ಹಣ ಗಳಿಕೆಯೇ ಬದುಕಲ್ಲ!
ಅಗತ್ಯಕ್ಕಿಂತ ಹೆಚ್ಚು ಗಳಿಸಬೇಕೆಂಬುದು ತಪ್ಪು ತಿಳುವಳಿಕೆಯಾದರೂ ಇತ್ತೀಚೆಗೆ ಜನರಲ್ಲಿ ಇದೇ ಮನೋಭಾವ ಹೆಚ್ಚುತ್ತಿದೆ. ಕಾಲಕ್ರಮೇಣ ಈ ಮನಸ್ಥಿತಿ ಬದಲಾಗಬಾರದೆಂದೇನೂ ಇಲ್ಲ. ಅಗತ್ಯಕ್ಕಿಂತ ಹೆಚ್ಚು ಆಸ್ತಿ ಗಳಿಸಬೇಕೆಂಬ ಭ್ರಮೆಯ ಬೆನ್ನು ಹತ್ತುವುದು ಮೂರ್ಖತನವಾದೀತು. ಏಕೆಂದರೆ ಕಾಗದದ ಮೇಲಿನ ಆಸ್ತಿಯ ಬೆಲೆ ಎಷ್ಟೇ ಹೆಚ್ಚಿದ್ದರೂ ಅವು ನಮಗೆ ಭೌತಿಕ ವಸ್ತುಗಳಂತೆ ಸುಖ ನೀಡಲಾರವು. ಕಾಗದದ ಮೇಲಿನ ಆಸ್ತಿ ಸಂಗ್ರಹಣೆ ಭಯ ಅಥವಾ ಹೆಚ್ಚಿನ ಆಸೆಯಿಂದಾಗಿಯಾದರೂ, ಇಂದಿನ ದಿನಗಳಲ್ಲಿ ವ್ಯಕ್ತಿ ಹೇಗೇ ಇರಲಿ, ಎಷ್ಟೇ ಬಳಸಲಿ, ಅದನ್ನು ಲೆಕ್ಕಿಸದೇ ಅವನು ಎಷ್ಟು ಗಳಿಸಿದ್ದಾನೆ ಎನ್ನುವುದರ ಮೇಲೆಯೇ ಗೌರವಿತನಾಗುತ್ತಾನೆ.
ಕೂಲಂಕಷವಾಗಿ ಪರಿಶೀಲಿಸಿದರೆ, ಹೆಚ್ಚಿನ ಗಳಿಕೆಯೆಂಬುದು ಹೆಚ್ಚಿನ ಶ್ರಮ, ಹೆಚ್ಚಿನ ಜವಾಬ್ದಾರಿ ಅಷ್ಟೇ ಅಲ್ಲ, ಹೆಚ್ಚಿನ ತೊಂದರೆ ಕೂಡ ಹೌದು ಎಂಬುದನ್ನು ಗ್ರಹಿಸಬಹುದು. ಜೊತೆಗೆ, ಇಷ್ಟವಿರಲಿ, ಇಲ್ಲದಿರಲಿ, ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು ಮೊದಲಾದವರ ಜತೆ ಸಂಬಂಧ ಬೆಳೆಸಿ ಇಟ್ಟುಕೊಳ್ಳಬೇಕು. ಹೆಚ್ಚಿನ ಶಕ್ತಿ, ಸಮಯ ಎರಡನ್ನೂ ಅದಕ್ಕೆ ಮೀಸಲಿಡಬೇಕು. ತಮ್ಮ ಬಂಧುಗಳಿಗೆ, ಪ್ರೀತಿಪಾತ್ರರಿಗೆ, ಮಡದಿ-ಮಕ್ಕಳಿಗೆ ಅಷ್ಟೇ ಅಲ್ಲ, ಸ್ವತಃ ತಮಗೂ ಸರಿಯಾಗಿ ಸಮಯ ಕೊಡಲಾಗದೆ ತೊಂದರೆ ಪಡಬೇಕಾದೀತು. ಮುಂಚಿನ ದಿನಗಳಲ್ಲಿ ಮಾನವೀಯತೆ, ಸ್ನೇಹ-ಬಾಂಧವ್ಯ, ಸಮರಸ ಇತ್ಯಾದಿಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ನೋಡಿದರೆ, ಮನುಷ್ಯ ಹಣ ಸಂಪಾದನೆಗಾಗಿಯೇ ಜನ್ಮವೆತ್ತಂತೆ ಕಾಣುತ್ತದೆ. ಯಾವುದೇ ತರ್ಕವಿಲ್ಲ, ಶಾಸ್ತ್ರವಿಲ್ಲ, ಕೇವಲ ಧನ ಸಂಚಯವೇ ಪ್ರಧಾನವೆಂಬಂತೆ ವರ್ತಿಸುತ್ತಾನೆ. ಒಂದು ವೇಳೆ ಯಾರಾದರೂ ಅದರ ವಿರುದ್ಧ ಮಾತನಾಡಿದರೆ ಅವನು ನಿರಾಶಾವಾದಿಯಂತೆಯೂ, ಜೀವನದಲ್ಲಿ ಸೋತವನಂತೆಯೂ ಕಾಣುತ್ತಾನೆ.
ಹೆಚ್ಚು ಹೆಚ್ಚು ಗಳಿಸಬೇಕೆಂದು ಸಾಗುವ ಮಾರ್ಗ ಕೊನೆಯಿಲ್ಲವಾದದ್ದು, ನಿರಂತರವಾದದ್ದು. ಇನ್ನೊಬ್ಬರಿಗಿಂತ ನಮ್ಮಲ್ಲಿ ಕಡಿಮೆಯಿದೆ ಎಂಬ ಕೀಳರಿಮೆಯಲ್ಲಿ ಬದುಕುವುದಕ್ಕಿಂತ ನಮ್ಮ ಸ್ಥಿತಿ ಹೇಗಿದೆ, ನಮ್ಮ ಸ್ಥಿತಿ ಎಷ್ಟು ಕೆಟ್ಟದಾಗಿರಬಹುದಿತ್ತು ಎಂದು ತಿಳಿದು ಬದುಕುವುದು ಒಳಿತು. ನಮ್ಮಲ್ಲಿರುವುದನ್ನು ನಾವು ಪ್ರಶಂಸಿಸಿಕೊಳ್ಳದೇ, ಅರಿತುಕೊಳ್ಳದೇ ಇದ್ದರೆ ತಾರ್ಕಿಕವಾಗಿ ಅವೆಲ್ಲ ಇದ್ದೂ ಇಲ್ಲದಂತೆಯೇ. ಇನ್ನೂ ಬೇಕು, ಹೆಚ್ಚು ಗಳಿಸಬೇಕು ಎಂಬುದರ ಅರ್ಥ ವ್ಯಕ್ತಿಯಲ್ಲಿ ಇನ್ನೂ ಶೂನ್ಯತೆ ಇದೆ ಅಥವಾ ಅವನಲ್ಲಿ ಸ್ವಲ್ಪ ಸ್ಥಳ ಖಾಲಿ ಇದೆ ಎಂದು ಆ ಸ್ಥಳವನ್ನು ತುಂಬಿಸುವ ಯತ್ನದಲ್ಲಿ ಕೆಲವರು ಹಣದ ಹಿಂದೆ ಹೋಗುತ್ತಾರೆ. ಮಾಸಾಂತ್ಯದಲ್ಲೋ, ವರ್ಷಾಂತ್ಯದಲ್ಲೋ ಕಾಗದದ ಮೇಲೆ ಲಾಭಾಂಶ ಕಂಡೋ ಅಥವಾ ಸುತ್ತಮುತ್ತಲಿನವರ ಹೊಗಳಿಕೆಯೋ ಅವರಲ್ಲಿನ ಶೂನ್ಯದ ಸ್ಥಳವನ್ನು ತುಂಬಿಸುತ್ತದೆ. ಇದರಿಂದ ಕ್ಷಣವೇ ಆದರೂ ಕೆಲಕಾಲ ಸಂತಸದಿಂದ ಇರಲು ಪ್ರಯತ್ನಿಸುತ್ತಾನೆ. ಅದೇ ಒಬ್ಬ ವ್ಯಕ್ತಿ ಸಂಪೂರ್ಣವಾಗಿ ಸಂತೃಪ್ತನಾಗಿದ್ದರೆ, ತನ್ನಲ್ಲಿ ಪ್ರೀತಿ-ಪ್ರೇಮವನ್ನು ತುಂಬಿಕೊಂಡು ನೆಮ್ಮದಿಯಿಂದ ಇದ್ದರೆ ಅವನಲ್ಲಿ ಯಾವುದೇ ರೀತಿಯ ಶೂನ್ಯತೆ ಇರುವುದಿಲ್ಲ, ಏಕೆಂದರೆ ಅವನ ಶೂನ್ಯತೆ ಎಂಬುದು ಪ್ರೀತಿಯಿಂದ ತುಂಬಿರುತ್ತೆ. ನೆಮ್ಮದಿ, ಸಂತೃಪ್ತಿ ಎಂಬುದು ಅತಿಯಾಗಿ ಗಳಿಸಬೇಕೆಂಬುದರ ಬೆನ್ನುಹತ್ತಿ ಓಡುವುದನ್ನು ನಿಲ್ಲಿಸುತ್ತದೆ. ದೀಪಕ್ ಚೋಪ್ರಾ ಹೇಳುವಂತೆ 'ನಿಜವಾಗಿ ಸಿರಿವಂತನೆಂದೆನಿಸಿಕೊಳ್ಳುವ ವ್ಯಕ್ತಿ ಸದಾ ಹಣದ ಬಗ್ಗೆಯೇ ಯೋಚಿಸಬಾರದು. ಅವನಲ್ಲಿ ಕೋಟಿಗಟ್ಟಲೆ ಹಣವಿದ್ದರೂ, ಅವನು ಅದರಿಂದ ಸಂತುಷ್ಟನಾಗದಿದ್ದರೆ, ಅದನ್ನು ಕಳೆದುಕೊಳ್ಳುವ ಭಯದಲ್ಲಿದ್ದರೆ ಅಥವಾ ಅದಕ್ಕೆ ಇನ್ನೂ ಹೆಚ್ಚು ಕೂಡಿಸಬೇಕೆಂದು ಯೋಚಿಸುತ್ತಿದ್ದರೆ, ಅದೆಷ್ಟೇ ಹಣವಿದ್ದರೂ ಅವನು ಬಡವನೇ'. <
(ಮುಂದುವರಿಯುವುದು)
-ಕಿರಣ್ ಉಪಾಧ್ಯಾಯ
keyrun1970@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

