ತಮಾಷೆ ಜೀವ ತೆಗೆಯಿತು!

ಮುಂಗಾರಿನ ಅವಧಿಯಲ್ಲಿ ಒಂದು ಅಮವಾಸ್ಯೆಯಂದು ಬೂರಗಮಾಡ ಗ್ರಾಮದ ವೃತ್ತಿಪರ ಬೇಟೆಗಾರರು ಬೇಟೆಗೆ ಹೋದರು. ಅಂದು ಅವರಿಗೆ ಸಿಕ್ಕಿದ ಮೃಗವಾದರೂ ಯಾವುದು?
ಸಾಮಾನ್ಯವಾಗಿ ಸಮಾನ ವಯಸ್ಕರು ಮತ್ತು ಸಮಾನ ಮನಸ್ಕರ ನಡುವೆ ತಮಾಷೆ ನಡೆಯುವುದು ಸಹಜ. ಹಾಗೆ ತಮಾಷೆ ಮಾಡಲು ಹೋದ ವ್ಯಕ್ತಿಯೊಬ್ಬ ತನ್ನ ಜೀವವನ್ನೇ ಕಳೆದುಕೊಂಡ ಪ್ರಸಂಗವಿದು. 80ರ ದಶಕದಲ್ಲಿ ನಡೆದ ಈ ಘಟನೆ ಹಲವರಿಗಂತೂ ಪಾಠ ಆಯಿತು.
ಅದು ಚಿಕ್ಕಬಳ್ಳಾಪುರ ಜಿಲ್ಲೆಯ ಬೂರಗಮಡುಗು ಗ್ರಾಮ. ಈ ಗ್ರಾಮ ಕಾಡಿನ ನಡುವೆ ಇದ್ದು, ಹಳ್ಳಿಯೊಳಗೆ ಹೋಗುವವರೆಗೆ ಅಲ್ಲೊಂದು ಹಳ್ಳಿ ಇದೆ ಎಂಬುದು ತಿಳಿಯುವುದೇ ಇಲ್ಲ. ಈ ಪ್ರದೇಶದಲ್ಲಿ ಕಾಡು ಎಂದರೆ ಕುರುಚಲು ಕಾಡು. ಕೇವಲ ಸೀತಾಫಲ, ಕಾರೆ ಮುಂತಾದ ಗಿಡಗಳಿಂದ ಕೂಡಿದ ಪ್ರದೇಶವನ್ನೇ ಇಲ್ಲಿ ಕಾಡು ಎಂದು ಕರೆಯಲಾಗುತ್ತದೆ. ಇಲ್ಲಿ ದಟ್ಟವಾದ ಕಾಡು ಇಲ್ಲದಿದ್ದರೂ ಹೇರಳವಾಗಿ ಕಾಡುಪ್ರಾಣಿಗಳಂತೂ ಲಭ್ಯವಿದೆ. ಕಾಡು ಹಂದಿ, ನವಿಲು, ಕೌಜುಗ ಹಕ್ಕಿ, ಮೊಲ, ಮುಳ್ಳುಹಂದಿ, ಚಿಪ್ಪು ಹಂದಿ, ಉಡ ಇವೆಲ್ಲ ಯಥೇಚ್ಛ. ಅದೇ ಕಾರಣಕ್ಕೆ ಕಾಡಂಚಿನ ಜನರು ಎಂದೂ ಮಾಂಸವನ್ನು ಕೊಂಡು ಸೇವಿಸುವುದಿಲ್ಲ. ಮಾಂಸ ತಿನ್ನಬೇಕು ಎನಿಸಿದರೆ ಬಂದೂಕು ಹೆಗಲೇರಿಸಿಕೊಂಡು ಕಾಡು ಪ್ರವೇಶಿಸುತ್ತಾರೆ.
ಇನ್ನು ಇವರು ಶಿಕಾರಿಗಾಗಿ ಬಳಸುವ ಬಂದೂಕುಗಳು ಪರವಾನಿಗೆ ಹೊಂದಿರಬೇಕು ಎಂದೇನೂ ಇಲ್ಲ. ಗ್ರಾಮದಲ್ಲಿ ಒಂದೋ ಎರಡೋ ಕೋವಿಗಳಿಗೆ ಪರವಾನಿಗೆ ಇದ್ದರೆ ಇಪ್ಪತ್ತಕ್ಕಿಂತ ಹೆಚ್ಚು ಕೋವಿಗಳು ನಾಡ ಬಂದೂಕುಗಳಾಗಿರುತ್ತವೆ. ಹೀಗೆ ಕೇವಲ ಶಿಕಾರಿಗಾಗಿ ಹೊರಟವರು ತಮಾಷೆ ಮಾಡಲು ಹೋಗಿ ಹೇಗೆ ಸಮಸ್ಯೆಗೆ ಸಿಲುಕಿಕೊಂಡರು ಎಂಬುದೇ ಈ ಪ್ರಕರಣ.
ಮುಂಗಾರಿನ ಆರಂಭದಲ್ಲಿ ರೈತರು ಹೊಲಗಳಲ್ಲಿ ಬಿತ್ತಿದ ಶೇಂಗಾ ತಿನ್ನಲು ಕಾಡುಹಂದಿಗಳ ಹಿಂಡು ಹೊಲಗಳಿಗೆ ದಾಳಿ ಮಾಡಿ ರೈತರ ಬೆಳೆ ಹಾಳು ಮಾಡುವುದು ಇಲ್ಲಿ ಸಹಜ ಕ್ರಿಯೆ. ಹಂದಿಕಾಟಕ್ಕೆ ಮಂಗಳ ಹಾಡಲು ನಿರ್ಧರಿಸಿದ ಬೂರಗಮಾಡದ ವೃತ್ತಿಪರ ಬೇಟೆಗಾರರು ಅಮಾವಾಸ್ಯೆ ದಿನ ಬೇಟೆಗೆ ಹೋಗುವ ಸಿದ್ಧತೆ ನಡೆಸಿದರು.
ಅಂದು 10ನೇ ತಾರೀಕು ಆದ ಕಾರಣ ಕೃಷ್ಣ ಎಂಬವನಿಗೆ ಚೀಟಿ ಇತ್ತು. ಚೀಟಿ ಎಂದರೆ ಗ್ರಾಮಗಳಲ್ಲಿ ಸಣ್ಣ ಉಳಿತಾಯಕ್ಕಾಗಿ ನಡೆಸುವ ಒಂದು ಕ್ರಮ. ಆತನಿಗೆ ಹಣದ ಅವಶ್ಯಕತೆ ತುಂಬಾ ಇದ್ದ ಕಾರಣ ಅಂದು ಚೀಟಿಗೆ ಹಾಜರಾಗಿ ಹಣವನ್ನು ಪಡೆಯಲೇ ಬೇಕಿತ್ತು. ಅವನು ಚೀಟಿ ಕೂಗಿ ವಾಪಸ್ ಬರುವವರೆಗೆ ಬೇಟೆಗಾರರು ಕಾದು ಕೂರುವಂತಿಲ್ಲ. ಕಾರಣ ತಡವಾದರೆ ಪ್ರಾಣಿಗಳು ಆಹಾರ ಸೇವಿಸಿ ವಾಪಸ್ ಕಾಡಿಗೆ ಮರಳುತ್ತವೆ.
ಈ ಸಮಸ್ಯೆಗೆ ಕೃಷ್ಣಪ್ಪನೇ 'ನೀವು ಬೇಟೆಗೆ ಹೊರಟಿರಿ. ನಾನು ಮತ್ತೆ ಬಂದು ನಿಮ್ಮನ್ನು ಕೂಡಿಕೊಳ್ಳುತ್ತೇನೆ' ಎಂದು ಪರಿಹಾರ ಸೂಚಿಸಿದ. ಎಲ್ಲರೂ ಒಪ್ಪಿದರು. ತಾವು ಹೋಗಲಿರುವ ಜಾಗದ ಬಗ್ಗೆ ಆತನಿಗೆ ವಿವರಿಸಿ ಹೇಳಿ ಹೊರಟುಹೋದರು. ಕೃಷ್ಣಪ್ಪ ಚೀಟಿ ಮುಗಿಯುವವರೆಗೆ ಊರಿನಲ್ಲೇ ಇದ್ದು, ಹಣ ಪಡೆದು ಮನಯೆಲ್ಲಿಟ್ಟು ಸಿದ್ಧನಾಗಿ ಕಾಡಿನಲ್ಲಿರುವ ತನ್ನ ಬೇಟೆಯ ಮಿತ್ರರನ್ನು ಸೇರಿಕೊಳ್ಳಲು ಆತುರಾತುರವಾಗಿ ಹೆಜ್ಜೆ ಹಾಕಿದ. ಗ್ರಾಮೀಣ ಜನರು ಕಾಡಿನಲ್ಲಿ ಯಾವುದೇ ನಾಮಫಲಕಗಳಿಲ್ಲದಿದ್ದರೂ ಕೆಲವು ನೈಸರ್ಗಿಕ ವಸ್ತುಗಳನ್ನೇ ತಮ್ಮ ನಾಮಫಲಕಗಳನ್ನಾಗಿಸಿಕೊಂಡಿರುತ್ತಾರೆ. ಕೊಡಲಿಯಂತೆ ಕಾಣುವ ಕಲ್ಲು ಕೊಡಲಿ ಕಲ್ಲು ಎಂದಾದರೆ, ದಾರಿಗೆ ಅಡ್ಡವಾಗಿ ಹಾಸಿದಂತಿರುವ ಕಲ್ಲು ಅಡ್ಡ ಕಲ್ಲು. ಅದೇ ರೀತಿ ಕೃಷ್ಣಪ್ಪ ಮೊದಲೇ ನಿರ್ಧರಿಸಿದ್ದ ಜಾಗಗಳಲ್ಲಿ ಎಲ್ಲಿ ಬೇಟೆಗಾರರಿದ್ದಾರೆ ಎಂದು ಹುಡುಕುತ್ತಾ ಕತ್ತಲಲ್ಲಿ ಹೆಜ್ಜೆ ಹಾಕುತ್ತಿರುವಾಗ ದೂರದಲ್ಲಿ ಟಾರ್ಚ್ ಬೆಳಕು ಕಾಣಿಸಿತು.
ಬೆಟ್ಟದ ತಪ್ಪಲಿನಲ್ಲಿ ಟಾರ್ಚ್ ಬೆಳಕು ಬೀಳುತ್ತಿತ್ತು. ಅವರು ಮುಂದೆ ಯಾವ ದಿಕ್ಕಿನಲ್ಲಿ ಸಾಗುತ್ತಾರೆ ಎಂಬುದನ್ನು ಊಹಿಸಿದ ಕೃಷ್ಣಪ್ಪ ಅವರಿಗಿಂತ ಮುಂಚೆ ಮುಂದೆ ಸಾಗಿ ಒಂದು ಮರ ಹತ್ತಿ ಕುಳಿತ. ಬೇಟೆಗಾರರು ಸಹಜವಾಗಿಯೇ ಮರಗಳ ಮೇಲೂ ಟಾರ್ಚ್ ಬೆಳಕು ಬೀರಿ ಪರಿಶೀಲಿಸುತ್ತಾರೆ ಎಂಬುದು ಆತನಿಗೂ ಗೊತ್ತಿತ್ತು. ಆದರೆ ಹಾಗೆ ಕೂತು ಬೇಟೆಗಾರರನ್ನು ಮೂರ್ಖರನ್ನಾಗಿ ಮಾಡಬೇಕು ಎಂಬುದು ಆತನ ಉದ್ದೇಶವಾಗಿತ್ತು. ಟಾರ್ಚ್ ಬೆಳಕು ಸಮೀಪವಾಗುತ್ತಿದ್ದಂತೆ ಮರದ ಕೊಂಬೆಯನ್ನು ಜೋರಾಗಿ ಅಲುಗಾಡಿಸಿದ. ಮೊದಲೇ ಬೇಟೆಯ ಮೂಡಿನಲ್ಲಿದ್ದ ಆತನ ಸಹಚರರು ಮರದ ಮೇಲೆ ಟಾರ್ಚ್ ಬಿಟ್ಟರು.
ಟಾರ್ಚ್ ಬೆಳಕು ಬೀರಿದಾಗ ಯಾವುದೇ ಪ್ರಾಣಿಯ ದೇಹ ಮೊದಲು ಕಾಣುವುದಿಲ್ಲ. ಬದಲಿಗೆ ಅದರ ಕಣ್ಣುಗಳು ಪ್ರತಿಬಿಂಬವಾಗಿ ಗೋಚರಿಸುತ್ತವೆ. ಹಾಗೆ ಪ್ರತಿಫಲನವಾಗುತ್ತಿರುವ ಕಣ್ಣುಗಳ ಪ್ರಖರತೆಯನ್ನು ಕಂಡು ಪಳಗಿದ ಬೇಟೆಗಾರರು ಅದು ಯಾವ ಪ್ರಾಣಿ ಎಂಬುದನ್ನು ಅದು ಕಾಣಿಸದಿದ್ದರೂ ಗುರ್ತಿಸುವ ಜ್ಞಾನ ಹೊಂದಿರುತ್ತಾರೆ. ಅಂದೂ ಕೂಡಾ ಮರದ ಮೇಲೆ ಕಾಣುತ್ತಿರುವ ಕಣ್ಣುಗಳು ಯಾವ ಪ್ರಾಣಿಯದ್ದು ಎಂಬುದನ್ನು ನಿರ್ಧರಿಸಲು ಬೇಟೆಗಾರನಿಗೆ ಸ್ವಲ್ಪ ಕಾಲಾವಕಾಶ ಬೇಕಾಯಿತು. ಆದರೆ ತಡ ಮಾಡಿದರೆ ಅದು ಮರಿ ಇರುವ ಕರಡಿ ಆಗಿದ್ದರೆ ತಮ್ಮ ಮೇಲೆ ಎರಗಿ ಅಪಾಯ ಎಸಗುವುದು ಖಚಿತ ಎಂಬ ತೀರ್ಮಾನಕ್ಕೆ ಬಂದು ಕೈಯಲ್ಲಿದ್ದ ಕೋವಿಯ ಕುದುರೆ ಒತ್ತಿದ್ದ.
ಅಷ್ಟೇ ಕೆಲವೇ ಕ್ಷಣಗಳಲ್ಲಿ ಕೃಷ್ಣಪ್ಪ ಆರ್ತನಾದದೊಂದಿಗೆ ಮರದಿಂದ ನೆಲಕ್ಕುರುಳಿದ. ಬೇಟೆಯ ಖುಷಿಯಲ್ಲಿದ್ದ ಎಲ್ಲರಿಗೂ ಆಘಾತ. ಏನು ನಡೆಯಿತು ಎಂದು ತಿಳಿಯುವ ಮೊದಲೇ ಕೃಷ್ಣಪ್ಪನ ಪ್ರಾಣ ಪಕ್ಷಿ ಹಾರಿಹೋಗಿತ್ತು. ತಮಾಷೆ ಮಾಡಿ ಬೇಟೆಗಾರರನ್ನು ಬೆಚ್ಚಿ ಬೀಳಿಸಬೇಕು ಎಂದು ಆಲೋಚಿಸಿದ್ದ ಕೃಷ್ಣಪ್ಪ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದ. ಮನುಷ್ಯ ಮತ್ತು ಕರಡಿಯ ಕಣ್ಣುಗಳು ಒಂದೇ ರೀತಿಯಲ್ಲಿ ಟಾರ್ಚ್ ಬೆಳಕಿಗೆ ಪ್ರತಿಫಲನವಾಗುವುದರಿಂದ ಅಲ್ಲಿರುವುದು ಕರಡಿ ಎಂಬ ನಿರ್ಧಾರಕ್ಕೆ ಬೇಟೆಗಾರ ಬಂದಿದ್ದ. ಕೋವಿಯಿಂದ ಹಾರಿದ ಗುಂಡು ನೇರವಾಗಿ ಕೃಷ್ಣಪ್ಪನ ಹಣೆ ಸೀಳಿಕೊಂಡು ಹೋದ ಕಾರಣ ಮರದಿಂದ ನೆಲಕ್ಕೆ ಉರುಳಿದ ಕ್ಷಣದಲ್ಲೇ ಸಾವನ್ನಪ್ಪಿದ್ದ. ನಡೆದಿದ್ದು ಏನು ಎಂಬುದು ಅರಿವಾದ ಮೇಲೆ ಅಲ್ಲಿದ್ದವರೆಲ್ಲ ಮುಂದೆ ನಡೆಯಬಹುದಾದ ಅನಾಹುತ ನೆನೆದು ಬೆವರತೊಡಗಿದರು.
ಕೃಷ್ಣಪ್ಪ ಮೃತಪಟ್ಟ ದಿನ ಆತನ ಪತ್ನಿಗೆ ನಷ್ಟಪರಿಹಾರವಾಗಿ ಒಂದಷ್ಟು ಹಣ ನೀಡಿ ಪ್ರಕರಣ ಬೆಳೆಸದಂತೆ ವಿನಂತಿಸಿಕೊಂಡರು. ಇಡೀ ಗ್ರಾಮ ಒಗ್ಗಟ್ಟಾಗಿದ್ದ ಕಾರಣ ಆಕೆ ತಲೆ ಬಾಗಲೇ ಬೇಕಾಯಿತು. ಕೃಷ್ಣಪ್ಪ ಸಾವನ್ನಪ್ಪಿದ ಒಂದು ವಾರದ ನಂತರ ಪೊಲೀಸರಿಗೆ ವಾಸನೆ ಬಡಿಯಿತು. ಗ್ರಾಮಕ್ಕೆ ಬಂದು ವಿಚಾರ ಮಾಡಿದರು. ಆದರೆ ಗ್ರಾಮಸ್ಥರು ಒಗ್ಗಟ್ಟಾಗಿದ್ದ ಕಾರಣ ಯಾರೂ ವಿಷಯ ಬಾಯಿಬಿಡಲಿಲ್ಲ. ಪರಿಣಾಮ ಪೊಲೀಸರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂತಿರುಗಿದರು. ಈ ಘಟನೆ ನಡೆದ ನಂತರ ಬೇಟೆಗಾರರು ಬೇಟೆಗೆ ಹೋಗುವುದನ್ನು ನಿಲ್ಲಿಸಿಲ್ಲ. ಅದೇ ರೀತಿ ಕಾಣುವ ಕಣ್ಣುಗಳು ಮನುಷ್ಯನದೇ ಅಥವಾ ಪ್ರಾಣಿಗಳದೇ ಎಂಬುದನ್ನೂ ಪರೀಕ್ಷೆ ಮಾಡುತ್ತಿಲ್ಲ. ಆದರೆ ಕೃಷ್ಣಪ್ಪನ ರೀತಿ ಯಾರೂ ತಮಾಷೆ ಮಾಡಲಂತೂ ಮುಂದಾಗಿಲ್ಲ.
- ಅಶ್ವತ್ಥನಾರಾಯಣ್ ಎಲ್.
sathyajns@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


