ಬಾವಲಿ ಮಾಡಿಸಿದ ಟ್ರಾನ್ಸ್ಫರ್

ಬೆಂಗಳೂರಿನ ಇನ್ಫೆಂಟ್ರಿ ರಸ್ತೆ ಗೊತ್ತಲ್ಲ, ಅದೇ ರಸ್ತೆಯಲ್ಲಿದೆ ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತರ ಕಚೇರಿ. ವಿಶಾಲ ಅಲ್ಲದಿದ್ದರೂ ಅವಶ್ಯಕತೆಗೆ ಅನುಗುಣವಾಗಿ ಸುವ್ಯವಸ್ಥಿತವಾಗಿದೆ. ಈ ಕಚೇರಿಯ ಒಳಾಂಗಣದಲ್ಲಿ ಬೃಹತ್ ಗಾತ್ರದ ವಿವಿಧ ಮರಗಳು ಅನೇಕ ದಶಕಗಳಿಂದ ಇವೆ. ಈ ಮರಗಳಿಗೆ ತಲೆಕೆಳಗಾಗಿ ನೇತಾಡಿಕೊಂಡಿವೆ ಸಾವಿರಾರು ಬಾವಲಿಗಳು. ಈ ಬಾವಲಿಗಳು ಇಲ್ಲಿಗೆ ಯಾವಾಗ ಯಾಕೆ ಬಂದವು ಎಂಬುದು ಮಾತ್ರ ಗೊತ್ತಿಲ್ಲ. ಅಥವಾ ಇವು ಇದ್ದ ಜಾಗದಲ್ಲಿಯೆ ಪೊಲೀಸ್ ಆಯುಕ್ತರ ಕಚೇರಿ ನಿರ್ಮಿಸಿದರೇ ಎಂಬುದೂ ತಿಳಿದಿಲ್ಲ. ಆದರೆ ಅನೇಕ ದಶಕಗಳಿಂದ ಅವು ಅಲ್ಲಿವೆ.
ಇವು ಇನ್ಫೆಂಟ್ರಿ ಮತ್ತು ಕನ್ನಿಂಗ್ಹ್ಯಾಂ ರಸ್ತೆ ಮಧ್ಯಭಾಗದಲ್ಲಿರುವುದರಿಂದ ಈ ಎರಡೂ ರಸ್ತೆಗಳಲ್ಲಿ ಓಡಾಡುವ ವಾಹನಗಳ ಶಬ್ದಕ್ಕೋ ಅಥವಾ ಪೊಲೀಸ್ ಬೂಟಿನ ಶಬ್ದ ಕೇಳಿ ಕೇಳಿ ಬೇಸರವಾಗಿಯೋ ಆಗಾಗ 'ಕೀಚ್ ಕೀಚ್' ಎಂದು ಶಬ್ದ ಮಾಡುತ್ತಾ ಹಗಲಿನಲ್ಲೇ ಹಾರಾಡಿಕೊಂಡು ಕಚೇರಿ ಒಳಗಿರುವ ಅಧಿಕಾರಿಗಳಿಗೆ ಮತ್ತು ಹೊರಗೆ ವಿವಿಧ ಕೆಲಸ ಕಾರ್ಯಗಳಿಗಾಗಿ ಕಾದಿರುವ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುತ್ತವೆ. ಆದರೂ ಅವನ್ನು ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ಪೊಲೀಸ್ ಅಧಿಕಾರಿಗಳ ಸ್ಥಿತಿ.
ಹಿಂದೊಮ್ಮೆ ಕಮೀಷನರ್ ಕಚೇರಿಗೆ ಹೋಗಿದ್ದಾಗ ಬಾವಲಿಗಳು ಎದ್ದು ವಿಚಿತ್ರವಾದ ಸದ್ದು ಮಾಡಿಕೊಂಡು ಓಡಾಡುತ್ತಿದ್ದವು. ಇವುಗಳ ಶಬ್ದದಿಂದ ಅಧಿಕಾರಿಗಳಿಗೆ ತೊಂದರೆ ಆಗುವುದಿಲ್ಲವೆ ಎಂದು ನನಗೆ ಪರಿಚಿತರಿದ್ದ ಅಧಿಕಾರಿಯೊಬ್ಬರನ್ನು ಪ್ರಶ್ನಿಸಿದರೆ 'ಅವು ಈವರೆಗೆ ಯಾರಿಗೂ ತೊಂದರೆ ಮಾಡಿಲ್ಲ. ಯಾವಾಗಲಾದರೊಮ್ಮೆ ಎದ್ದು ಸದ್ದು ಮಾಡಿ ಸ್ವಲ್ಪ ಸಮಯದಲ್ಲೇ ಶಾಂತಿಯಿಂದ ತಮ್ಮ ಸ್ವಸ್ಥಾನದಲ್ಲಿ ನೇತಾಡುತ್ತವೆ. ಹಾಗಾಗಿ ಅವುಗಳ ಬಗ್ಗೆ ಭಯ ಪಡುವ ಅಗತ್ಯ ಇಲ್ಲ' ಎಂದಿದ್ದರು.
ಮೊನ್ನೆ ನಿವೃತ್ತ ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಅವರನ್ನು ಭೇಟಿಯಾಗಿದ್ದೆ. ಅವರನ್ನು ಭೇಟಿ ಮಾಡಿದ ಸ್ಥಳದಲ್ಲೂ ಬಾವಲಿಗಳು ಹೇರಳವಾಗಿ ಅಲ್ಲಿದ್ದ ಮರಗಳಿಗೆ ತಲೆಕೆಳಗಾಗಿ ನೇತಾಡುತ್ತಿದ್ದವು. ಕೂಡಲೇ ಪೊಲೀಸ್ ಕಮೀಷನರ್ ಕಚೇರಿಯಲ್ಲಿರುವ ಬಾವಲಿಗಳ ವಿಷಯ ನೆನಪಾಯಿತು. ಬಾವಲಿಗಳ ವಿಚಾರ ಪ್ರಸ್ತಾಪ ಮಾಡಿದೆ. ಅವರೊಮ್ಮೆ ಬೆಚ್ಚಿ ಬಿದ್ದಂತೆ ನೇರವಾಗಿ ಕುಳಿತು 'ಅಯ್ಯೋ ಬಾವಲಿಗಳು ಅಂದ್ರೆ ತಮಾಷೆ ಅಲ್ಲ ಸರ್, ಅವುಗಳ ತಂಟೆಗೆ ಹೋದ ಹಿಂದಿನ ಪೊಲೀಸ್ ಆಯುಕ್ತರೊಬ್ಬರಿಗೆ ಬಂದ ಗತಿ ನೆನಪಾದರೆ ಈಗಲೂ ಬೇಸರ ಆಗುತ್ತೆ' ಎಂದರು. ಏನಾಯಿತು ಎಂದು ಪ್ರಶ್ನಿಸಿದ ನನಗೆ ಅವರು 25 ವರ್ಷಗಳ ಹಿಂದೆ ನಡೆದ ವಿಚಿತ್ರ ಘಟನೆಯೊಂದನ್ನು ತೆರೆದಿಟ್ಟರು.
ಆ ಕತೆಯನ್ನು ಅವರ ಬಾಯಲ್ಲಿಯೇ ಕೇಳುವುದಾದರೆ, ಅದು 1987ರ ಸಮಯ. ಆಗ ತಾನು ಪೊಲೀಸ್ ಕಂಟ್ರೋಲ್ ರೂಂನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. ಆಗ ಬೆಂಗಳೂರಿನ ಪೊಲೀಸ್ ಕಮೀಷನರ್ ಆಗಿದ್ದವರು ಹಲರ್ನ್ಕರ್ ಎಂಬವರು. ಅವರ ಹೆಸರು ಪತ್ರಕರ್ತರ ಬಾಯಲ್ಲಿ ಹರ್ಲಂಕರ್ ಆಗಿತ್ತು. ತಮ್ಮ ಹೆಸರು ಅಪಭ್ರಂಶವಾಗುತ್ತಿದೆ ಅದನ್ನು ಸರಿಪಡಿಸಿ ಎಂದು ಹಲವಾರು ಬಾರಿ ಪತ್ರಿಕೆಗಳಿಗೆ ಅವರು ಹೇಳಿಕೆ ನೀಡಿದರು. ಆದರೆ ಅವರ ಹೆಸರನ್ನು ಯಾರೂ ಸರಿಯಾಗಿ ಬಳಸಿದ್ದಂತೂ ಇಲ್ಲ.
ಅದೊಂದು ದಿನ ಬೆಳಗ್ಗೆ ಆಯುಕ್ತರ ಕಚೇರಿಯಲ್ಲಿ ತೆಲೆಕೆಳಗೆ ನೇತಾಡುತ್ತಿದ್ದ ಬಾವಲಿಗಳು ಯಾವ ಕಾರಣಕ್ಕೋ ಎದ್ದು ಜೋರು ಗದ್ದಲ ಹಬ್ಬಿಸಿದವು. ಪೊಲೀಸ್ ಅಧಿಕಾರಿಗಳಿಗೆ ಕಿರಿಕಿರಿಯಾಯಿತು. ಬಾವಲಿಗಳ ಪುಂಡಾಟವನ್ನು ಸ್ವಲ್ಪ ಸಮಯ ಸಹಿಸಿದ ಕಮಿಷನರ್, ಕೊನೆಗೆ ಅವುಗಳ ಉಪಟಳ ಹೆಚ್ಚಾದಾಗ ಸಹಿಸಲಸಾಧ್ಯವಾಗಿ ರಿಸರ್ವ್ ಪೊಲೀಸರನ್ನು ಕರೆದು ಬಾವಲಿಗಳಿಗೆ ಗುಂಡು ಹಾರಿಸಲು ಹೇಳಿದ್ದಲ್ಲದೆ ಅವನ್ನು ಹೆದರಿಸಿ ಓಡಿಸುವಂತೆ ಸೂಚಿಸಿದರು. ಆಯುಕ್ತರ ಆಜ್ಞೆಯಂತೆ ಮೀಸಲು ಪಡೆಯ ಪೊಲೀಸರು ಹಾರಾಡುತ್ತಿದ್ದ ಬಾವಲಿಗಳಿಗೆ ನಾಲ್ಕೈದು ಸುತ್ತು ಗುಂಡು ಹಾರಿಸಿದರು. ಪರಿಣಾಮ ಹಲವು ಬಾವಲಿಗಳು ಸತ್ತು ನೆಲಕ್ಕುರುಳಿದವು. ಅಪಾಯವನ್ನು ಗ್ರಹಿಸಿದ ಉಳಿದ ಬಾವಲಿಗಳು ಜಾಗ ಖಾಲಿ ಮಾಡಿದವು.
ಆಗ ಸಬ್ಇನ್ಸ್ಪೆಕ್ಟರ್ ಆಗಿದ್ದ ಮತ್ತು ಮಹಾನ್ ದೈವಭಕ್ತರಾಗಿದ್ದ ಅಧಿಕಾರಿ ಕಚೇರಿಗೆ ಬಂದರು. ಸತ್ತು ಬಿದ್ದಿರುವ ಬಾವಲಿಗಳನ್ನು ಕಂಡು ಹೌಹಾರಿದ ಸಬ್ಇನ್ಸ್ಪೆಕ್ಟರ್ 'ಸರ್ ಕಮಿಷನರ್ ಸಾಹೇಬರಿಗೆ ಏನೋ ಕೇಡುಗಾಲ ಕಾದಿದೆ. ಅದಕ್ಕೆ ಇವುಗಳ ತಂಟೆಗೆ ಹೋಗಿದ್ದಾರೆ' ಎಂದರು. ಇದನ್ನು ಕೇಳಿದ ಗೋವಿಂದರಾಜು ಏನಾಯಿತು ಎಂದು ಮರು ಪ್ರಶ್ನಿಸಿದರು. ಅದಕ್ಕೆ ಅವರು ನೀಡಿದ ಸಮಜಾಯಿಸಿ ಈ ರೀತಿ ಇತ್ತು' ಬಾವಲಿಗಳು ಹಿಂದಿನ ಜನ್ಮದಲ್ಲಿ ಋುಷಿಮುನಿಗಳು. ಅವು ಆಹಾರಕ್ಕಾಗಿ ಹಾರಾಡುವ ಸಮಯದಲ್ಲಿ ಅವುಗಳನ್ನು ಕೊಂದರೆ ತಪ್ಪಿಲ್ಲ. ಅವು ತಲೆಕೆಳಗೆ ಧ್ಯಾನದಲ್ಲಿರುವಾಗ ಸಾಯಿಸುವುದು ಮಹಾನ್ ಪಾಪ. ಇದಕ್ಕೆ ಪ್ರಾಯಶ್ಚಿತ್ತವಾಗಿ ಏನೋ ಸಮಸ್ಯೆ ಎದುರಾಗಲಿದೆ' ಎಂದು ವಿವರಣೆ ಕೊಟ್ಟ.
ಆದರೆ ಪ್ರಾಣಿಶಾಸ್ತ್ರಜ್ಞರ ಪ್ರಕಾರ ಇದು ಸುಳ್ಳು. ಬಾವಲಿಗಳಿಗೆ ದೃಷ್ಟಿಮಾಂದ್ಯ. ಅವು ಹಗಲಿನ ಪ್ರಖರ ಬೆಳಕಿನಲ್ಲಿ ಸಂಚರಿಸಲು ಹಿಂಜರಿಯುತ್ತವೆ. ಹಾರಾಡುವಾಗ ಬಾಯಿಂದ ಶಬ್ದದ ತರಂಗಗಳನ್ನು ಹೊರಡಿಸುತ್ತಾ, ಅವು ಎದುರಿಗೆ ಇರುವ ವಸ್ತುವಿಗೆ ತಗಲಿ ವಾಪಸ್ ಬರುವುದನ್ನು ಸೂಕ್ಷ್ಮವಾಗಿ ಗ್ರಹಿಸಿ, ಅದರ ಆಧಾರದ ಮೇಲೆ ಹಾರುತ್ತವೆ. ಈ ಕಂಪನಗಳು ಎಷ್ಟು ಸೂಕ್ಷ್ಮ ಎಂದರೆ ಮನುಷ್ಯನ ಗಮನಕ್ಕೆ ಬರುವುದಿಲ್ಲ. ಆದರೆ ಕಾಕತಾಳೀಯವೋ ಅಥವಾ ಬಾವಲಿಗಳ ಶಾಪವೋ, ಘಟನೆ ನಡೆದ ಒಂದೇ ವಾರದಲ್ಲಿ ಪೊಲೀಸ್ ಆಯುಕ್ತರು ಒತ್ತಾಯದ ವರ್ಗಾವಣೆ ಆಗಬೇಕಾಯಿತು. ಅದಕ್ಕೆ ಕಾರಣವಾಗಿದ್ದು ಒಂದು ಗೋಲಿಬಾರ್ ಎಂಬುದು ಗಮನಾರ್ಹ.
ಅದು 1987ರ ಡಿಸೆಂಬರ್ ತಿಂಗಳ ಮೊದಲವಾರ. ಪ್ರಮುಖ ಆಂಗ್ಲ ದಿನಪತ್ರಿಕೆಯಲ್ಲಿ ಒಂದು ಕತೆ ಪ್ರಕಟವಾಯಿತು. ಧಾರ್ಮಿಕ ಪ್ರವಾದಿಯೊಬ್ಬರ ಹೆಸರು ಆ ಕತೆಯಲ್ಲಿತ್ತು. ವಾಸ್ತವವಾಗಿ ಆ ಪ್ರವಾದಿಗೂ ಆ ಕತೆಯ ವ್ಯಕ್ತಿಗೂ ಯಾವುದೇ ಸಂಬಂಧ ಇರಲಿಲ್ಲ. ಆದರೆ ಕಿಡಿಗೇಡಿಗಳು ಪ್ರವಾದಿ ಬಗ್ಗೆ ಅವಹೇಳನಕರವಾಗಿ ಬರೆಯಲಾಗಿದೆ ಎಂದು ಸುಳ್ಳುಸುಳ್ಳೇ ಸುದ್ದಿ ಹಬ್ಬಿಸಿದರು.
ಇದರಿಂದ ಸಾವಿರಾರು ಜನ ಉದ್ರಿಕ್ತರು ಎಂಜಿ ರಸ್ತೆಯಲ್ಲಿರುವ ಪತ್ರಿಕೆ ಕಚೇರಿ ಮುಂದೆ ಜಮಾಯಿಸಿದರು. ಪತ್ರಿಕೆಯ ಪ್ರತಿಗಳನ್ನು ಸುಟ್ಟು ಧಿಕ್ಕಾರ ಘೋಷಣೆಗಳನ್ನು ಕೂಗಿದರು. ಪತ್ರಿಕಾ ಕಚೇರಿ ಮೇಲೆ ಕಲ್ಲು ತೂರಿದರು. ಸಹಜವಾಗಿಯೇ ಸುದ್ದಿ ಪೊಲೀಸರಿಗೆ ಮುಟ್ಟಿತು. ಕಮಿಷನರ್ ಹರ್ಲಂಕರ್ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿದರು. ಸಾವಿರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ಪತ್ರಿಕಾ ಕಚೇರಿ ಮಾತ್ರವಲ್ಲದೆ ಸುತ್ತಮುತ್ತಲ ಅಂಗಡಿಗಳಿಗೂ ಬೆಂಕಿ ಹಚ್ಚಿ ವಿಧ್ವಂಸದಲ್ಲಿ ತೊಡಗಿದ್ದರು.
ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಲು ಪೊಲೀಸರು ಎಲ್ಲ ಪ್ರಯತ್ನಗಳನ್ನೂ ಮಾಡಿದರು. ಆದರೆ ಅವು ಪ್ರಯೋಜನಕ್ಕೆ ಬರಲಿಲ್ಲ. ಅಂತಿಮವಾಗಿ ಫೈರಿಂಗ್ ಆರ್ಡರ್ ನೀಡದೆ ವಿಧಿ ಇರಲಿಲ್ಲ. ಪ್ರತಿಭಟನಾಕಾರರನ್ನು ಹತೋಟಿಗೆ ತರಲು ಪೊಲೀಸರು ನಡೆಸಿದ ಗುಂಡಿನ ದಾಳಿಗೆ ಅಂದು ಏಳು ಜನ ಪ್ರತಿಭಟನಾಕಾರರು ಸ್ಥಳದಲ್ಲೇ ಸಾವನ್ನಪ್ಪಿದರು. ಮತ್ತೊಂದಷ್ಟು ಜನ ಗಾಯಗೊಂಡರು. ಘಟನೆ ನಡೆದ ಕೇವಲ ಒಂದೇ ಒಂದು ಗಂಟೆಯಲ್ಲಿ ಕಮಿಷನರ್ ಹಲರ್ನ್ಕರ್ ಅವರನ್ನು ಕಮಿಷನರ್ ಹುದ್ದೆಯಿಂದ ವರ್ಗಾವಣೆ ಮಾಡಿ ಅಂದಿನ ರಾಮಕೃಷ್ಣ ಹೆಗ್ಡೆ ಸರ್ಕಾರ ಆದೇಶ ಹೊರಡಿಸಿತ್ತು.
ಒಂದು ವೇಳೆ ಅಂದು ಕಮಿಷನರ್ ಹಲರ್ನ್ಕರ್ ಅವರು ಪ್ರತಿಭಟನಾಕಾರರನ್ನು ಹತೋಟಿಗೆ ತರಲು ಗುಂಡು ಹಾರಿಸುವ ನಿರ್ಧಾರ ಕೈಗೊಳ್ಳದಿದ್ದ ಪಕ್ಷದಲ್ಲಿ ಪತ್ರಿಕಾ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಷ್ಟೂ ಸಿಬ್ಬಂದಿಯ ಕಗ್ಗೊಲೆ ನಡೆಯುತ್ತಿತ್ತು ಎನ್ನುತ್ತಾರೆ ಘಟನೆಯನ್ನು ಪ್ರತ್ಯಕ್ಷ ಕಂಡ ಅಧಿಕಾರಿಗಳು. ಅಷ್ಟೇ ಅಲ್ಲದೆ ಘಟನೆಯನ್ನು ಶಾಂತಿಯುತವಾಗಿ ಮುಗಿಸಲು ಇದ್ದ ಎಲ್ಲ ದಾರಿಗಳನ್ನೂ ಪ್ರಯತ್ನಿಸಿದ ನಂತರವೇ ಅವರು ಈ ಕ್ರಮಕ್ಕೆ ಮುಂದಾಗಿದ್ದರು ಎಂಬುದು ಅಂದಿನ ಮುಖ್ಯಮಂತ್ರಿ ಸೇರಿದಂತೆ ಎಲ್ಲ ಜನಪ್ರತಿನಿಧಿಗಳಿಗೂ ತಿಳಿದ ವಿಚಾರ. ಆದರೂ ಅವರನ್ನು ಪಾರು ಮಾಡಲು ಸಾಧ್ಯವಾಗಲಿಲ್ಲ ಎಂಬ ನೋವು ಘಟನೆ ಮತ್ತು ಹಲರ್ನ್ಕರ್ ಅವರನ್ನು ಹತ್ತಿರದಿಂದ ಕಂಡ ಅಧಿಕಾರಿಗಳದು.
ಇದರ ಜತೆಗೆ ಹಲರ್ನ್ಕರ್ ಎಂಬ ಪೊಲೀಸ್ ಅಧಿಕಾರಿ ಸಾಮಾನ್ಯದವರಲ್ಲ. ಈ ಘಟನೆ ನಡೆಯುವುದಕ್ಕಿಂತ ಕೇವಲ ಮೂರು ವಾರ ಮೊದಲು ಬೆಂಗಳೂರಿನಲ್ಲಿ ಬೃಹತ್ ಸಾರ್ಕ್ ಸಮಾವೇಶ ನಡೆದಿತ್ತು. ಅದಕ್ಕೆ ವಿಶ್ವದ ಏಳು ರಾಷ್ಟ್ರಗಳ ಪ್ರಧಾನ ಮಂತ್ರಿಗಳು ಆಗಮಿಸಿದ್ದರು. ಅವರಿಗೆ ಸತತ ಎರಡು ದಿನಗಳ ಕಾಲ ರಕ್ಷಣೆ ನೀಡುವುದು ಸಾಮಾನ್ಯ ಮಾತಾಗಿರಲಿಲ್ಲ. ಅಂತಹ ಕ್ಲಿಷ್ಟಕರ ವಿಚಾರದಲ್ಲಿ ತಮ್ಮ ವೃತ್ತಿ ನೈಪುಣ್ಯ ಮೆರೆದು ಭದ್ರತೆ ಒದಗಿಸಿದ್ದ ಅಧಿಕಾರಿ ಈ ಘಟನೆಯಿಂದ ಪನಿಷ್ಮೆಂಟ್ ಟ್ರಾನ್ಸ್ಪರ್ ಪಡೆಯಬೇಕಾದ ಸ್ಥಿತಿ ಒದಗಿ ಬಂದಿತ್ತು. ಇವರ ವರ್ಗಾವಣೆ ನಂತರ, ಬಾವಲಿಗಳನ್ನು ಕೊಲ್ಲಿಸಿದ ಪರಿಣಾಮವೇ ಅವರಿಗೆ ಇಂತಹ ಸ್ಥಿತಿ ಬಂತು ಎಂದು ಹಿಂದೆ ಹೇಳಿದ್ದ ಆಸ್ತಿಕ ಸಬ್ಇನ್ಸ್ಪೆಕ್ಟರ್ ಮತ್ತೆ ಪುನರುಚ್ಚರಿಸಿದ್ದರು. ಅಧಿಕಾರಿಗಳಲ್ಲೂ ಹೇಗೆ ಅಸಂಗತ ನಂಬಿಕೆಗಳು ಮನೆಮಾಡಿರುತ್ತವೆ ಎಂಬುದಕ್ಕೆ ಈ ಘಟನೆ ಒಂದು ಉದಾಹರಣೆ ಅಷ್ಟೇ.
- ಅಶ್ವತ್ನಾರಾಯಣ್. ಎಲ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


