ಬೈಟುಕಾಫಿ

ಅವರಿಗಿಲ್ಲದ ಭಯ ನಮಗ್ಯಾಕೆ?

Published On :

ಒಂದು ಮನೆ ಎಂದ ಮೇಲೆ ಯಾವ್ಯಾವುದು ಎಲ್ಲೆಲ್ಲಿ ಇರಬೇಕೋ ಅಲ್ಲಲ್ಲಿ ಇದ್ದರೇನೆ ಚಂದ. 'ಅದು ಆ ಕಡೆ ಇದ್ದರೆ ಶ್ರೇಷ್ಠ, ಇದು ಈ ಕಡೆ ಇರುವುದರಿಂದಲೇ ನಿಮಗೆ ನಷ್ಟ ಆಗ್ತಾ ಇರೋದು' ಎಂದು ಹೇಳುವ ಜ್ಯೋತಿಷಿಗಳು, ವಾಸ್ತುತಜ್ಞರು ಈಗ ಗಲ್ಲಿಗೊಬ್ಬರಿದ್ದಾರೆ. ವಾಸ್ತು ಎಂಬುದು ನಮಗೆ ನಾವುಗಳೇ ಇತ್ತೀಚಿಗೆ ಮಾಡಿಕೊಂಡ ಕಟ್ಟಳೆ, ನಿಯಮಗಳೇ ಹೊರತು ಅದರಿಂದೇನೂ ನಷ್ಟವಾಗದು. ನಮ್ಮ ಹಿಂದಿನ ಕಾಲದ ಜನರು ವಾಸ್ತು ನಂಬಿಯೇ ಮನೆ ಕಟ್ಟಿದವರಲ್ಲ. ಇಷ್ಟಾಗಿಯೂ ಅವರು ಯಾವುದೇ ತೊಂದರೆಯಾಗದೆ ನೂರಾರು ವರ್ಷಗಳ ಕಾಲ ಗಟ್ಟಿಮುಟ್ಟಾಗಿ ಬದುಕಿ ಬಾಳಿದ್ದಾರೆ. ವಾಸ್ತು ಎಂಬ ಗುಮ್ಮ ಅವರಿಗೆ ಕಾಡಿದ್ದೇ ಇಲ್ಲ. ಜನ ಹಿಂದೆಮುಂದೆ ಯೋಚಿಸದೇ ಜ್ಯೋತಿಷಿಗಳು ಹೇಳಿದ್ದೇ ವೇದ ವಾಕ್ಯವೆಂದು ತಿಳಿದು ಅದರಂತೆ ಪಾಲಿಸಲು ಹೊರಟು ಬಿಡುತ್ತಾರೆ. ಇದರಿಂದ ನಮ್ಮಲ್ಲಿ ಮಾನಸಿಕ ಖಿನ್ನತೆಯು ಹೆಚ್ಚಾಗುವುದರ ಜೊತೆಗೆ ವೃಥಾ ಖರ್ಚು. ನಮ್ಮ ಮನೋಬಲ, ಮಾನಸಿಕ ಸ್ಥಿರತೆ ಹಾಗೂ ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡಲ್ಲಿ ಈ ವಾಸ್ತು ಅನಗತ್ಯ.
- ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

ವಿರೂಪಗೊಂಡ ಸಂಸಾರಗಳು!
ವಾಸ್ತು, ವಾಸ್ತು ಎಂದು ಎಷ್ಟೋ ಜನರು ಮನೆಯನ್ನೇ ವಿರೂಪಗೊಳಿಸಿಕೊಂಡು ಹಾಳಾಗುತ್ತಿದ್ದಾರೆ. ನಾನೇ ನೋಡಿದ ಎರಡು ಪ್ರಮುಖ ಘಟನೆಗಳು ಇವು. ಆಂಧ್ರದಲ್ಲಿ ಎನ್.ಟಿ.ರಾಮರಾವ್ ಬದುಕಿದ್ದಾಗ ತಮ್ಮ ಬಂಗ್ಲೆಯನ್ನು ವಾಸ್ತುಗೋಸ್ಕರ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಅಡ್ಡಾದಿಡ್ಡಿ ಬದಲಾಯಿಸಿದರು. ಮುಂದೆ 3-4 ತಿಂಗಳಲ್ಲೇ ಚಂದ್ರಬಾಬು ನಾಯ್ಡು ದಂಗೆ ಎದ್ದಾಗ ಇದ್ದ ಅಧಿಕಾರವನ್ನು ಕಳೆದುಕೊಂಡರು. ಎರಡನೇಯದು, ನನ್ನ ದೊಡ್ಡಮ್ಮನ ಮಗ ಜ್ಯೋತಿಷಿಗಳ ಮಾತಿನಂತೆ ಮನೆಯನ್ನು ಹೇಗೇಗೋ ಬದಲಾಯಿಸಿ ವಿರೂಪಗೊಳಿಸಿದ. ಮನೆಗೆ ಬರುತ್ತಿದ್ದ ನೇರ ರಸ್ತೆಯನ್ನು ಬದಲಿಸಿ ಸುತ್ತಿ ಬಳಸಿ ಬರುವಂತೆ ಮಾಡಿ, ಈಗ 5-6 ಮೆಟ್ಟಿಲು ಏರಿ ಪ್ರಯಾಸದಿಂದ ಮನೆಗೆ ಬರುವಂತಾಗಿದೆ. ಆದರೂ ಆತ ಕ್ಯಾನ್ಸರ್‌ನಿಂದ ಬಳಲಿ ಮೂರೇ ವರ್ಷದಲ್ಲಿ ತೀರಿಹೋದ. ನಂತರ ಆತನ ತಂದೆ ತೀರಿಕೊಂಡರು. ದೊಡ್ಡಮ್ಮ ಈಗಲೂ ಇದ್ದಾರೆ.  ಹೆಣ್ಣುಮಕ್ಕಳು ಆತನ ಮಗನ ಮೇಲೆ ಆಸ್ತಿ ದಾವೆ ಹೂಡಲು ತಯಾರಾಗುತ್ತಿದ್ದಾರೆ. ಸಮಸ್ಯೆಗಳು ಇನ್ನೂ ಜಾಸ್ತಿಯಾಗಿವೆ. ಲಕ್ಷಾಂತರ ಹಣ ಪೋಲಾಗಿದೆ.
- ಜಯಪ್ರಸಾದ್.ಹೆಚ್.ಬಿ

ಅದೊಂದು ಹುಚ್ಚು ಅಷ್ಟೆ!
ವಾಸ್ತು ಎಂಬುದು ಈ ಭೂಮಿಯ ಮೇಲೆ ದಿಕ್ಕುಗಳಿಗೆ ಅನುಗುಣವಾಗಿ ವಸ್ತುಗಳು ಹೇಗಿರಬೇಕು, ಯಾವ ಕಡೆಯಿದ್ದರೆ ಏನು ಲಾಭ ಅಥವಾ ನಷ್ಟ ಎಂಬುದನ್ನು ತಿಳಿಸುವ ಶಾಸ್ತ್ರ. ವಿಶೇಷವಾಗಿ ವಾಸಿಸುವ ಮನೆ, ಕೇರಿಗಳು ಮುಂತಾದ ಆವಾಸಗಳನ್ನು ನಿರ್ಮಿಸುವಾಗ ಈ ವಾಸ್ತುವನ್ನು ಅಳವಡಿಸುವ ರೂಢಿ ಇತ್ತೀಚೆಗೆ ಹೆಚ್ಚಾಗುತ್ತಿದೆ. ವಾಸ್ತವವಾಗಿ ಗಾಳಿ ಬೆಳಕುಗಳು ಮನೆಯಲ್ಲಿ ವಿಫುಲವಾಗಿ ದೊರೆಯುವ ಅವಕಾಶವನ್ನು ಆಧರಿಸಿ ಕಿಟಕಿ, ಬಾಗಿಲುಗಳನ್ನು ಕೂಡಿಸಿದರೆ ಮನೆಯಲ್ಲಿ ವಾಸಿಸುವವರ ಮನಸ್ಥಿತಿ ಪ್ರಶಾಂತವಾಗಿರುತ್ತದೆ.
ನಮ್ಮ ದೈನಂದಿನ ಕಾರ್ಯ ಚಟುವಟಿಕೆಗಳು ನಮ್ಮ ಮನಸ್ಥಿತಿಯನ್ನೇ ಆಧರಿಸಿರುತ್ತವೆ. ಆದರೆ ವಾಸ್ತುವಿನ ಹೆಸರಿನಲ್ಲಿ ವಸ್ತುಸ್ಥಿತಿಯನ್ನು ವ್ಯಾಪಾರ ದೃಷ್ಟಿಯಿಂದಾಗಿ ವೈಭವೀಕರಿಸಿ, ಜನರನ್ನು ನಂಬಿಸಿ ಹಣ ದೋಚುವ ವಾಸ್ತುತಜ್ಞರು ಮಿತಿಮೀರಿ ಬೆಳೆಯುತ್ತಿದ್ದಾರೆ. ವಾಸ್ತುವಿನ ಬಳಕೆಯ ಹುಚ್ಚಿನಿಂದ ಹೆಚ್ಚೇನೂ ಪ್ರಯೋಜನವಿಲ್ಲ.
- ಹೊ.ರಾ.ಪರಮೇಶ್, ಗಾಣಧಾಳ

'ಜಗುಲಿ'ಯಲ್ಲಿ ಈ ಸಲದ ವಿಷಯ 'ಸಚಿನ್ ನಿವೃತ್ತಿ'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.