊಬಗು. ಇಲ್ಲಿಂದ ಕಾಣುವ ರಾಬಿನ್ ಐಲ್ಯಾಂಡ್ ಸಮುದ್ರದ ಮೇಲೆ ಕಮಲದ ಎಲೆ ತೇಲುತ್ತಿರುವಂತೆ ಕಾಣುತ್ತದೆ.
ಅಂದ ಹಾಗೆ ಇದೇ ರಾಬಿನ್ ಐಲ್ಯಾಂಡಿನಲ್ಲಿನ ಕಾರಾಗೃಹದಲ್ಲಿಯೇ ವರ್ಣಭೇದ ನೀತಿ ವಿರುದ್ಧ ಹೋರಾಡಿದ್ದಕ್ಕೆ ಶಿಕ್ಷೆಯಾಗಿ ಕರಿಯರ ನಾಯಕ ನೆಲ್ಸನ್ ಮಂಡೇಲಾ ಅವರನ್ನು ಹದಿನೇಳು ವರ್ಷಗಳ ಕಾಲ ಬಂಧಿಯಾಗಿರಿಸಿದ್ದು. ಕೇಪ್‌ಟೌನ್‌ನಿಂದ ಹತ್ತು ಕಿ.ಮೀ. ದೂರದಲ್ಲಿರುವ ರಾಬಿನ್ ಐಲ್ಯಾಂಡ್‌ನ ಸೌಂದರ್ಯದ ಬಂಡವಾಳವೆಲ್ಲ ಜಮಾ ಆಗಿರುವುದು ಟೇಬಲ್ ಮೌಂಟನ್ ತುದಿಯಲ್ಲಿ. ಆ ಮಹಾಸಾಗರದಲ್ಲಿ ಎರಡು ಕಿ.ಮೀ. ಉದ್ದ ಹಾಗೂ ಒಂದು ಕಿ.ಮೀ. ಅಗಲವಾಗಿರುವ ರಾಬಿನ್ ಐಲ್ಯಾಂಡ್ ಒಂದು ರೀತಿಯಲ್ಲಿ ಸಮುದ್ರದಲ್ಲಿ ಮೂಡಿದ ನಕ್ಷತ್ರ!
ರಾಬಿನ್ ಐಲ್ಯಾಂಡ್ ಜೈಲು ಕೋಣೆಯಿಂದ ನೆಲ್ಸನ್ ಮಂಡೇಲಾ ಟೇಬಲ್ ಮೌಂಟನ್ ಅನ್ನು ನೋಡುತ್ತಿದ್ದರಂತೆ. ನನ್ನ ಪಾಲಿಗೆ ಅದು ಬರೀ ಕಲ್ಲು ಬಂಡೆ, ಮಣ್ಣುಗಳಿಂದ ಮೂಡಿದ ಪರ್ವತವಾಗಿರಲಿಲ್ಲ. ನನಗೆ ಅದು ಆಶಾ ಕಿರಣವಾಗಿತ್ತು. ನನಗೆ ಅದು ನನ್ನ ತಾಯ್ನೆಲದ ರೂಪವಾಗಿತ್ತು. ಒಂದಲ್ಲ ಒಂದು ದಿನ ನಾನು ಅಲ್ಲಿಗೆ ವಾಪಸ್ ಹೋಗುತ್ತೇನೆಂಬ ಭರವಸೆಯನ್ನು ನೀಡುತ್ತಿತ್ತು ಎಂದು ಮಂಡೇಲಾ ಹೇಳಿರುವುದನ್ನು ಟೇಬಲ್ ಮೌಂಟನ್ ಮೇಲಿನ ಫಲಕದಲ್ಲಿ ಕೆತ್ತಿಡಲಾಗಿದೆ. ಇಡೀ ಭೂಮಿಯನ್ನೆಲ್ಲ ನಿರ್ಮಿಸಿದ ಬಳಿಕ ದೇವರಿಗೆ ಅನಿಸಿತಂತೆ, ಕೇಪ್‌ಟೌನ್‌ಗೆ ತಾನು ಏನಾದರೂ ವಿಶೇಷವಾದುದನ್ನು ನೀಡಬೇಕೆಂದು. ಹಾಗೆ ಅನಿಸಿದ ತಕ್ಷಣವೇ ಆತ ಕರುಣಿಸಿದ್ದು ಟೇಬಲ್ ಮೌಂಟನ್ ಎಂದು ಆರ್ಚ್ ಬಿಶಪ್ ಡೆಸ್ಮಂಡ್ ಟುಟು ಹೇಳಿದ ಮಾತುಗಳನ್ನು ಸಹ ಫಲಕದಲ್ಲಿ ಬರೆದಿಡಲಾಗಿದೆ.
ರಾಬಿನ್ ಐಲ್ಯಾಂಡ್ ಇದೆಯಲ್ಲ, ಅದು ರಾಬಿನ್ ಐಲ್ಯಾಂಡ್‌ನಲ್ಲಿ ಕಾಣುವುದಕ್ಕಿಂತ ಸುಂದರವಾಗಿ ಕಾಣುವುದು ಟೇಬಲ್ ಮೌಂಟನ್ ಮೇಲಿಂದಲೇ. ಈ ಮಾತು ಕೇಪ್‌ಟೌನ್‌ಗೂ ಅನ್ವಯ. ಹೀಗಾಗಿ ಟೇಬಲ್ ಮೌಂಟನ್ ಕೇಪ್‌ಟೌನ್‌ಗೆ ಅತ್ಯಗತ್ಯ. ಕೇಪ್‌ಟೌನ್‌ನ ಅಸಲುಗಂಟು ಇರುವುದೇ ಅಲ್ಲಿ.
ಟೇಬಲ್ ಮೌಂಟನ್‌ನ ಸಪಾಟು ತುದಿಯನ್ನು ತಲುಪಿ ಹತ್ತಾರು ಹೆಜ್ಜೆಗಳನ್ನು ಇಟ್ಟ ಬಳಿಕವೇ ಗೊತ್ತಾಗಿದ್ದು ಅದರ ಅಗಾಧತೆ. ಸುಮಾರು ಮೂರು ಕಿ.ಮೀ. ಉದ್ದ ಹಾಗೂ ಮುಕ್ಕಾಲು ಕಿ.ಮೀ. ಅಗಲವಾಗಿರುವ ಈ ಪರ್ವತ ಬೋಳುಗುಡ್ಡವಲ್ಲ. ವಿಚಿತ್ರವೆಂದರೆ ಇದು ಅಪರೂಪದ, ವಿಶಿಷ್ಟ ಪ್ರಭೇದಗಳಿರುವ ಸಸ್ಯಸಂಕುಲಗಳ ಸಾಮ್ರಾಜ್ಯ. ಜೀವ ವೈವಿಧ್ಯಗಳ ಆಗರ. ಅಚ್ಚರಿಯೆನಿಸಬಹುದು, ಟೇಬಲ್ ಮೌಂಟನ್ ಮೇಲೆ ಸುಮಾರು 2200 ವಿವಿಧ ಜಾತಿಯ ಸಸ್ಯಗಳಿವೆಯಂತೆ. ಬ್ರಿಟನ್‌ನಲ್ಲಿರುವುದಕ್ಕಿಂತ ಹೆಚ್ಚಿನ ಬಗೆಯ ಸಸ್ಯ ಸಂಕುಲ ಕೇವಲ ಟೇಬಲ್ ಮೌಂಟನ್ ಮೇಲಿದೆಯಂತೆ! ಹಾಗೆಯೇ ಪ್ರಾಣಿ-ಪಕ್ಷಿಗಳು, ಎಂಟು ನೂರು ವಿವಿಧ ಬಗೆಯ ಇರುವೆ, ಕೀಟಗಳನ್ನು ಇಲ್ಲಿ ಗುರುತಿಸಲಾಗಿದೆ. ಅರವತ್ತು- ಎಪ್ಪತ್ತು ವರ್ಷಗಳ ಹಿಂದೆ ಸಿಂಹ, ಚಿರತೆಗಳಿದ್ದವಂತೆ. ಹಾವು, ಮುಂಗುಸಿ, ಆಫ್ರಿಕನ್ ವೈಲ್ಡ್‌ಕ್ಯಾಟ್, ಮೊಲ, ಇಲಿ, ಮುಳ್ಳುಹಂದಿ ಮುಂತಾದ ಪ್ರಾಣಿಗಳಿವೆ. ಆದರೆ, ಪ್ರವಾಸಿಗರಿಗೆ ಅವುಗಳ ಚಿಂತೆ ಬೇಡ. ಈ ಎಲ್ಲ ಸಂಗತಿಗಳನ್ನು ಪರಿಗಣಿಸಿ ಟೇಬಲ್ ಮೌಂಟನ್ ಅನ್ನು ವಿಶ್ವ ಹೆರಿಟೇಜ್ ಪ್ರದೇಶ ಎಂದು ಯುನೆಸ್ಕೋ ಘೋಷಿಸಿದೆ. ಇದಲ್ಲದೇ, ಟೇಬಲ್ ಮೌಂಟನ್‌ನಿಂದ ಕೇಪ್ ಆಫ್ ಗುಡ್ ಹೋಪ್‌ವರೆಗಿನ ಸುಮಾರು 70 ಕಿ.ಮೀ. ಪ್ರದೇಶವನ್ನು ದಕ್ಷಿಣ ಆಫ್ರಿಕಾ ಸರ್ಕಾರ ಟೇಬಲ್ ಮೌಂಟನ್ ನ್ಯಾಷನಲ್ ಪಾರ್ಕ್ ಎಂದು ಘೋಷಿಸಿದೆ. ಅಳಿವಿನಂಚಿನಲ್ಲಿರುವ ಪ್ರಾಣಿ ಹಾಗೂ ಸಸ್ಯ ಪ್ರಭೇದಗಳನ್ನು ಸಂರಕ್ಷಿಸಲು ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.
ವರ್ಷದಲ್ಲಿ ಹದಿನೈದು- ಇಪ್ಪತ್ತು ದಿನ ಹಿಮಧಾರೆಯಾಗುವಾಗ ಟೇಬಲ್ ಮೌಂಟನ್‌ನ ಖದರೇ ಬೇರೆಯಾಗಿರುತ್ತದೆ. ಕಡಲತಡಿಯಿಂದ ಬೀಸುವ ಗಾಳಿ ಹಾಗೂ ಹಿಮಧಾರೆಯಿಂದ ಅಲ್ಲಿನ ಪರಿಸರ ಬೇರೆಯದೇ ಆದ ಅನುಭವವನ್ನು ನೀಡುತ್ತದೆ. ಟೇಬಲ್ ಮೌಂಟನ್ ಅನ್ನು ಬೆಂಕಿ ಅವಘಡಗಳಿಂದ ರಕ್ಷಿಸುವುದು ಸವಾಲು. ಸಪಾಟು ನೆಲದ ಮೇಲಿನ ಒಣಗಿದ ಸಸ್ಯಗಳು ಪ್ರವಾಸಿಗರು ಸೇದಿ ಎಸೆದ ಸಿಗರೇಟಿನ ತುಂಡುಗಳಿಗೆ ಅಂಟಿಕೊಂಡರೆ ಬೆಂಕಿ ಭುಗಿಲೇಳುವುದುಂಟು. ಗಾಳಿಯ ಹೊಡೆತಕ್ಕೆ ಕ್ಷಣಾರ್ಧದಲ್ಲಿ ಅದು ವ್ಯಾಪಿಸುವುದರಿಂದ ಹತೋಟಿಗೆ ತರುವುದು ಹರಸಾಹಸವೇ. ಹೀಗಾಗಿ ಟೇಬಲ್ ಮೇಲೆ ಧೂಮಪಾನವನ್ನು ನಿಷೇಧಿಸಲಾಗಿದೆ. ಆದರೆ, ಕದ್ದು ಸೇದುವುದನ್ನು ನಿಯಂತ್ರಿಸುವುದು, ನಿಷೇಧಿಸುವುದು ಹೇಗೆ?
ಟೇಬಲ್ ಮೌಂಟನ್ ಮೇಲೆ ಅಲ್ಲಲ್ಲಿ ಹಲಗೆಯ ಬೆಂಚು, ಕುರ್ಚಿ ಇಡಲಾಗಿದೆ. ಪರ್ವತದ ಹೊರಮೈ ಆಚೆ ಅಟ್ಟಣಿಗೆಗಳನ್ನು, ವೀಕ್ಷಣಾ ತಾಣಗಳನ್ನು ನಿರ್ಮಿಸಲಾಗಿದೆ. ಅಲ್ಲಿ ಕಾಣಸಿಗುವ ಪ್ರಾಣಿ, ಸಸ್ಯ, ಪಕ್ಷಿಗಳ ಬಗ್ಗೆ ವಿವರಗಳನ್ನು ಒದಗಿಸಲಾಗಿದೆ. ಎಷ್ಟು ನಡೆದರೂ ಸುಸ್ತಾಯಿತೆಂಬುದಿಲ್ಲ. ಕೈಯಲ್ಲೊಂದು ಕ್ಯಾಮೆರಾ ಇದ್ದರಂತೂ ಕೈಬೆರಳು ನೋಯುವ ತನಕ ಹೊಸಹೊಸ ಚಿತ್ರಗಳು ಆ ಡಬ್ಬಾವನ್ನು ಸೇರುತ್ತಲೇ ಇರುತ್ತವೆ. ಅದಕ್ಕೆ ಹೇಳೋದು ಕೈಯಲ್ಲೊಂದು ಕ್ಯಾಮೆರಾ ಹಿಡಿದವರೆಲ್ಲ ಟೇಬಲ್ ಮೌಂಟನ್ ಮೇಲೆ ಫೋಟೊಗ್ರಾಫರ್‌ಗಳೇ.
ಟೇಬಲ್ ಮೌಂಟನ್ ಗುಡ್ಡವೋ, ಪರ್ವತವೋ ಆಗಿದ್ದರೆ, ಅದು ಆ ಕಾರಣಕ್ಕಾಗಿ ಮಾತ್ರ ಗಮನ ಸೆಳೆಯುತ್ತಿತ್ತು. ಆದರೆ, ಅದು ಅದಕ್ಕಿಂತ ಮಿಗಿಲಾದುದು. ಕೇಪ್‌ಟೌನ್ ನೆನಪಾದಾಗ ಅದು, ಅದರ ನೆನಪಾದಾಗ ಕೇಪ್‌ಟೌನ್ ಕಣ್ಮುಂದೆ ಬರುತ್ತದೆ. ಅಂದ ಹಾಗೆ ಟೇಬಲ್ ಮೌಂಟನ್ ಸ್ಥಳೀಯ ಆಡಳಿತದ ಲಾಂಛನವೂ ಹೌದು. ದಕ್ಷಿಣ ಆಫ್ರಿಕಾದ ಟಾಪ್ ಐದು ಪ್ರೇಕ್ಷಣೀಯ ತಾಣಗಳ ಪೈಕಿ ಮೊದಲ ಸ್ಥಾನವೇ ಟೇಬಲ್ ಮೌಂಟನ್‌ಗೆ.
ಕೇಪ್‌ಟೌನ್‌ನಲ್ಲಿ ಏನೇ ವ್ಯವಹಾರ ನಡೆದರೂ ಅಂಡರ್ ದಿ ಟೇಬಲ್ ನಡೆಯಬೇಕು!

- ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com