ಬೈಟುಕಾಫಿ

ಅದು ಬರೀ ಕತ್ತಲೆಯ ಖಂಡವಾ?

ಅದು ಬರೀ ಕತ್ತಲೆಯ ಖಂಡವಾ?
Published On :

ದಕ್ಷಿಣ ಆಫ್ರಿಕಾದ ವಿಶಿಷ್ಟ ನೆಲದಲ್ಲಿ ಸುತ್ತಾಡಿ ಬಂದಿರುವ ಸಂಪಾದಕ ವಿಶ್ವೇಶ್ವರ ಭಟ್ಟರ ಅನುಭವ ಕಥನ ಮಾಲಿಕೆ ಇಂದಿನಿಂದ ಪ್ರತಿದಿನ ಬೈಟು ಕಾಫಿಯಲ್ಲಿ...

ದಕ್ಷಿಣ ಆಫ್ರಿಕಾದ ಜೋಹಾನೆಸ್‌ಬರ್ಗ್ ತಲುಪುವವರೆಗೆ ಆ ದೇಶದ ಬಗ್ಗೆ ಇದ್ದ ಕಲ್ಪನೆಯೇ ಬೇರೆ. ಇದು ಯಾವುದೇ ದೇಶಕ್ಕೆ ಮೊದಲ ಬಾರಿಗೆ ಹೊರಟು ನಿಂತಾಗ ಕೂಡ ಉಂಟಾಗುವ ಸಹಜ ಭಾವನೆಯೇ. ಅದ್ಯಾಕೋ ಗೊತ್ತಿಲ್ಲ, ಜಗತ್ತಿನ ಎರಡನೆಯ ಅತಿ ದೊಡ್ಡ ಹಾಗೂ ಎರಡನೆಯ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಆಫ್ರಿಕಾ ಖಂಡದ ಐವತ್ನಾಲ್ಕು ದೇಶಗಳ ಪೈಕಿ ಯಾವುದೇ ದೇಶಕ್ಕೆ ಹೊರಟಾಗಲೂ 'ಆಫ್ರಿಕಾಕ್ಕೆ ಹೋಗುತ್ತೀರಾ? ಹಾಗಾದರೆ ಹುಷಾರು' ಎಂಬ ಉದ್ಗಾರ ಸಹಜ. ಭಾರತಕ್ಕೆ ಹೊರಟು ನಿಂತವರಿಗೆ ವಿದೇಶಗಳಲ್ಲಿ ಹೀಗೆ ಹೇಳುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಆಫ್ರಿಕಾ ಮಾತ್ರ ಇದರಿಂದ ಮುಕ್ತವಾಗಿಲ್ಲ.
ನಮ್ಮ ಪಾಲಿಗೆ ಆಫ್ರಿಕಾ ಅಂದ್ರೆ ತೀರಾ ಹಿಂದುಳಿದ, ಅನಾಗರಿಕ, ಬುಡಕಟ್ಟು ಜನರೇ ತುಂಬಿರುವ, ಅಶಿಕ್ಷಿತರ, ರೋಗರುಜಿನುಗಳ ತವರಾಗಿರುವ, ಬರೀ ಕರಿಯರೇ ಇರುವ, ಕಪ್ಪು ಸೂರ್ಯನ ಖಂಡ ಎಂಬ ಭಾವನೆಯಿದೆ. ಆಫ್ರಿಕಾದಲ್ಲಿ ಇಂಥ ದೇಶಗಳು ಇಲ್ಲವೆಂದಲ್ಲ, ಹತ್ತಾರು ದೇಶಗಳಿವೆ. ಆಧುನಿಕತೆಯ ಯಾವ ಸೋಂಕನ್ನೂ ಹಿಡಿಸಿಕೊಳ್ಳದ ದೇಶಗಳಿವೆ. ಅದರ ಜತೆಗೆ ನಮ್ಮ ಊರು, ರಾಜ್ಯ, ದೇಶಕ್ಕಿಂತ ಮುಂದುವರಿದ ದೇಶವೂ ಇದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮಗೆ ಪೈಪೋಟಿ ನೀಡುವ ದೇಶವೂ ಇದೆ.

ದಕ್ಷಿಣ ಆಫ್ರಿಕಾದಲ್ಲಿ ಹತ್ತು ದಿವಸ ತಿರುಗಾಡಿದ ಬಳಿಕ ಇದು ಮನವರಿಕೆಯಾಯಿತು. ಈ ದೇಶಕ್ಕೆ ಕಳೆದ ವರ್ಷ ಹೋಗಿದ್ದೆ. ದಕ್ಷಿಣ ಆಫ್ರಿಕಾದ ಆಡಳಿತಶಾಹಿ ರಾಜಧಾನಿ ಎಂದೇ ಕರೆಯಿಸಿಕೊಳ್ಳುವ ಪ್ರಿಟೋರಿಯಾದಲ್ಲಿ ಎರಡು ದಿನ ಓಡಾಡಿದಾಗ ಅದರ ಅಂತಪಾರು ಗೊತ್ತಾಗಿರಲಿಲ್ಲ. ನೀರು ಜೋಗ ಜಲಪಾತದಿಂದ ಧುಮುಕಿದ್ದೇ ಆಗಿರಬಹುದು, ಆದರೆ ತಂಬಿಗೆಯಲ್ಲಿ ಹಿಡಿದು ತಂದ ಅದೇ ನೀರನ್ನು ನೋಡಿ ಜೋಗದ ವೈಭವವನ್ನು ಕಾಣಲು ಸಾಧ್ಯವಿಲ್ಲವಲ್ಲ? ಹಾಗೆ ಪ್ರಿಟೋರಿಯಾವೊಂದನ್ನೇ ನೋಡಿ ದಕ್ಷಿಣ ಆಫ್ರಿಕಾವನ್ನು ತೆಕ್ಕೆಗೆ ತೆಗೆದುಕೊಳ್ಳುವುದು ಸಾಧ್ಯವಿರಲಿಲ್ಲ. ಹಾಗೆಂದು ಹತ್ತು ದಿನ ಒಂದು ದೇಶದಲ್ಲಿ ತಿರುಗಿ ಆ ದೇಶದ ಬಗ್ಗೆ ತನಗೆ ಗೊತ್ತು ಎಂದು ಹೇಳುವುದು ಅಧಿಕಪ್ರಸಂಗತನವೊಂದೇ ಅಲ್ಲ ಮೂರ್ಖತನದ ಪರಮಾವಧಿಯೂ ಅದೀತು. ಹತ್ತು ದಿನಗಳ ಪ್ರವಾಸದಲ್ಲಿ ನೋಡಿದ ಹೊಸ ತಾಣ, ಅದರ ಕಿರುಪರಿಚಯ, ಸ್ಥಳ ಮಹಿಮೆ, ಪುಟ್ಟ ಇತಿಹಾಸ, ಭೇಟಿಯಾದ ಜನ, ಅಲ್ಲಿ ಆದ ವಿಶಿಷ್ಟ ಅನುಭವ, ವಿಶೇಷ ಗ್ರಹಿಕೆ, ಹೊಸ ಹೊಳಹುಗಳ ಬಗ್ಗೆ ಹೇಳಬಹುದೇ ಶಿವಾಯ್, ಆ ದೇಶದ ಕುರಿತು ಎಲ್ಲಾ ಬಲ್ಲೆ ಎಂಬ ಉಡಾಫೆಯಿಂದ ಬರೆಯಲಾರಂಭಿಸಿದರೆ ಅದು ಹಾಸ್ಯಾಸ್ಪದವಾದೀತು. ಅಷ್ಟೇ ಅಲ್ಲ ಅದು ಹೊಣೆಗೇಡಿ ವರ್ತನೆಯೂ ಹೌದು. ಇದು ಯಾವುದೇ ಪ್ರವಾಸಿ ಬರಹದ ಸಂಕೀರ್ಣತೆಯೂ ಹೌದು, ಸಂಪನ್ನತೆಯೂ ಹೌದು.
ಈ ಎಚ್ಚರ ಹಾಗೂ ಕೊರತೆಯ ಕೂಡುವಿಕೆಯ ನಡುವೆ ನನ್ನಲ್ಲಿ ದಕ್ಷಿಣ ಆಫ್ರಿಕಾ ಅನಾವರಣಗೊಳ್ಳುತ್ತಿದೆ.

ದಕ್ಷಿಣ ಆಫ್ರಿಕಾದ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಆಹ್ವಾನದ ಮೇರೆಗೆ ಕೈಗೊಂಡ ಈ ಪ್ರವಾಸದಲ್ಲಿ ನನ್ನೊಂದಿಗೆ 'ಉದಯವಾಣಿ' ಬಳಗದ ಸಮೂಹ ಸಂಪಾದಕ, ಸ್ನೇಹಿತ ರವಿ ಹೆಗಡೆ ಸೇರಿದಂತೆ ಎಂಟು ಮಂದಿ ಪತ್ರಕರ್ತರಿದ್ದರು. ಪತ್ರಕರ್ತರೊಂದಿಗೆ ಪ್ರವಾಸ ಹೋಗುವುದೆಂದರೆ ಅದೊಂಥರಾ 'ಚಲಿಸುವ ಪತ್ರಿಕಾಗೋಷ್ಠಿ'ಯಿದ್ದಂತೆ. ಅಲ್ಲಿ ಪ್ರಶ್ನೋತ್ತರ, ವಾದ, ವಿಡಂಬನೆ, ಹಾಸ್ಯ, ಕೀಟಲೆ ಇದ್ದೇ ಇರುತ್ತವೆ. ಬಂಗಾಳಿ, ಮಲೆಯಾಳಂ, ಪಂಜಾಬಿ, ಮರಾಠಿ, ಇಂಗ್ಲಿಷ್ ಪತ್ರಿಕೆಗಳ ವರದಿಗಾರರ ಜತೆ ನಾವಿಬ್ಬರು ಕನ್ನಡ ಪತ್ರಕರ್ತರು. ಎಲ್ಲರೂ ಪತ್ರಕರ್ತರೇ. ಭಾಷೆ ಬೇರೆ ಬೇರೆಯಾದರೂ ಭಾವ ಒಂದೇ. ಹೀಗಾಗಿ ಬೇರೆ ಬೇರೆ ದ್ವೀಪಗಳಾಗದೇ, ಒಂದೇ ಗುಂಪಾಗಿ ಪ್ರವಾಸ ಮಾಡಿದ್ದು ವಿಶೇಷ.

ನಾನು ಹಾಗೂ ರವಿ ಹೆಗಡೆ, ವೈಎನ್‌ಕೆ ಅವರು 'ಕನ್ನಡಪ್ರಭ' ಸಂಪಾದಕರಾಗಿದ್ದಾಗ ಒಟ್ಟಿಗೆ ಕೆಲಸ ಮಾಡಿದರೂ, ಒಳ್ಳೆಯ ಸ್ನೇಹಿತರಾಗಿದ್ದರೂ, ನಮ್ಮ ನಮ್ಮ ಕೆಲಸಗಳ ಒತ್ತಡಗಳಲ್ಲಿ ಒಟ್ಟಿಗೇ ಎರಡು ತಾಸು ಕಲೆತವರಲ್ಲ. ಮೊನ್ನೆ ದಕ್ಷಿಣ ಆಫ್ರಿಕಾದಲ್ಲಿ ಇಬ್ಬರೂ ಒಟ್ಟಿಗೆ ಹತ್ತು ದಿನ ಜತೆಯಾಗಿದ್ದೆವು. ಎರಡು ಸಂಪಾದಕ ತಲೆಗಳು ಒಟ್ಟಿಗೆ ಇರುವುದು ಇಂದಿನ ಪತ್ರಿಕೋದ್ಯಮದ ವಿದ್ಯಮಾನಗಳ ನಡುವೆ ಪುಟ್ಟ ವಿಶೇಷವೇ.

ಇರಲಿ. ಆಫ್ರಿಕಾಖಂಡ ಅಥವಾ ದಕ್ಷಿಣ ಆಫ್ರಿಕಾದ ಬಗ್ಗೆ ನಮಗಿರುವ ತಪ್ಪು ಗ್ರಹಿಕೆಯಿಂದಾಗಿ ನಾವು ಅತ್ತ ಮುಖ ಮಾಡುವುದು ಕಮ್ಮಿ. ಆಫ್ರಿಕಾದ ಬಗ್ಗೆ ಏನೋ ಒಂದು ತಾತ್ಸಾರ. ಹೀಗಾಗಿ ಯಾರೂ ಅತ್ತ ಪ್ರವಾಸ ಹೋಗುವುದಿಲ್ಲ. ವಿದೇಶಯಾತ್ರೆ ಮಾಡಬೇಕೆನಿಸಿದಾಗಲೆಲ್ಲ ಜನ ಕುಟುಂಬ ಸಮೇತ ಹೋಗುವುದು ಬ್ಯಾಂಕಾಕ್, ಸಿಂಗಾಪುರ, ಮಲೇಷಿಯಾ, ಹಾಂಗ್‌ಕಾಂಗ್, ದುಬೈ, ಇಂಗ್ಲೆಂಡ್ ಹಾಗೂ ಅಮೆರಿಕಕ್ಕೆ ಹೊರತು ಅಪ್ಪಿತಪ್ಪಿಯೂ ಆಫ್ರಿಕಾದ ದೇಶಗಳತ್ತ ಅಲ್ಲ.

ಸಿಂಗಾಪುರ, ದುಬೈಗೆ ಕರ್ನಾಟಕದಿಂದ ಹೋಗುವ ಪ್ರವಾಸಿಗರ ಪೈಕಿ ಶೇ. ಮೂವತ್ತೈದರಷ್ಟು ಮಂದಿ ರಿಪೀಟ್ ಪ್ರವಾಸಿಗರು. ಅಂಥವರು ಈ ದೇಶಗಳಿಗೆ ಮೂರ್ನಾಲ್ಕು ಸಲ ಹೋಗಿ ಬಂದಿದ್ದಾರೆ. ಇನ್ನೂ ಮೂರ್ನಾಲ್ಕು ಸಲ ಅಲ್ಲಿಗೆ ಹೋಗಬೇಕೆನಿಸಿದರೂ ಬೇಸರವಾಗುವುದಿಲ್ಲ. ಆದರೆ ಆಫ್ರಿಕಾದ ದೇಶಗಳಿಗೆ ಹೋಗಲು ಹಿಂಜರಿಕೆ, ಏನೋ ಭಯ. ಯಾಕೆ ರಿಸ್ಕ್ ತೆಗೆದುಕೊಳ್ಳಬೇಕು ಎಂಬ ಲೆಕ್ಕಾಚಾರ. ಹೀಗಾಗಿ ಯಾರೂ ಅಂಥ 'ದುಸ್ಸಾಹಸ'ಕ್ಕೆ ಮುಂದಾಗುವುದಿಲ್ಲ. ಇದೇ ಕಾರಣಕ್ಕೆ ಆಫ್ರಿಕಾ ಅನೇಕರಿಗೆ ಇನ್ನೂ ಕತ್ತಲೆಯ ಸಾಮ್ರಾಜ್ಯವೇ.
ಇಲ್ಲಿ ನಿಮ್ಮ ಮುಂದೆ ಸಣ್ಣ ಅಂಕಿ-ಅಂಶಗಳನ್ನು ಹರವಿಡಬೇಕು. 2006ರಲ್ಲಿ ದಕ್ಷಿಣ ಆಫ್ರಿಕಾಕ್ಕೆ ಸುಮಾರು ಒಂಬತ್ತು ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರಂತೆ. ಆ ಪೈಕಿ ಭಾರತದಿಂದ ಹೋದವರು ಬರೀ 45 ಸಾವಿರ ಮಂದಿ. ಆರು ವರ್ಷಗಳ ನಂತರ ಅಂದರೆ 2012ರಲ್ಲಿ, ಎರಡೂವರೆ ಪಟ್ಟು ಹೆಚ್ಚಿನ ಪ್ರವಾಸಿಗರು (ಒಂದು ಲಕ್ಷದ ಏಳು ಸಾವಿರ) ಭೇಟಿ ನೀಡಿದ್ದಾರೆ. ಭಾರತದಿಂದ ಸಿಂಗಾಪುರ, ಬ್ಯಾಂಕಾಕ್, ದುಬೈ, ಮಲೇಷಿಯಾಕ್ಕೆ ಹೋಲಿಸಿದರೆ ಇದು ಏನೇನೂ ಅಲ್ಲ.

ಇಂದಿಗೂ ಆಫ್ರಿಕಾ ಪ್ರವಾಸಿಗರ ಕಣ್ಣಲ್ಲಿ ಅನೇಕ ಗುಮಾನಿಗಳನ್ನು ಹೊದ್ದ ದೇಶವಾಗಿಯೇ ಉಳಿದಿದೆ. ಇದಕ್ಕೆ ಮುಖ್ಯ ಕಾರಣ ಮಾಹಿತಿ ಕೊರತೆ ಹಾಗೂ ತಪ್ಪು ಗ್ರಹಿಕೆ. ಆದರೆ ಆಫ್ರಿಕಾ ಖಂಡದ ಮೇಲಿನ ಕಪ್ಪು ಸೂರ್ಯ ಸಂಪೂರ್ಣ ಬಿಳಿ ಆಗಿದ್ದಾನೆ. ಕಳೆದ ಹದಿನೈದು-ಇಪ್ಪತ್ತು ವರ್ಷಗಳಲ್ಲಿ ಆಫ್ರಿಕಾ ಗಣನೀಯವಾಗಿ ಬದಲಾಗಿದೆ. ಅದರಲ್ಲೂ ದಕ್ಷಿಣ ಆಫ್ರಿಕಾವಂತೂ ಅಚ್ಚರಿ ಹುಟ್ಟಿಸುವ ರೀತಿಯಲ್ಲಿ ಅಭಿವೃದ್ಧಿ ಸಾಧಿಸಿದೆ. ಹತ್ತು ದಿನಗಳ ಕಾಲ ಪ್ರವಾಸ ಮಾಡುವ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದ ಬಗ್ಗೆ ನಕಾರಾತ್ಮಕವೆನಿಸುವ ಅಂಶಗಳಾಗಲಿ, ಗುಣದೋಷಗಳಾಗಲಿ, ಅಹಿತಕರ ಘಟನೆಯಾಗಲಿ, ಕೆಟ್ಟ ಅನುಭವವಾಗಲಿ ಆಗಲಿಲ್ಲ.
ಅಲ್ಲಿನ ವಿಶಾಲ ರಸ್ತೆ, ಸುಭದ್ರ ಮೂಲಸೌಕರ್ಯ, ಸ್ವಚ್ಛತೆ, ಸುವಿಧಗಳನ್ನು ನೋಡಿದಾಗ, ದಕ್ಷಿಣ ಆಫ್ರಿಕಾ ನಮ್ಮ ಬೆಂಗಳೂರಿಗಿಂತ, ಮುಂಬೈಗಿಂತ ಯಾವ ರೀತಿಯಲ್ಲೂ ಕಮ್ಮಿಯಿಲ್ಲ. ಕೆಲವೊಮ್ಮೆ ನಾನೇನಾದರೂ ಅಮೆರಿಕದಲ್ಲೋ, ಯುರೋಪಿನಲ್ಲೋ ಇದ್ದೇನಾ ಎಂದು ಅನಿಸಿದ್ದುಂಟು. ಕೇಪ್‌ಟೌನ್‌ನಲ್ಲಿ ಓಡಾಡುವಾಗ ಇದು ಸಂದೇಹವಾಗಿ ಉಳಿದಿರಲಿಲ್ಲ. ವಾಸ್ತವಕ್ಕೆ ತೀರಾ ಹತ್ತಿರವಾಗಿತ್ತು.

ಹೋಲಿಕೆ ಮಾತು ಹಾಗಿರಲಿ, ದಕ್ಷಿಣ ಆಫ್ರಿಕಾ ಭಾರತವನ್ನು ಹಿಂದಕ್ಕೆ ಹಾಕಿ ಮುಂದೆ ಹೋಗಿಬಿಟ್ಟಿದೆಯಾ ಎನ್ನುವ ಸಣ್ಣ ಸಂಶಯ ಮೂಡಿದ್ದು ಸುಳ್ಳಲ್ಲ. ಅಭಿವೃದ್ಧಿಯ ಪಥದಲ್ಲಿ ದಕ್ಷಿಣ ಆಫ್ರಿಕಾ ಎಳಸು ಎಂದೇ ಭಾವಿಸಿದ್ದ ನನಗೆ, ಅಲ್ಲಿ ಸುತ್ತಾಡಿದ ಬಳಿಕ ನನ್ನ ಅನಿಸಿಕೆಯನ್ನು ಬದಲಿಸಿಕೊಂಡಿದ್ದಷ್ಟೇ ಅಲ್ಲ, ಆ ದೇಶದಿಂದ ಕಲಿಯುವಂಥದ್ದು ಸಾಕಷ್ಟು ಇದೆ ಎಂದೆನಿಸಿತು.

(ಪ್ರವಾಸ ಮುಂದುವರಿಯುವುದು)

- ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.