ಬೈಟುಕಾಫಿ

ಕೆಲವು ತಪ್ಪುಕಲ್ಪನೆ

Published On :

ಆಗ್ನೆಯ ದಿಕ್ಕಿಗೆ ಅಡುಗೆಮನೆ ಇರಬೇಕು. ಮುಂಜಾನೆ ಸೂರ್ಯನ ಕಿರಣಗಳು ಪಾಕಸ್ಥಾನವನ್ನು ತಲುಪಬೇಕು. ಮೊದಲೆಲ್ಲಾ ಕರೆಂಟ್ ಇರಲಿಲ್ಲ ನೋಡಿ ಅದಕ್ಕೆ. ಪಶ್ಚಿಮ ದಿಕ್ಕಿಗೆ ಬಾಗಿಲು ಇರಬಾರದೇಕೆಂದರೆ ಮಳೆಗಾಲವು ಪಶ್ಚಿಮ ದಿಕ್ಕಿನಿಂದ ಬರುತ್ತದೆ. ಆದ ಕಾರಣ ಮಳೆ ನೀರು ಮನೆಯೊಳಗೆ ಬರುತ್ತದೆ ಮತ್ತು ಬಾಗಿಲು ಹಾಳಾಗುತ್ತದೆ ಅಂತಷ್ಟೇ. ಆದರೆ, ನಮ್ಮ ಜನ ವಾಸ್ತು ಇಲ್ಲದಿದ್ದರೆ ನೆಮ್ಮದಿಯೇ ಇರಲ್ಲ ಅಂತ ತಿಳಿದಿದ್ದಾರೆ. ಇದು ತಪ್ಪುಕಲ್ಪನೆ. ಅಷ್ಟ ದಿಕ್ಪಾಲಕರೆಲ್ಲಾ ದೇವರುಗಳೇ ಎಂದಮೇಲೆ ಹಾಗೂ ಎಲ್ಲ ಕಡೆಯೂ ದೇವರು ಇದ್ದಾನೆ ಅಂತ ಹೇಳೋ ನಮ್ಮ ಜನ ದೇವರ ಕೋಣೆ ಇಂಥ ದಿಕ್ಕಿಗೇ ಇರಬೇಕಂತ ಬಯಸೋದೇಕೆ? ಮತ್ತು ವಾಸ್ತು ಪ್ರಕಾರ ಇಲ್ಲ ಅಂತ ಅದೆಷ್ಟೋ ಕಟ್ಟಿದ ಮನೆಗಳನ್ನು ಕೆಡವಿಲ್ಲಾ ಹೇಳಿ? ವಾಸ್ತು ಅನ್ನೋದು ನಮ್ಮ ಅನುಕೂಲಕ್ಕೆ ಹೊರತು ವಾಸ್ತು ಇಲ್ಲದಿದ್ದರೆ ನಮ್ಮ ಬೆಳವಣಿಗೆಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ.
-ಖಂಡೋಬಾ ವಿ.ಎಚ್., ಕಾದರವಳ್ಳಿ

ವಾಸ್ತು ಬೇಕಿಲ್ಲ
ಮನೆಗೇನು ವಾಸ್ತು ಬೇಕಿಲ್ಲ. ಈಗಿನ ಆಡಂಬರದ, ಅದನ್ನೊಂದು ಉದ್ಯೋಗ ಮಾಡಿಕೊಂಡಿರುವವರಿಗೆ ವಾಸ್ತುಒಂದು ವ್ಯಸನವಷ್ಟೇ. ನಮ್ಮ ಪೂರ್ವಿಕರು ಯಾವ ವಾಸ್ತುವನ್ನೂ ಕೇಳದೆ ಮನೆ ಕಟ್ಟುತ್ತಿದ್ದರು. ಅದರಲ್ಲಿ ನೂರಾರು ವರ್ಷ ಚೆನ್ನಾಗಿ ಬದುಕಿ, ಯಥೇಚ್ಚವಾಗಿ ಧವಸ- ಧಾನ್ಯ ಬೆಳೆದು, ದಾನ- ಧರ್ಮ ಮಾಡಿ ತಮ್ಮ ಬಾಳ ಸಂಜೆಯನ್ನು ಮೌಲ್ಯಯುತವಾಗಿ ಮುಗಿಸುತ್ತಿದ್ದರು. ಈಗಿನವರು ವಾಸ್ತು ಬೇಕೆಂದು ಪ್ರಪಂಚದಲ್ಲಿನ ವಸ್ತುಗಳನ್ನೆಲ್ಲ ಬಳಸಿ ಮನೆ ಕಟ್ಟಿದರೂ ನಮ್ಮ ಪೂರ್ವಿಕರಂತೆ ಶಾಂತಿ- ಸಮಾಧಾನದಿಂದ ಬದುಕದೆ, ತಂದೆ-ತಾಯಿ, ಬಂಧು- ಬಳಗವನ್ನು ನೋಡದೆ ಚಿತ್ರ ವಿಚಿತ್ರವಾದ ಕಾಯಿಲೆಗಳಿಗೆ ತುತ್ತಾಗಿ ನರಳುತ್ತಿರುವುದನ್ನು ನೋಡಿದರೆ ವಾಸ್ತು ಬೇಕೆನಿಸುತ್ತದೆಯೇ? ಒಮ್ಮೆ ಯೋಚಿಸಿ.
-ಚಿಕ್ಕಣ್ಣ, ಕೊರಟಗೆರೆ

ವಾಸ್ತುವಿನ ಭ್ರಮೆ ಬೇಡ
ವಾಸ್ತು ನಗರ ಪ್ರದೇಶಗಳಲ್ಲಿ ಹೆಚ್ಚು. ಇದೊಂದು ಭ್ರಮೆ. ಆಗುವುದಕ್ಕೆಲ್ಲ ಶನೇಶ್ವರನೇ ಕಾರಣ ಎನ್ನುವ ಹಾಗೆ ಮನೆಯಲ್ಲಿ ಏನಾದರೂ ಕೆಡುಕುಗಳಾದರೆ ಅಥವಾ ಏಳ್ಗೆಯಾಗದಿದ್ದಲ್ಲಿ ವಾಸ್ತುವೇ ಕಾರಣ ಎಂದು ತೀರ್ಮಾನಕ್ಕೆ ಬಂದು ಬಿಡುತ್ತಾರೆ. ಬಾಡಿಗೆಯವರಾದರೆ ಗಂಟು ಮೂಟೆ ಕಟ್ಟಿಕೊಂಡು ಜಾಗ ಖಾಲಿ ಮಾಡಿದರೆ, ಮಾಲೀಕರು ಜ್ಯೋತಿಷಿಗಳ ಹತ್ತಿರ ಹೋಗಿ ಅವರನ್ನು ಸಂತೃಪ್ತಿಗೊಳಿಸಿ, ಇವರೂ ಸಂತೃಪ್ತಿಗೊಂಡು ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಳ್ಳುತ್ತಾರೆ. ವಾಸ್ತು ನಂಬಬೇಕು ನಿಜ. ಆದರೆ, ಅದನ್ನೇ ನಿತ್ಯದ ಜೀವನದೊಂದಿಗೆ ಅನ್ವಯಿಸಿಕೊಂಡು ಮನಸ್ಸನ್ನು ರಾಡಿ ಮಾಡಿಕೊಳ್ಳುವುದು ಎಷ್ಟು ಸರಿ? 'ಅತಿಯಾದರೆ ಅಮೃತವೂ ವಿಷ'. ಈ ವಿಷಯದಲ್ಲಿ ನಮ್ಮ ಗ್ರಾಮೀಣ ಜನರೇ ಉತ್ತಮ. ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಗೃಹ ನಿರ್ಮಿಸಿಕೊಂಡು ವಾಸ್ತುವಿನ ವಿಷಯದಲ್ಲಿ ಗೌಣವಾಗಿದ್ದು ಬಿಡುತ್ತಾರೆ. ನೀವೇನಂತೀರಿ?
-ಮೊಕವಳ್ಳಿ ಮಹಾರಾಜ್, ಹಾಸನ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.