ಬೈಟುಕಾಫಿ

ತಂಪು ಪಾನೀಯಗಳ ಸಹಾವಾಸ ಬೇಡ!

ತಂಪು ಪಾನೀಯಗಳ ಸಹಾವಾಸ ಬೇಡ!
Published On :

ಈಗಿನ ಪೀಳಿಗೆಗೆ ಪೆಪ್ಸಿ, ಕೋಲಾದಂತಹ ಪೇಯಗಳೆಂದರೆ ಬಹಳ ಇಷ್ಟ. ಕೆಲವು ಪಾಲಕರು ಪುಟ್ಟ ಮಕ್ಕಳಿಗೂ ಇಂತಹ ಪಾನೀಯ ಕುಡಿಸುವ ಅಭ್ಯಾಸ ಮಾಡಿಸಿರುವುದನ್ನು ನಾನೇ ನೋಡಿದ್ದೇನೆ. ಅವರ ಭವಿಷ್ಯದ ಆರೋಗ್ಯದ ದೃಷ್ಟಿಯಿಂದ ಇದು ಖಂಡಿತವಾಗಿಯೂ ಒಳ್ಳೆಯದಲ್ಲ. ಯುವಜನರೂ ಅಷ್ಟೆ. ಇಂತಹ ಪೇಯಗಳಿಂದ ದೂರ ಇರಲು ಪ್ರಯತ್ನ ಪಡಬೇಕು.
ಕೆಲವರು ಇರುತ್ತಾರೆ, ಮನೆಯಲ್ಲೂ ಇಂಥ ಪೇಯಗಳು, ಕಚೇರಿಯಲ್ಲೂ ಇಂಥ ಪೇಯಗಳು. ಸಾಮಾನ್ಯವಾಗಿ ಇವನ್ನು ಕುಡಿದ ತಕ್ಷಣ ತೇಗು ಬರುತ್ತದೆ. ಮೂಲತಃ ಇವು ಕಾರ್ಬೊನೇಟೆಡ್ ಪೇಯಗಳು. ಗ್ಯಾಸ್ ಅಂಶ ಜಾಸ್ತಿ ಇರುತ್ತದೆ. ಹೊಟ್ಟೆ ಕೆಡಿಸಲು ಇನ್ನೇನು ಬೇಕು? ಉದರಕ್ಕೆ ಸಂಬಂಧಿಸಿ ಸಣ್ಣಪುಟ್ಟ ತೊಂದರೆಗಳು ಕಾಣಿಸಿಕೊಂಡಾಗಲಂತೂ ಇಂಥ ಪೇಯಗಳನ್ನು ಸೇವಿಸಲೇಬಾರದು. ಹಾಗೇನಾದರೂ ಕುಡಿದಿರಿ ಅಂತಿಟ್ಟುಕೊಳ್ಳಿ, ಎದೆ ಉರಿಯಂಥ ಅನುಭವ ಆಗಬಹುದು. ಕಾರ್ಬೊನೇಷನ್ ಪ್ರಕ್ರಿಯೆ ಉದರ ತೊಂದರೆಗಳನ್ನು ಇನ್ನಷ್ಟು ಜಟಿಲಗೊಳಿಸುತ್ತದೆ. ಇಲ್ಲೊಂದು ಸಣ್ಣ ಟಿಪ್ಸ್ ಕೊಡುವೆ. ಇಂಥ ಪೇಯಗಳನ್ನು ಕುಡಿಯಲೇಬೇಕಾದಾಗ ಅವುಗಳಲ್ಲಿನ ಗ್ಯಾಸ್ ತೀವ್ರತೆಯನ್ನು ಮೊದಲು ಕಡಿಮೆ ಮಾಡಿಕೊಳ್ಳಿ. ಮುಚ್ಚಳ ತೆಗೆದ ತಕ್ಷಣ 'ಹಿಸ್ಸ್...' ಅನ್ನುವ ಶಬ್ದ ಬರುತ್ತದಲ್ಲ, ಒಂದೆರಡು ನಿಮಿಷ ಹಾಗೆಯೇ ಬಿಡಿ. ಆಮೇಲೆ ಕುಡಿಯಿರಿ.
ಕೆಲವು ದೇಶಗಳಲ್ಲಿ ವಾಕರಿಗೆ ಬಂದಾಗ 'ಕೋಕಾಕೋಲಾ ಸಿರಪ್' ಅನ್ನೇ ಕೊಡುತ್ತಾರಂತೆ. ಆದರೆ ಅದರಿಂದ ಯಾವುದೇ ಪ್ರಯೋಜನ ಇಲ್ಲ ಎನ್ನುವುದೂ ಈಗ ಸಾಬೀತಾಗಿದೆ. ಕೆಲವು ಸಂಶೋಧಕರಂತೂ ಇದು ಉದರ ಸಂಬಂಧಿ ತೊಂದರೆಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ ಎನ್ನುವ ಅಭಿಪ್ರಾಯವನ್ನೇ ನೀಡಿದ್ದಾರೆ. ಇಂಥ ಪೇಯಗಳಲ್ಲಿನ ಅಧಿಕ ಸಕ್ಕರೆ ಅಂಶದಿಂದಲೂ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಎನ್ನುವುದು ಈಗ ಗುಟ್ಟಾಗಿಯೇನೂ ಉಳಿದಿಲ್ಲ.
ಹೊಟ್ಟೆ ಕೆಟ್ಟಾಗ ಚಹಾ ಕುಡಿಯಬಹುದೇ ಎನ್ನುವುದು ಕೆಲವರ ಪ್ರಶ್ನೆ. ಖಂಡಿತವಾಗಿಯೂ ಕುಡಿಯಬಹುದು. ಬಹಳಷ್ಟು ಜನರಲ್ಲಿ ಚಹಾ ಮ್ಯಾಜಿಕ್ ಮಾಡಿರುವುದು ಕಂಡುಬಂದಿದೆ. ಅದರಲ್ಲಿನ ಯಾವ ಅಂಶ ಹೊಟ್ಟೆಯ ಮೇಲೆ ಪ್ರಭಾವ ಬೀರುತ್ತದೆ ಎನ್ನುವ ನಿರ್ದಿಷ್ಟ ಸಂಗತಿ ಇನ್ನೂ ಬೆಳಕಿಗೆ ಬಂದಿಲ್ಲ. ಆದರೆ ವಾಕರಿಗೆ, ಹೊಟ್ಟೆ ತೊಳೆಸಿದಂತಾಗುವುದು ಇತ್ಯಾದಿ ತೊಂದರೆಗಳಿಗೆ ಚಹಾ ಪರಿಣಾಮಕಾರಿ ಎನ್ನುವುದು ದೃಢಪಟ್ಟಿದೆ. ಆದರೆ ಇದೇ ಮಾತು ಕಾಫಿಗೆ ಅನ್ವಯ ಆಗುವುದಿಲ್ಲ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಕಾಫಿ ವಾಕರಿಕೆಯಂತಹ ತೊಂದರೆಗಳು ಉಲ್ಬಣಗೊಳ್ಳುತ್ತದೆ ಮಾಡುತ್ತದೆ ಎನ್ನುವುದು ಡಾ.ಕೋಚ್ ಅಭಿಪ್ರಾಯ.

- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
ಮೊ.9900113699 (ಎಸ್ಎಂಎಸ್ ಗೆ ಮಾತ್ರ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.