ಕಾಲವಿ ಕಂಪು
'ಕುಮಾರ'ವ್ಯಾಸ ಗೆಳತಿಗೆ, ಕುಮಾರ ವ್ಯಾಸನನ್ನು ಓದಿಸುತ್ತೇನೆ ಎಂದು ಕರೆದುಕೊಂಡು ಹೋದವನು ಹಿಂತಿರುಗುವಾಗ ಜೊತೆಗೆ...

'ಕುಮಾರ'ವ್ಯಾಸ ಗೆಳತಿಗೆ, ಕುಮಾರ ವ್ಯಾಸನನ್ನು ಓದಿಸುತ್ತೇನೆ ಎಂದು ಕರೆದುಕೊಂಡು ಹೋದವನು ಹಿಂತಿರುಗುವಾಗ ಜೊತೆಗೆ 'ಕುಮಾರ'ನನ್ನು ಕರೆತಂದಿದ್ದ!
- ಕಾಲವಿ
ಹೀಗೆ ದಿನಕ್ಕೊಂದು ಕನ್ನಡ ಭಾಷೆಯ ಹೊಸ ಚುಟುಕುಗಳು ಮಳಿಗೆಯ ಮುಂದಿರುವ ಹಲಗೆಯಲ್ಲಿ ಮೂಡಿರುತ್ತವೆ. ಆ ಮಳಿಗೆಯ ಹೆಸರು 'ಟೋಟಲ್ ಕನ್ನಡ'. ಬೆಂಗಳೂರಿನ ಜಯನಗರ 4ನೇ ಬಡಾವಣೆಯ ಪವಿತ್ರ ಹೋಟೆಲ್ ಮುಂದಿನ ರಸ್ತೆ ಬದಿಯಲ್ಲಿದೆ. ಇದೊಂದು ಅಪ್ಪಟ ಕನ್ನಡದ ಅಂಗಡಿ. ಈ ಮಳಿಗೆಯ ಮಾ. ಕಾಲವಿ.
ವಿ. ಲಕ್ಷ್ಮಿಕಾಂತ್ ಎಂಬ ತಮ್ಮ ಹೆಸರನ್ನೇ ತಿರುವಿ 'ಕಾಲವಿ' ಎಂದು ಇಟ್ಟುಕೊಂಡಿರುವ ಇವರು ಮೂಲತಃ ಸಾಫ್ಟ್ವೇರ್ ಉದ್ಯೋಗಿ. ಮಾತೃಭಾಷೆ ತೆಲುಗು. ಬೆಂಗಳೂರಲ್ಲೆ ಇದ್ದ 3 ಸೈಟ್ ಮಾರಿ ಕನ್ನಡದ ಪುಸ್ತಕ ಮಳಿಗೆ ಕಟ್ಟಿದ ಭಾಷಾಭಿಮಾನಿ. ಅಮೆರಿಕದಲ್ಲಿ ಸಾಫ್ಟ್ವೇರ್ ಉದ್ಯೋಗ, ಕೈ ತುಂಬ ಸಂಬಳ ಇದ್ದರೂ ಕೈಕೊಡವಿ ಇಲ್ಲಿಗೆ ಬಂದವರು.
ಕನ್ನಡಾಭಿಮಾನ ಮೂಡಿದ್ದು ತಾಯಿ ಮನಲಕ್ಷ್ಮಿ ಅವರಿಂದ. ಹತ್ತನೆ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದ ಲಕ್ಷ್ಮಿಕಾಂತ್ ಬೆಂಗಳೂರಿನಲ್ಲೇ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಮುಗಿಸಿದರು. ಕಾಲೇಜು ದಿನಗಳಲ್ಲೇ ಲೇಖನ, ಕವನ ಬರೆಯುವ ಹವ್ಯಾಸ. 5 ವರ್ಷ ತವರೂರಲ್ಲೇ ಇಂಜಿನಿಯರ್ ವೃತ್ತಿ. ಅಮೆರಿಕದಲ್ಲಿ ಸಾಫ್ಟ್ವೇರ್ ವೃತ್ತಿಯ ನಡುವೆ ಕನ್ನಡಿಗರಿಗೆ ಕನ್ನಡ ಪುಸ್ತಕ, ಸಿನಿಮಾ ಸಿಗದಿರುವುದನ್ನು ಮನಗಂಡರು. ಪರದೇಶದ ಕನ್ನಡಿಗರಿಗೆ ಮಾತೃಭಾಷೆ ಸಾಹಿತ್ಯ ಸಿಗುವಂತೆ ಮಾಡಬೇಕು ಎಂಬ ಅಪೇಕ್ಷೆಯಿಂದ ಟೋಟಲ್ ಕನ್ನಡ ಎಂಬ ವೆಬ್ಸೈಟ್ ಪ್ರಾರಂಭಿಸಿದರು. ಅಮೆರಿಕ, ಕೆನಡ ಮತ್ತಿತರ ದೇಶಗಳ ಓದುಗರಿಗೆ ಕನ್ನಡದ ಪುಸ್ತಕ, ಸಿನಿಮಾ ತಲುಪಿಸುತ್ತಿದ್ದರು.
ಸಾಫ್ಟ್ವೇರ್ ವೃತ್ತಿ ತ್ಯಜಿಸಿ ಪುಸ್ತಕ ಮಳಿಗೆ ಆರಂಭಿಸುವಾಗ ಲಕ್ಷ್ಮಿಕಾಂತ್ ಎದುರಿಸಿದ್ದು ಮಾತ್ರ ವ್ಯಾಪಕ ಟೀಕೆ. ಜಗ್ಗದ ಲಕ್ಷ್ಮಿಕಾಂತ್ ಕನ್ನಡಕ್ಕಾಗಿ ಒಂದು ಕೈ ನೋಡಿಯೇ ಬಿಡುತ್ತೇನೆ ಎಂದು 'ಟೋಟಲ್ ಕನ್ನಡ' ಎಂಬ ಕನ್ನಡ ಪುಸ್ತಕಗಳ ಮಳಿಗೆ ಪ್ರಾರಂಭಿಸಿದರು. ಒಂದೇ ಸೂರಿನಡಿಯಲ್ಲಿ ಕನ್ನಡ ಪುಸ್ತಕಗಳು, ಡಿವಿಡಿ, ವಿಸಿಡಿ, ಆಡಿಯೋ ಸಿ.ಡಿ, ಎಂಪಿತ್ರಿ, ಕ್ಯಾಸೆಟ್, ಕನ್ನಡದ ಸಾಲುಗಳಿರುವ ಉಡುಗೊರೆ ವಸ್ತುಗಳು, ಕನ್ನಡ ಗ್ರೀಟಿಂಗ್ ಕಾರ್ಡ್ಸ್ ಹಾಗು ಕನ್ನಡ ಬಾವುಟಗಳು ಇಲ್ಲಿ ಸಿಗುತ್ತವೆ. 65ಕ್ಕೂ ಹೆಚ್ಚು ವಿಧದ ಕನ್ನಡ ಬರಹಗಳುಳ್ಳ ಟೀಶರ್ಟ್ಗಳು, ಕನ್ನಡ ಸಂಖ್ಯೆಗಳುಳ್ಳ ಕೈಗಡಿಯಾರ, ಗೋಡೆ ಗಡಿಯಾರ ಗಮನ ಸೆಳೆಯುತ್ತವೆ. ಕೊಡವ, ತುಳು, ಕೊಂಕಣಿ ಸಾಹಿತ್ಯ ಪುಸ್ತಕಗಳೂ ಇಲ್ಲಿವೆ.
ಟೋಟಲ್ ಕನ್ನಡ ಸಂಚಾರಿ ಮಳಿಗೆಯೂ ಚಾಲ್ತಿಯಲ್ಲಿದೆ. ಪದ್ಮನಾಭ ನಗರ, ಬಿಡಿಎ ಕಾಂಪ್ಲೆಕ್ಸ್ ಸೇರಿದಂತೆ ಇತರ ನಗರಗಳಲ್ಲಿ ಸಂಚಾರಿ ಮಳಿಗೆ ಕಳುಹಿಸುತ್ತಿದ್ದಾರೆ. ಟೋಟಲ್ ಕನ್ನಡ ಪ್ರಕಾಶನದ ಮೂಲಕ ಅನೇಕ ಪುಸ್ತಕಗಳು ಬಿಡುಗಡೆಗೊಂಡಿವೆ. ಸಿನಿಮಾದ ಚಿತ್ರಕಥೆಗಳನ್ನು ಪುಸ್ತಕ ರೂಪವಾಗಿ ತಂದ ಕೀರ್ತಿ. ಲಕ್ಷ್ಮಿಕಾಂತ್ ರಚಿಸಿರುವ ಕವನ ಸಂಗ್ರಹ 'ಸಿ॥ ಗೌರಮ್ಮ' ಇತ್ತೀಚೆಗಷ್ಟೆ ಬಿಡುಗಡೆಯಾಗಿದೆ. ಕನ್ನಡ ಸಂಸ್ಕೃತಿ ಇಲಾಖೆ ತನ್ನ ಭವನದ ಮುಂದೆ 'ಸಂಚಾರಿ ಮಳಿಗೆ'ಗೆ ಅವಕಾಶ ನೀಡುತ್ತಿಲ್ಲ ಎಂಬ ನೋವಿದೆ ಅವರಿಗೆ. ಟಿ
ಹಳೆಯ ಚಲನಚಿತ್ರ, ಚಿತ್ರಗೀತೆ, ಹಳೆಯ ಪುಸ್ತಕಗಳೆಲ್ಲವೂ ಒಂದೇ ಮಳಿಗೆಯಲ್ಲಿ ಸಿಗುವುದು ತುಂಬ ಖುಷಿ ನೀಡುತ್ತಿದೆ. ಕನ್ನಡಕ್ಕೆ ಸಂಬಂಧಪಟ್ಟ ಏನೇ ಕೊಂಡುಕೊಳ್ಳಬೇಕಿದ್ದರೂ ಮೊದಲು ನೆನಪಾಗುವುದು ಟೋಟಲ್.
-ಮನೋಹರ ಪ್ರಸಾದ್, ಉದ್ಯಮಿ
ಐಟಿಬಿಟಿಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ಕನ್ನಡ ಭಾಷೆಯೆಡೆಗೆ ಯುವ ಮನಸ್ಸು ಒಲವು ತೋರಿಸುತ್ತಿರುವುದು ಶ್ಲಾಘನಾರ್ಹ. ಕನ್ನಡ ಭಾಷೆ ನೆಮ್ಮದಿಯ ಬದುಕಿನ ಸಮಗ್ರತೆಯನ್ನು ಹೊಂದಿದೆ. ಸುಲಭವಾಗಿ ಅರ್ಥವಾಗುವ ಭಾಷೆ ಎಂದರೆ ಕನ್ನಡ. ಬೆಳೆಸಿ, ಉಳಿಸಿಕೊಂಡು ಹೋಗಬೇಕಾದ ವಿಶ್ವಾಸಾರ್ಹತೆ ಯುವ ಜನತೆಗೆ ಅಗತ್ಯ.
-ವಿ. ಲಕ್ಷ್ಮಿಕಾಂತ್
- ಮಂಜುನಾಥ್ ಎಲ್. ಕೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


