ಸೆರಗು ಸೆಳೆದ ಕೃಷ್ಣ

ನಮ್ಮಲ್ಲಿ ದೇವಾನುದೇವತೆಗಳ ಶೃಂಗಾರ ಲೀಲೆಗಳನ್ನು ಪರಿಪರಿಯಾಗಿ ಬಣ್ಣಿಸುವ ಕಾವ್ಯಗಳೂ ಇವೆ. ಆ ದೇವತೆಗಳೇನಾದರೂ ಎದುರಿಗೆ ಬಂದರೆ, ಈ ಶ್ಲೋಕಗಳನ್ನು ಕೇಳಿದರೆ, ನಾಚಿ ನೀರಾಗಿಬಿಡಬೇಕು- ಅಂಥ ಶೃಂಗಾರ ವರ್ಣನೆಗಳೂ ಇವೆ. ಇವನ್ನು ರಚಿಸಿದ ಕವಿಗಳೇನೂ ನಾಸ್ತಿಕರಾಗಿರಲಿಲ್ಲ. ಅವರೂ ಮಹಾ ಆಸ್ತಿಕರೇ. ಆದರೆ ದೇವರನ್ನೂ ತಮ್ಮಂತೆಯೇ ಮನುಷ್ಯಭಾವರಸಪುಷ್ಟರಾಗಿ ನೋಡುವುದು ಇವರಿಗಿಷ್ಟ. ಲೀಲಾಶುಕ ಮುನಿಯ 'ಶ್ರೀಕೃಷ್ಣ ಕರ್ಣಾಮೃತ'ದಲ್ಲಿ ಬರುವ ಅಂಥದೊಂದು ಶ್ಲೋಕ ಹೀಗಿದೆ:
ಆಕೃಷ್ಟೇ ವಸನಾಂಚಲೇ ಕುವಲಯಶ್ಯಾಮಾ ತ್ರಪಾಧಃ ಕೃತಾ
ದೃಷ್ಟಿಃ ಸಂವಲಿತಾ ರುಚಾ ಕುಚಯುಗೇ ಸ್ವರ್ಣಪ್ರಭೇ ಶ್ರೀಮತಿ
ಬಾಲಃ ಕಶ್ಚನ ಚೂತಪಲ್ಲವ ಇತಿ ಪ್ರಾನ್ತಸ್ಮಿತಾಸ್ಯಶ್ರಿಯಂ
ಶ್ಲಿಷ್ಯಂ ಸ್ತಾಮಥ ರುಕ್ಮಿಣೀಂ ನತಮುಖೀಂ ಕೃಷ್ಣಃ ಸ ಪುಷ್ಣಾತು ನಃ
ಕೃಷ್ಣ ಹಾಗೂ ರುಕ್ಮಿಣಿಯರ ಮಿಲನ ಸಂದರ್ಭ. ಸರಸದಲ್ಲಿ ಮಗ್ನನಾಗಿರುವ ಕೃಷ್ಣನು ರುಕ್ಮಿಣಿಯ ಸೆರಗನ್ನು ಎಳೆಯುತ್ತಾನೆ. ಎದೆಯ ಸಂಪತ್ತು ಅನಾವರಣಗೊಳ್ಳುತ್ತದೆ. ತಟಕ್ಕನೆ ರುಕ್ಮಿಣಿ ಅವನತಮುಖಿಯಾಗುತ್ತಾಳೆ. ಕೃಷ್ಣನೂ ಅತ್ತಲೇ ನೋಟ ಇಟ್ಟಿದ್ದಾನೆ! ನಾಚಿಕೆಯಿಂದ ರುಕ್ಮಿಣಿಯ ಮುಖವು ಮಾವಿನ ಚಿಗುರಿನಂತೆ ಕೆಂಪಾಗಿಬಿಡುತ್ತದೆ. ಆಕೆಯನ್ನು ಶ್ಯಾಮ ಅಪ್ಪಿಕೊಳ್ಳುತ್ತಾನೆ. ಕಪ್ಪು ಬಣ್ಣದ ಕೃಷ್ಣನ ತೆಕ್ಕೆಯಲ್ಲಿ ತಿಳಿಗೆಂಪಿನ ರುಕ್ಮಿಣಿ ದೀಪದ ಕುಡಿಯಂತೆ ಬೆಳಗುತ್ತಾಳೆ.
ಇದುವರೆಗೆ ಕೋಟ್ಯಂತರ 'ಕೃಷ್ಣ'ರು ಕೋಟ್ಯಂತರ 'ರುಕ್ಮಿಣಿ'ಯರ ಸೆರಗನ್ನು ಹೀಗೆ ಎಳೆದಿರಬಹುದು. ಅದರಲ್ಲೇನು ಮಹಾ? ಏನೂ ಇಲ್ಲ. ಆದರೆ ಎಷ್ಟು ಮಂದಿಗೆ ಇಂಥ ಶ್ಲೋಕನಮನದ ಭಾಗ್ಯ ಸಿಕ್ಕಿದೆ?
- ಹರಿಹರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


