ಸುಲಭವಾಗಿ ಸಿಗುವ ಆಯ್ಕೆಯ ಔಷಧ

ಅಮೆರಿಕದಲ್ಲಿ 30 ಲಕ್ಷಕ್ಕಿಂತ ಹೆಚ್ಚು ಜನ ಮಲಬದ್ಧತೆಯಿಂದ ಬಳಲುತ್ತಿದ್ದಾರೆ ಎನ್ನುತ್ತವೆ ಆರೋಗ್ಯ ವರದಿಗಳು. ಅಮೆರಿಕದ ಉದಾಹರಣೆಯನ್ನೇ ಜಾಸ್ತಿ ನೀಡುವುದೇಕೆ ಎನ್ನುವ ಸಂದೇಹ ನಿಮ್ಮನ್ನು ಕಾಡಿರಲಿಕ್ಕೂ ಸಾಕು. ಈಗಿನ ದಿನಮಾನದಲ್ಲಿ ಬಹಳಷ್ಟು ಕಾರಣಗಳಿಂದ ಥಟ್ಟನೆ ನಮ್ಮ ಮನಸ್ಸಿಗೆ ತಟ್ಟುವ ಹೆಸರು ಅಮೆರಿಕ. ನಮ್ಮ ಮನೆ ಮಕ್ಕಳು ಅಥವಾ ಆಪ್ತೇಷ್ಟರು, ಬಂಧುಗಳ ಮಕ್ಕಳು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಿರಬಹುದು. ಅದಕ್ಕಿಂತ ಮುಖ್ಯವಾಗಿ ಅತ್ಯಂತ ಕೆಟ್ಟ ಆಹಾರ ಪದ್ಧತಿ ಮತ್ತು ಅದಕ್ಕೇ ಪೂರಕವಾದ, ಅನಾರೋಗ್ಯಕರ ಎನ್ನಬಹುದಾದ ಜೀವನಶೈಲಿ ರೂಢಿಸಿಕೊಂಡಿರುವ ದೇಶ ಅದು. ನಾನೇನು ಅಮೆರಿಕ ವಿರೋಧಿ ಎಂದು ಭಾವಿಸಬೇಕಿಲ್ಲ. ವಿಶೇಷತಃ ಸಂಸ್ಕರಿತ ಆಹಾರ, ಜಂಕ್ಫುಡ್ಗಳ ಅತಿಯಾದ ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರಲ್ಲಿ ಅಮೆರಿಕನ್ನರೇ ಹೆಚ್ಚು. ಹೀಗಾಗಿ ಆಹಾರ ಮತ್ತು ಆರೋಗ್ಯದ ವಿಚಾರದಲ್ಲಿ ಉದಾಹರಣೆಗೆ ಪ್ರಮುಖವಾಗಿ ಸಿಗುವುದು ಅಮೆರಿಕವೇ.
ಮಲಬದ್ಧತೆ ವಿಚಾರಕ್ಕೆ ಬರೋಣ. ಈ ಸಮಸ್ಯೆಯಿಂದ ಗಂಭೀರವಾಗಿ ಬಳಲುತ್ತಿರುವ ಅಮೆರಿಕನ್ನರು ಕೂಡ ಕಂಡುಕೊಂಡಿರುವ ಸತ್ಯ ಎಂದರೆ ಮಲಬದ್ಧತೆ ಉಂಟಾಗದಂತೆ ನೋಡಿಕೊಳ್ಳುವ ಮುನ್ನೆಚ್ಚರಿಕೆ ಮತ್ತು ಮಲಬದ್ಧತೆ ಉಂಟಾದರೆ ಅದನ್ನು ನಿಯಂತ್ರಿಸುವುದು, ಎರಡಕ್ಕೂ ಸುಲಭ ಮದ್ದು ಎಂದರೆ ಆಹಾರ! ನಮ್ಮ ಆಹಾರ ಪದ್ಧತಿಯೇ ಮಲಬದ್ಧತೆಗೆ 'ಆಯ್ಕೆಯ ಔಷಧ' (ಡ್ರಗ್ ಆಫ್ ಚಾಯ್ಸ್) ಆಗಬಲ್ಲದು ಎನ್ನುವುದನ್ನು ಈಗೀಗ ವೈದ್ಯರೂ ಹೇಳುತ್ತಿದ್ದಾರೆ. ಮಾತ್ರೆಗಳಿಗೆ ಹೋಲಿಸಿದರೆ ಯಾವುದೇ ಅಡ್ಡ ಪರಿಣಾಮಗಳಿಲ್ಲ ಮತ್ತು ಅಷ್ಟು ದುಬಾರಿಯೂ ಅಲ್ಲ ಎನ್ನುವುದು ಆಹಾರ ವೈದ್ಯದ ಇನ್ನೊಂದು ಗಣನೀಯ ಅಂಶ. ಭೇದಿಗೆಂದು ನೀಡುವ ವಿರೇಚಕ (ಔಛ್ಢಛಡ್ಝಿಢಜಡ) ಔಷಧಗಳು ಒಮ್ಮೊಮ್ಮೆ ಕರುಳಿನ ಭಾಗದ ನರಗಳನ್ನು ದುರ್ಬಲಗೊಳಿಸಿದ ಉದಾಹರಣೆಗಳೂ ಸಿಗುತ್ತವೆ. ಹೀಗಾಗಿ ಔಷಧ ಹಾಗೂ ಚಿಕಿತ್ಸೆಗಳು ಮಲಬದ್ಧತೆ ನಿವಾರಣೆಗೆ ಶಾಶ್ವತ ಪರಿಹಾರ ಅಲ್ಲ ಎನ್ನುವುದನ್ನು ಸ್ವತಃ ವೈದ್ಯರೂ ಒಪ್ಪಿಕೊಳ್ಳುತ್ತಾರೆ.
ಆಹಾರ ಎನ್ನುವ ವಿಷಯವೇ ಎಷ್ಟು ಸಂಕೀರ್ಣವೂ, ನಮ್ಮ ಆರೋಗ್ಯದ ವಿಚಾರದಲ್ಲಿ ಅದು ವಹಿಸುವ ಪಾತ್ರ, ಶರೀರದೊಳಗೆ ನಡೆಯುವ ಕ್ರಿಯೆಗಳು ಇನ್ನೂ ಸಂಕೀರ್ಣವಾದವು. ಮಲಬದ್ಧತೆ ಹೋಗಲಾಡಿಸುವಲ್ಲಿಯೂ ಹಾಗೆಯೇ. ಅನೇಕ ರೀತಿಯಲ್ಲಿ ಮಲವಿಸರ್ಜನೆಯನ್ನು ಸುಗಮಗೊಳಿಸುತ್ತದೆ. ನಾರಿನಿಂದ ಸಮೃದ್ಧವಾಗಿರುವ ಧಾನ್ಯಗಳ ಹಿಟ್ಟುಗಳು, ಹಣ್ಣು-ತರಕಾರಿಗಳು ನೀರನ್ನು ಹೀರಿಕೊಂಡು ಮತ್ತು ಅಗತ್ಯವಿರುವಷ್ಟು ಉಳಿಸಿಕೊಂಡು ನಮ್ಮೊಳಗೇ ಉತ್ಪಾದನೆಯಾಗುವ ತ್ಯಾಜ್ಯ ಗಟ್ಟಿಯಾಗದಂತೆ ನೋಡಿಕೊಳ್ಳುತ್ತವೆ. ಆ ಮೂಲಕ ಕರುಳಿನಲ್ಲಿ ಮಲದ ಸಂಚಾರ ಸುಗಮವಾಗಿ ಆಗುವುದರಿಂದ ಮಲಬದ್ಧತೆ ಉಂಟಾಗುವುದಿಲ್ಲ. ನಾರು ಮಾಡುವ ಮತ್ತೊಂದು ಪ್ರಮುಖ ಕೆಲಸ ಎಂದರೆ ಕರುಳಿನ ಗೋಡೆಭಾಗದಲ್ಲಿನ ನರಗಳನ್ನು ಕ್ರಿಯಾಶೀಲಗೊಳಿಸುತ್ತದೆ. ಇದು ಮಲವನ್ನು ಹೊರದೂಡಲು ಸಹಕಾರಿ.
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


