ಬೈಟುಕಾಫಿ

ಕವಿದಿದೆ ಪಂಜೆ ಕತ್ತಲು

ಕವಿದಿದೆ ಪಂಜೆ ಕತ್ತಲು
Published On :

ಕನ್ನಡದ ಶಕ್ತಿ ಏನೆಂಬುದನ್ನು 100 ವರ್ಷಗಳ ಹಿಂದೆಯೇ ಸಾಹಿತ್ಯದ ಮೂಲಕ ತೋರಿಸಿಕೊಟ್ಟವರು 'ಕವಿಶಿಷ್ಯ' ಪಂಜೆ ಮಂಗೇಶರಾಯರು. ಹೊಸಗನ್ನಡ ಸಾಹಿತ್ಯಕ್ಕೆ ಬಾಲಕಥೆ, ಸಣ್ಣಕಥೆ, ಕಿರುಕಾದಂಬರಿ, ಮಕ್ಕಳ ಕವನ, ಭಾಷಾಂತರ, ರೂಪಾಂತರ, ಹಾಸ್ಯ- ಲಲಿತ ಪ್ರಬಂಧ, ಲೇಖನ, ಹರಟೆ, ಪತ್ತೇದಾರಿ ಕಾದಂಬರಿ, ಸಂಶೋಧನಾ ಪ್ರಬಂಧ ಹೀಗೆ ಸಕಲ ಪ್ರಕಾರಗಳಲ್ಲಿ ಕೈಯ್ಯಾಡಿಸಿದ್ದ ಪಂಜೆಯವರನ್ನು ಇಂದು ಕನ್ನಡ ನಾಡು ಮರೆತಂತಿದೆ.
ಪಂಜೆ ಅವರ ಹುಟ್ಟೂರಾದ ದ.ಕ. ಜಿಲ್ಲೆಯ ಬಂಟ್ವಾಳದಲ್ಲಿ ಆಗೊಮ್ಮೆ, ಈಗೊಮ್ಮೆ ಪಂಜೆಯವರ ಹೆಸರಿನ ಸ್ಮಾರಕ ಭವನ ನಿರ್ಮಾಣದ ಆಗ್ರಹ ಕೇಳಿ ಬರುತ್ತಿದೆಯೇ ವಿನಾ ಕವಿ ಮೇಲಿನ ನೈಜ ಪ್ರೀತಿ- ಅಭಿಮಾನ ಎಲ್ಲೂ ಕಾಣುತ್ತಿಲ್ಲ.

ಮನೆ ಈಗ ವಸತಿಗೃಹ
ಪಂಜೆಯವರಿಗೆ ಬಂಟ್ವಾಳದ ಹುಟ್ಟು ನಂಟು ಇದ್ದರೂ, ಬೇರೆ ಬೇರೆ ಕಾರಣಗಳಿಂದ ಬಂಟ್ವಾಳದಲ್ಲಿ ಅವರ ನೆನಪೇ ಇಲ್ಲದಂತಿದೆ. ಅವರು ಹುಟ್ಟಿ ಬೆಳೆದ ಬಂಟ್ವಾಳದ ಮನೆ ಈಗ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ವಸತಿಗೃಹ! ಪಂಜೆಯವರನ್ನು ನೆನಪಿಸಲು ಇಲ್ಲೊಂದು ಪಂಜೆ ಶತಮಾನೋತ್ಸವದ ಫಲಕ ನಿರ್ಮಿಸಲಾಗಿದೆ ಬಿಟ್ಟರೆ ಬೇರೇನೂ ಕೆಲಸ ಆಗಿಲ್ಲ.
ಪಂಜೆ ಅವರ ಪೂರ್ವಜರು ಸುಬ್ರಹ್ಮಣ್ಯ ಸಮೀಪದ 'ಪಂಜ'ದಲ್ಲಿ ನೆಲೆಸಿದ್ದರಿಂದ ಇವರ ಮನೆತನ 'ಪಂಜೆ' ಎಂದಾಯಿತು. 1934ರ ಸುಮಾರಿಗೆ ಪಂಜೆ ಬಂಟ್ವಾಳ ತೊರೆದಿದ್ದಾರೆ. ನಂತರ ಪಂಜೆ ಕುಟುಂಬಸ್ಥರು ಸದ್ರಿ ಮನೆ, ಜಮೀನನ್ನು ಸರ್ಕಾರಕ್ಕೆ ಹಸ್ತಾಂತರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆಯಾದರೂ, ಈ ಬಗ್ಗೆ ಸೂಕ್ತ ದಾಖಲೆ ದೊರೆತಿಲ್ಲ. ಮಂಗೇಶರಾಯರ ಜೊತೆಗಿದ್ದ ಅವರ ಮಕ್ಕಳು, ಮೊಮ್ಮಕ್ಕಳೂ ಸಂಪರ್ಕಕ್ಕೆ ಸಿಕ್ಕಿಲ್ಲ. ಬಂಟ್ವಾಳದ ಕವಿ ಮನಸ್ಸುಗಳು ನೆನಪಿಸುವಂತೆ 1974ರಲ್ಲಿ ಪಂಜೆ ಶತಮಾನೋತ್ಸವ ಸಂಭ್ರಮವನ್ನು ಹೊರತುಪಡಿಸಿದರೆ ಜಿಲ್ಲೆಯಲ್ಲಿ ಪಂಜೆ ನೆನಪಿನ ಕಾರ್ಯಕ್ರಮ ಹೆಚ್ಚು ನಡೆದಿಲ್ಲ.

ಆ ದುಡ್ಡು ಎಲ್ಲಿ?
2007ರಲ್ಲಿ ಡಿಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ 'ಪಂಜೆಯವರ ಹುಟ್ಟೂರಲ್ಲಿ ಸ್ಮಾರಕ ಭವನ ನಿರ್ಮಾಣಕ್ಕೆ ರು. 50 ಲಕ್ಷ ಒದಗಿಸಿದ್ದೇನೆ' ಎಂದಿದ್ದರು. ಬಳಿಕ ಈ ರಾಜ್ಯ ಮೂರು ಮುಖ್ಯಮಂತ್ರಿಗಳನ್ನು ಕಂಡಿದೆ. ಆರು ವರ್ಷ ಕಳೆದಿದೆ. ಆದರೆ, ಈ ಸ್ಮಾರಕ ಭವನಕ್ಕೆ ನಯಾಪೈಸೆ ಬಿಡುಗಡೆಯಾಗಿಲ್ಲ. ಪಂಜೆ ಹುಟ್ಟೂರಾದ ಬಂಟ್ವಾಳ ಸಮೀಪ ಬಿ.ಸಿ. ರೋಡ್‌ನ 'ಗೂಡಿನಬಳಿ'ಯಲ್ಲಿ ಸ್ಮಾರಕ ಭವನಕ್ಕೆ ಜಾಗ ನಿಗದಿಪಡಿಸಲಾಗಿತ್ತು. ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವರ ಮನವಿ ಮೇರೆಗೆ ಬಂಟ್ವಾಳ ತಾಪಂ ಬಿ.ಸಿ. ರೋಡ್‌ನ ಆಶ್ರಮ ಶಾಲೆ ಬಳಿ 30 ಸೆಂಟ್ಸ್ ಜಾಗವನ್ನು ಇದಕ್ಕಾಗಿಯೇ ಒದಗಿಸಲು ನಿರ್ಧರಿಸಲಾಗಿತ್ತು. 2008 ಜ.25ರಂದು ಕನ್ನಡ ಮತ್ತು ಸಂಸ್ಕತಿ ಇಲಾಖೆಗೆ ಒಟ್ಟು 30 ಸೆಂಟ್ಸ್ ಜಾಗವನ್ನು ತಾಪಂ ನೀಡಿತು. ಆದರೆ, ಘೋಷಣೆಯಾದ ಹಣ ಬರದಿದ್ದರೆ ಏನು ಮಾಡುವುದು?

ಚಿಗುರಿದ ಕನಸು
ಬಂಟ್ವಾಳದಲ್ಲಿ ಪಂಜೆ ಸ್ಮಾರಕ ಭವನ ನಿರ್ಮಿಸಲೇಬೇಕೆನ್ನುವ ಕೆಲ ಸಾಹಿತ್ಯಾಸಕ್ತ ಮನಸ್ಸುಗಳು ಕ್ರಿಯಾ ಸಮಿತಿಯನ್ನು ರಚಿಸಿಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ನೇತೃತ್ವದಲ್ಲಿ ಸಭೆಯನ್ನೂ ನಡೆಸಲಾಗಿದೆ. ಈ ಬಗ್ಗೆ ಸರ್ಕಾರದ ಕನ್ನಡ ಸಂಸ್ಕೃತಿ ಇಲಾಖೆಯಿಂದ ಅನುದಾನ ಪಡೆದು ಸ್ಮಾರಕಭವನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು ಎಂಬ ಸಚಿವರ ಭರವಸೆ ಎಷ್ಟರಮಟ್ಟಿಗೆ ನಿಜವಾಗುತ್ತದೆಯೋ ಕಾದು ನೋಡಬೇಕು.

- ಮೌನೇಶ ವಿಶ್ವಕರ್ಮ
ಚಿತ್ರ: ಕಿಶೋರ್ ಬಿ.ಸಿ.ರೋಡ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.