ಪ್ರೀತಿ ಇಲ್ಲದೆ ಹೇಗಿರಲಿ?

ಪ್ರೀತಿ! ಅದೊಂದು ಮಧುರ ಅನುಭೂತಿ. ಜೀವನದಲ್ಲಿ ಪ್ರೀತಿಸದವರು ಯಾರಿದ್ದಾರೆ ಹೇಳಿ? ಕಲ್ಲು ಬಂಡೆಯಂಥ ವ್ಯಕ್ತಿಯೂ ತನ್ನ ಹರೆಯದಲ್ಲೆಲ್ಲೋ ಒಂದು ದಿನ ಕಾಮನಬಿಲ್ಲಿನಂಥ ಕಣ್ಣೋಟಕ್ಕೆ ಕರಗಿ ನೀರಾಗಿರುತ್ತಾನೆ. ಹತ್ತು ಕೊಲೆ ಮಾಡಿ ಜೈಲಿಗೆ ಹೋದವನೂ ಸಹ ಕರುಳಿನ ಆಳದಲ್ಲೆಲ್ಲೋ ಕಲಕುವ ಒಂದು ಮಧುರ ನೆನಪಿಗಾಗಿ ಕಣ್ಣೀರಾಗುತ್ತಾನೆ. ಪ್ರೀತಿ- ಅದರ ಬಗ್ಗೆ ನಾವು ಮಾತನಾಡುತ್ತೇವೆ, ಹಾಡುತ್ತೇವೆ. ಕನಸು ಕಾಣುತ್ತೇವೆ, ಅದರ ಬಗ್ಗೆ ಚಿಂತಿಸುತ್ತ ನಿದ್ರೆ ಕೆಡುತ್ತೇವೆ. ಅದು ನಮ್ಮಲ್ಲೇ ಇದೆ ಎಂಬುದು ಗೊತ್ತಿಲ್ಲದೆ ತಳಮಳಿಸಿ ಹುಡುಕುತ್ತೇವೆ. ಅದನ್ನು ಶೋಧಿಸಿದ ಬಳಿಕ, ಕೈಯಲ್ಲಿ ಕೆಂಡ ಹಿಡಿದವರಂತೆ ಚಡಪಡಿಸುತ್ತೇವೆ. ಅನರ್ಘ್ಯ ನಿಧಿಯೊಂದನ್ನು ಹೊಂದಿದವರಂತೆ, ಎಲ್ಲಿ ಕಳಕೊಂಡುಬಿಟ್ಟೇವೋ ಎಂದು ಆತಂಕಗೊಳ್ಳುತ್ತೇವೆ. ಅದು ನೀಡುವ ಸುಖ ಹಾಗೂ ಯಾತನೆಯಿಂದ ವಿಹ್ವಲರಾಗುತ್ತೇವೆ. ಆದರೆ ಮುಂದಿನ ಕ್ಷಣ ಅದು ಉಂಟುಮಾಡುವ ತಲ್ಲಣವನ್ನು ಊಹಿಸಲಾರದವರಾಗುತ್ತೇವೆ.
ಹೀಗಾಗಿ ಪ್ರೀತಿ ಎನ್ನುವುದು ಆಧುನಿಕ ಯಾಂತ್ರಿಕ ಲೋಕದ ನಡುಮನೆಯ ಮಾತಾಗಿ ಮಾತ್ರ ಉಳಿದುಕೊಂಡಿದೆ. ಅದೊಂದು ಕನಸು. ಸೌಹಾರ್ದ, ಸೋದರತೆ, ಪ್ರೀತಿ, ವಿಶ್ವಾಸಗಳು ಈ ಸಮಾಜ ಬೆಳಗಿನೊಂದಿಗೆ ಮರೆತುಬಿಡುತ್ತಿರುವ ಸ್ವಲ್ಪ ಎಚ್ಚರದಲ್ಲಿ ನಾವಿದನ್ನು ಕೊನೆಪಕ್ಷ ನೆನಪು ಮಾಡಿಕೊಳ್ಳುತ್ತಲೂ ಇಲ್ಲ. ನಾಗರಿಕತೆಯ ಯಂತ್ರಯುಗ ಹತ್ತಿಕ್ಕಬಯಸುವುದರಲ್ಲಿ ಮಾನವೀಯ ಸಂಬಂಧಗಳೂ ಒಂದು. ಹಲವು ಸಂವೇದನೆಗಳ ಮೇಲೆ ಬೆಳೆದು ಬಂದ ಸಮಾಜಕ್ಕದು ಈಗ ಬೇಕಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳುವ ಕೆಲವು ಮೆಲುಕುಗಳನ್ನು ಹಂಚಿಕೊಳ್ಳಬೇಕು. ಪ್ರೀತಿಯ ಅಪಾರತೆಯ ಎದುರು ಇಂಥ ಪ್ರಯತ್ನಗಳು ಅನುಭವದ ಕೊರತೆಯನ್ನು ಎದುರಿಸುತ್ತವೆ. ವಸ್ತುನಿಷ್ಠ ಚರ್ಚೆಗಿಳಿದಾಗ ಅದರ ಸಂಕೀರ್ಣ, ಸಮಗ್ರತೆಯ ಬಗ್ಗೆ ಭಯ ಸಹಜ. ಪರಂಪರೆಯ ಹಿನ್ನೆಲೆಯಲ್ಲಿ ಪ್ರೀತಿಯ ಸೌಂದರ್ಯಾನುಭವದಲ್ಲಿ ನಮ್ಮ ಮಿತಿಯೊಳಗೆ ಹಾಗೆಯೇ ಇಡಲು ಯತ್ನಿಸಿದ್ದೇವೆ. ಬೇರಾವುದೇ ಸಾಹಸ ಯಶಸ್ವಿ ಎನಿಸಲಾರದು. ಪ್ರೀತಿಯೆಂಬುದೇ ಹಾಗೆ. ಅದು ಅನುಭವ ವಿಚಾರದ ಚೌಕಟ್ಟಿಗೆ ಒಳಗಾದದ್ದು. ಅದರ ವಿಶ್ಲೇಷಣೆ ತೀರಾ ಜಟಿಲ. ಪ್ರೀತಿ- ಅದೊಂದು ಪುಟ್ಟ ಪದ, ಉಚ್ಚರಿಸಲು ಬಲು ಸುಲಭ. ವ್ಯಾಖ್ಯಾನಿಸಲು ಎಷ್ಟೊಂದು ಕಷ್ಟ? ಅದಿಲ್ಲದೆ ಬದುಕೋದು ಎಂಥ ಅಸಾಧ್ಯ ಸಂಗತಿ ಅಲ್ಲವೆ?
- ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


