ಮೌನವಾಗಿದ್ದು ಮಜಾ ಅನುಭವಿಸಿ

ಕೆಲವೊಂದು ಸಮಸ್ಯೆಗಳು ಹಾಗೆಯೇ, ಅವು ಮಾತನಾಡಿದಷ್ಟೂ ಬೆಳೆಯುತ್ತೆ. ಮಾತನಾಡಲೇಬೇಕು ಎನ್ನುವಷ್ಟು ನಿಮ್ಮನ್ನು ಪ್ರಚೋದನೆಗೆ ಈಡು ಮಾಡುತ್ತದೆ. ಮಾತಾಡದಿದ್ದರೆ ನೀವೇ ತಪ್ಪಿತಸ್ಥರೆಂದಾಗಿಬಿಡುತ್ತದೆ ಎಂಬಂಥ ಭಯ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ಹೀಗಾಗಿ ನೀವು ಸನ್ನಿವೇಶಕ್ಕೆ ಪ್ರತಿಕ್ರಿಯಿಸಲು ಆರಂಭಿಸುತ್ತೀರಿ. ಅದು ಕಚೇರಿಯ ವಿಚಾರವಿರಬಹುದು, ಕುಟುಂಬದಲ್ಲಿನ ಭಿನ್ನಾಭಿಪ್ರಾಯವೇ ಇರಬಹುದು. ಸ್ನೇಹಿತರೊಂದಿಗಿನ ವಿರಸ, ಮೇಲಧಿಕಾರಿಯೊಂದಿಗಿನ ಭಿನ್ನಮತ, ನಿಮ್ಮ ಮೇಲಿನ ಆರೋಪಗಳು... ಇಂಥ ಸಂದರ್ಭಗಳಲ್ಲೆಲ್ಲ ಸಮಸ್ಯೆಗಳು ಉಲ್ಬಣಿಸುವುದೇ ನಿಮ್ಮ ಮಾತಿನಿಂದ. ಹಾಗೆಂದು ಮಾತೇ ಆಡದಿರುವುದೂ ಪರಿಹಾರವೇನಲ್ಲ. ಬಹಳಷ್ಟು ಸಂದರ್ಭಗಳಲ್ಲಿ ನಿಮ್ಮ ತಪ್ಪಿಲ್ಲದೆಯೇ ಸಂಕಷ್ಟ ಎದುರಾಗಿದ್ದಿರಲೂಬಹುದು. ಅಂಥ ಸನ್ನಿವೇಶಗಳಲ್ಲಿ ನೀವು ನಿಮ್ಮ ಸಮರ್ಥನೆಗಾಗಿ ಮಾತನಾಡುವುದು ಅನಿವಾರ್ಯವೆನಿಸುತ್ತದೆ. ಆದರೆ ಅದು ತನ್ನ ಮಿತಿಯನ್ನು ದಾಟಿ ಹೋಗದಂತೆ ಎಚ್ಚರ ವಹಿಸುವುದು ಅತ್ಯಂತ ಅಗತ್ಯ. ಅದಿಲ್ಲದಿದ್ದರೆ ಸಮಸ್ಯೆ ದ್ವಿಗುಣಗೊಳ್ಳುವ ಜತೆಗೆ ಹೊಸ ಸಮಸ್ಯೆಗಳನ್ನು ಹುಟ್ಟು ಹಾಕುವ ಸಾಧ್ಯತೆಗಳಿರುತ್ತವೆ. ಭಿನ್ನಾಭಿಪ್ರಾಯಗಳ ವಿಷಯದಲ್ಲಿ ಮಾತಿನಿಂದ ಅದು ಹೆಚ್ಚುವ ಸಂಭಾವ್ಯತೆಯೇ ಜಾಸ್ತಿ. ಸುಮ್ಮನಿದ್ದು ಬಿಡಿ. ಅದಕ್ಕೂ ಮುನ್ನ ಒಂದು ಸಲ ನಿಮ್ಮ ನಿಲುವನ್ನು ಸ್ಪಷ್ಟಪಡಿಸಿಬಿಡಿ. ನಿಮ್ಮ ತಪ್ಪಿನಿಂದ ಸಮಸ್ಯೆ ಉದ್ಭವವಾಗಿದ್ದರೆ ಅದನ್ನು ಒಪ್ಪಿಕೊಳ್ಳುವ ಔದಾರ್ಯ ತೋರಿ. ಅದಿಲ್ಲದಿದ್ದರೆ ಇದು ನನ್ನಿಂದಾದದ್ದಲ್ಲ ಎಂಬುದನ್ನು ನೇರವಾಗಿ ತಿಳಿಸಿಬಿಡಿ. ನಂತರ ಸುಮ್ಮನಿದ್ದುಬಿಡಿ. ಎಲ್ಲದಕ್ಕೂ ಒಂದು ಕೊನೆ ಇದ್ದೇ ಇರುತ್ತದೆ. ಇನ್ನೂ ಒಂದು ಕುತೂಹಲಕಾರಿ ಸಂಗತಿ, ನೀವೇ ಹೆಚ್ಚು ಮಾತನಾಡಿದರೆ ಬೇರೆಯವರ ಮಾತು ಎಂಜಾಯ್ ಮಾಡುವ ಅವಕಾಶ ಕಳೆದುಕೊಳ್ಳುತ್ತೀರಿ. ಮೌನವಾಗಿದ್ದು ಮಜಾ ಅನುಭವಿಸಿ. ಗೆಲುವು ನಿಮ್ಮದಾಗಿರುತ್ತದೆ.
- ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


