ಬೈಟುಕಾಫಿ

ಮಂತ್ರಿಗಳ ಜಾತಕ, ಸರ್ಕಾರದ ಹಣ!

Published On :

ಆಧುನಿಕತೆಯ ಭರಾಟೆಯಲ್ಲಿ ವೈಜ್ಞಾನಿಕ ಕ್ಷೇತ್ರದಲ್ಲಿ ಆಗುತ್ತಿರುವ ಮಹತ್ತರ ಪ್ರಗತಿಯ ಜೊತೆ-ಜೊತೆಗೆ ವಾಸ್ತುವಿನಂತಹ ಮೌಢ್ಯಗಳೂ ತಲೆ ಎತ್ತಿ ನಿಂತಿರುವುದು ಶೋಚನೀಯ. ಯಾವುದೇ ಆಚರಣೆಗಳು, ನಂಬಿಕೆಗಳು ವೈಜ್ಞಾನಿಕ ತಳಹದಿಯ ಮೇಲಿರಬೇಕೆ ವಿನಾ ಮೌಢ್ಯಾಧಾರಿತವಾಗಿ ಅಲ್ಲ. ನಮ್ಮ ರಾಜಕಾರಣಿಗಳು ತಮ್ಮ ಜಾತಕಕ್ಕೆ ಹೊಂದುವಂತೆ, ತಮ್ಮ ಕಚೇರಿಗಳನ್ನೂ ಸರ್ಕಾರಿ ಹಣದಲ್ಲಿ ಮಾರ್ಪಾಡು ಮಾಡುತ್ತಿರುವುದು ಈ ವಾಸ್ತು ಎಂಬ ಭೂತದ ಕಾರಣದಿಂದಲೇ. ಅಧಿಕಾರ ಉಳಿಸಿಕೊಳ್ಳಲು ಇಂತಹ ಢಂಬಾಚಾರ ಬಿಟ್ಟು ಜನಪರ ಕಾರ್ಯಗಳತ್ತ ಒಲವು ತೋರುವುದು ಒಳಿತು. ಇಂದು ವಾಸ್ತುವಿನ ಹೆಸರಿನಲ್ಲಿ ಅನೇಕರು  ಮೂಢನಂಬಿಕೆಗಳನ್ನು ಹುಟ್ಟು ಹಾಕುವ ಕೆಲಸ ಮಾಡುತ್ತಿದ್ದಾರೆ. ಸಾಮಾನ್ಯ ವ್ಯಕ್ತಿ ವಾಸ್ತು ಎಂಬ ಭೂತದ ದಾಳಿಯಿಂದಾಗಿ ಮಾನಸಿಕ ನೆಮ್ಮದಿಯನ್ನೇ ಬಲಿ ಕೊಡುವ ಸ್ಥಿತಿ ನಿರ್ಮಾಣವಾಗಿದೆ. ವೈಜ್ಞಾನಿಕವಾಗಿ ವಾಸ್ತು ಎಂದರೆ ಪ್ರಶಸ್ತವಾಗಿ ಗಾಳಿ, ಬೆಳಕು ಇರುವಂತೆ ಕಟ್ಟಡ ನಿರ್ಮಾಣ ಮಾಡುವುದು, ಆರೋಗ್ಯದಾಯಕ ಜೀವನ ನಡೆಸುವುದು. ಇದರಿಂದಲೇ ನಿಜವಾದ ದೇಶದ ಪ್ರಗತಿ.
= ಜಯಶ್ರೀ ಚಿಕ್ಕಮಠ, ಬೈಲಹೊಂಗಲ

ವಾಸ್ತು ಧಿಕ್ಕರಿಸದಿರಿ!
ವಾಸ್ತು ಎನ್ನುವುದು ನಂಬಿಕೆಯ ನಿಲುವು. ಹಿಂದೂ ಧರ್ಮದಲ್ಲಿ ಮುಖ್ಯವಾಗಿ ಕಾಣುವ ಲಕ್ಷಣಗಳ ಅವಲೋಕನದಿಂದ ಉತ್ತರ, ಪೂರ್ವ, ಪಶ್ಚಿಮ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಮಧ್ಯ ಭಾಗಕ್ಕೆ ಮುಖ್ಯ ಬಾಗಿಲು ಇರುವಂತೆ ಮಾಡಿಕೊಂಡು, ಆಗ್ನೇಯದಲ್ಲಿ ಅಡುಗೆಮನೆ, ನೈರುತ್ಯದಲ್ಲಿ ತೂಕದ ಮೆಟ್ಟಿಲು, ಕೊಠಡಿಗಳನ್ನು, ವಾಯುವ್ಯದಲ್ಲಿ ಬಾತ್ ರೂಂ, ಈಶಾನ್ಯದಲ್ಲಿ ಬಾವಿ ಅಥವಾ ಸಂಪ್ ಅಳವಡಿಸಿಕೊಂಡು ವಾಸ ಮಾಡುವ ಸಂಸಾರಗಳು ಸುಖಸಂತೋಷದಿಂದ ಇರುತ್ತವೆ.
ಈ ಹಿಂದೆ ಹಳ್ಳಿಗಳಲ್ಲಿ ತೊಟ್ಟಿ ಮನೆ ಕಟ್ಟಿದರೆ, ನಾಲ್ಕು ದಿಕ್ಕುಗಳಿಗೂ ಮಧ್ಯ ಭಾಗಕ್ಕೆ ಮುಖ್ಯ ಬಾಗಿಲು ಇರುತ್ತಿತ್ತು. ಈ ಮೇಲ್ಕಂಡ ವಿವರಕ್ಕೆ ವಿರುದ್ಧವಾಗಿ ಕಟ್ಟಡ ಕಟ್ಟಿಕೊಂಡು ವಾಸಿಸುವವರ ಪರಿಸ್ಥಿತಿಯನ್ನು ಅವಲೋಕಿಸಿದರೆ ವಾಸ್ತು ಬೇಕು ಎನ್ನುವ ಅನುಭವ ಸಿಗುತ್ತದೆ.
= ಎಚ್.ಎಸ್.ಮಂಜುನಾಥಶೆಟ್ಟಿ, ಮೈಸೂರು

ಭ್ರಮೆಗೆ ಬಲಿಯಾಗಬೇಡಿ!
'ಮದುವೆ ಮಾಡಿ ನೋಡು ಮನೆ ಕಟ್ಟಿ ನೋಡು' ಎಂಬ ಗಾದೆ ಮಾತಿದೆ. ಮದುವೆಯನ್ನು ಹೇಗಾದರೂ ಮಾಡಿ ಮುಗಿಸಬಹುದು. ಆದರೆ ಮನೆಯನ್ನು ಕಟ್ಟಿ ಅದರಲ್ಲಿ ವಾಸ ಮಾಡುವುದು ಅಷ್ಟು ಸುಲಭವಲ್ಲ. ಸ್ನೇಹಿತರು, ಬಂಧುಗಳು ಮನೆಯನ್ನು ಕಟ್ಟುವವರಿಗೆ ಸಲಹೆಗಳನ್ನು ನೀಡಿ ತಲೆಯನ್ನು ತಿನ್ನುತ್ತಾರೆ. ನೆಮ್ಮದಿ ಕೆಡಿಸುತ್ತಾರೆ. ಕಷ್ಟಪಟ್ಟು ಕಟ್ಟಿದ ಮನೆಗೆ ಗೃಹ ಪ್ರವೇಶ ಮಾಡುವಾಗಲೂ ಮನೆ ಹೀಗಿರಬೇಕಿತ್ತು, ಹಾಗಿರಬೇಕಿತ್ತು, ವಾಸ್ತುವಿನ ಪ್ರಕಾರವಿಲ್ಲ. ಮನೆಯು ಲಕ್ಷಣವಾಗಿಲ್ಲ ಎಂದು ಟೀಕಿಸುತ್ತಾರೆ. ಮನಸ್ಸನ್ನು ಕೆಡಿಸಿ ಹೋಗುತ್ತಾರೆ.  ಮನೆಯ ಮಾಲೀಕ ನೆಮ್ಮದಿಯನ್ನು ಕೆಡಿಸಿಕೊಳ್ಳುವುದಲ್ಲದೇ ಆರೋಗ್ಯವನ್ನೂ ಹಾಳುಮಾಡಿಕೊಳ್ಳುತ್ತಾನೆ. ನಂತರದ ಜೀವನ ಅವನಿಗೆ ದುಸ್ತರವಾಗುತ್ತದೆ. ಯಾರು ಏನೇ ಅನ್ನಲಿ ನಾನು ಕಟ್ಟಿಕೊಂಡಿರುವ ಮನೆ ನನಗೆ ಅರಮನೆ, ಅದೇ ನನಗೆ ಎಲ್ಲವೂ ಅಂದುಕೊಂಡಾಗಲೇ ಅವನಿಗೆ ಸುಖ ಮತ್ತು ಶಾಂತಿ.
= ಕೆ.ಬಿ.ಚನ್ನಬಸಪ್ಪ, ಯಲಹಂಕ ಉಪನಗರ

'ಜಗುಲಿ'ಯಲ್ಲಿ ಈ ಸಲದ ವಿಷಯ 'ಸಚಿನ್ ನಿವೃತ್ತಿ'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.